ಶೇ.50ರಷ್ಟು ರಿಯಾಯಿತಿಗೆ ಭರ್ಜರಿ ಪ್ರತಿಕ್ರಿಯೆ: 2 ದಿನದಲ್ಲಿ 14.6 ಕೋಟಿ ಟ್ರಾಫಿಕ್‌ ದಂಡ ಸಂಗ್ರಹ!

By Kannadaprabha NewsFirst Published Feb 5, 2023, 6:44 AM IST
Highlights

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಶೇ.50ರ ರಿಯಾಯಿತಿ ಬಾಕಿ ದಂಡ ಮೊತ್ತ ಪಾವತಿಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶನಿವಾರ ಸಂಜೆವರೆಗೆ 5.03 ಲಕ್ಷ ಪ್ರಕರಣಗಳಲ್ಲಿ 14.62 ಕೋಟಿ ರು.ಗೂ ಹೆಚ್ಚು ದಂಡದ ಮೊತ್ತ ಸಂಗ್ರಹವಾಗಿದೆ. 

ಬೆಂಗಳೂರು (ಫೆ.05): ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಶೇ.50ರ ರಿಯಾಯಿತಿ ಬಾಕಿ ದಂಡ ಮೊತ್ತ ಪಾವತಿಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶನಿವಾರ ಸಂಜೆವರೆಗೆ 5.03 ಲಕ್ಷ ಪ್ರಕರಣಗಳಲ್ಲಿ 14.62 ಕೋಟಿ ರು.ಗೂ ಹೆಚ್ಚು ದಂಡದ ಮೊತ್ತ ಸಂಗ್ರಹವಾಗಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡದ ಮೊತ್ತ ಪಾವತಿಸಲು ರಾಜ್ಯ ಸರ್ಕಾರ ಶೇ.50ರಷ್ಟುರಿಯಾಯಿತಿ ನೀಡಿದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಮೊದಲ ದಿನವೇ 2.25 ಲಕ್ಷ ಪ್ರಕರಣಗಳಿಂದ 7.01 ಕೋಟಿ ರು.ದಂಡ ಮೊತ್ತ ಸಂಗ್ರಹವಾಗಿತ್ತು. ಎರಡನೇ ದಿನವಾದ ಶನಿವಾರ 2.52 ಲಕ್ಷ ಪ್ರಕರಣಗಳಿಂದ ಬರೋಬ್ಬರಿ 6.80 ಕೋಟಿ ರು.ಬಾಕಿ ದಂಡದ ಮೊತ್ತ ಸಂಗ್ರಹವಾಗಿದೆ.

ಇದೇ ವೇಳೆ, ಹುಬ್ಬಳ್ಳಿಯಲ್ಲಿ ಶನಿವಾರ 1,161 ಪ್ರಕರಣಗಳಲ್ಲಿ 2.85 ಲಕ್ಷ ರು., ದಾವಣಗೆರೆಯಲ್ಲಿ 780 ಪ್ರಕರಣಗಳಲ್ಲಿ 1 ಲಕ್ಷ ರು. ಮೈಸೂರಿನಲ್ಲಿ 22,362 ಪ್ರಕರಣಗಳಲ್ಲಿ 47.32 ಲಕ್ಷ ರು. ಮಂಗಳೂರಿನಲ್ಲಿ 1,522 ಪ್ರಕರಣಗಳಲ್ಲಿ 3.83 ಲಕ್ಷ ರು., ಬೆಳಗಾವಿಯಲ್ಲಿ 198 ಪ್ರಕರಣಗಳಲ್ಲಿ 34,300 ರು. ದಂಡ ವಸೂಲಿಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರದಿಂದಲೇ ರಿಯಾಯಿತಿ ದರದಲ್ಲಿ ದಂಡ ಪಾವತಿ ಆರಂಭವಾಗಿತ್ತು. ಆದರೆ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ರಾಜ್ಯದ ಇತರ ನಗರಗಳಲ್ಲಿ ಶನಿವಾರದಿಂದ ಯೋಜನೆ ಜಾರಿಯಾಗಿದೆ. ದಂಡದ ಮೊತ್ತವನ್ನು ರಿಯಾಯಿತಿಯಲ್ಲಿ ತುಂಬಲು ಫೆ.11 ಕೊನೆಯ ದಿನವಾಗಿದೆ.

ಟ್ರಾಫಿಕ್‌ ದಂಡ ಪಾವತಿಗೆ ಮುಗಿಬಿದ್ದ ಜನ: ಒಂದೇ ದಿನ 5.6 ಕೋಟಿ ಸಂಗ್ರಹ!

ರಿಯಾಯಿತಿ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಸಾರ್ವಜನಿಕರು ಆಯಾ ನಗರಗಳ ನಗರ ಸಂಚಾರ ಪೊಲೀಸ್‌ ಠಾಣೆಗಳು, ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ) ಹಾಗೂ ಬೆಂಗಳೂರು ಒನ್‌, ಕರ್ನಾಟಕ ಒನ್‌ ಕೇಂದ್ರಗಳಿಗೆ ತೆರಳಿ ಬಾಕಿ ದಂಡದ ಮೊತ್ತ ಪಾವತಿಸುತ್ತಿದ್ದುದು ಕಂಡು ಬಂತು. ಇದರ ಜತೆಗೆ, ಬೆಂಗಳೂರು ಒನ್‌, ಕರ್ನಾಟಕ ಒನ್‌ ವೆಬ್‌ಸೈಟ್‌, ಪೆಟಿಎಂ ಆ್ಯಪ್‌ಗಳಲ್ಲಿಯೂ ಬಾಕಿ ದಂಡ ಪಾವತಿಸಿದರು. ಅಷ್ಟೇ ಅಲ್ಲದೆ, ಸಂಚಾರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳಲ್ಲಿ ಎಎಸ್‌ಐಗಳು ಹಾಗೂ ಸಬ್‌ಇನ್ಸ್‌ಪೆಕ್ಟರ್‌ಗಳು ಸಾರ್ವಜನಿಕರಿಂದ ಬಾಕಿ ದಂಡ ಕಟ್ಟಿಸಿಕೊಳ್ಳುವ ದೃಶ್ಯಗಳು ಹಲವೆಡೆ ಕಂಡು ಬಂದವು.

ಟ್ರಾಫಿಕ್‌ ನಿಯಮ ಉಲ್ಲಂಘನೆ ದಂಡ ಕಟ್ಟಿದರೆ 50% ರಿಯಾಯಿತಿ: ಸರ್ಕಾರದ ಆದೇಶ

ಶುಕ್ರವಾರ ಒಮ್ಮೆಗೆ ಭಾರೀ ಸಂಖ್ಯೆಯ ಜನರು ಸಂಚಾರ ಪೊಲೀಸ್‌ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಬಾಕಿ ದಂಡ ಮೊತ್ತ ಪಾವತಿಗೆ ಮುಂದಾದ ಹಿನ್ನೆಲೆಯಲ್ಲಿ ವೆಬ್‌ಸೈಟ್‌ ಸರ್ವರ್‌ ಡೌನ್‌ ಆಗಿತ್ತು. ಇದರಿಂದ ಬೇಸತ್ತ ಸಾರ್ವಜನಿಕರು, ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್‌ ಇಲಾಖೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಸಂಚಾರ ಪೊಲೀಸ್‌ ವಿಭಾಗವು ಸರ್ವರ್‌ನ ತಾಂತ್ರಿಕ ಸಮಸ್ಯೆ ಬಗೆಹರಿಸಿ ಬಾಕಿ ದಂಡ ಪಾವತಿಗೆ ಅವಕಾಶ ಮಾಡಿಕೊಟ್ಟಿತ್ತು. ಶನಿವಾರ ಸಾರ್ವಜನಿಕರಿಗೆ ಸರ್ವರ್‌ ಸಮಸ್ಯೆ ಹೆಚ್ಚಾಗಿ ಕಾಡಲಿಲ್ಲ. ಹೀಗಾಗಿ ಆನ್‌ಲೈನ್‌ನಲ್ಲಿಯೇ ಹೆಚ್ಚಿನವರು ಬಾಕಿ ದಂಡ ಮೊತ್ತ ಪಾವತಿಸಿದರು.

click me!