ಕುಸ್ತಿಪಟುಗಳ ಹೋರಾಟಕ್ಕೆ ಪುಷ್ಟಿ ತಂದುಕೊಟ್ಟ ಅಂತಾರಾಷ್ಟ್ರೀಯ ರೆಫ್ರಿ ಜಗ್ಬೀರ್ ಸಿಂಗ್ ನೀಡಿರುವ ಹೇಳಿಕೆ
ಬ್ರಿಜ್‌ರ ಅಸಭ್ಯ ವರ್ತನೆ ಹಲವು ಬಾರಿ ಕಣ್ಣಾರೆ ಕಂಡಿದ್ದೇನೆ: ರೆಫ್ರಿ ಜಗ್ಬೀರ್ ಸಿಂಗ್
ಬ್ರಿಜ್‌ಭೂಷಣ್ ಸಿಂಗ್‌ರ ಕೊರಳಿಗೆ ಮತ್ತೊಂದು ಉರುಳು ಸುತ್ತಿಕೊಳ್ಳುವ ಸಾಧ್ಯತೆ
ನವದೆಹಲಿ(ಜೂ.10): ದೇಶದ ಅಗ್ರ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಸೇರಿದಂತೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್‌ರ ಕೊರಳಿಗೆ ಮತ್ತೊಂದು ಉರುಳು ಸುತ್ತಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ರೆಫ್ರಿ ಜಗ್ಬೀರ್ ಸಿಂಗ್ ನೀಡಿರುವ ಹೇಳಿಕೆ ಕುಸ್ತಿಪಟುಗಳ ಆರೋಪಕ್ಕೆ ಪುಷ್ಟಿ ನೀಡುತ್ತಿದ್ದು, ಶೀಘ್ರದಲ್ಲೇ ಪೊಲೀಸರ ತನಿಖೆಯಲ್ಲೂ ಬ್ರಿಜ್ ಲೈಂಗಿಕ ಕಿರುಕುಳ ನೀಡಿದ್ದು ಸಾಬೀತಾಗುವ ಸಾಧ್ಯತೆಯಿದೆ.
ಬ್ರಿಜ್ ವಿರುದ್ಧ ದೂರು ದಾಖಲಿಸಿದ್ದ 7 ಮಂದಿ ಪೈಕಿ ಓರ್ವ ಕುಸ್ತಿಪಟು, ‘ಕಳೆದ ವರ್ಷದ ಲಖನೌದಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್ಶಿಪ್ ಬಳಿಕ ತಂಡದೊಂದಿಗೆ ಫೋಟೋಶೂಟ್ ನಡೆಯುತ್ತಿದ್ದ ವೇಳೆ ಬ್ರಿಜ್ ತನ್ನ ಪುಷ್ಠದ ಮೇಲೆ ಅವರು ಕೈ ಹಾಕಿದ್ದರು’ ಎಂಬುದನ್ನು ಉಲ್ಲೇಖಿಸಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ 2007ರಿಂದಲೂ ರೆಫ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಗ್ಬೀರ್ ಮಾಧ್ಯಮಗಳ ಜೊತೆ ಮಾತನಾಡಿದ್ದು, 2013ರಿಂದಲೂ ಬ್ರಿಜ್‌ರ ಅಸಭ್ಯ ವರ್ತನೆಯನ್ನು ಕಣ್ಣಾರೆ ಕಂಡಿದ್ದೇನೆ ಎಂದಿದ್ದಾರೆ.
undefined
‘ಫೋಟೋಶೂಟ್ ವೇಳೆ ಕುಸ್ತಿಪಟುವಿನ ಪಕ್ಕದಲ್ಲೇ ಬ್ರಿಜ್ ನಿಂತಿದ್ದರು. ಆದರೆ ಅವರಿಂದ ದೂರ ಸರಿದು ಆಕೆ ಮುಂದಿನ ಸಾಲಿನಲ್ಲಿ ಬಂದು ನಿಂತಳು. ಬ್ರಿಜ್ ಆಕೆಗೆ ಏನು ಮಾಡಿದ್ದಾರೆ ಎಂಬುದು ನಾನು ನೋಡಿಲ್ಲ. ಆದರೆ ಅವರ ವರ್ತನೆ ಕುಸ್ತಿಪಟುವಿಗೆ ಮುಜುಗರ ಉಂಟು ಮಾಡಿದಂತೆ ಕಂಡುಬಂದಿದ್ದು ನಿಜ. ಕುಸ್ತಿಪಟುಗಳಿಗೆ ಅವರು ತಮ್ಮ ಪಕ್ಕ ಬಂದು ನಿಲ್ಲುವಂತೆ ಹೇಳುತ್ತಿದ್ದರು’ ಎಂದು ಜಗ್ಬೀರ್ ಹೇಳಿದ್ದಾರೆ.
ಬ್ರಿಜ್‌ಭೂಷಣ್ ಸಿಂಗ್ ಕಿರುಕುಳ ನೀಡಿಲ್ಲ, ಸಿಟ್ಟಿನಿಂದ ಸುಳ್ಳು ಹೇಳಿದ್ದೆ: ಅಪ್ರಾಪ್ತೆ ತಂದೆ ಯೂಟರ್ನ್!
ಬ್ರಿಜ್ರನ್ನು ತುಂಬಾ ಸಮಯದಿಂದ ನೋಡುತ್ತಿದ್ದೇನೆ. ರಾಷ್ಟ್ರೀಯ ಟೂರ್ನಿಗಳ ವೇಳೆ 2-3 ಯುವತಿಯರು ಬ್ರಿಜ್‌ರ ಜೊತೆಗೇ ಇರುತ್ತಿದ್ದರು. ಆದರೆ ನಮಗೆ ಪ್ರತಿಭಟಿಸಲು ಆಗುತ್ತಿರಲಿಲ್ಲ’ ಎಂದಿದ್ದಾರೆ. ಅಲ್ಲದೆ, ಈ ಬಗ್ಗೆ ದೆಹಲಿ ಪೊಲೀಸರೂ ತಮ್ಮಲ್ಲಿ ವಿಚಾರಿಸಿದ್ದಾಗಿ ತಿಳಿಸಿದ್ದಾರೆ. ಇತ್ತೀಚೆಗೆ 2010ರ ಕಾಮನ್ವೆಲ್ತ್ ಗೇಮ್ಸ್ ಚಿನ್ನ ವಿಜೇತ ಕುಸ್ತಿಪಟು ಅನಿತಾ ಕೂಡಾ, ಕುಸ್ತಿಪಟುಗಳ ಆರೋಪಗಳನ್ನು ದೃಢೀಕರಿಸುವ ರೀತಿ ಹೇಳಿಕೆ ನೀಡಿದ್ದರು.
125+ ಸಾಕ್ಷಿಗಳು ಲಭ್ಯ!
ಬ್ರಿಜ್ ವಿರುದ್ಧ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಈವರೆಗೆ 4 ರಾಜ್ಯಗಳ ಸುಮಾರು 125ಕ್ಕೂ ಹೆಚ್ಚು ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಜಗ್ಬೀರ್, ಅನಿತಾ ಕೂಡಾ ಒಳಗೊಂಡಿದ್ದಾರೆ. ಕುಸ್ತಿಪಟುಗಳು, ಕೋಚ್ಗಳು, ಸಿಬ್ಬಂದಿ ಜೊತೆ ಕೆಲ ಕಡೆಗಳಲ್ಲಿ ಸಿಸಿ ಟಿವಿ ದೃಶ್ಯಗಳನ್ನೂ ಸಂಗ್ರಹಿಸಿದ್ದಾರೆ. ಶೀಘ್ರದಲ್ಲೇ ಚಾರ್ಜ್ಶೀಟ್ ಸಲ್ಲಿಕೆಯಾಗುವ ನಿರೀಕ್ಷೆಯಿದೆ.
ಕುಸ್ತಿಪಟುಗಳ ಜೊತೆ ಕ್ರೀಡಾ ಸಚಿವ ಸಭೆ ಯಶಸ್ವಿ, ಜೂ.15ರ ವರೆಗೆ ಪ್ರತಿಭಟನೆಗೆ ಬ್ರೇಕ್!
ಚುನಾವಣೆಗೆ ಸಿದ್ಧತೆ ಆರಂಭ
ಜೂ.30ರೊಳಗೆ ಡಬ್ಲ್ಯುಎಫ್ಐಗೆ ಚುನಾವಣೆ ನಡೆಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದ ಬೆನ್ನಲ್ಲೇ ಡಬ್ಲ್ಯುಎಫ್ಗೆ ನೇಮಿಸಲಾದ ತಾತ್ಕಾಲಿಕ ಸಮಿತಿಯು ಚುನಾವಣೆಗೆ ಸಿದ್ಧತೆ ಕೈಗೊಂಡಿದೆ. ಈಗಾಗಲೇ ಮತದಾರರ ಪಟ್ಟಿಯನ್ನು ಸಮಿತಿ ಸಿದ್ಧಪಡಿಸಿದ್ದು, ಒಂದೆರಡು ದಿನಗಳಲ್ಲಿ ಚುನಾವಣೆಗೆ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆ ಇದೆ. ಡಬ್ಲ್ಯುಎಫ್ಐಗೆ 2 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 25 ರಾಜ್ಯ ಸಂಸ್ಥೆಗಳಿದ್ದು, ಪ್ರತಿ ಸಂಸ್ಥೆಯಿಂದ ತಲಾ ಇಬ್ಬರು ಮತ ಚಲಾಯಿಸಲಿದ್ದಾರೆ.
ದ್ವೇಷ ಭಾಷಣ ಆರೋಪ: ಕುಸ್ತಿಪಟುಗಳಿಗೆ ರಿಲೀಫ್
ಜಂತರ್ ಮಂತರ್ನಲ್ಲಿ ಪ್ರತಿಭಟನೆ ವೇಳೆ ದ್ವೇಷ ಭಾಷಣ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕುಸ್ತಿಪಟುಗಳಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಈ ಆರೋಪ ಸತ್ಯಕ್ಕೆ ದೂರ ಎಂದು ಕೋರ್ಚ್‌ಗೆ ದೆಹಲಿ ಪೊಲೀಸರು ವರದಿ ಸಲ್ಲಿಸಿದ್ದಾರೆ. ಕುಸ್ತಿಪಟುಗಳು ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದ್ದಾರೆ. ಪ್ರಧಾನಿಯನ್ನು ಕೊಲ್ಲುವ ಬೆದರಿಕೆ ಒಡ್ಡಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಪ್ರತಿಭಟನೆಯ ವಿಡಿಯೋ ಪರಿಶೀಲಿಸಿ, ವರದಿ ಸಲ್ಲಿಸಿದ್ದಾರೆ.