ದಾಖಲೆಯ 23ನೇ ಗ್ರ್ಯಾನ್ ಸ್ಲಾಂ ಹೊಸ್ತಿಲಲ್ಲಿ ನೋವಾಕ್ ಜೋಕೋವಿಚ್
ವಿಶ್ವ ನಂ.1, ಸ್ಪೇನ್‌ನ ಕಾರ್ಲೋಸ್ ಆಲ್ಕರಜ್ ಎದುರು ಗೆದ್ದು ಫೈನಲ್ ಪ್ರವೇಶಿಸಿದ ಜೋಕೋ
7ನೇ ಬಾರಿಗೆ ಸರ್ಬಿಯಾ ಆಟಗಾರ ಫ್ರೆಂಚ್ ಓಪನ್ ಫೈನಲ್ ಪ್ರವೇಶ
ಪ್ಯಾರಿಸ್(ಜೂ.10): ಭಾರೀ ಪೈಪೋಟಿಯಿಂದ ಸಾಗುತ್ತಿದ್ದ ಪಂದ್ಯದಲ್ಲಿ ವಿಶ್ವ ನಂ.1, ಸ್ಪೇನ್‌ನ ಕಾರ್ಲೋಸ್ ಆಲ್ಕರಜ್ ಗಾಯಗೊಂಡ ಪರಿಣಾಮ ದಾಖಲೆಯ 23ನೇ ಗ್ರ್ಯಾನ್ ಸ್ಲಾಂ ಗೆಲುವಿನ ಮೇಲೆ ಕಣ್ಣಿಟ್ಟಿರುವ ನೋವಾಕ್ ಜೋಕೋವಿಚ್‌ರ ಫೈನಲ್ ಹಾದಿ ಸುಗಮಗೊಂಡಿತು. ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಜೋಕೋವಿಚ್ 6-3, 5-7, 6-1, 6-1 ಸೆಟ್‌ಗಳಲ್ಲಿ ಜಯ ಸಾಧಿಸಿದರು. ಇದರೊಂದಿಗೆ 7ನೇ ಬಾರಿಗೆ ಸರ್ಬಿಯಾ ಆಟಗಾರ ಫೈನಲ್ ಪ್ರವೇಶಿಸಿದರು.
ಇಬ್ಬರು ತಲಾ ಒಂದು ಸೆಟ್ ಗೆದ್ದು, ಪಂದ್ಯ ರೋಚಕ ಅಂತ್ಯ ಕಾಣುವ ನಿರೀಕ್ಷೆ ಹುಟ್ಟಿಸಿದ್ದರು. ಆಲ್ಕರಜ್‌ರ ಆಕರ್ಷಕ ಹೊಡೆತಗಳಿಗೆ ಮೆಚ್ಚುಗೆ ಸೂಚಿಸುತ್ತಲೇ ತಮ್ಮ ಅನುಭವಕ್ಕೆ ತಕ್ಕ ಆಟವಾಡುತ್ತಿದ್ದ ಜೋಕೋ, ಪ್ರೇಕ್ಷಕರಿಗೆ ಭಾರೀ ಮನರಂಜನೆ ಒದಗಿಸಿದರು. ಆದರೆ 3ನೇ ಸೆಟ್‌ನ ಆರಂಭದಲ್ಲೇ ಆಲ್ಕರಜ್ ಮೀನಖಂಡ ಸೆಳೆತಕ್ಕೆ ಒಳಗಾದ ಕಾರಣ ಅಂಕಣದಲ್ಲಿ ಅವರ ಓಡಾಟ ಸೀಮಿತಗೊಂಡಿತು. ಪಂದ್ಯದಿಂದ ನಿವೃತ್ತಿ ಪಡೆಯಲು ನಿರಾಕರಿಸಿದ ಆಲ್ಕರಜ್ ಹೋರಾಟ ಪ್ರದರ್ಶಿಸಿದರೂ ಜೋಕೋವಿಚ್‌ರ ಮೇಲೆ ಅಚ್ಚರಿಯ ಜಯ ಸಾಧಿಸಲು ಸಾಧ್ಯವಾಗಲಿಲ್ಲ.
Novak Djokovic secures a place in his seventh final.
Rewatch the Highlights of the Day by Emirates. pic.twitter.com/HMOJEl3cIa
undefined
ಸ್ವಿಯಾಟೆಕ್-ಮುಕೋವಾ: ಯಾರಿಗೆ ಫ್ರೆಂಚ್ ಕಿರೀಟ?
ಪ್ಯಾರಿಸ್: 2023ರ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದ್ದು, ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಹಾಗೂ ಚೆಕ್ ಗಣರಾಜ್ಯದ ಕ್ಯಾರೋಲಿನಾ ಮುಕೋವಾ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.
ವಿಶ್ವ ನಂ.1 ಪೋಲೆಂಡ್‌ನ ಇಗಾ ಸತತ 2ನೇ ಬಾರಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದರೆ, ಚೊಚ್ಚಲ ಬಾರಿ ಗ್ರ್ಯಾನ್‌ಸ್ಲಾಂ ಫೈನಲ್ಗೇರಿರುವ ಶ್ರೇಯಾಂಕ ರಹಿತ ಮುಕೋವಾ ಮೊದಲ ಪ್ರಯತ್ನವನ್ನೇ ಚಾಂಪಿಯನ್ ಪಟ್ಟದೊಂದಿಗೆ ಅವಿಸ್ಮರಣೀಯಗೊಳಿಸುವ ಕಾತರದಲ್ಲಿದ್ದಾರೆ. 4ನೇ ಗ್ರ್ಯಾನ್‌ಸ್ಲಾಂ ಗೆಲ್ಲುವ ನಿರೀಕ್ಷೆಯಲ್ಲಿರುವ ಇಗಾ ಸೆಮೀಸ್‌ನಲ್ಲಿ ಬ್ರೆಜಿಲ್‌ನ ಬೀಟ್ರೆಜ್ ಹಡ್ಡಾದ್ ವಿರುದ್ಧ 6-2, 7-6(9/7) ಸೆಟ್‌ಗಳಲ್ಲಿ ಜಯಿಸಿ, 4 ವರ್ಷಗಳಲ್ಲಿ 3ನೇ ಬಾರಿಗೆ ಫ್ರೆಂಚ್ ಓಪನ್ ಫೈನಲ್‌ಗೇರಿದ್ದರು.
French Open 2023: ಫೈನಲ್‌ಗೆ ಸ್ವಿಯಾಟೆಕ್, ಮುಕೋವಾ ಲಗ್ಗೆ..!
ಇಗಾ ಗೆದ್ದರೆ ದಾಖಲೆ: ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ನಲ್ಲಿ 2007ರ ಬಳಿಕ ಯಾರೂ ಸತತ 2 ಬಾರಿ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿ ಇಗಾಗೆ ಆ ಅವಕಾಶವಿದ್ದು, ಗೆದ್ದರೆ 16 ವರ್ಷಗಳಲ್ಲೇ ಮೊದಲ ಬಾರಿ ಸತತ 2 ಬಾರಿ ಚಾಂಪಿಯನ್ ಆದ ಆಟಗಾರ್ತಿ ಎನಿಸಿಕೊಳ್ಳಲಿದ್ದಾರೆ. ಬೆಲ್ಜಿಯಂನ ಜಸ್ಟಿನ್ ಹೆನಿನ್ 2005, 2006, 2007ರಲ್ಲಿ ಸತತವಾಗಿ ಚಾಂಪಿಯನ್ ಆಗಿದ್ದರು.
ಭಾರತದ ಕೈತಪ್ಪಿದ ಎಟಿಪಿ ಟೆನಿಸ್ ಟೂರ್ನಿ ಆತಿಥ್ಯ!
ನವದೆಹಲಿ: ಟೆನಿಸ್ನಲ್ಲಿ ಬಹಳಷ್ಟು ಹಿಂದಿರುವ ಭಾರತಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದ್ದು, 1996ರಿಂದಲೂ ನಡೆಯುತ್ತಿದ್ದ ಏಕೈಕ ಎಟಿಪಿ 250 ಟೆನಿಸ್ ಟೂರ್ನಿಯ ಆತಿಥ್ಯವೂ ಸದ್ಯ ಭಾರತದ ಕೈತಪ್ಪಿದೆ. ಭಾರತ ಈವರೆಗೆ 27 ಆವೃತ್ತಿಗಳಿಗೆ ಆತಿಥ್ಯ ವಹಿಸಿತ್ತು.
ಚೊಚ್ಚಲ ಆವೃತ್ತಿ ನವದೆಹಲಿಯಲ್ಲಿ, ಬಳಿಕ 21 ಆವೃತ್ತಿ ಚೆನ್ನೈನಲ್ಲಿ ನಡೆದಿತ್ತು. 2018ರಿಂದ ಮಹಾರಾಷ್ಟ್ರ ಲಾನ್ ಟೆನಿಸ್ ಸಂಸ್ಥೆ(ಎಂಎಸ್ಎಲ್ಟಿಎ) ಟೂರ್ನಿಗೆ ಆತಿಥ್ಯ ವಹಿಸುತ್ತಿತ್ತು. ಆದರೆ ಪ್ರಾಯೋಜಕರ ಕೊರತೆ ಎದುರಿಸುತ್ತಿದ್ದ ಆಯೋಜಕರು ಟೂರ್ನಿ ನಡೆಸುವುದರಿಂದ ಹಿಂದೆ ಸರಿದಿದ್ದಾರೆ. ಈ ಮೊದಲು ಟೂರ್ನಿಯಲ್ಲಿ ದಿಗ್ಗಜ ಟೆನಿಸಿಗರಾದ ರಾಫೆಲ್ ನಡಾಲ್, ವಾಂವ್ರಿಕಾ, ಕಾರ್ಲೊಸ್ ಮೊಯಾ, ಮರಿನ್ ಸಿಲಿಚ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.