WTC Final: ಭಾರತದ ಹೋರಾಟ, ಆಸೀಸ್‌ನ ಬಿಗಿ ಹಿಡಿತ!

By Santosh NaikFirst Published Jun 9, 2023, 11:37 PM IST
Highlights

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ತನ್ನ ಹೋರಾಟವನ್ನು ಮುಂದುವರಿಸಿದ್ದರೆ, ಇನ್ನೊಂದೆಡೆ ಪಂದ್ಯ ಸಾಗಿದಂತೆ ಆಸ್ಟ್ರೇಲಿಯಾ ತಂಡದ ಹಿಡಿತ ಬಿಗಿಯಾಗುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 296 ರನ್‌ಗೆ ಆಲೌಟ್‌ ಆದ ಬಳಿಕ 3ನೇ ದಿನದಾಟದ ಮುಕ್ತಾಯದ ವೇಳೆ ಆಸೀಸ್‌ ತನ್ನ ಮುನ್ನಡೆಯನ್ನು 296ಕ್ಕೆ ಏರಿಸಿಕೊಂಡಿದೆ.

ಲಂಡನ್‌ (ಜೂ.9): ದಿನದ ಮೊದಲ ಅವಧಿಯ ಕೇವಲ 11 ರನ್‌ಗಳಿಂದ ಶತಕ ತಪ್ಪಿಸಿಕೊಂಡ ಅಜಿಂಕ್ಯ ರಹಾನೆ ಹಾಗೂ ಶಾರ್ದೂಲ್‌ ಠಾಕೂರ್‌ ನಡುವಿನ 109 ರನ್‌ಗಳ ಅದ್ಭುತ ಜೊತೆಯಾಟ, ಅದರ ನಂತರದ ನಿಧಾನಗತಿಯ ಅವಧಿಯಲ್ಲಿ ಆಸೀಸ್‌ನ ಬೌಲಿಂಗ್‌ ವಿಭಾಗಕ್ಕೆ ಕೊಂಚ ಮಟ್ಟದ ಪ್ರತಿರೋಧ. ಇಷ್ಟೆಲ್ಲಾ ಇದ್ದರೂ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಮೂರನೇ ದಿನದಾಟದ ಮುಕ್ತಾಯದ ವೇಳೆಯಲ್ಲೂ ಪಂದ್ಯ ವರಸೆ ಬದಲಾಗಿಲ್ಲ. ಆಸೀಸ್‌ ಸತತ ಮೂರನೇ ದಿನದಾಟದ ಮುಕ್ತಾಯದ ವೇಳೆಗೂ ಪಂದ್ಯದ ಮೇಲೆ ಬಿಗಿ ಹಿಡಿತವನ್ನು ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್‌ನ 469 ರನ್‌ಗೆ ಪ್ರತಿಯಾಗಿ ಭಾರತ ತಂಡ 5 ವಿಕೆಟ್‌ಗೆ 151 ರನ್‌ಗಳಿಂದ ಮೂರನೇ ದಿನದಾಟ ಆರಂಭಿಸಿತು. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಉತ್ತಮ ಆಟದಿಂದ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 296 ರನ್‌ಗೆ ಆಲೌಟ್‌ ಆಯಿತು. ಇದರಿಂದಾಗಿ 173 ರನ್‌ಗಳ ಅಮೂಲ್ಯ ಮುನ್ನಡೆ ಪಡೆದುಕೊಂಡ ಆಸ್ಟ್ರೇಲಿಯಾ ತಂಡ ಶುಕ್ರವಾರದ ಆಟದ ಅಂತ್ಯಕ್ಕೆ 4 ವಿಕೆಟ್‌ಗೆ 123 ರನ್‌ ಬಾರಿಸಿದೆ. ಅದರಲ್ಲೂ ಕೊನೆಯ 100 ರನ್‌ಗಳನ್ನು ಅಂತಿಮ ಅವಧಿಯ ಆಟದಲ್ಲಿ ಬಾರಿಸುವ ಮೂಲಕ ಪಂದ್ಯದಲ್ಕಿ ಒಟ್ಟಾರೆ 296 ರನ್‌ಗಳ ಮುನ್ನಡೆ ಸಂಪಾದಿಸಿದೆ.

ಕೆನ್ನಿಂಗ್ಟನ್‌ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸೀಸ್‌ನ ವೇಗದ ಬೌಲರ್‌ಗಳು ದಿನದ ಆರಂಭದಿಂದಲೇ ಘಾತಕವಾಗಿ ದಾಳಿ ನಡೆಸಿದರು. ಎತ್ತರದ ದೇಹದ ಲಾಭ ಪಡೆದುಕೊಂಡ ಈ ಬೌಲರ್‌ಗಳು ತೀರಾ ಸುಲಭವಾಗಿ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ನಿರೀಕ್ಷೆಗೂ ಮೀರಿದ ಬೌನ್ಸರ್‌ಗಳು ಎಸೆದರು. ದಿನದ 2ನೇ ಎಸೆತದಲ್ಲಿ ವಿಕೆಟ್‌ ಕೀಪರ್‌ ಕೆಎಸ್‌ ಭರತ್‌, ಸ್ಕಾಟ್‌ ಬೋಲಾಂಡ್‌ ಎಸೆತದಲ್ಲಿ ಬೌಲ್ಡ್‌ ಆದರು. ಆ ಬಳಿಕ ಕ್ರೀಸ್‌ಗೆ ಇಳಿದ ಶಾರ್ದೂಲ್‌ ಠಾಕೂರ್‌ ಹಾಗೂ ಅಜಿಂಕ್ಯ ರಹಾನೆ ಪ್ರಮುಖವಾಗಿ ಪ್ಯಾಟ್‌ ಕಮ್ಮಿನ್ಸ್‌ರ ಎಸೆತಗಳಲ್ಲಿ ಕೈಗಳಿಗೆ ಪೆಟ್ಟು ತಿಂದರು. ಆದರೆ, ಇಷ್ಟೆಲ್ಲಾ ನೋವು ಸಹಿಸಿಕೊಂಡೂ 7ನೇ ವಿಕೆಟ್‌ಗೆ ಈ ಜೋಡಿ ಶತಕದ ಜೊತೆಯಾಟ ಆಡುವ ಮೂಲಕ ಆಸೀಸ್‌ ಬೌಲರ್‌ಗಳಿಗೆ ಸವಾಲೊಡ್ಡಿತ್ತು.

ಆಸೀಸ್‌ನ ಬೌಲರ್‌ಗಳು ಸ್ಲಿಪ್‌ ವಿಭಾಗದಲ್ಲಿ ಸಾಕಷ್ಟು ಅವಕಾಶಗಳನ್ನು ಸೃಷ್ಟಿ ಮಾಡಿದರಾದರೂ, ಹೆಚ್ಚಿನವೆಲ್ಲಾ ವಿಫಲವಾಯಿತು. ಶಾರ್ದೂಲ್‌ ಠಾಕೂರ್‌ ಇದರಿಂದ ದೊಡ್ಡ ಪ್ರಯೋಜನ ಪಡೆದುಕೊಂಡಿದ್ದರು. ಅಜಿಕ್ಯ ರಹಾನೆ ಎಲ್‌ಬಿ ಅವಕಾಶದಿಂದ ಬಚಾವ್‌ ಆದರೆ, ಶಾರ್ದೂಲ್‌ ಠಾಕೂರ್‌ ಕೂಡ ಕಮ್ಮಿನ್ಸ್‌ ಎಸೆತದಲ್ಲಿ ಇದೇ ರೀತಿಯ ಜೀವದಾನ ಪಡೆದುಕೊಂಡಿದ್ದರು. ಆದರೆ, ಆಸೀಸ್‌ ಬೌಲರ್‌ಗಳು ಕೆಟ್ಟ ಎಸೆತಗಳನ್ನು ಎಸೆದಾಗ ಈ ಜೋಡಿ ಮುಲಾಜಿಲ್ಲದೆ ಆ ಚೆಂಡುಗಳನ್ನು ಬೌಂಡರಿ ಗರೆ ದಾಟಿಸಿತು. ಮೂಲಕ 83ರ ಸ್ಟ್ರೈಕ್‌ರೇಟ್‌ನಲ್ಲಿ ಶತಕದ ಜೊತೆಯಾಟವಾಡಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿತು. ಭೋಜನ ವಿರಾಮದವರೆಗೆ ಭಾರತ ಪ್ರತಿ ಓವರ್‌ಗೆ 5 ರಂತೆ ರನ್‌ ಬಾರಿಸಿತು. ಆದರೆ, 2ನೇ ಅವಧಿಯ ಆಟದಲ್ಲಿ ಕೇವಲ 59 ರನ್‌ಗಳನ್ನು ದಾಖಲಾಯಿತು. ಈ ಅವಧಿಯಲ್ಲಿ ಭಾರತ ಆಲೌಟ್‌ ಆದರೆ, ಚಹಾ ವಿರಾಮದ ವೇಳೆಗೆ ಆಸೀಸ್‌ 1 ವಿಕೆಟ್‌ಗೆ 23 ರನ್‌ ಬಾರಿಸಿತ್ತು.

WTC FINAL: ಪಂದ್ಯದ ನಡುವೆಯೇ ಶುಭ್‌ಮನ್‌ ಗಿಲ್‌ಗೆ ಯುವತಿಯ ಪ್ರಪೋಸ್‌!

ರಹಾನೆ, ಕ್ಯಾಮರೂನ್‌ ಗ್ರೀನ್‌ ಹಿಡಿದ ಆಕರ್ಷಕ ಕ್ಯಾಚ್‌ಗೆ ಬಲಿಯಾದರೆ, ಶಾರ್ದೂಲ್‌ ಠಾಕೂರ್‌ ಓವಲ್‌ ಮೈದಾನದಲ್ಲಿ ತಮ್ಮ ಸತತ ಮೂರನೇ ಅರ್ಧಶತಕ ಬಾರಿಸಿದರು. ಅಜಿಂಕ್ಯ ರಹಾನೆ ಹಾಗೂ ಶಾರ್ದೂಲ್‌ ಠಾಕೂರ್‌ ಆಡಿರುವ ಶತಜದ ಜೊತೆಯಾದ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಯಾವುದೇ ವಿಕೆಟ್‌ಗೆ ಭಾರತದ ಮೊಟ್ಟಮೊದಲ ಶತಕದ ಜೊತೆಯಾಟ ಎನಿಸಿದೆ.
173 ರನ್‌ ಮುನ್ನಡೆ ಪಡೆದು 2ನೇ ಇನ್ನಿಂಗ್ಸ್‌ ಆರಂಭಿದ ಆಸೀಸ್‌ ತಂಡಕ್ಕೆ ಮೊಹಮದ್‌ ಸಿರಾಜ್‌ ಹಾಗೂ ಮೊಹಮದ್‌ ಶಮಿ ಕೂಡ ಬೌನ್ಸರ್‌ಗಳ ಮೂಲಕ ಬೆದರಿಸಿದರು. ಡೇವಿಡ್‌ ವಾರ್ನರ್‌, ಸಿರಾಜ್‌ಗೆ ವಿಕೆಟ್‌ ನೀಡಿದರೆ, ಮಾರ್ನಸ್‌ ಲಬುಶೇನ್‌ ಹಾಗೂ ಉಸ್ಮಾನ್‌ ಖವಾಜಾ ನಿರಾಳವಾಗಿ ರನ್‌ ಬಾರಿಸಲು ಸಾಧ್ಯವಾಗಲಿಲ್ಲ. 3ನೇ ಅವಧಿಯ ಆಟದ ಆರಂಭದಲ್ಲಿಯೇ ಖವಾಜಾ ನಿರ್ಗಮಿಸಿದರು.

WTC Final: ಫಾಲೋ ಆನ್‌ನಿಂದ ಭೀತಿಯಲ್ಲಿ ಭಾರತ? ಫಾಲೋ ಆನ್‌ನಿಂದ ಪಾರಾಗಲು ಇನ್ನೆಷ್ಟು ರನ್ ಬೇಕು?

ಆಸ್ಟ್ರೇಲಿಯಾ 469 ಆಲೌಟ್ (ಟ್ರಾವಿಸ್ ಹೆಡ್ 163, ಸ್ಟೀವ್ ಸ್ಮಿತ್ 121, ಅಲೆಕ್ಸ್ ಕ್ಯಾರಿ 48; ಮೊಹಮ್ಮದ್ ಸಿರಾಜ್ 108/4, ಶಾರ್ದೂಲ್ ಠಾಕೂರ್ 83/2) & 123/4 (ಮಾರ್ನಸ್ ಲಬುಶೇನ್‌  41*, ಸ್ಟೀವನ್ ಸ್ಮಿತ್ 34, ರವೀಂದ್ರ ಜಡೇಜಾ 25/2) ಭಾರತಕ್ಕೆ 296 ಆಲೌಟ್ (ಅಜಿಂಕ್ಯ ರಹಾನೆ 89, ಶಾರ್ದೂಲ್ ಠಾಕೂರ್ 51; ಪ್ಯಾಟ್ ಕಮ್ಮಿನ್ಸ್ 3-83) 296 ರನ್‌ಗಳಿಂದ ಮುನ್ನಡೆ.

click me!