ಭಾರತದ ತಾರಾ ಶಟ್ಲರ್ ಪಿ.ವಿ ಸಿಂಧು ಸತತ ಮೂರನೇ ಬಾರಿಗೆ ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿದ್ದಾರೆ. ಪ್ರದರ್ಶನ ಖುಷಿಕೊಟ್ಟಿದೆ, ಆದರೆ ತೃಪ್ತಿ ನೀಡಿಲ್ಲ ಎಂದಿರುವ ಸಿಂಧು, ಚಿನ್ನ ಗೆದ್ದು ಇತಿಹಾಸ ಬರೆಯುವ ತವಕದಲ್ಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಬಾಸೆಲ್[ಆ.24]: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಚೆನ್ ಯೂಫಿಯನ್ನು ಮಣಿಸಿ ಸತತ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದ್ದಾರೆ.
ವಿಶ್ವ ಬ್ಯಾಡ್ಮಿಂಟನ್: ಸಿಂಧು, ಪ್ರಣೀತ್‌ಗೆ ಪದಕ ಖಚಿತ!
40 ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಪಂದ್ಯದಲ್ಲಿ 21-7, 21-14 ನೇರ ಗೇಮ್’ಗಳಲ್ಲಿ ಮಣಿಸಿ ಅಂತಿಮ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಇದರೊಂದಿಗೆ ವಿಶ್ವಚಾಂಪಿಯನ್’ಶಿಪ್’ನಲ್ಲಿ ಚೊಚ್ಚಲ ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ. ಪಿ.ವಿ ಸಿಂಧು 2017 ಹಾಗೂ 2018ರಲ್ಲೂ ಫೈನಲ್ ಪ್ರವೇಶಿಸಿದ್ದರಾದರೂ, ಅಂತಿಮ ಸುತ್ತಿನಲ್ಲಿ ಜಪಾನಿನ ನೊಜೊಮಿ ಓಕೊಹಾರ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಇದೀಗ ಫೈನಲ್’ನಲ್ಲಿ ಥೈಲ್ಯಾಂಡ್’ನ ರಚನಾಕ್ ಇಂಟನಾನ್ ಇಲ್ಲವೇ ಜಪಾನಿನ ನೊಜೊಮಿ ಓಕೊಹಾರ ವಿರುದ್ಧ ಕಾದಾಡಲಿದ್ದಾರೆ. ಇದಕ್ಕೂ ಮೊದಲು 2013ರಲ್ಲಿ ನಡೆದ ವಿಶ್ವಚಾಂಪಿಯನ್’ಶಿಪ್’ನಲ್ಲಿ 18 ವರ್ಷದವರಿದ್ದಾಗಲೇ ಸಿಂಧು ಕಂಚಿನ ಪದಕ ಗೆದ್ದು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್: ಕ್ವಾರ್ಟರ್‌ಫೈನಲ್‌ಗೆ ಪ್ರಣೀತ್
ಸೆಮಿಫೈನಲ್ ಗೆಲುವಿನ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಸಿಂಧು, ಈ ಗೆಲುವು ನನಗೆ ಖುಷಿ ಕೊಟ್ಟಿದೆ. ಆದರೆ ತೃಪ್ತಿ ನೀಡಿಲ್ಲ. ಇನ್ನೂ ಒಂದು ಪಂದ್ಯವಿದೆ. ನಾನು ಖಂಡಿತ ಈ ಬಾರಿ ಚಿನ್ನ ಗೆಲ್ಲುತ್ತೇನೆ. ಆದರೆ ಇದು ಸುಲಭವಲ್ಲ ಎಂದು ನನಗೆ ಗೊತ್ತಿದೆ. ಫೈನಲ್’ಗೆ ಯಾರೇ ಬಂದರೂ ನಾನು ಹೆದರುವುದಿಲ್ಲ. ನನ್ನ ಆಟದ ಮೇಲೆ ನಾನು ಗಮನ ಹರಿಸುತ್ತೇನೆ. ನನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತೇನೆ ಎಂದು ಹೇಳಿದ್ದಾರೆ.