ಬರೋಬ್ಬರಿ ಐದು ದಶಕದ ಬಳಿಕ ಕರ್ನಾಟಕ ತಂಡ ಸಂತೋಷ್ ಟ್ರೋಫಿ ಫುಟ್‌ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ರಾಜಕೀಯದ ಆಧಾರದಲ್ಲಿ ಹೇಳೋದಾದರೆ, ವೀರೇಂದ್ರ ಪಾಟೀಲ್ ಅವರು ಸಿಎಂ ಆಗಿದ್ದಾಗ ರಾಜ್ಯ ತಂಡ ಕೊನೆಯ ಬಾರಿಗೆ ಈ ಟೂರ್ನಿಯ ಚಾಂಪಿಯನ್ ಆಗಿತ್ತು. ಇಂಥ ಅಭೂತಪೂರ್ವ ಸಾಧನೆ ಮಾಡಿದ ತಂಡದೊಂದಿಗೆ ಫುಟ್‌ಪಾತ್‌ನಲ್ಲಿ ನಿಂತು ಫೋಟೋ ತೆಗೆಸಿಕೊಂಡಿದ್ದೀರಲ್ಲ. ಇದಕ್ಕೆ ಏನನ್ನೋಣ ಬೊಮ್ಮಾಯಿ ಅವರೇ..
ಬೆಂಗಳೂರು (ಮಾ.18): ಇಲ್ಲ.. ಇಂಥದ್ದೊಂದು ವರ್ತನೆಯನ್ನು ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ ಬಸವರಾಜ್ ಬೊಮ್ಮಾಯಿ ಅವರೇ, ಕ್ರಿಕೆಟ್ ಹೊರತಾಗಿ ದೇಶದಲ್ಲಿ ಆಡೋದು ಯಾವುದೂ ಕ್ರೀಡೆಯೇ ಅಲ್ಲ ಅನ್ನೋರು ಮಾಡುವಂಥ ವರ್ತನೆಯಿದು. ಇವರು ಯಾರೂ ಸಿನಿಮಾ ಸ್ಟಾರ್‌ಗಳಲ್ಲ, ಯಾವುದೇ ಟ್ರೇಲರ್ ಬಿಡುಗಡೆಗೂ ನಿಮ್ಮನ್ನು ಕರೆದಿಲ್ಲ. ಬಹುಶಃ ಇವರಿಗೆ ಸನ್ಮಾನ ಮಾಡಿದರೆ, ವೋಟ್ ಕೂಡ ಬರಲಿಕ್ಕಿಲ್ಲ ಎಂದು ನೀವು ಯೋಚಿಸಿರಬಹುದು. ಬರೋಬ್ಬರಿ 50 ವರ್ಷಗಳ ಬಳಿಕ ಸಂತೋಷ್ ಟ್ರೋಫಿ ಫುಟ್‌ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆದ ನಮ್ಮ ರಾಜ್ಯದ ತಂಡದ ಆಟಗಾರರೊಂದಿಗೆ ಫುಟ್‌ಪಾತ್‌ನಲ್ಲಿ ನೀವು ತೆಗೆಸಿಕೊಂಡಿರುವ ಫೋಟೋ ಸಾಮಾನ್ಯ ಜನರಿಗೆ ಫುಟ್‌ಬಾಲ್ ಕ್ರೀಡೆಯನ್ನೇ ಉಸಿರಾಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಯಾವ ರೀತಿಯ ಸಂದೇಶ ನೀಡಬಹುದು ಎನ್ನುವ ಅಂದಾಜು ಕೂಡ ನಿಮಗಿರಲಿಕ್ಕಿಲ್ಲ. ಸಿನಿಮಾ ನಟರೇ ತುಂಬಿಕೊಂಡು ಆಡುವ ಕನ್ನಡ ಚಲನಚಿತ್ರ ಕಪ್‌ನ ಉದ್ಘಾಟನೆ ಸಮಯದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಿನಿಮಾ ನಟರನ್ನು ತಬ್ಬಿಕೊಂಡು ವಿಶ್ ಮಾಡಿದ್ದೇನು, ಅವರಿಗೆ ಕೈ ಕುಲುಕಿದ್ದೇನು..? ಆದರೆ, ರಾಜ್ಯ ಫುಟ್‌ಬಾಲ್ ತಂಡದ ಆಟಗಾರರು ಸಂತೋಷ್ ಟ್ರೋಫಿಯಂಥ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಆಳೆತ್ತರದ ಟ್ರೋಫಿ ಎತ್ತಿಕೊಂಡು ಬಂದಾಗ ಅವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸೋದಿರಲಿ, ಕನಿಷ್ಠ ಪಕ್ಷ ಮನೆಯ ಒಳಗೆ ಕರೆದು ಕೆಲ ಹೊತ್ತು ಮಾತನಾಡುವ ಸೌಜನ್ಯವೂ ಇಲ್ಲದೇ ಹೋಯಿತಲ್ಲ ಎನ್ನುವ ಬೇಸರ ನಮ್ಮದು.
ನೀವೇ ಯೋಚಿಸಿ ನೋಡಿ, ಚಾಂಪಿಯನ್ ಆದ ಈ ತಂಡಕ್ಕೆ ಇತ್ತೀಚೆಗೆ ಫುಟ್‌ಬಾಲ್ ಅಸೋಸಿಯೇಷನ್ ಸನ್ಮಾನ ಕಾರ್ಯಕ್ರಮ ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ಇಡೀ ತಂಡವನ್ನು ಅಂದಾಜು ಒಂದೂವರೆ ಗಂಟೆಗಳ ಕಾಲ ಕಾಯಿಸಿದಿರಿ. ಕೊನೆಗೆ ಈ ಸಮಾರಂಭಕ್ಕೆ ಆಗಮಿಸಲೂ ಇಲ್ಲ. ಇದಾದ ಒಂದು ವಾರಗಳ ಬಳಿಕ ರಾಜ್ಯ ತಂಡದ ಆಟಗಾರರು, ಫುಟ್‌ಬಾಲ್ ಅಸೋಸಿಯೇಷನ್‌ನ ಅಧಿಕಾರಿಗಳು ನಿಮ್ಮನ್ನು ಭೇಟಿ ಮಾಡಲು ಬಂದಾಗ ಅವರನ್ನು ಮನೆಯ ಹೊರಗಡೆ ರೋಡ್‌ನಲ್ಲಿ ನಿಲ್ಲಿಸಿ ಮಾತನಾಡಿದ್ದು ರಾಜ್ಯದ ಸಿಎಂ ಒಬ್ಬರು ತೋರುವ ವರ್ತನೆಯಲ್ಲ. ಅದೇ ಸಿನಿಮಾ ತಂಡದವರಾಗಿದ್ದರೆ, ಕ್ರಿಕೆಟ್ ತಂಡದವರಾಗಿದ್ದರೆ ನೀವು ಹೀಗೆ ಮಾಡ್ತಿದ್ರಾ?
ಕೊನೆಗೂ ನಿಮ್ಮನ್ನು ಭೇಟಿಯಾದ ತಂಡಕ್ಕೆ ನೀವು ನೀಡಿದ ಸಮಯವೆಷ್ಟು ಬರೀ 15 ನಿಮಿಷ. ಹೌದು ನೀವೀಗ ಚುನಾವಣೆಯ ಬ್ಯುಸಿಯಲ್ಲಿರಬಹುದು. ಅಧಿಕಾರ ಉಳಿಸಿಕೊಳ್ಳುವ ಗುರಿಯಲ್ಲಿರಬಹುದು. ಹಾಗಂತ ಇಂಥ ಪ್ರತಿಷ್ಠಿತ ಟ್ರೋಫಿ ಗೆದ್ದ ತಂಡಕ್ಕೆ ಮಾಡಿರುವ ಅವಮಾನವನ್ನು ಸಹಿಸಿಕೊಳ್ಳಲಾಗೋದಿಲ್ಲ. ಗೃಹಕಚೇರಿಯ ಮುಂದೆ ಒಂದು ಗಂಟೆಗೂ ಅಧಿಕ ಕಾಲ ನಿಂತ ಈ ಆಟಗಾರರೊಂದಿಗೆ ಲೆಕ್ಕಕ್ಕೆ ಬಾರದಂದಂತ ಒಂದು ಸ್ಲೈಲ್ ನೀಡಿ ಫೋಟೋ ತೆಗೆಸಿಕೊಂಡಿದ್ದೀರಿ. ನೆಪ ಮಾತ್ರದ ಹ್ಯಾಂಡ್‌ಶೇಕ್, ವೆಲ್ ಡನ್ ಎಂದಾಗ ಅಂಥಾ ರೋಚಕ ಹೋರಾಟದಲ್ಲಿ ಟ್ರೋಫಿ ಗೆದ್ದ ಫುಟ್‌ಬಾಲ್ ತಂಡದ ನಾಯಕನಿಗೆ ಏನನ್ನಿಸಿರಬಹುದು ಎಂದು ಯೋಚನೆಯನ್ನಾದರೂ ಮಾಡಿದ್ದೀರಾ? ನಗದು ಪುರಸ್ಕಾರ ಹಾಳಾಗಿ ಹೋಗಲಿ, ಒಂದೊಳ್ಳೆ ಸಾಧನೆ ಮಾಡಿದ್ದೀರಿ. ಇಡೀ ರಾಜ್ಯಕ್ಕೆ ನಿಮ್ಮ ಸಾಧನೆಯಿಂದೆ ಹೆಮ್ಮೆ ಪಟ್ಟಿದೆ ಎನ್ನುವಂಥಾ ಔಪಚಾರಿಕ ಮಾತನ್ನಾದರೂ ಹೇಳಿ ಅವರನ್ನು ಹುರಿದುಂಬಿಸಿದಿರಾ?
ಸಂತೋಷ್ ಟ್ರೋಫಿ ಫುಟ್‌ಬಾಲ್ ಟೂರ್ನಿಯ ಚಾಂಪಿಯನ್ ಆದ ತಂಡಕ್ಕೆ ಅಭಿನಂದನೆ ಸಲ್ಲಿಸಲು ರಾಜ್ಯದ ಕ್ರೀಡಾ ಸಚಿವರಿಗೆ ಮೂರು-ನಾಲ್ಕು ದಿನ ಬೇಕಾಯಿತು. ಎಲೆಕ್ಷನ್ ಟೈಮ್‌ನಲ್ಲಿ ಪ್ರತಿಯೊಬ್ಬರ ಹುಟ್ಟುಹಬ್ಬ, ಜಯಂತಿಗಳನ್ನೆಲ್ಲಾ ನೆನಪಿಟ್ಟುಕೊಂಡು ಪೋಸ್ಟ್ ಮಾಡುವ ನಮ್ಮ ರಾಜಕೀಯ ನಾಯಕರು ಸಂತೋಷ್ ಟ್ರೋಫಿಯನ್ನು ಲೆಕ್ಕಕ್ಕೇ ಇಲ್ಲದಂತೆ ಮಾಡಿದರು. ಇದೇ ಸಾಧನೆಯನ್ನು ಗೋವಾ, ಕೇರಳ, ಕೋಲ್ಕತ್ತ ಅಥವಾ ಈಶಾನ್ಯದ ಯಾವುದಾದರೂ ರಾಜ್ಯಗಳು ಮಾಡಿದ್ದರೆ ಅವರಿಗೆ ನೀಡಲಾಗಬಹುದಾದ ಸ್ವಾಗತ ನೆನಪಿಸಿಕೊಂಡರೇ ಮೈ ಜುಮ್ಮೆನಿಸುತ್ತದೆ. ಆ ರಾಜ್ಯ ಸರ್ಕಾರಗಳು ಈ ಸಂಭ್ರಮವನ್ನು ಯಾವ ರೀತಿ ಆಚರಿಸುತ್ತಿದ್ದವು ಅನ್ನೋದನ್ನು ನೀವು ಕಲ್ಪನೆ ಕೂಡ ಮಾಡೋಕೆ ಸಾಧ್ಯವಿಲ್ಲ.
Santosh Trophy ಗೆದ್ದ ಕರ್ನಾಟಕ ಫುಟ್ಬಾಲ್ ತಂಡಕ್ಕೆ 25 ಲಕ್ಷ ರುಪಾಯಿ ಬಹುಮಾನ..!
undefined
ಬೊಮ್ಮಾಯಿ ಅವರೇ ನೀವೇ ನೆನಪಿಸಿಕೊಳ್ಳಿ, ಇತ್ತೀಚೆಗೆ ಟೆನಿಸ್ ದಿಗ್ಗಜ ಬೋರ್ನ್ ಬೋರ್ಗ್ ಹಾಗೂ ನಮ್ಮ ದೇಶದ ಟೆನಿಸ್‌ನ ಮಹಾನ್ ತಾರೆ ವಿಜಯ್ ಅಮೃತ್‌ರಾಜ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಕೆಎಸ್‌ಎಲ್‌ಟಿಎ ಆಯೋಜನೆ ಮಾಡಿತ್ತು. ಆದರೆ, 9.30ಕ್ಕೆ ಬರಬೇಕಾಗಿದ್ದ ನೀವು 11 ಗಂಟೆಗೆ ಬಂದಿರಿ. ನಿಮಗೆ ಇದು ಸಲೀಸು ಅನಿಸಬಹುದು. ಆದರೆ, ವಿಶ್ವ ಟೆನಿಸ್‌ನ ಮಹಾನ್ ತಾರೆಗೆ ಮಾಡಿದ ಅವಮಾನ ಆಗಿತ್ತು ಆದು. ನಯವಾಗಿಯೇ ಬೋರ್ಗ್ ತಮ್ಮ ಸನ್ಮಾನ ಕಾರ್ಯಕ್ರಮವನ್ನು ನಿರಾಕರಿಸಿ, ಮಗನ ಮ್ಯಾಚ್ ನೋಡುವುದರಲ್ಲಿ ಮಗ್ನರಾದರು.
Santosh Trophy: 54 ವರ್ಷಗಳ ಬಳಿಕ ಕರ್ನಾಟಕ ಫುಟ್ಬಾಲ್ ಚಾಂಪಿಯನ್..!
ಇದರಲ್ಲಿ ನಿಮ್ಮ ತಪ್ಪು ಮಾತ್ರವೇ ಇಲ್ಲ ಮುಖ್ಯಮಂತ್ರಿಯವರೇ, ಸಂತೋಷ್ ಟ್ರೋಫಿ ಎನ್ನುವ ಮಹತ್ವದ ಟೂರ್ನಿಯ ಬೆಲೆಯೇನು, ಅದರ ಮಹತ್ವವೇನು ಎಂದು ನಿಮಗೆ ಸರಿಯಾಗಿ ತಿಳಿಸದ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಹಾಗೂ ಅಖಿಲ ಭಾರತ ಫುಟ್‌ಬಾಲ್ ಸಂಸ್ಥೆಯ 'ಘನಂದಾರಿ' ಅಧಿಕಾರಿಗಳೂ ಕಾರಣ. ಲೆಕ್ಕವಿಲ್ಲದಷ್ಟು ವರ್ಷಗಳ ಕಾಲ ಫುಟ್‌ಬಾಲ್ ಅಸೋಯೇಷನ್ ಅಧಿಕಾರ ಹಿಡಿದುಕೊಂಡು 'ಕುರ್ಚಿ' ಬಿಸಿಮಾಡಿಕೊಂಡ ಅಧಿಕಾರಿಗಳಿಗೆ ಬಹುಶಃ ಇದು ಫೋಟೋ ಮಾತ್ರ. ಸಿಎಂ ಸಿಕ್ಕರೆ, ರಸ್ತೆ ಮೇಲಾದ್ರೂ ಸೈ, ಚರಂಡಿ ಮೇಲಾದ್ರೂ ಸೈ ಅವರು ಫೋಟೋ ತೆಗೆಸಿಕೊಳ್ತಾರೆ. ಆದರೆ, ಚಾಂಪಿಯನ್ ತಂಡದ ಆಟಗಾರರು, ಕೊನೆಗೆ ಸಂತೋಷ್ ಟ್ರೋಫಿ ಇಂಥ 'ಅವಮಾನ'ಕ್ಕೆ ಒಳಗಾಗಬೇಕಿರಲಿಲ್ಲ.