
ವೆಲ್ಲಿಂಗ್ಟನ್(ಮಾ.18): ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಆಕರ್ಷಕ ದ್ವಿಶತಕ ಸಿಡಿಸುವ ಮೂಲಕ ಮತ್ತೊಮ್ಮೆ ಮಿಂಚಿದ್ದಾರೆ. ಇಲ್ಲಿನ ಬಾಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಲಿಯಮ್ಸನ್ ತಮ್ಮ ಟೆಸ್ಟ್ ವೃತ್ತಿಜೀವನದ 6ನೇ ಟೆಸ್ಟ್ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಹಲವು ದಿಗ್ಗಜ ಕ್ರಿಕೆಟಿಗರ ದಾಖಲೆ ಸರಿಗಟ್ಟಿದ್ದಾರೆ.
ಹೌದು, ನ್ಯೂಜಿಲೆಂಡ್ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಇದೀಗ, ಮರ್ವನ್ ಅಟಪಟ್ಟು, ವಿರೇಂದ್ರ ಸೆಹ್ವಾಗ್, ಯೂನಿಸ್ ಖಾನ್, ರಿಕಿ ಪಾಂಟಿಂಗ್ ಹಾಗೂ ಜಾವೆದ್ ಮಿಯಾಂದಾದ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಎಲ್ಲಾ ಕ್ರಿಕೆಟಿಗರು ಟೆಸ್ಟ್ ಕ್ರಿಕೆಟ್‌ನಲ್ಲಿ 6 ದ್ವಿಶತಕ ಸಿಡಿಸಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ದ್ವಿಶತಕ ಸಿಡಿಸಿದ ದಾಖಲೆ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಸರ್ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. ಬ್ರಾಡ್ಮನ್ ಕೇವಲ 52 ಟೆಸ್ಟ್ ಪಂದ್ಯಗಳನ್ನಾಡಿ 12 ಬಾರಿ 200+ ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯದ ವೇಳೆಗೆ ಕೇನ್ ವಿಲಿಯಮ್ಸನ್ 26 ರನ್ ಬಾರಿಸಿ ಅಜೇಯರಾಗುಳಿದಿದ್ದರು. ಎರಡನೇ ದಿನದಾಟದಲ್ಲಿ ಕೇನ್ ವಿಲಿಯಮ್ಸನ್ ಕೇವಲ 171 ಎಸೆತಗಳನ್ನು ಎದುರಿಸಿ ಸತತ ಎರಡನೇ ಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಮತ್ತಷ್ಟು ಸ್ಪೋಟಕ ಬ್ಯಾಟಿಂಗ್ ನಡೆಸಿದ ಕೇವಲ 285 ಎಸೆತಗಳನ್ನು ಎದುರಿಸಿ ದ್ವಿಶತಕ ಪೂರೈಸುವಲ್ಲಿ ಯಶಸ್ವಿಯಾದರು.
ಇದಷ್ಟೇ ಅಲ್ಲದೇ ಕೇನ್ ವಿಲಿಯಮ್ಸನ್ ಈ ಭರ್ಜರಿ ದ್ವಿಶತಕದ ಜತೆಗೆ ಮೂರನೇ ವಿಕೆಟ್‌ಗೆ ಹೆನ್ರಿ ನಿಕೋಲ್ಸ್ ಜತೆಗೂಡಿ 363 ರನ್‌ಗಳ ಜತೆಯಾಟವಾಡುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾದರು. ಕೇನ್ ವಿಲಿಯಮ್ಸನ್ ಅಂತಿಮವಾಗಿ 296 ಎಸೆತಗಳನ್ನು ಎದುರಿಸಿ 23 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 215 ರನ್ ಬಾರಿಸಿ ಸ್ಪಿನ್ನರ್ ಪ್ರಬಾತ್ ಜಯಸೂರ್ಯ ಬೌಲಿಂಗ್‌ನಲ್ಲಿ ಮುನ್ನುಗ್ಗಿ ಬಾರಿಸುವ ಯತ್ನದಲ್ಲಿ ಸಬ್‌ಸ್ಟಿಟ್ಯೂಟ್ ಫೀಲ್ಡರ್ ರಮೇಶ್ ಮೆಂಡಿಸ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ವಿಲಿಯಮ್ಸನ್-ನಿಕೋಲ್ಸ್ ದ್ವಿಶತಕ, ಕೀವಿಸ್ ಹಿಡಿತದಲ್ಲಿ ಲಂಕಾ:
ಮೊದಲ ಟೆಸ್ಟ್ ಪಂದ್ಯವನ್ನು ರೋಚಕವಾಗಿ ಗೆದ್ದು ಬೀಗಿದ್ದ ಆತಿಥೇಯ ನ್ಯೂಜಿಲೆಂಡ್ ತಂಡವು ಎರಡನೇ ಟೆಸ್ಟ್ ಪಂದ್ಯದಲ್ಲೂ ತನ್ನ ಬಿಗಿಹಿಡಿತ ಸಾಧಿಸಿದೆ. ಟಿಮ್ ಸೌಥಿ ನೇತೃತ್ವದ ನ್ಯೂಜಿಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಳೆದುಕೊಂಡು 580 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ರೋಚಕವಾಗಿ ಲಂಕಾ ಮಣಿಸಿದ ಕಿವೀಸ್, ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ ಸಲೀಸು..!
ಕಿವೀಸ್ ಪರ ಡೆವೊನ್ ಕಾನ್‌ವೇ 78 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಕೇನ್ ವಿಲಿಯಮ್ಸನ್ 215 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಇನ್ನು ಮತ್ತೊಂದು ಸ್ಪೋಟಕ ಬ್ಯಾಟಿಂಗ್ ನಡೆಸಿದ ಹೆನ್ರಿ ನಿಕೋಲ್ಸ್ ಕೇವಲ 240 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 200 ರನ್ ಸಿಡಿಸಿದರು. ಇನ್ನು ಡೇರಲ್ ಮಿಚೆಲ್ 17 ರನ್ ಬಾರಿಸಿ ರಜಿತಾಗೆ ವಿಕೆಟ್ ಒಪ್ಪಿಸಿದರೆ, ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಬ್ಲಂಡೆಲ್ ಅಜೇಯ 17 ರನ್ ಸಿಡಿಸಿದರು.
ಇನ್ನು ಮೊದಲ ಇನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ತಂಡವು ಎರಡನೇ ದಿನದಾಟದಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 26 ರನ್ ಬಾರಿಸಿದ್ದು, ಇನ್ನು 554 ರನ್‌ಗಳ ಹಿನ್ನಡೆಯಲ್ಲಿದೆ. ನಾಯಕ ದಿಮುತ್ ಕರುಣರತ್ನೆ 16 ಹಾಗೂ ನೈಟ್ ವಾಚ್‌ಮನ್ ಪ್ರಬತ್ ಜಯಸೂರ್ಯ 4 ರನ್ ಬಾರಿಸಿ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.