ಬೆಂಗಳೂರಿನ ಶ್ರೀ ಕಂಠೀರವ ಮೈದಾನದಲ್ಲಿ ಫುಟ್ಬಾಲ್ ಆಡಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಶುಕ್ರವಾರ ಉಗ್ರ ಪ್ರತಿಭಟನೆ ನಡೆಸಲು ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ನಿರ್ಧರಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಸೆ.05]: ಕಂಠೀರವ ಕ್ರೀಡಾಂಗಣದಲ್ಲಿ ಮತ್ತೆ ಫುಟ್ಬಾಲ್ ನಡೆಸಲು ಅನುಮತಿ ನೀಡಲು ಮುಂದಾಗಿರುವ ರಾಜ್ಯ ಕ್ರೀಡಾ ಇಲಾಖೆ ವಿರುದ್ಧ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎ) ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಶುಕ್ರವಾರ ಬೆಳಗ್ಗೆ 10 ಗಂಟೆ ಇಲ್ಲಿನ ಟೌನ್ ಹಾಲ್‌ನಿಂದ ಕಂಠೀರವ ಕ್ರೀಡಾಂಗಣದ ವರೆಗೂ ಮೆರವಣಿಗೆ ಮೂಲಕ, ಕಂಠೀರವವನ್ನು ಕೇವಲ ಅಥ್ಲೆಟಿಕ್ಸ್ಗೆ ಸೀಮಿತವಾಗಿಡುವಂತೆ ಆಗ್ರಹಿಸುವುದಾಗಿ ಕೆಎಎ ಕಾರ್ಯದರ್ಶಿ ಎ.ರಾಜವೇಲು ತಿಳಿಸಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್‌ಗೆ ಗ್ರೀನ್ ಸಿಗ್ನಲ್?
‘ಕಳೆದ ಕೆಲ ವರ್ಷಗಳಿಂದಲೂ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಅನೇಕ ಕಷ್ಟಗಳನ್ನು ಎದುರಿಸುತ್ತಿದೆ. ಈ ಸಂಬಂಧ ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಲವು ಬಾರಿ ಮನವಿ ಮಾಡಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ರಾಜ್ಯದಲ್ಲಿ ನಶಿಸುತ್ತಿರುವ ಅಥ್ಲೆಟಿಕ್ಸ್‌ನ್ನು ಮತ್ತೆ ಜೀವಂತಗೊಳಿಸುವ ಉದ್ದೇಶದಿಂದ ರಾಜ್ಯ ರಾಜಧಾನಿಯ ಕಂಠೀರವ ಹೊರಾಂಗಣ ಕ್ರೀಡಾಂಗಣವನ್ನು ಅಥ್ಲೆಟಿಕ್ ಕ್ರೀಡೆಗಳಿಗಾಗಿ ಮೀಸಲಿಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ’ ಎಂದು ರಾಜವೇಲು ತಿಳಿಸಿದ್ದಾರೆ.
ಕಂಠೀರವದಲ್ಲಿ ಫುಟ್ಬಾಲ್‌ಗೆ ಇನ್ನಿಲ್ಲದ ಕಸರತ್ತು!
‘ರಾಜ್ಯ ಸರ್ಕಾರ ಅಥ್ಲೆಟಿಕ್ಸ್ ಅಭಿವೃದ್ಧಿಗೆ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕ್ರೀಡಾ ಇಲಾಖೆ, ಕಂಠೀರವ ಕ್ರೀಡಾಂಗಣವನ್ನು ವಾಣಿಜ್ಯ ಲಾಭಕ್ಕಾಗಿ ಬಳಸುತ್ತಿದೆ. ಫುಟ್ಬಾಲ್ ಚಟುವಟಿಕೆಗಳು ಮತ್ತು ಅಥ್ಲೆಟಿಕ್ಸ್ ಅಲ್ಲದ ಕಾರ‍್ಯಕ್ರಮಗಳನ್ನು ನಡೆಸಲು ಬಾಡಿಗೆಗೆ ನೀಡುತ್ತಿದೆ. ಇದರಿಂದಾಗಿ ಕ್ರೀಡಾಪಟುಗಳು, ತರಬೇತುದಾರರು ತೊಂದರೆ ಅನುಭವಿಸುವಂತಾಗಿದೆ. ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಲು ಕ್ರೀಡಾ ಇಲಾಖೆ ಕೆಲ ತಿಂಗಳುಗಳಿಂದ ಇಲ್ಲದ ಸಬೂಬು ಹೇಳುತ್ತಿದೆ. ನ್ಯಾಯಕ್ಕಾಗಿ, ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಲಿದ್ದೇವೆ’ ಎಂದು ಅವರು ಹೇಳಿದರು.