ಕಂಠೀರವ ಸಮಸ್ಯೆ ಶೀಘ್ರ ಇತ್ಯರ್ಥ: ಕ್ರೀಡಾ ಇಲಾಖೆ

By Web Desk  |  First Published May 21, 2019, 1:36 PM IST

ಕಂಠೀರವ ಕ್ರೀಡಾಂಗಣದಲ್ಲಿರುವ ಸಾಲು ಸಾಲು ಸಮಸ್ಯೆಗಳ ಬಗ್ಗೆ ಸುವರ್ಣನ್ಯೂಸ್ ಸಹೋದರ ಸಂಸ್ಥೆ ‘ಕನ್ನಡಪ್ರಭ’ ಸರಣಿ ವರದಿ ಪ್ರಕಟಿಸಿದ ಬಳಿಕ ರಾಜ್ಯ ಕ್ರೀಡಾ ಇಲಾಖೆ ಎಚ್ಚೆತ್ತುಕೊಂಡಂತಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...


ಬೆಂಗಳೂರು(ಮೇ.21): ಕಂಠೀರವ ಕ್ರೀಡಾಂಗಣದಲ್ಲಿರುವ ಸಾಲು ಸಾಲು ಸಮಸ್ಯೆಗಳ ಬಗ್ಗೆ ಸುವರ್ಣನ್ಯೂಸ್ ಸಹೋದರ ಸಂಸ್ಥೆ ‘ಕನ್ನಡಪ್ರಭ’ ಸರಣಿ ವರದಿ ಪ್ರಕಟಿಸಿದ ಬಳಿಕ ರಾಜ್ಯ ಕ್ರೀಡಾ ಇಲಾಖೆ ಎಚ್ಚೆತ್ತುಕೊಂಡಂತಿದೆ. ವರದಿಗೆ ಪ್ರತಿಕ್ರಿಯಿಸಿರುವ ಇಲಾಖೆಯ ಉನ್ನತ ಅಧಿಕಾರಿಗಳು ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರೆ. ಕೆಲವೊಂದು ವಿಷಯಗಳಿಗೆ ಸಮಜಾಯಷಿಯನ್ನೂ ನೀಡಿದ್ದಾರೆ.

ಕ್ರೀಡಾಂಗಣದಲ್ಲಿರುವ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಗುಂಡಿ ಬಿದ್ದಿದೆ ಎನ್ನುವುದರಿಂದ ಆರಂಭವಾದ ಸರಣಿ ವರದಿ, ಗುಂಡಿ ಬೀಳಲು ಕಾರಣ, ನಿರ್ವಹಣೆಗೆ ಇಲಾಖೆ ತೋರುತ್ತಿರುವ ಧೋರಣೆ, ಕ್ರೀಡಾಂಗಣವನ್ನು ಆರ್ಥಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ರೀತಿ, ನಿರ್ವಹಣೆ ಮಾಡಲು ಮನಸು ಮಾಡಿದರೆ ಇರುವ ದಾರಿಗಳು, ಪಾಲಿಸಬೇಕಾದ ವಿಧಾನ, ಕ್ರೀಡಾಂಗಣದಲ್ಲಿ ಅಥ್ಲೀಟ್‌ಗಳಿಗಿರುವ ಜಿಮ್‌ ಸಮಸ್ಯೆ, ಅಲ್ಲಿನ ಶೌಚಾಲಯಗಳ ಹೀನಾಯ ಸ್ಥಿತಿ ಬಗ್ಗೆ ವಿಸೃತವಾಗಿ ತಿಳಿಸಲಾಗಿತ್ತು. ವರದಿಗಳನ್ನು ಆಧರಿಸಿ ಇಲಾಖೆ ಸ್ಪಷ್ಟನೆ ಕಳುಹಿಸಿದ್ದು, ಜಂಟಿ ನಿರ್ದೇಶಕ ರಮೇಶ್‌ ದೂರವಾಣಿ ಮೂಲಕ ದುರಸ್ತಿ ಕಾರ್ಯಗಳ ವಿವರ ನೀಡಿದ್ದಾರೆ.

Latest Videos

undefined

ಟ್ರ್ಯಾಕ್‌ ಮರು ಅಳವಡಿಕೆಗೆ ಟೆಂಡರ್‌ ಕಾರ‍್ಯ ಆರಂಭ

ಕ್ರೀಡಾಂಗಣದಲ್ಲಿ ಗುಂಡು ಬಿದ್ದಿರುವ ಸಿಂಥೆಟಿಕ್‌ ಟ್ರ್ಯಾಕ್‌ ಅನ್ನು ಹೊಸದಾಗಿ ಅಳವಡಿಸಲು ಟೆಂಡರ್‌ ಕಾರ‍್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲಿ ಟೆಂಡರ್‌ ಕಾರ‍್ಯವನ್ನು ಪೂರ್ಣಗೊಳಿಸಿ ಉತ್ತಮ ಗುಣಮಟ್ಟದ ನೂತನ ಟ್ರ್ಯಾಕ ಅನ್ನು ನಿರ್ಮಿಸಲಾಗುವುದು ಎಂದು ಕ್ರೀಡಾ ಇಲಾಖೆ ಭರವಸೆ ನೀಡಿದೆ. ‘ಟ್ರ್ಯಾಕ್‌ ಅಳವಡಿಕೆಗೆ ಹಲವು ಸಂಸ್ಥೆಯ ಪ್ರಸ್ತಾಪ ಬಂದಿದ್ದು, ಶೀಘ್ರವೇ ಸಮಸ್ಯೆ ಬಗೆ ಹರಿಯಲಿದೆ’ ಎಂದು ಜಂಟಿ ನಿರ್ದೇಶಕ ರಮೇಶ್‌ ತಿಳಿಸಿದ್ದಾರೆ.

ಹರಕಲು ಜಿಮ್‌ನಿಂದ ಕಳಪೆ ಸಾಮಾಗ್ರಿ ಹೊರಕ್ಕೆ

ಕ್ರೀಡಾಂಗಣದ ಗೇಟ್‌ ನಂ.6ರಲ್ಲಿ ಇರುವ ಹರಕಲು ಜಿಮ್‌ನಿಂದ ಹಾಳಾದ ಸಾಮಾಗ್ರಿಗಳನ್ನು ತೆರವು ಮಾಡಿಸಿರುವುದಾಗಿ ಇಲಾಖೆ ಮಾಹಿತಿ ನೀಡಿದೆ. ಆದರೆ ಇಲ್ಲಿ ಕ್ರೀಡಾಪಟುಗಳು ಸೋಮವಾರವೂ ಅಭ್ಯಾಸ ಮುಂದುವರಿಸಿದ್ದರು. ನಿರ್ದೇಶಕ ಶ್ರೀನಿವಾಸ್‌, ಕೆಲ ದಿನಗಳ ಹಿಂದಷ್ಟೇ ‘ಇದು ಜಿಮ್‌ ಅಲ್ಲ, ತರಬೇತುದಾರರು ದೈನಂದಿನ ತರಬೇತಿಗಾಗಿ ಬಳಸುವ ಸಾಮಾಗ್ರಿಗಳನ್ನು ಇಲ್ಲಿ ಇಡುವುದಕ್ಕಾಗಿ ಈ ಕೋಣೆ ಬಳಸುತ್ತಾರೆ’ ಎಂದಿದ್ದರು. ಆದರೆ ಕ್ರೀಡಾಪಟುಗಳು ಅಭ್ಯಾಸ ಮುಂದುವರಿಸಿರುವ ಬಗ್ಗೆ ಯಾವುದೇ ಸ್ಪಷ್ಟನೆ ದೊರೆತಿಲ್ಲ.

ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ರಮೇಶ್‌ ಅಥ್ಲೀಟ್‌ಗಳಿಗೆ ಮಲ್ಟಿಜಿಮ್‌ನಲ್ಲಿ ರಿಯಾಯಿತಿ ಶುಲ್ಕದೊಂದಿಗೆ ಪ್ರವೇಶ ಕಲ್ಪಿಸುವ ಭರವಸೆ ನೀಡಿದ್ದಾರೆ. ‘2000 ರುಪಾಯಿ ಮುಂಗಡ ಹಣವಾಗಿದ್ದು, ಮುಂದಿನ ದಿನಗಳಲ್ಲಿ ಅದನ್ನು ಅಥ್ಲೀಟ್‌ಗಳಿಗೆ ವಾಪಸ್‌ ನೀಡಲಾಗುವುದು. ತಿಂಗಳಿಗೆ .1000 ಇರುವ ಶುಲ್ಕವನ್ನು ಅಥ್ಲೀಟ್‌ಗಳಿಗಾಗಿ 500ಕ್ಕೆ ಇಳಿಸಲಾಗುವುದು. ಜಿಮ್‌ ನಿರ್ವಹಣೆಗೆ ಶುಲ್ಕ ಪಡೆಯುವುದು ಅಗತ್ಯವೆನಿಸಿದೆ’ ಎಂದು ರಮೇಶ್‌ ದೂರವಾಣಿ ಮೂಲಕ ತಿಳಿಸಿದ್ದಾರೆ.

ಶೌಚಾಲಯ ಸ್ವಚ್ಛತೆ ದಿಢೀರ್‌ ಆದ್ಯತೆ!

ಹೊಸದಾಗಿ ಶೌಚಾಲಯ ನಿರ್ಮಿಸಿ ವರ್ಷಗಳೇ ಉರುಳಿದ್ದರೂ ಬಳಸದೆ ಇದ್ದಿದ್ದರಿಂದ ಪಾಚಿ ಕಟ್ಟಿಹಾಳಾಗಿತ್ತು. ‘ಕನ್ನಡಪ್ರಭ’ ವರದಿ ಬಳಿಕ ಶೌಚಾಲಯದ ಸ್ಥಿತಿ ಬಗ್ಗೆ ಅರಿತ ಇಲಾಖೆ, ಸೋಮವಾರ ಬೆಳಗ್ಗೆಯೇ ಸ್ವಚ್ಛತಾ ಕಾರ್ಯ ಆರಂಭಿಸಿತು. ಸ್ವಚ್ಛತಾ ಕಾರ್ಯವನ್ನು ಹೊರಗುತ್ತಿಗೆ ನೀಡಿರುವ ಇಲಾಖೆ, ಗುತ್ತಿಗೆ ಪಡೆದಿರುವ ಸಂಸ್ಥೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಸ್ವಚ್ಛಗೊಳಿಸುವಂತೆ ಆದೇಶಿಸಿದೆ. ಉದ್ಘಾಟನೆಗೆ ಕಾಯುತ್ತಿರುವ ಶೌಚಾಲಯ ಸ್ವಚ್ಛಗೊಂಡಿದೆ. ಆದರೆ ಗಬ್ಬು ನಾರುತ್ತಿದ್ದ ಹಳೆ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದೇವೆ ಎಂದು ಸಿಬ್ಬಂದಿ ತಿಳಿಸಿದರೂ, ಶೌಚಾಲಯದ ಸ್ಥಿತಿ ಬದಲಾಗಿಲ್ಲ. ಈ ಬಗ್ಗೆ ಇಲಾಖೆ ಕಠಿಣ ಕ್ರಮಕೈಗೊಳ್ಳಬೇಕಿದೆ.

ಇನ್ನು ಕೆಲ ತಿಂಗಳ ಹಿಂದೆ ಒಡೆದು ಹಾಕಿದ್ದ ಶೌಚಾಲಯವನ್ನು ಶೀಘ್ರದಲ್ಲೇ ಸರಿಪಡಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಕ್ರೀಡಾಂಗಣ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಇವುಗಳನ್ನೂ ಓದಿ:

ಗುಂಡಿ ಬಿದ್ದ ಟ್ರ್ಯಾಕ್‌ನಲ್ಲೇ ಅಥ್ಲೀಟ್‌ಗಳ ಅಭ್ಯಾಸ- ಪದಕ ಬೇಟೆ ಹೇಗೆ?

ಕಂಠೀರವ ಟ್ರ್ಯಾಕ್ ತುಂಬಾ ಗುಂಡಿ - ನಿರ್ವಹಣೆಗಿಲ್ಲ ಸಿಬ್ಬಂದಿ!

ಕಂಠೀರವ ಕ್ರೀಡಾಂಗಣ ನಿರ್ವಹಣೆ: ಸರಕಾರ ಫೇಲ್!

ಕಂಠೀರವ ಜಿಮ್‌ಗೆ ಕ್ರೀಡಾಳುಗಳಿಗಿಲ್ಲ ಪ್ರವೇಶ!

ಪಬ್ಲಿಕ್‌ ಟಾಯ್ಲೆಟ್‌ಗಿಂತ ಕಡೆ ಕಂಠೀರವ ಕ್ರೀಡಾಂಗಣ ಶೌಚಾಲಯ!

click me!