ಇನ್ಫೋಸಿಸ್ ಫೌಂಡೇಶನ್ ಹಾಗೂ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಆಕಾಡಮಿ ಜೊತೆಯಾಗಿ ಬ್ಯಾಡ್ಮಿಂಟನ್ ತಾರೆಗಳಿಗೆ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ನೀಡಲು ಮುಂದಾಗಿದೆ. ಬರೊಬ್ಬರಿ 16 ಕೋಟಿ ರೂಪಾಯಿ ನೆರವು ನೀಡಿರುವ ಇನ್‌ಫೋಸಿಸ್, ದೇಶದ ಬ್ಯಾಡ್ಮಿಂಟನ್ ಪ್ರತಿಭೆಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಜ್ಜುಗೊಳಿಸಲು ಮಹತ್ವದ ಹೆಜ್ಜೆ ಇಟ್ಟಿದೆ.
ಬೆಂಗಳೂರು(ಸೆ.5): ಐಟಿ ದಿಗ್ಗಜ ಸಂಸ್ಥೆ ಇನ್‍ಫೋಸಿಸ್‍ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ವಿಭಾಗವಾಗಿರುವ ಇನ್‍ಫೋಸಿಸ್ ಫೌಂಡೇಶನ್ ಉದಯೋನ್ಮುಖ ಬ್ಯಾಡ್ಮಿಂಟನ್ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅವರಿಗೆ ಸುಸಜ್ಜಿತವಾದ ತರಬೇತಿ ನೀಡುವ ಸಂಬಂಧ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯೊಂದಿಗೆ ಒಪ್ಪಂದಕ್ಕೆ ಇಂದು ಸಹಿ ಹಾಕಿದೆ. ಈ ಯೋಜನೆ ಐದು ವರ್ಷಗಳದ್ದಾಗಿದ್ದು, ಪ್ರತಿಭೆಗಳಿಗೆ ಸೂಕ್ತ ತರಬೇತಿ ನೀಡಿ ಅವರನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಅಣಿಗೊಳಿಸಲು ಫೌಂಡೇಶನ್ ಅಕಾಡೆಮಿಗೆ ಒಟ್ಟು 16 ಕೋಟಿ ರೂಪಾಯಿಗಳ ನೆರವು ನೀಡಲಿದೆ. ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ಒಲಿಂಪಿಕ್ಸ್ ಸೇರಿದಂತೆ ಇನ್ನೂ ಹಲವಾರು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ನಮ್ಮ ಭಾರತೀಯ ಬ್ಯಾಡ್ಮಿಂಟನ್ ಪಟುಗಳು ಸ್ಪರ್ಧಿಸುವಂತೆ ಮಾಡುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ.
ಇದನ್ನೂ ಓದಿ: ಒಲಂಪಿಕ್‌ನಲ್ಲಿ ಚಿನ್ನ ಗೆಲ್ಲುವೆ : PV ಸಿಂಧು
ಈ ಒಪ್ಪಂದದ ಪ್ರಕಾರ ಇನ್‍ಫೋಸಿಸ್ ಫೌಂಡೇಶನ್ ಸರ್ವಾಂಗೀಣ ತರಬೇತಿಗಾಗಿ ಅಕಾಡೆಮಿಗೆ ದೀರ್ಘಾವಧಿಯ ಬೆಂಬಲವನ್ನು ನೀಡಲಿದ್ದು, ಈ ತರಬೇತಿ ಕಾರ್ಯಕ್ರಮಕ್ಕೆ ಇನ್‍ಫೋಸಿಸ್ ಫೌಂಡೇಶನ್-ಪಿಪಿಬಿಎ ಚಾಂಪಿಯನ್ ನರ್ಚರಿಂಗ್ ಪ್ರೋಗ್ರಾಂ ಎಂದು ಹೆಸರಿಸಲಾಗಿದೆ. ಈ ತರಬೇತಿ ಕಾರ್ಯಕ್ರಮ 2019 ರ ಅಕ್ಟೋಬರ್‍ನಿಂದ ಆರಂಭವಾಗಲಿದ್ದು, ಮುಂದಿನ 5 ವರ್ಷಗಳಲ್ಲಿ ಪ್ರತಿ ವರ್ಷ 65 ಜೂನಿಯರ್ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಉದ್ದೇಶವನ್ನು ಹೊಂದಿದೆ.
ಇದನ್ನೂ ಓದಿ: ಅಪಘಾತದಲ್ಲಿ ಕಾಲು ಕಳೆದುಕೊಂಡ ಪ್ಯಾರಾ ಬ್ಯಾಡ್ಮಿಂಟನ್ ಮಾನಸಿಯ 'ಚಾಂಪಿಯನ್' ಪಯಣ!
ಫೌಂಡೇಶನ್ ನೀಡುವ 16 ಕೋಟಿ ರೂಪಾಯಿಗಳ ಅನುದಾನದಲ್ಲಿ ಅಭ್ಯರ್ಥಿಗಳಿಗೆ ಈ ಕೆಳಗಿನ ತರಬೇತಿಯನ್ನು ನೀಡಲಾಗುತ್ತದೆ
ಈ ಸಂದರ್ಭದಲ್ಲಿ ಮಾತನಾಡಿದ ಇನ್‍ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು, ``ನಮ್ಮ ಇಡೀ ದೇಶ ಕ್ರೀಡೆಗಳನ್ನು ಪ್ರೀತಿಸುತ್ತದೆ. ಆದರೆ, ಕ್ರೀಡೆಗಳನ್ನು ವೃತ್ತಿಯನ್ನಾಗಿ ಮಾಡುವ ವಿಚಾರಕ್ಕೆ ಬಂದಾಗ ಅತ್ಯುತ್ತಮ ಕ್ರೀಡಾಪಟುಗಳಿಗೆ ಸಾಂಸ್ಥಿಕವಾದ ಬೆಂಬಲದ ಕೊರತೆಯು ಕೆಲವು ಅತ್ಯುತ್ತಮವಾದ ಕ್ರೀಡಾಪಟುಗಳು ತಮ್ಮ ಉತ್ಸಾಹವನ್ನು ಮುಂದುವರಿಸುವುದನ್ನು ನಿರುತ್ಸಾಹಗೊಳಿಸುತ್ತದೆ. ನಮ್ಮ ಭಾರತೀಯ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಸಾಧನೆ ತೋರಬೇಕಾದರೆ ಅವರಿಗೆ ವಿಶ್ವದ ಅತ್ಯುತ್ತಮವಾದ ಮೂಲಸೌಕರ್ಯಗಳು ಮತ್ತು ತರಬೇತಿಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಇಂತಹ ಪ್ರತಿಭೆಗಳ ಅನಾವರಣ ಮಾಡಬೇಕೆಂಬ ಉದ್ದೇಶದಿಂದಲೇ ಇನ್‍ಫೋಸಿಸ್ ಫೌಂಡೇಶನ್ -ಪಿಪಿಬಿಎ ಚಾಂಪಿಯನ್ಸ್ ನರ್ಚರಿಂಗ್ ಪ್ರೋಗ್ರಾಂ ಮೂಲಕ ಬೆಂಬಲ ನೀಡುತ್ತಿದೆ. ಈ ಬೆಂಬಲವು ಕೊರತೆಗಳ ಅಂತರವನ್ನು ನೀಗಿಸಲಿದೆ ಎಂಬ ವಿಶ್ವಾಸ ನಮ್ಮದಾಗಿದೆ’’ ಎಂದು ತಿಳಿಸಿದರು.
ಇದನ್ನೂ ಓದಿ: ಚಾಂಪಿಯನ್ ಸಿಂಧುಗೆ ಮೋದಿ ಅಭಿನಂದನೆ; ಕ್ರೀಡಾ ಇಲಾಖೆ ಭರ್ಜರಿ ಬಹುಮಾನ!
ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ ಸಂಸ್ಥಾಪಕ ಪ್ರಕಾಶ್ ಪಡುಕೋಣೆ ಅವರು ಮಾತನಾಡಿ, ``ಕಳೆದ 25 ವರ್ಷಗಳಿಂದ ಪಿಪಿಬಿಎ ವಿಶ್ವದರ್ಜೆಯ ಬ್ಯಾಡ್ಮಿಂಟನ್ ಪ್ರತಿಭೆಗಳನ್ನು ಸಿದ್ಧಗೊಳಿಸುತ್ತಾ ಬಂದಿದೆ. ನಮ್ಮ ಸಂಸ್ಥೆಯ ಬೆಳ್ಳಿ ಹಬ್ಬ ಆಚರಣೆಯ ಈ ಸಂದರ್ಭದಲ್ಲಿಯೇ ಇನ್‍ಫೋಸಿಸ್ ಜತೆಗೆ ದೀರ್ಘಾವಧಿಯ ಪಾಲುದಾರಿಕೆಯನ್ನು ಹೊಂದುತ್ತಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. ಇನ್‍ಫೋಸಿಸ್‍ನ ಅನುದಾನದಿಂದ ಅಕಾಡೆಮಿಯಲ್ಲಿ ಉತೃಷ್ಠವಾದ ತರಬೇತಿ ಮತ್ತು ಮಾರ್ಗದರ್ಶನವನ್ನು ನೀಡಲಾಗುತ್ತದೆ ಮತ್ತು ನಮ್ಮ ಕ್ರೀಡಾಪಟುಗಳನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಅಣಿಗೊಳಿಸಲಾಗುತ್ತದೆ’’ ಎಂದರು.
ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯ ಸಹ ಸಂಸ್ಥಾಪಕ ಮತ್ತು ಮುಖ್ಯ ತರಬೇತುದಾರ ವಿಮಲ್‍ಕುಮಾರ್ ಅವರು ಮಾತನಾಡಿ, ``ಒಬ್ಬ ಆಟಗಾರನಾಗಿ, ತರಬೇತುದಾರನಾಗಿ ಕಳೆದ 30 ವರ್ಷಗಳಿಂದ ದೇಶದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಗೆ ಹೆಚ್ಚು ಆಸಕ್ತಿ ಮತ್ತು ಪರಿಣಾಮಕಾರಿಯಾದ ರೂಪಾಂತರ ಆಗುತ್ತಿರುವುದನ್ನು ನೋಡುತ್ತಿದ್ದೇನೆ. ಅಂದರೆ ಬ್ಯಾಡ್ಮಿಂಟನ್‍ಗೆ ಹೆಚ್ಚು ಹೆಚ್ಚು ಒಲವು ತೋರುತ್ತಿರುವ ಕ್ರೀಡಾಪಟುಗಳ ಸಂಖ್ಯೆ ಅಧಿಕಗೊಳ್ಳುತ್ತಿದೆ. ಪ್ರಸ್ತುತ, ಪಿಪಿಬಿಎನಲ್ಲಿ ವೈವಿಧ್ಯಮಯ ಹಿನ್ನೆಲೆಯಿಂದ ಬಂದಿರುವ ವಿವಿಧ ವಯೋಮಾನದ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದೇವೆ. ಇಲ್ಲಿ ತರಬೇತಿ ಪಡೆದ ಆಟಗಾರರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ತೋರುತ್ತಾ ಬಂದಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ. ಇದೀಗ ಇನ್‍ಫೋಸಿಸ್ ಫೌಂಡೇಶನ್‍ನಿಂದ ದೊರೆಯುತ್ತಿರುವ ಈ ಬೆಂಬಲವು ನಮ್ಮ ತರಬೇತಿ ಕಾರ್ಯಕ್ರಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನೆರವಾಗುತ್ತದೆ’’ ಎಂದು ಅಭಿಪ್ರಾಯಪಟ್ಟರು.