ಕೇವಲ 12 ಮ್ಯಾಚ್: 85ರಿಂದ 3ನೇ ರ‍್ಯಾಂಕ್, ಇದು ಬುಮ್ರಾ ಝಲಕ್..!

Published : Sep 05, 2019, 06:34 PM ISTUpdated : Sep 25, 2019, 02:03 PM IST
ಕೇವಲ 12 ಮ್ಯಾಚ್: 85ರಿಂದ 3ನೇ ರ‍್ಯಾಂಕ್, ಇದು ಬುಮ್ರಾ ಝಲಕ್..!

ಸಾರಾಂಶ

ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಸರಣಿಯಲ್ಲೂ ಗಮನಾರ್ಹ ಪ್ರದರ್ಶನ ತೋರುವ ಮೂಲಕ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಕೇವಲ 12 ಪಂದ್ಯಗಳನ್ನಾಡಿರುವ ಬುಮ್ರಾ 85ನೇ ಶ್ರೇಯಾಂಕದಿಂದ ನಂ.3 ಶ್ರೇಯಾಂಕದ ವರೆಗಿನ ಹೆಜ್ಜೆಯ ಹಿನ್ನೋಟವನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ...

ಬೆಂಗಳೂರು[ಸೆ.05]: ಟೀಂ ಇಂಡಿಯಾದ ಮಾರಕ ವೇಗಿ, ಡೆತ್ ಓವರ್ ಸ್ಪೆಷಲಿಸ್ಟ್ ಖ್ಯಾತಿಯ ಜಸ್ಪ್ರೀತ್ ಬುಮ್ರಾ ವೆಸ್ಟ್ ಇಂಡೀಸ್ ವಿರುದ್ಧ ಮುಕ್ತಾಯವಾದ ಟೆಸ್ಟ್ ಸರಣಿಯಲ್ಲೂ ಮತ್ತೊಮ್ಮೆ ಮಿಂಚಿನ ಪ್ರದರ್ಶನ ತೋರಿದ್ದಾರೆ. ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಎದುರಾಳಿ ಬ್ಯಾಟ್ಸ್’ಮನ್’ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಬುಮ್ರಾ ಇದೀಗ ಕೇವಲ 12 ಪಂದ್ಯಗಳನ್ನಾಡಿ ಐಸಿಸಿ ಶ್ರೇಯಾಂಕದಲ್ಲಿ ನಂ.3 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 

ಹೌದು, 2018ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್’ಗೆ ಬುಮ್ರಾ ಪದಾರ್ಪಣೆ ಮಾಡಿದ್ದಾಗ ಹಲವರು ಮೂಗು ಮುರಿದಿದ್ದರು. ಸೀಮಿತ ಓವರ್’ನಲ್ಲಿ ಸಿಕ್ಕಷ್ಟು ಯಶಸ್ಸು ಟೆಸ್ಟ್ ಕ್ರಿಕೆಟ್’ನಲ್ಲಿ ಬುಮ್ರಾಗೆ ಸಿಗಲಾರದು ಎಂದು ಅಭಿಪ್ರಾಯಪಟ್ಟಿದ್ದರು. ಆದರೆ 12 ಪಂದ್ಯಗಳಲ್ಲಿ ಆ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿ ದಿಗ್ಗಜ ಕ್ರಿಕೆಟಿಗರೂ ಮಾಡಲಾಗದ ಸಾಧನೆಯನ್ನು ಬುಮ್ರಾ ಮಾಡಿದ್ದಾರೆ. ಬುಮ್ರಾ ಇದುವರೆಗೂ ನಾಲ್ಕು ಟೆಸ್ಟ್ ಸರಣಿಯನ್ನು ವಿದೇಶದಲ್ಲಿ ಆಡಿದ್ದು, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನೆಲದಲ್ಲಿ 5+ ವಿಕೆಟ್ ಪಡೆದ ಏಷ್ಯಾದ ಮೊದಲ ಬೌಲರ್ ಎನ್ನುವ ಅಪರೂಪದ ದಾಖಲೆ ಬರೆದಿದ್ದಾರೆ. ಇದರ ಜತೆಗೆ ಟೆಸ್ಟ್’ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಮೂರನೇ ಬೌಲರ್ ಎನ್ನುವ ಗೌರವಕ್ಕೂ ಬುಮ್ರಾ ಭಾಜನರಾಗಿದ್ದಾರೆ. 

ಬುಮ್ರಾ ಒಂದೂವರೆ ವರ್ಷದ ಅಂತರದಲ್ಲಿ 12 ಪಂದ್ಯಗಳನ್ನಾಡಿ 19.24ರ ಸರಾಸರಿಯಲ್ಲಿ 62 ವಿಕೆಟ್ ಕಬಳಿಸಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ವಿಂಡೀಸ್ ಸರಣಿಯಲ್ಲೂ 13 ವಿಕೆಟ್ ಪಡೆಯುವ ಮೂಲಕ ಐಸಿಸಿ ಬೌಲರ್’ಗಳ ಶ್ರೇಯಾಂಕದಲ್ಲಿ ಬುಮ್ರಾ ಮೂರನೇ ಸ್ಥಾನಕ್ಕೆ ದಾಪುಗಾಲಿಟ್ಟಿದ್ದಾರೆ. ವೃತ್ತಿಜೀವನ ಆರಂಭಿಸಿದ್ದಾಗ 85ನೇ ಶ್ರೇಯಾಂಕದಲ್ಲಿದ್ದ ಬುಮ್ರಾ ಇದೀಗ 12ನೇ ಪಂದ್ಯದ ಬಳಿಕ 3ನೇ ಸ್ಥಾನ ತಲುಪಿದ್ದಾರೆ. ಬುಮ್ರಾ ಟೆಸ್ಟ್ ಜರ್ನಿಯ ಒಂದು ವಿಶ್ಲೇಷಣೆ ಇಲ್ಲಿದೆ ನೋಡಿ...

1. ಇಂಡೋ-ಆಫ್ರಿಕಾ ಸರಣಿ:


2018ರ ಜನವರಿಯಲ್ಲಿ ಜಸ್ಪ್ರೀತ್ ಬುಮ್ರಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದರು. ಮೊದಲ ವಿದೇಶಿ ಪ್ರವಾಸದ ಮೊದಲ ಟೆಸ್ಟ್ ಪಂದ್ಯದಲ್ಲಿ 4 ವಿಕೆಟ್ ಪಡೆದಿದ್ದ ಬುಮ್ರಾ, ಮೊದಲ ಸರಣಿಯಲ್ಲಿ ಮೂರು ಪಂದ್ಯಗಳನ್ನಾಡಿ 14 ವಿಕೆಟ್ ಪಡೆದು ಮಿಂಚಿದ್ದರು. ಅಲ್ಲದೇ ಮೂರನೇ ಟೆಸ್ಟ್’ನಲ್ಲಿ 54 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಮೊದಲ ಬಾರಿಗೆ 5+ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಜತಗೆ ಶ್ರೇಯಾಂಕದಲ್ಲಿ 43 ಸ್ಥಾನ ಜಿಗಿದು, 42ನೇ ಸ್ಥಾನಕ್ಕೆ ಲಗ್ಗೆಯಿಟ್ಟರು.

2. ಇಂಡೋ-ಇಂಗ್ಲೆಂಡ್ ಸರಣಿ:


ಬುಮ್ರಾ ಮಿಂಚಿನ ಪ್ರದರ್ಶನ ಆಂಗ್ಲರ ನೆಲದಲ್ಲೂ ಮುಂದುವರೆಯಿತು. ಗಾಯದ ಸಮಸ್ಯೆಯಿಂದಾಗಿ ಮೊದಲೆರಡು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದ ಬುಮ್ರಾ, ಮೂರನೇ ಟೆಸ್ಟ್ ಪಂದ್ಯದಲ್ಲಿ ತಂಡ ಕೂಡಿಕೊಂಡರು. ಮೂರನೇ ಟೆಸ್ಟ್’ನ ಎರಡನೇ ಇನಿಂಗ್ಸ್’ನಲ್ಲಿ 85 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಮೂರು ಪಂದ್ಯಗಳನ್ನಾಡಿ 14 ವಿಕೆಟ್ ಪಡೆಯುವಲ್ಲಿ ಸಫಲರಾದರು.

3. ಇಂಡೋ-ಆಸೀಸ್ ಸರಣಿ:


ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವಲ್ಲಿ ಕೊಹ್ಲಿ, ಪೂಜಾರ ಅವರಷ್ಟೇ ಪರಿಶ್ರಮ ಬುಮ್ರಾ ಅವರದ್ದೂ ಇದೆ. ಆಸೀಸ್ ಎದುರು 4 ಪಂದ್ಯಗಳನ್ನಾಡಿ ಬರೋಬ್ಬರಿ 21 ವಿಕೆಟ್ ಕಬಳಿಸುವ ಮೂಲಕ ಶ್ರೇಯಾಂಕದಲ್ಲಿ 16 ಸ್ಥಾನ ಏರಿಕೆ ಕಂಡು 16ನೇ ಸ್ಥಾನಕ್ಕೆ ಲಗ್ಗೆಯಿಟ್ಟರು. ಅಲ್ಲದೆ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿದ ಸಾಧನೆಯ ರೂವಾರಿಗಳಲ್ಲಿ ಬುಮ್ರಾ ಕೂಡಾ ಒಬ್ಬರು ಎನಿಸಿದರು.

4. ಇಂಡೋ-ವಿಂಡೀಸ್ ಸರಣಿ: 


ಬುಮ್ರಾ ಮಾರಕ ಬೌಲಿಂಗ್ ಕೆರಿಬಿಯನ್ ನೆಲದಲ್ಲೂ ಮುಂದುವರೆಯಿತು. ಆ್ಯಂಟಿಗ ಹಾಗೂ ಜಮೈಕಾ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಬ್ಯಾಟ್ಸ್’ಮನ್’ಗಳನ್ನು ಬುಮ್ರಾ ಇನ್ನಿಲ್ಲದಂತೆ ಕಾಡಿದರು. ಮೊದಲ ಟೆಸ್ಟ್ ಪಂದ್ಯದಲ್ಲಿ 7 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಎರಡನೇ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಹಿತ 6 ವಿಕೆಟ್ ಕಬಳಿಸಿ ಮಿಂಚಿದರು. ಇದರ ಜತೆಗೆ ಶ್ರೇಯಾಂಕದಲ್ಲಿ ಬುಮ್ರಾ 16ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಇನ್ನು ಅಕ್ಟೋಬರ್’ನಲ್ಲಿ ಭಾರತ ತಂಡವು ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಚಾಂಪಿಯನ್’ಶಿಪ್ ಆಡಲಿದ್ದು, ಆ ವೇಳೆಯೇ ಬುಮ್ರಾ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟರೆ ಅಚ್ಚರಿಯಿಲ್ಲ.  


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?