
ಕಜಕಸ್ತಾನ(ಸೆ.20): ವಿಶ್ವ ನಂ.1 ಕುಸ್ತಿಪಟು ಭಜರಂಗ್ ಪೂನಿಯಾ, ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನ 65 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿ ಚಿನ್ನದ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು. ಇದಕ್ಕೂ ಮುನ್ನ ಅವರು ಸೆಮೀಸ್ ಪ್ರವೇಶಿಸುವ ಮೂಲಕ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಪ್ರವೇಶ ಪಡೆದರು.
ಇನ್ನು 57 ಕೆ.ಜಿ ವಿಭಾಗದ ಸೆಮಿಫೈನಲ್ಗೇರುವ ಮೂಲಕ, ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ರವಿ ದಹಿಯಾ, ಅಂತಿಮ 4ರ ಸುತ್ತಿನ ಪಂದ್ಯದಲ್ಲಿ ಪರಾಭವಗೊಂಡರು. ಈ ಇಬ್ಬರು ಶುಕ್ರವಾರ ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ.
ವಿಶ್ವ ಕುಸ್ತಿ ಚಾಂಪಿಯನ್ಶಿಪ್: ವಿನೇಶ್ ಫೋಗಾಟ್‌ಗೆ ಆಘಾತ
ಮೊದಲ ಸುತ್ತಿನಿಂದಲೂ ಎದುರಾಳಿಗಳ ಮೇಲೆ ಸವಾರಿ ಮಾಡುತ್ತಾ ನಿರಾಯಾಸವಾಗಿ ಸೆಮಿಫೈನಲ್ ಪ್ರವೇಶಿಸಿದ್ದ ಭಜರಂಗ್ಗೆ, ಅಂತಿಮ 4ರ ಸುತ್ತಿನಲ್ಲಿ ಸ್ಥಳೀಯ ಕುಸ್ತಿಪಟು ದೌಲತ್ ನಿಯಾಜ್‌ಬೆಕೊವ್ ಎದುರಾದರು. 2-9ರಿಂದ ಹಿಂದಿದ್ದ ಭಜರಂಗ್, ಕೊನೆ ಕೆಲ ಕ್ಷಣಗಳಲ್ಲಿ ಆಕರ್ಷಕ ಪ್ರದರ್ಶನ ನೀಡಿ 9-9ರಲ್ಲಿ ಸಮಬಲ ಸಾಧಿಸಿದರೂ, ರೆಫ್ರಿಗಳು ದೌಲತ್ ಪರ ತೀರ್ಪು ನೀಡಿದರು. ಪಂದ್ಯದ ವೇಳೆ ಸ್ಥಳೀಯ ಕುಸ್ತಿಪಟುವಿಗೆ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ನೀಡಿದ ರೆಫ್ರಿಗಳು, ಅವರಿಂದ 3 ಬಾರಿ ತಪ್ಪಾದರೂ ಭಜರಂಗ್ಗೆ ಅಂಕ ನೀಡಲಿಲ್ಲ. ಪಂದ್ಯದ ನಡುವೆಯೇ ಭಜರಂಗ್, ರೆಫ್ರಿಗಳನ್ನು ಪ್ರಶ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇನ್ನು 57 ಕೆ.ಜಿ ಸೆಮಿಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ರಷ್ಯಾದ ಜೌರ್ ಉಗೇವ್ ವಿರುದ್ಧ ರವಿ 4-6ರಿಂದ ಸೋಲುಂಡರು.
ಹೇಳದೆ ಕೇಳದೆ ಶಿಬಿರ ತೊರೆದ ಸಾಕ್ಷಿಗೆ ಕುಸ್ತಿ ಫೆಡರೇಷನ್ ಚಾಟಿ!
ಪೂಜಾಗಿಲ್ಲ ಕಂಚು: ಮಹಿಳೆಯರ 59 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ಪೂಜಾ ದಂಢಾ, ಚೀನಾದ ಕ್ಸಿಂಗ್ರು ಪೀ ವಿರುದ್ಧ 3-5ರಲ್ಲಿ ಸೋಲುಂಡರು. ರಿಯೋ ಒಲಿಂಪಿಕ್ಸ್ ಕಂಚು ವಿಜೇತೆ ಸಾಕ್ಷಿ ಮಲಿಕ್ 62 ಕೆ.ಜಿ ವಿಭಾಗದ ಮೊದಲ ಸುತ್ತಿನಲ್ಲೇ ಸೋಲುಂಡು ನಿರಾಸೆ ಅನುಭವಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.