
ಬೆಂಗಳೂರು(ಸೆ.08): 2019-20ರ ದೇಸಿ ಕ್ರಿಕೆಟ್ ಋುತುವಿನ ಮೊದಲ ಟೂರ್ನಿ ದುಲೀಪ್ ಟ್ರೋಫಿಯಲ್ಲಿ ಭಾರತ ರೆಡ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯಗೊಂಡ ಫೈನಲ್ ಪಂದ್ಯದಲ್ಲಿ, ಭಾರತ ಗ್ರೀನ್ ವಿರುದ್ಧ ಇನ್ನಿಂಗ್ಸ್ ಹಾಗೂ 38 ರನ್‌ಗಳ ಗೆಲುವು ಸಾಧಿಸಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ರೆಡ್‌ಗೆ 157 ರನ್ ಮುನ್ನಡೆ ಬಿಟ್ಟುಕೊಟ್ಟು 2ನೇ ಇನ್ನಿಂಗ್ಸ್ ಆರಂಭಿಸಿದ್ದ ಭಾರತ ಗ್ರೀನ್ ತಂಡ, ಕೇವಲ 119 ರನ್‌ಗಳಿಗೆ ಆಲೌಟ್ ಆಯಿತು. ಪಂದ್ಯದ 4ನೇ ದಿನವಾದ ಶನಿವಾರ, 6 ವಿಕೆಟ್‌ಗೆ 345 ರನ್‌ಗಳಿಂದ ಮೊದಲ ಇನ್ನಿಂಗ್ಸ್ ಮುಂದುವರಿಸಿದ ಭಾರತ ರೆಡ್, 388 ರನ್‌ಗಳಿಗೆ ಆಲೌಟ್ ಆಯಿತು.
ದುಲೀಪ್ ಟ್ರೋಫಿ ಫೈನಲ್: ಭಾರತ ರೆಡ್‌ಗೆ ಇನ್ನಿಂಗ್ಸ್ ಮುನ್ನಡೆ
ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ ಗ್ರೀನ್, ಆರಂಭಿಕ ಆಘಾತ ಅನುಭವಿಸಿತು. ವೇಗಿ ಆವೇಶ್ ಖಾನ್ ಮಾರಕ ಬೌಲಿಂಗ್ ದಾಳಿ ಮೂಲಕ ಅಗ್ರ ಕ್ರಮಾಂಕವನ್ನು ಪೆವಿಲಿಯನ್ಗಟ್ಟಿದರು. ವಿದರ್ಭದ ಸ್ಪಿನ್ನರ್ ಆದಿತ್ಯ ಸರ್ವಾಟೆ ಮಧ್ಯಮ ಕ್ರಮಾಂಕವನ್ನು ಉರುಳಿಸಿದರು. ಸಿದ್ದೇಶ್ ಲಾಡ್ (42) ಹಾಗೂ ಅಕ್ಷತ್ ರೆಡ್ಡಿ (33) ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್ ಸಹ ಹೋರಾಟ ಪ್ರದರ್ಶಿಸಲಿಲ್ಲ. ಆದಿತ್ಯ 5.5 ಓವರಲ್ಲಿ 15 ರನ್‌ಗೆ 5 ವಿಕೆಟ್ ಕಬಳಿಸಿದರು. ಆವೇಶ್ 3 ವಿಕೆಟ್ ಕಿತ್ತರು. ಕೇವಲ 39.5 ಓವರ್‌ಗಳಲ್ಲಿ ಭಾರತ ಗ್ರೀನ್ ಆಲೌಟ್ ಆಯಿತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ಗ್ರೀನ್, ಮೊದಲ ಇನ್ನಿಂಗ್ಸ್‌ನಲ್ಲಿ 231 ರನ್ ಗಳಿಸಿತ್ತು. ಅಭಿಮನ್ಯು ಈಶ್ವರನ್ರ ಅಮೋಘ 153 ರನ್‌ಗಳ ಆಟದ ನೆರವಿನಿಂದ ಭಾರತ ರೆಡ್, ಮೊದಲ ಇನ್ನಿಂಗ್ಸ್‌ನಲ್ಲಿ 388 ರನ್ ಗಳಿಸಿ ದೊಡ್ಡ ಮೊತ್ತದ ಮುನ್ನಡೆ ಪಡೆದುಕೊಂಡಿತ್ತು.
ಸ್ಕೋರ್:
ಭಾರತ ಗ್ರೀನ್ 231 ಹಾಗೂ 119/10
(ಸಿದ್ದೇಶ್ 42, ಅಕ್ಷತ್ 33, ಆದಿತ್ಯ 5-15, ಆವೇಶ್ 3-38),
ಭಾರತ ರೆಡ್ 388/10.
ಪಂದ್ಯ ಶ್ರೇಷ್ಠ: ಅಭಿಮನ್ಯು ಈಶ್ವರನ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.