ಪುಲ್ವಾಮ ಉಗ್ರರ ದಾಳಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಖಂಡಿಸಿದೆ. ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ, ಮೊಹಾಲಿ ಕ್ರೀಡಾಂಗಣದ ಬಳಿಕ ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಪಾಕಿಸ್ತಾನ ಕ್ರಿಕೆಟಿಗರ ಫೋಟೋ ತೆರೆವು ಮಾಡಲಾಗಿದೆ.
ಬೆಂಗಳೂರು(ಫೆ.19): ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಪಾಕಿಸ್ತಾನ ಉಗ್ರ ಸಂಘಟನೆ ಜೈಷ್-ಎ-ಮೊಹಮದ್ ನಡೆಸಿದ ಆತ್ಮಾಹುತಿ ದಾಳಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಖಂಡಿಸಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದ್ದ ಪಾಕಿಸ್ತಾನ ಕ್ರಿಕೆಟಿಗರ ಫೋಟೋಗಳನ್ನು ತೆರವುಗೊಳಿಸುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಅರ್ಪಿಸಿದೆ.
ಇದನ್ನೂ ಓದಿ: ಪುಲ್ವಾಮ ದಾಳಿ: ಭಾರತೀಯ ಕ್ರಿಕೆಟ್ ಕ್ಲಬ್‌ನಲ್ಲಿದ್ದ ಇಮ್ರಾನ್ ಖಾನ್ ಫೋಟೋ ಎತ್ತಂಗಡಿ!
ಭಾನುವಾರ ಪಂಜಾಬ್ ಕ್ರಿಕೆಟ್ ಸಂಸ್ಥೆಯೂ ಮೊಹಾಲಿ ಕ್ರೀಡಾಂಗಣದಲ್ಲಿದ್ದ ಸುಮಾರು 15 ಫೋಟೋಗಳನ್ನು ತೆರವುಗೊಳಿಸಿದ್ದಾಗಿ ತಿಳಿಸಿತ್ತು. ಕೆಎಸ್‌ಸಿಎ 2 ದಿನಗಳ ಹಿಂದೆಯೇ ಆತ್ಮಾಹುತಿ ದಾಳಿಯನ್ನು ಖಂಡಿಸಿ, ಪಾಕಿಸ್ತಾನ ಕ್ರಿಕೆಟಿಗರ ಫೋಟೋಗಳನ್ನು ತೆರವು ಮಾಡಿದೆ. ಈ ಕುರಿತು ಸೋಮವಾರ ಕೆಎಸ್‌ಸಿಎ ಕಾರ್ಯದರ್ಶಿ ಆರ್.ಸುಧಾಕರ್ ರಾವ್ ಸುವರ್ಣನ್ಯೂಸ್.ಕಾಂಗೆ ಖಚಿತಪಡಿಸಿದರು. ಕೆಎಸ್‌ಸಿಎ ಆವರಣದಲ್ಲಿ ಪಾಕಿಸ್ತಾನ ಆಟಗಾರರು, ತಂಡಕ್ಕೆ ಸಂಬಂಧಿಸಿದ 5 ಫೋಟೋಗಳು ಇದ್ದವು. ಇಮ್ರಾನ್ ಖಾನ್, ವಾಸಿಂ ಅಕ್ರಂ ಫೋಟೋಗಳು ಪ್ರಮುಖ ಎನಿಸಿದ್ದವು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ 5 ಟೆಸ್ಟ್, 2 ಏಕದಿನ, 1 ಟಿ20 ಪಂದ್ಯವನ್ನಾಡಿದೆ. ಇಲ್ಲಿ ನಡೆದ 1996ರ ಏಕದಿನ ವಿಶ್ವಕಪ್‌ನ ಕ್ವಾರ್ಟರ್ ಫೈನಲ್ ಪಂದ್ಯ ಭಾರತೀಯ ಅಭಿಮಾನಿಗಳ ನೆನಪಿನಾಳದಲ್ಲಿ ಸದಾ ಉಳಿಯಲಿದೆ.
ಇದನ್ನೂ ಓದಿ: ಮೊಹಾಲಿ ಕ್ರೀಡಾಂಗಣದಲ್ಲಿ ಪಾಕ್ ಕ್ರಿಕೆಟಿಗರ ಫೋಟೋ ತೆರವು!
ದಾಳಿಯನ್ನು ಖಂಡಿಸಿ ಮಾತನಾಡಿದ ಸುಧಾಕರ್ ರಾವ್, ‘ನಮ್ಮ ದೇಶದ ಘನತೆಯನ್ನು ಎತ್ತಿಹಿಡಿಯುವ ಕಾರ‍್ಯಕ್ಕೆ ನಾವು ಯಾವಾಗಲೂ ಮುಂದಿರುತ್ತೇವೆ. ಇತರ ರಾಜ್ಯ ಸಂಸ್ಥೆಗಳು ಭಾವ ಚಿತ್ರಗಳನ್ನು ತೆಗೆದಿರುವುದಾಗಿ ಮಾಧ್ಯಮಗಳಲ್ಲಿ ಪ್ರಕಟ ಮಾಡಿದ್ದಾರೆ. ಆದರೆ ನಾವು 2 ದಿನಗಳ ಹಿಂದೆಯೇ ಪಾಕ್ ಆಟಗಾರರ ಫೋಟೋಗಳನ್ನು ತೆರವುಗೊಳಿಸಿದ್ದೇವೆ. ಆದರೆ ಪ್ರಚಾರ ಮಾಡಲು ಹೋಗಿಲ್ಲ. ಉಗ್ರರಿಗೆ ಕುಮ್ಮಕ್ಕು ನೀಡುತ್ತಾ ನಮ್ಮ ದೇಶದ ಯೋಧರನ್ನು ಬಲಿಪಡೆಯುತ್ತಿರುವ ದೇಶದ ಆಟಗಾರರ ಭಾವಚಿತ್ರಗಳನ್ನು ನಮ್ಮಲ್ಲಿ ಹಾಕುವುದು ಒಳೆಯದ್ದಲ್ಲ’ ಎಂದರು.
ಇದನ್ನೂ ಓದಿ: ಪುಲ್ವಾಮಾ ದಾಳಿ: ಕಂಗಾಲಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಹತಾಶೆ ಮಾತು!
ಫೋಟೋ ತೆರವು: ಪಾಕ್ ಅಸಮಾಧಾನ!
ಕರಾಚಿ: ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿದ್ದ ಇಮ್ರಾನ್ ಖಾನ್ ಫೋಟೋಗೆ ಹೊದಿಕೆ ಹೊದಿಸಿದ್ದಕ್ಕೆ ಹಾಗೂ ಮೊಹಾಲಿಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಕ್ರಿಕೆಟಿಗರ ಫೋಟೋಗಳನ್ನು ತೆರವು ಮಾಡಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಸಮಾಧಾನ ವ್ಯಕ್ತಪಡಿಸಿದೆ. ‘ಕ್ರೀಡೆ ಹಾಗೂ ರಾಜಕೀಯವನ್ನು ಬೆರೆಸಬಾರದು. ಉಭಯ ದೇಶಗಳ ಸ್ನೇಹ ಕೊಂಡಿಯಾಗಿ ಕ್ರೀಡೆ ಕೆಲಸ ಮಾಡುತ್ತದೆ. ಅದರಲ್ಲೂ ಪ್ರಮುಖವಾಗಿ ಕ್ರಿಕೆಟ್ ಎರಡೂ ದೇಶದ ಅಭಿಮಾನಿಗಳನ್ನು ಒಟ್ಟಿಗೆ ತರುವ ಕೆಲಸ ಮಾಡಿದೆ. ದಿಗ್ಗಜ ಆಟಗಾರರ ಫೋಟೋಗಳನ್ನು ತೆರವು ಮಾಡಿರುವುದು ಬೇಸರ ತಂದಿದೆ’ ಎಂದು ಪಿಸಿಬಿ ವ್ಯವಸ್ಥಾಪಕ ನಿರ್ದೇಶಕ ವಾಸಿಂ ಖಾನ್ ಹೇಳಿದ್ದಾರೆ. ಫೋಟೋ ತೆರವಿನ ಕುರಿತು ಫೆ.28ರಿಂದ ದುಬೈನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ವಾಸಿಂ ಹೇಳಿದ್ದಾರೆ.