ಇನ್ನೂ ಎಷ್ಟು ದಿನ ಮಳೆ ಸುರಿಯುತ್ತೆ..? ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?

Published : Aug 03, 2026, 10:52 AM IST
rain

ಸಾರಾಂಶ

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಭಾರೀ ಮಳೆಯಿಂದಾಗಿ ಶಿರಸಿ-ಹುಬ್ಬಳ್ಳಿ ರಸ್ತೆ ಜಲಾವೃತಗೊಂಡಿದ್ದು, ಬಂಟ್ವಾಳದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಾಗೂ ಕಾರ್ಕಳದಲ್ಲಿ ಕಿರು ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.

ಮಂಗಳೂರು/ಕಾರವಾರ: ಕಳೆದ ಕೆಲವು ದಿನಗಳಿಂದ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಇಂದೂ ಕೂಡ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಪ್ರಮುಖ ಜಿಲ್ಲೆಗಳಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ.

ಇಂದು ಆರೆಂಜ್ ಅಲರ್ಟ್, ನಾಳೆ ಎಲ್ಲೋ ಅಲರ್ಟ್

ಹವಾಮಾನ ಇಲಾಖೆಯ ವರದಿಯ ಪ್ರಕಾರ ಇಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಷ್ಟೇ ಅಲ್ಲದೆ, ಮಲೆನಾಡಿನ ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ. ಬೆಳಗಾವಿ ಮತ್ತು ಹಾಸನ ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ನಾಳೆಯಿಂದ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗುವ ಮುನ್ಸೂಚನೆ ಇದೆ.

ಶಿರಸಿ-ಹುಬ್ಬಳ್ಳಿ ರಸ್ತೆ ಜಲಾವೃತ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕಳೆದ ಎರಡು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಇದರಿಂದಾಗಿ ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ನಗರದ ಕೋಟೆ ಕೆರೆ ತುಂಬಿ ಹರಿಯುತ್ತಿದ್ದು, ನೀರು ರಸ್ತೆಗೆ ನುಗ್ಗಿದೆ. ಹಲವು ಬಡಾವಣೆಗಳು ಜಲಾವೃತಗೊಂಡಿದ್ದು, ಜನರು ಮನೆಯಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದೆ.

ಇತ್ತ ದಾಂಡೇಲಿಯಲ್ಲಿ ಕಳೆದ 48 ಗಂಟೆಗಳಿಂದ ಸುರಿಯುತ್ತಿರುವ ಮಳೆಗೆ ಮಸಿದಿಗಲ್ಲಿಯ ಯುಸೂಫ್ ಶೇಖ್ ಎಂಬುವವರ ಮನೆ ಕುಸಿದಿದೆ. ಮನೆಯಲ್ಲಿದ್ದ ಇಬ್ಬರು ವೃದ್ಧರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆ ಆರ್ಭಟ ಜೋರಾಗಿದೆ. ಎಎಂಆರ್ (AMR) ಡ್ಯಾಂನಿಂದ ನೀರನ್ನು ಹೊರಬಿಡಲಾಗುತ್ತಿದ್ದು, ನೇತ್ರಾವತಿ ನದಿ ತೀರದ ಜನರಲ್ಲಿ ಆತಂಕ ಶುರುವಾಗಿದೆ. ಬಂಟ್ವಾಳದ ಅಲಡ್ಕ, ಬೋಗೋಡಿ, ನಂದಾವರ, ಗೂಡಿನಬಳಿ ಸೇರಿದಂತೆ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದ್ದರಿಂದ ವ್ಯಾಪಾರಸ್ಥರು ಸಂಕಷ್ಟಕ್ಕೀಡಾಗಿದ್ದಾರೆ.

ಸಂಪರ್ಕ ಕಡಿತಗೊಳಿಸಿದ ಕಿರು ಸೇತುವೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ನದಿಗಳು ಮೈದುಂಬಿ ಹರಿಯುತ್ತಿವೆ. ನೀರಿನ ಮಟ್ಟ ಹೆಚ್ಚಾದ ಕಾರಣ ಇಲ್ಲಿನ ಕಿರು ಸೇತುವೆಯೊಂದು ಮುಳುಗಡೆಯಾಗಿದ್ದು, ಸ್ಥಳೀಯ ಗ್ರಾಮಸ್ಥರ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮಳೆ ಹೆಚ್ಚಾಗಿರುವುದರಿಂದ ಹೊಳೆ-ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸದ್ಯ ಮಲೆನಾಡು ಮತ್ತು ಕರಾವಳಿಯಲ್ಲಿ ಮಳೆ ಅಬ್ಬರ ಜೋರಾಗಿರುವುದರಿಂದ ನದಿ ಪಾತ್ರದ ಜನರು ಹಾಗೂ ಗುಡ್ಡಗಾಡು ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತಗಳು ಸೂಚಿಸಿವೆ.

PREV
Read more Articles on
click me!

Recommended Stories

ಶಿವಮೊಗ್ಗದಲ್ಲಿ ದಾರುಣ ಘಟನೆ.. ದೇವಸ್ಥಾನದ ಲಿಫ್ಟ್‌ಗೆ ಸಿಲುಕಿ ನಿವೃತ್ತ ಇಂಜಿನಿಯರ್ ಸಾವು
School Holiday Declare: ನಾಳೆ ಶಾಲೆ-ಕಾಲೇಜುಗಳಿಗೆ ರಜೆ ಆದೇಶ ಹೊರಡಿಸಿದ 4 ಜಿಲ್ಲೆಗಳ ಜಿಲ್ಲಾಧಿಕಾರಿಗಳು!