
ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರದಲ್ಲಿ ದಾರುಣ ಘಟನೆಯೊಂದು ಸಂಭವಿಸಿದೆ. ನಗರದ ಪ್ರಸಿದ್ಧ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಲಿಫ್ಟ್ ಅವಘಡಕ್ಕೆ ಸಿಲುಕಿದ್ದ ನಿವೃತ್ತ ಇಂಜಿನಿಯರ್ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಶಿವಮೊಗ್ಗದ ರೋಟರಿ ರಕ್ತನಿಧಿ ಬಳಿ ಇರುವ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಈ ಅನಾಹುತ ಸಂಭವಿಸಿದೆ. ನಿವೃತ್ತ ಇಂಜಿನಿಯರ್ ಆಗಿದ್ದ ಕುಮಾರಸ್ವಾಮಿ ಅವರು ದೇವಸ್ಥಾನಕ್ಕೆ ಆಗಮಿಸಿದ್ದರು. ದೇಗುಲದ ಗರ್ಭಗುಡಿಯ ಹಿಂಭಾಗದಲ್ಲಿ ಭಕ್ತರ ಅನುಕೂಲಕ್ಕಾಗಿ ಹಳೆ ಮಾದರಿಯ ಮ್ಯಾನುಯಲ್ ಲಿಫ್ಟ್ ವ್ಯವಸ್ಥೆ ಮಾಡಲಾಗಿತ್ತು. ಇದೇ ಲಿಫ್ಟ್ ಇಂದು ಕುಮಾರಸ್ವಾಮಿ ಅವರ ಪಾಲಿಗೆ ಮೃತ್ಯುಪಾಶವಾಗಿದೆ.
ಲಿಫ್ಟ್ ನೆಲ ಮಹಡಿಯಲ್ಲಿ ಇಲ್ಲದಿದ್ದರೂ ತಾಂತ್ರಿಕ ದೋಷವೋ ಅಥವಾ ಅಜಾಗರೂಕತೆಯಿಂದಲೋ ಬಾಗಿಲು ತೆರೆದಿತ್ತು. ಲಿಫ್ಟ್ ಬಂದಿದೆ ಎಂದು ಭಾವಿಸಿದ ಕುಮಾರಸ್ವಾಮಿ ಅವರು ಒಳಗೆ ಪ್ರವೇಶಿಸಿದ್ದಾರೆ. ಅದೇ ಸಮಯದಲ್ಲಿ ಮೇಲಿನ ಮಹಡಿಯಲ್ಲಿದ್ದ ಲಿಫ್ಟ್ ವೇಗವಾಗಿ ಕೆಳಕ್ಕೆ ಬಂದಿದೆ. ಇದರ ಪರಿಣಾಮವಾಗಿ ಕುಮಾರಸ್ವಾಮಿ ಅವರು ಲಿಫ್ಟ್‌ನ ಅಡಿಯಲ್ಲಿ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡಿದ್ದರು.
ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಜಯನಗರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ಲಿಫ್ಟ್ ಅಡಿಯಲ್ಲಿದ್ದ ಕುಮಾರಸ್ವಾಮಿ ಅವರನ್ನು ಹೊರತೆಗೆದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೇವಸ್ಥಾನದ ಲಿಫ್ಟ್ ನಿರ್ವಹಣೆಯಲ್ಲಿ ಲೋಪವಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ದೇವಸ್ಥಾನದ ಆವರಣದಲ್ಲಿ ನಡೆದ ಈ ದುರಂತ ಭಕ್ತಾದಿಗಳಲ್ಲಿ ತೀವ್ರ ಆತಂಕ ಹಾಗೂ ಶೋಕ ಮೂಡಿಸಿದೆ.