ಈರುಳ್ಳಿ ಬೇಗ ಕೊಳೆವುದನ್ನು ತಪ್ಪಿಸಲು ವಿಕಿರಣ ಚಿಕಿತ್ಸೆ; ಗಾಮಾ ಕಿರಣ ಹರಿಸಿ ಆಯಸ್ಸು ಹೆಚ್ಚಿಸಲು ಪ್ಲ್ಯಾನ್‌

By Kannadaprabha NewsFirst Published Jul 17, 2023, 9:16 AM IST
Highlights

ಮಹಾರಾಷ್ಟ್ರದ ಲಸಲ್‌ಗಾಂವ್‌ನಲ್ಲಿ 150 ಟನ್‌ಗಳಷ್ಟು ಈರುಳ್ಳಿಯನ್ನು ಕೋಬಾಲ್ಟ್‌-60 ಮೂಲಕ ಗಾಮಾ ವಿಕಿರಣಗಳಿಗೆ ಒಳಪಡಿಸಿ, ಅವು ಹೆಚ್ಚು ಕಾಲ ಇಡದಂತೆ ಕಾಪಾಡುವ ಪ್ರಯೋಗವನ್ನು ಆರಂಭಿಸಲಾಗಿದೆ.

ನವದೆಹಲಿ (ಜುಲೈ 17, 2023): ಪ್ರತಿ ವರ್ಷ ಈರುಳ್ಳಿ ದರ ಬಳಕೆದಾರರನ್ನು ಕಂಗಾಲು ಮಾಡುತ್ತಿದೆ, ಮತ್ತೊಂದೆಡೆ ಈರುಳ್ಳಿ ಕೊಳೆತು ಹೋಗುವುದರಿಂದ ರೈತಾಪಿ ವರ್ಗ ಕೂಡಾ ಸಂಕಷ್ಟಕ್ಕೆ ಈಡಾಗುತ್ತಿದೆ ಎಂಬ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಈರುಳ್ಳಿ ಜೀವಿತಾವಧಿ ಹೆಚ್ಚಳದ ನಿಟ್ಟಿನಲ್ಲಿ ವಿಕಿರಣ ಚಿಕಿತ್ಸೆ ನೀಡುವ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಿದೆ.

ಈ ಯೋಜನೆಯ ಭಾಗವಾಗಿ ಮಹಾರಾಷ್ಟ್ರದ ಲಸಲ್‌ಗಾಂವ್‌ನಲ್ಲಿ 150 ಟನ್‌ಗಳಷ್ಟು ಈರುಳ್ಳಿಯನ್ನು ಕೋಬಾಲ್ಟ್‌-60 ಮೂಲಕ ಗಾಮಾ ವಿಕಿರಣಗಳಿಗೆ ಒಳಪಡಿಸಿ, ಅವು ಹೆಚ್ಚು ಕಾಲ ಕೆಡದಂತೆ ಕಾಪಾಡುವ ಪ್ರಯೋಗವನ್ನು ಆರಂಭಿಸಲಾಗಿದೆ.

Latest Videos

ಇದನ್ನು ಓದಿ: Good News: ಶೀಘ್ರದಲ್ಲೇ ಟೊಮ್ಯಾಟೋ ದರ ಇಳಿಕೆ; ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

ಯೋಜನೆ ಏಕೆ?:
ಭಾರತದಲ್ಲಿ ಪ್ರತಿ ವರ್ಷ 3 ಕೋಟಿ ಟನ್‌ಗೂ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ. ಆದರೆ ಕಟಾವಿನ ನಂತರ ನಾನಾ ಕಾರಣದಿಂದ ಈರುಳ್ಳಿ ಹಾಳಾಗುವ ಪ್ರಮಾಣ ಶೇ. 25ರಷ್ಟಿದೆ. ಅದನ್ನು ಶೇ.10 - ಶೇ.12ಕ್ಕೆ ಇಳಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಇದರಿಂದ ರೈತರು ತಾವು ಬೆಳೆದ ಬೆಳೆಯನ್ನು ಹೆಚ್ಚು ಕಾಲ ಮನೆಯಲ್ಲಿ, ಗೋದಾಮಿನಲ್ಲಿ ಅಥವಾ ಸರ್ಕಾರಗಳು ಶೀತಲಗೃಹದಲ್ಲಿ ಇಟ್ಟುಕೊಳ್ಳಬಹುದಾಗಿದೆ. ಇದರಿಂದ ಈರುಳ್ಳಿ ಕೊರತೆ ತಪ್ಪಿ, ಗ್ರಾಹಕರಿಗೆ ಸೂಕ್ತ ಬೆಲೆಯಲ್ಲಿ ಉತ್ಪನ್ನ ಲಭ್ಯವಾದರೆ, ರೈತರಿಗೆ ಕೊಳೆತು ಹೋಗುವುದರಿಂದ ಆಗುವ ನಷ್ಟ ತಪ್ಪಿ ಆದಾಯ ಹೆಚ್ಚುತ್ತದೆ.

ವಿಕಿರಣ ಚಿಕಿತ್ಸೆ?:
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯುವು, ಪರಮಾಣು ಇಂಧನ ಇಲಾಖೆ ಮತ್ತು ಭಾಭಾ ಪರಮಾಣು ಸಂಶೋಧನಾ ಕೇಂದ್ರದ ನೆರವಿನೊಂದಿಗೆ ‘ಗಾಮಾ ರೇಡಿಯೇಷನ್‌’ (ವಿಕಿರಣ ಚಿಕಿತ್ಸೆ) ಎಂಬ ತಂತ್ರಜ್ಞಾನವನ್ನು ಈರುಳ್ಳಿ ಮೇಲೆ ಬಳಸಲು ನಿರ್ಧರಿಸಲಾಗಿದೆ. ಈ ಯೋಜನೆಯಡಿ ಈರುಳ್ಳಿ ಮೇಲೆ ಗಾಮಾ ಕಿರಣಗಳನ್ನು ಹಾಯಿಸಲಾಗುತ್ತದೆ. ಇದರಿಂದಾಗಿ ಈರುಳ್ಳಿ ಕೊಳೆಯುವುದು ಕಡಿಮೆಯಾಗುತ್ತದೆ ಮತ್ತು ಅದರ ಜೀವಿತಾವಧಿ ಹೆಚ್ಚುತ್ತದೆ ಎಂಬುದು ಲೆಕ್ಕಾಚಾರ.

ಇದನ್ನೂ ಓದಿ: ಸಮಯಕ್ಕೆ ಸರಿಯಾಗಿ ಬಾರದ ಮಳೆ‌, ಈರುಳ್ಳಿ ಬಿತ್ತನೆ ಮಾಡದ ರೈತ, ಬೆಲೆ ಗಗನಕ್ಕೇರುವ ಸಾಧ್ಯತೆ!

ಅಪಾಯ ಇಲ್ಲವೇ?
ವಿಕಿರಣ ಚಿಕಿತ್ಸೆಯಿಂದ, ವಸ್ತುವಿನ ಮಾನವ ಬಳಕೆಗೆ ಯಾವುದೇ ಅಪಾಯ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಮೆರಿಕ ಆಹಾರ ಹಾಗೂ ಔಷಧ ನಿಯಂತ್ರಣ ಸಂಸ್ಥೆಗಳು ನಡೆಸಿದ ಹಲವು ಅಧ್ಯಯನ ವರದಿ ಸಾಬೀತುಪಡಿಸಿವೆ. ಜೊತೆಗೆ ವಿಕಿರಣ ಚಿಕಿತ್ಸೆಯಿಂದ ಈರುಳ್ಳಿಯ ಬಳಕೆಯ ಅವಧಿ ಹೆಚ್ಚುವುದು ಮಾತ್ರವಲ್ಲದೇ, ಈರುಳ್ಳಿ ಕೊಳೆಯಲು ಕಾರಣವಾಗುವ ಕೀಟ, ಬ್ಯಾಕ್ಟೀರಿಯಾಗಳನ್ನೂ ಕೊಲ್ಲುವ ಕಾರಣ ಅದರ ಸೇವನೆಯಿಂದ ಹಬ್ಬಬಹುದಾದ ವ್ಯಾಧಿಗಳನ್ನು ಕೂಡಾ ತಡೆಯಬಹುದಾಗಿದೆ.

3 ಲಕ್ಷ ಟನ್‌ ಈರುಳ್ಳಿ ದಾಸ್ತಾನು
ಕೇಂದ್ರ ಸರ್ಕಾರವು ಆಪತ್ಕಾಲಕ್ಕೆಂದು 3 ಲಕ್ಷ ಟನ್‌ ಈರುಳ್ಳಿ ಸಂಗ್ರಹಿಸಿ ಇಟ್ಟುಕೊಂಡಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ. ಬರ ಅಥವಾ ಅತಿವೃಷ್ಟಿ ಆದರೆ ಆಪತ್ಕಾಲಕ್ಕೆ ಬೇಕು ಎಂದು ಈ ಕ್ರಮ ಜರುಗಿಸಲಾಗಿದೆ.

ಇದನ್ನೂ ಓದಿ: ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರಬಾರ್ದು ಅಂದ್ರೆ ಹೀಗ್ ಮಾಡಿ

click me!