
ಫ್ಲೋರಿಡಾ ಒಂಬತ್ತು ತಿಂಗಳ ಬಾಹ್ಯಾಕಾಶ ವಾಸದ ನಂತರ ಸುನೀತಾ ವಿಲಿಯಮ್ಸ್ ಮತ್ತು ಕ್ರೂ-9ನ ಇತರ ಸದಸ್ಯರು ಭೂಮಿಗೆ ಮರಳಿದ್ದಾರೆ. ಅವರನ್ನು ಕರೆತಂದ ಸ್ಪೇಸ್‌ಎಕ್ಸ್ ನೌಕೆ ಡ್ರ್ಯಾಗನ್ ಫ್ಲೋರಿಡಾದ ಸಮುದ್ರದಲ್ಲಿ ಇಳಿದ ಅಪರೂಪದ ಕ್ಷಣ ಕ್ಯಾಮರಾದಲ್ಲಿ ಸೆರೆ ಆಗಿದ್ದು ವಿಡಿಯೋ ವೈರಲ್ ಆಗಿದೆ. ಈ ವೇಳೆ ಸ್ಪೇಸ್‌ಎಸ್ಕ್ ಡ್ರ್ಯಾಗನ್‌ಗೆ ಫಿಕ್ಸ್ ಮಾಡಲಾಗಿದ ಪ್ಯಾರಾಚೂಟುಗಳು ತೆರೆದುಕೊಂಡು ಅಮೆರಿಕಾದ ಧ್ವಜವನ್ನು ಪ್ರದರ್ಶಿಸಿದವು. ನಾಸಾ ತನ್ನ ಯೂಟ್ಯೂಬ್‌ನಲ್ಲಿ ಇದನ್ನು ಲೈವ್ ಸ್ಟ್ರೀಮಿಂಗ್ ಮಾಡಿದ್ದು, ಲಕ್ಷಾಂತರ ಜನ ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ.
ಭೂಮಿಯ ವಾತಾವರಣವನ್ನು ಪ್ರವೇಶಿಸಿದ ಕೆಲವೇ ನಿಮಿಷಗಳ ನಂತರ, ಕ್ಯಾಪ್ಸುಲ್ ಸುರಕ್ಷಿತವಾಗಿ ನೀರಿನಲ್ಲಿ ಇಳಿಯುತ್ತಿದ್ದಂತೆ ನಾಸಾದ ನಿಯಂತ್ರಣ ಕೊಠಡಿಯಲ್ಲಿದ್ದ ಸಿಬ್ಬಂದಿ ಖುಷಿಯಿಂದ ಚಪ್ಪಾಳೆಯ ಸುರಿಮಳೆ ಸುರಿಸಿದರು. ಸುನೀತಾ ವಿಲಿಯಮ್ಸ್, ವಿಲ್‌ಮೋರ್ ಮಾತ್ರವಲ್ಲದೇ ಅಮೆರಿಕದ ಇನ್ನೊಬ್ಬ ಗಗನಯಾತ್ರಿ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಕೂಡ ಈ ಸ್ಪೇಸ್‌ಎಕ್ಸ್ ನೌಕೆಯಲ್ಲಿದ್ದರು. ಭೂಮಿಯ ವಾತಾವರಣಕ್ಕೆ ಮರುಪ್ರವೇಶದ ಸಮಯದಲ್ಲಿ ಕೆಲ ಕ್ಷಣ ಸ್ಥಗಿತಗೊಂಡಿದ್ದ ಸಂವಹನ ಪುನಃ ಸ್ಥಾಪಿಸಿದಾಗ, ನಿಕ್ ಹೇಗ್, ಎಂಥಹಾ ಸವಾರಿ ಇದು ನಾನು ಇಲ್ಲಿ ಸ್ನೇಹಿತರಿಂದ ತುಂಬಿದ ಕ್ಯಾಪ್ಸುಲ್ ಅನ್ನು ನೋಡುತ್ತೇನೆ ಎಂದು ಉದ್ಘರಿಸಿದ್ದರು.
ಬಾಹ್ಯಕಾಶದಿಂದ ಭೂಮಿಯ ವಾತಾವರಣಕ್ಕೆ ಮರುಪ್ರವೇಶದ ವೇಳೆ 2,000 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಕ್ಯಾಪ್ಸುಲ್‌ನ ಹೊರಭಾಗ ಸುಟ್ಟು ಕರಟಿದಂತಾಗಿದೆ. ಹೀಗೆ ಸಮುದ್ರಕ್ಕಿಳಿದ ಈ ಕ್ಯಾಪ್ಸುಲ್‌ನ ಸುತ್ತಲೂ ಡಾಲ್ಫಿನ್‌ಗಳ ಗುಂಪು ಡಾನ್ಸ್ ಮಾಡುವ ಮೂಲಕ ಮತ್ತೊಂದು ಅತ್ಯದ್ಬುತ ಕ್ಷಣಕ್ಕೆ ಇದು ಸಾಕ್ಷಿಯಾಯ್ತು. ಗಗನಯಾತ್ರಿಗಳನ್ನು ಹೊತ್ತ ಕ್ಯಾಪ್ಸೂಲ್ ಸಮುದ್ರದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಅಲ್ಲಿ ರೆಡಿ ಇದ್ದ ಸುರಕ್ಷತೆ ಹಾಗೂ ತಪಾಸಣಾ ಸದಸ್ಯರು ಗಗನಯಾತ್ರಿಗಳಿದ್ದ ಸ್ಪೇಸ್‌ಎಕ್ಸ್ ಕ್ಯಾಪ್ಸುಲ್‌ಗೆ ಸುರಕ್ಷತಾ ತಪಾಸಣೆಗಳನ್ನು ನಡೆಸಿದರು ಮತ್ತು ಅದನ್ನು ಸಮುದ್ರದಿಂದ ಮೇಲೆತ್ತಲು ಬೇಕಾದ ಉಪಕರಣಗಳನ್ನು ಜೋಡಿಸಿದರು. ನಂತರ ಈ ಕ್ಯಾಪ್ಸುಲ್‌ನಿಂದ ತೆಗೆದ ನಂತರ, ವಿಲಿಯಮ್ಸ್ ಮತ್ತು ವಿಲ್ಮೋರ್ ಸೇರಿ ಇನ್ನಿಬ್ಬರು ಗಗನಯಾತ್ರಿಗಳನ್ನು 45 ದಿನಗಳ ಪುನರ್ವಸತಿ ಕಾರ್ಯಕ್ರಮವನ್ನು ಪ್ರಾರಂಭಿಸಲು ಹೂಸ್ಟನ್‌ಗೆ ವಿಮಾನದಲ್ಲಿ ಕಳುಹಿಸಲಾಗಿದೆ.
ಇದು ಸುನೀತಾ ವಿಲಿಯಮ್ಸ್ Resume: ನೇವಲ್ ಏವಿಯೇಟರ್ To ಸ್ಪೇಸ್‌ವಾಕ್ ಚಾಂಪಿಯನ್!
ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಇಬ್ಬರೂ ಅಮೆರಿಕದ ನೌಕಾಪಡೆಯ ಮಾಜಿ ಪೈಲಟ್‌ಗಳಾಗಿದ್ದು, ಕಳೆದ ವರ್ಷ ಜೂನ್‌ನಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಆದರೆ ಬಾಹ್ಯಾಕಾಶ ನೌಕೆಯಲ್ಲಿನ ಪ್ರೊಪಲ್ಷನ್ ಸಮಸ್ಯೆಗಳು ಅವರ ಮರಳುವಿಕೆಯನ್ನು ವಿಳಂಬಗೊಳಿಸಿದವು. ಹೀಗಾಗಿ ಬಾಹ್ಯಾಕಾಶ ನೌಕೆ ಖಾಲಿಯಾಗಿ ಮರಳಿತ್ತು. ಹೀಗಾಗಿ ಇವರಿಬ್ಬರನ್ನು ನಾಸಾದ ಸ್ಪೇಸ್‌ಎಕ್ಸ್ ಕ್ರೂ-9 ಕಾರ್ಯಾಚರಣೆಗೆ ಮರು ನಿಯೋಜಿಸಲಾಯಿತು. ಇವರಿಬ್ಬರ ದೀರ್ಘಾವಧಿಯ ಬಾಹ್ಯಾಕಾಶ ವಾಸ್ತವ್ಯವು ಜಾಗತಿಕವಾಗಿ ಭಾರಿ ಗಮನ ಸೆಳೆದಿತ್ತು. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸ್ಪೇಸ್‌ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ಮಾಜಿ ಅಧ್ಯಕ್ಷ ಜೋ ಬಿಡೆನ್ ಅವರನ್ನು ಗಗನಯಾತ್ರಿಗಳನ್ನು ಬಾಹ್ಯಾಕಾಶದಲ್ಲೇ ಕೈಬಿಟ್ಟಿದ್ದರೆಂದು ಪದೇ ಪದೇ ದೂಷಿಸಿದ್ದರು.
ಕಳೆದ ಭಾನುವಾರ, ಕ್ರೂ-10 ಬಾಹ್ಯಾಕಾಶ ನಿಲ್ದಾಣ ಪ್ರವೇಶ ಮಾಡಿತ್ತು. ಅಲ್ಲಿ ಅವರನ್ನು ಸ್ವಾಗತಿಸಿದ ಕ್ರೂ 9 ಸದಸ್ಯರು ಭೂಮಿಗೆ ಮರಳಲು ಸಿದ್ಧರಾದರು. ಕೇವಲ 17 ಗಂಟೆಗಳಲ್ಲಿ ಕ್ರೂ 9 ಸದಸ್ಯರನ್ನು ಹೊತ್ತ ಸ್ಪೇಸ್‌ಎಕ್ಸ್ ಕ್ಯಾಪ್ಸುಲ್ ಈಗ ಭೂಮಿಗೆ ಬಂದು ತಲುಪಿದೆ. ಕ್ರೀವ್ 9 ಗಗನಯಾತ್ರಿಗಳನ್ನು ಆರು ತಿಂಗಳ ಕಾರ್ಯಾಚರಣೆಗಳಿಗೆ ಕಳುಹಿಸಲಾಗಿದ್ದರೂ, ವಿಲ್ಮೋರ್ ಮತ್ತು ವಿಲಿಯಮ್ಸ್ 286 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಅನಿವಾರ್ಯವಾಗಿ ತಂಗಿದ್ದರು. ಆದರೂ ಬಾಹ್ಯಾಕಾಶದಲ್ಲಿ ಅತೀ ಹೆಚ್ಚು ಸಮಯ ಕಳೆದ ಖ್ಯಾತಿ ಫ್ರಾಂಕ್ ರುಬಿಯೋ ಅವರದ್ದಾಗಿದೆ. ಇವರು 2023 ರಲ್ಲಿ 371 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ಕಾಲ ಸಮಯ ಕಳೆದಿದ್ದರು. ಆದರೆ ಅವರಿಗಿಂತ ಹೆಚ್ಚು ಕಾಲ ಸಮಯ ಕಳೆದ ವಿಶ್ವ ದಾಖಲೆಯು ರಷ್ಯಾದ ಗಗನಯಾತ್ರಿ ವ್ಯಾಲೆರಿ ಪಾಲಿಯಕೋವ್ ಅವರ ಹೆಸರಿನಲ್ಲಿದೆ, ಅವರು ಮಿರ್ ನಿಲ್ದಾಣದಲ್ಲಿ ಸತತ 437 ದಿನಗಳನ್ನು ಕಳೆದಿದ್ದರು..
ಬಾಹ್ಯಾಕಾಶದಲ್ಲಿ ಇಷ್ಟೊಂದು ಸಮಯ ಕಳೆದ ಗಗನಯಾತ್ರಿಗಳು ಭೂಮಿಯ ಮೇಲಿನ ಜೀವನಕ್ಕೆ ಮರು ಹೊಂದಿಕೊಳ್ಳುತ್ತಿದ್ದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಸ್ನಾಯು ಮತ್ತು ಮೂಳೆ ನಷ್ಟ, ಮೂತ್ರಪಿಂಡದ ಕಲ್ಲುಗಳು ಮತ್ತು ದೃಷ್ಟಿ ಸಮಸ್ಯೆಗಳಿಗೆ ಕಾರಣವಾಗುವ ದ್ರವ ಬದಲಾವಣೆಗಳು ಮತ್ತು ಗುರುತ್ವಾಕರ್ಷಣೆಯ ವಾತಾವರಣಕ್ಕೆ ಮರಳಿದಾಗ ಸಮತೋಲನವನ್ನು ಮರುಹೊಂದಿಸುವಂತಹ ಸವಾಲುಗಳನ್ನು ಎದುರಿಸುತ್ತಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.