ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತದ ಗಗನಯಾತ್ರಿಯನ್ನು ಕಳಿಸಲಿದೆ ನಾಸಾ!

By Santosh NaikFirst Published Nov 30, 2023, 7:34 PM IST
Highlights

NASA astronaut training ನಾಸಾ ಮುಂದಿನ ವರ್ಷ ಭಾರತೀಯ ಗಗನಯಾತ್ರಿಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಿದೆ. ಇಸ್ರೋ ಗಗನಯಾತ್ರಿಯನ್ನು ಆಯ್ಕೆ ಮಾಡಲಿದ್ದಯ, ನಾಸಾವೇ ಈತನಿಗೆ ತರಬೇತಿ ನೀಡಲಿದೆ.


ನವದೆಹಲಿ (ನ.30): ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮುಂದಿನ ವರ್ಷದ ವೇಳೆಗೆ ಭಾರತೀಯ ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಕಳುಹಿಸಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗಗನಯಾತ್ರಿಗಳನ್ನು ಆಯ್ಕೆ ಮಾಡಲಿದೆ. ಗಗನಯಾತ್ರಿಗಳ ತರಬೇತಿಗೆ ನಾಸಾ ಸಹಕಾರ ನೀಡಲಿದೆ. ಭಾರತಕ್ಕೆ ಭೇಟಿ ನೀಡಿದ್ದ ನಾಸಾ ಮುಖ್ಯಸ್ಥ ಬಿಲ್ ನೆಲ್ಸನ್ ಈ ವಿಷಯವನ್ನು ಪ್ರಕಟಿಸಿದ್ದಾರೆ. ಎರಡೂ ಬಾಹ್ಯಾಕಾಶ ಸಂಸ್ಥೆಗಳು ಮಿಷನ್‌ನ ವಿವರಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ. 1984ರಲ್ಲಿ ರಾಕೇಶ್ ಶರ್ಮಾ ರಷ್ಯಾದ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಅವರು ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯರಾಗಿದ್ದಾರೆ.  ಭಾರತವು ಅಮೆರಿಕದ ಪ್ರಮುಖ ಪಾಲುದಾರ. ಅಲ್ಲದೆ, ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಭಾರತವು ಭವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಾಸಾ ಮುಖ್ಯಸ್ಥರು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ನೆಲ್ಸನ್ ಅವರು ಮೊದಲ ಬಾರಿಗೆ ಬಾಹ್ಯಾಕಾಶದಿಂದ ಭಾರತವನ್ನು ನೋಡಿದ ಕ್ಷಣದ ಬಗ್ಗೆಯೂ ಹೇಳಿದರು. ಅವರು 1986 ರಲ್ಲಿ ಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶ ಪ್ರಯಾಣ ಮಾಡಿದ್ದರು. 'ನಾನು ಮೊದಲ ಬಾರಿಗೆ ಭಾರತವನ್ನು ಬಾಹ್ಯಾಕಾಶದಿಂದ ನೋಡಿದೆ. ಮೊದಲಿಗೆ ನಾನು ಶ್ರೀಲಂಕಾವನ್ನು ನೋಡಿದೆ. ಆಮೇಲೆ ಸ್ವಲ್ಪ ತಲೆಯೆತ್ತಿ ಇಡೀ ಭಾರತವನ್ನೇ ನೋಡಿದೆ. ಹಿಮಾಲಯ ದೇಶದ ಮೇಲ್ಭಾಗದಲ್ಲಿತ್ತು. ಇಡೀ ದೃಶ್ಯವೇ ಸ್ವರ್ಗದಂತಿತ್ತು' ಎಂದು ಅವರು ಹೇಳಿದ್ದಾರೆ.

ಚಂದ್ರಯಾನ-3 ಕುರಿತು ಮಾತನಾಡಿದ ಬಿಲ್ ನೆಲ್ಸನ್, ಮುಂದಿನ ವರ್ಷ ಚಂದ್ರನ ದಕ್ಷಿಣ ಧ್ರುವದಲ್ಲಿ ಅಮೆರಿಕ ಹಲವಾರು ಖಾಸಗಿ ಲ್ಯಾಂಡರ್‌ಗಳನ್ನು ಉಡಾವಣೆ ಮಾಡಲಿದೆ. ಆದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಟ್ಟ ಮೊದಲ ದೇಶ ಭಾರತ. ಇದಕ್ಕಾಗಿ ಅವರು ಅಭಿನಂದನೆಗೆ ಅರ್ಹರು. ನೆಲ್ಸನ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿಯಾದರು. ಭಾರತವು 2040 ರ ವೇಳೆಗೆ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲು ಬಯಸುತ್ತದೆ. ಅವರು ನಮ್ಮೊಂದಿಗೆ ಕೆಲಸ ಮಾಡಲು ಬಯಸಿದರೆ, ನಾವು ಅದಕ್ಕೆ ಸಿದ್ಧರಿದ್ದೇವೆ ಎಂದರು.

ಖಾಸಗಿ ಟವಿಗೆ ನೀಡಿದ ಸಂದರ್ಶನದಲ್ಲಿ, ಪ್ರಧಾನಿ ಮೋದಿ ಗಗನಯಾತ್ರಿಯಾಗುವ ಸಾಧ್ಯತೆಯ ಕುರಿತು ನೆಲ್ಸನ್ ಮಾತನಾಡಿದ್ದಾರೆ,  ನಾನು ಬಾಹ್ಯಾಕಾಶಕ್ಕೆ ಹೋದಾಗ, ನಾನು ಕೇವಲ ರಾಜಕಾರಣಿಯಾಗಿದ್ದೆ. ಪ್ರಧಾನಿ ಮೋದಿ ಬಾಹ್ಯಾಕಾಶ ಪ್ರೇಮಿ. ಬಾಹ್ಯಾಕಾಶದಲ್ಲಿ ಹಾರುವುದು ಯಾವುದೇ ರಾಜಕಾರಣಿಗೆ ವಿಶೇಷ ಅನುಭವವಾಗಿದೆ, ವಿಶೇಷವಾಗಿ ಅವರು ದೇಶದ ಮುಖ್ಯಸ್ಥರಾಗಿದ್ದಾಗ ಇನ್ನೂ ಸ್ಪೆಷಲ್‌ ಎನಿಸುತ್ತದೆ.. ಬಾಹ್ಯಾಕಾಶದಲ್ಲಿ ಯಾವುದೇ ರಾಜಕೀಯ, ಧಾರ್ಮಿಕ ಅಥವಾ ಜನಾಂಗೀಯ ಗಡಿಗಳಿಲ್ಲ. ಅಲ್ಲಿ ನಾವೆಲ್ಲರೂ ಭೂಮಿಯ ಪ್ರಜೆಗಳಾಗಿರುತ್ತೇವೆ ಎಂದು ಹೇಳಿದ್ದಾರೆ.

ಭಾರತ  ಭೇಟಿಯ ಸಮಯದಲ್ಲಿ, ನಾಸಾ ಮುಖ್ಯಸ್ಥರು ಇಸ್ರೋ ಪ್ರಧಾನ ಕಚೇರಿಗೂ ಭೇಟಿ ನೀಡಲಿದ್ದಾರೆ. ಅವರು ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಅವರನ್ನು ಭೇಟಿಯಾಗಲಿದ್ದಾರೆ. ನನ್ನ ಹಳೆಯ ಸ್ನೇಹಿತನನ್ನು ಭೇಟಿಯಾಗಲು ನಾನು ಉತ್ಸುಕನಾಗಿದ್ದೇನೆ. ನಾನು 1991 ರಲ್ಲಿ ಸೋವಿಯತ್ ಒಕ್ಕೂಟದ ಬೇರ್ಪಡುವ ಮೊದಲು ರಾಕೇಶ್ ಅವರನ್ನು ಭೇಟಿಯಾಗಿದ್ದೆ. ಆಗ ನಾವಿಬ್ಬರೂ ಚೆನ್ನಾಗಿ ಮಾತುಕತೆ ನಡೆಸಿದೆವು. ನಾನು ಕೂಡ ಅವರ ಜೊತೆ ಹಲವು ಬಾರಿ ಫೋನಿನಲ್ಲಿ ಮಾತನಾಡಿದ್ದೇನೆ ಎಂದು ನೆಲ್ಸನ್‌ ಹೇಳಿದ್ದಾರೆ.

ಏಳುವರ್ಷಗಳ ಕಾಲ ಶನಿಯ ಉಂಗುರ ಕಣ್ಮರೆ, ಸಾಡೇ ಸಾಥ್ ಇರೋರಿಗೆ ಶುಭವಾಗುತ್ತಾ?

NASA ಮತ್ತು ISRO ಸಹ ಮುಂದಿನ ವರ್ಷದ ಆರಂಭದಲ್ಲಿ NASA-ISRO ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಅನ್ನು ಜಂಟಿಯಾಗಿ ಪ್ರಾರಂಭಿಸಲಿದೆ. ಇದು ವಿಶ್ವದ ಅತ್ಯಂತ ದುಬಾರಿ ಉಪಗ್ರಹಗಳಲ್ಲಿ ಒಂದಾಗಲಿದೆ. ಇದರ ಬೆಲೆ ಸುಮಾರು ಒಂದು ಬಿಲಿಯನ್ ಡಾಲರ್. ಭೂಮಿಯ ಮೇಲ್ಮೈ ಮತ್ತು ಅದರ ಹವಾಮಾನವನ್ನು ವೀಕ್ಷಿಸಲು ಈ ಉಪಗ್ರಹವನ್ನು ಬಳಸಲಾಗುವುದು. ಇದು ಭೂಮಿಯ ಮೇಲಿನ ಭೂಮಿ ಅಥವಾ ನೀರಿನಲ್ಲಿ ಸಂಭವಿಸುವ ಯಾವುದೇ ಬದಲಾವಣೆಗಳ ಮೇಲೆ ಕಣ್ಣಿಡುತ್ತದೆ. ಇದು ಭೂಮಿಯ ಭವಿಷ್ಯದ ಬಗ್ಗೆ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ.

ನಾಸಾದಲ್ಲಿ 1.85 ಕೋಟಿ ರೂ ಉದ್ಯೋಗ ಪಡೆದ ಯುವಕನ ಸುಳ್ಳಿನ ಕಥೆ ಬಿಚ್ಚಿಟ್ಟ ಅಮೆರಿಕ ಅಧ್ಯಕ್ಷರ ಸಹಿಯ ಐಡಿ ಕಾರ್ಡ್!

click me!