ನಭಕ್ಕೆ ಜಿಗಿಯಲು ಸಜ್ಜಾದ ನಿಸಾರ್: ISRO-NASA ಜಂಟಿ ಯೋಜನೆ, ಮೇ ತಿಂಗಳಲ್ಲಿ ಉಡಾವಣೆ!

Published : Apr 18, 2025, 11:00 AM ISTUpdated : Apr 18, 2025, 11:14 AM IST
ನಭಕ್ಕೆ ಜಿಗಿಯಲು ಸಜ್ಜಾದ ನಿಸಾರ್: ISRO-NASA ಜಂಟಿ ಯೋಜನೆ, ಮೇ ತಿಂಗಳಲ್ಲಿ ಉಡಾವಣೆ!

ಸಾರಾಂಶ

ನಿಸಾರ್ ಉಪಗ್ರಹವು ಭೂಮಿಯ ಮೇಲ್ಮೈ ಮತ್ತು ಮಂಜುಗಡ್ಡೆಯನ್ನು ನಿರಂತರವಾಗಿ ವೀಕ್ಷಿಸುತ್ತದೆ, ಹವಾಮಾನ ಬದಲಾವಣೆ ಮತ್ತು ಪ್ರಾಕೃತಿಕ ವಿಕೋಪಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇಸ್ರೋ ಮತ್ತು ನಾಸಾ ಜಂಟಿಯಾಗಿ ಈ ಯೋಜನೆಯನ್ನು ಕೈಗೊಂಡಿದ್ದು, ಮೇ 2025 ರಲ್ಲಿ ಉಡಾವಣೆ ನಿಗದಿಯಾಗಿದೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಮಹತ್ವಾಕಾಂಕ್ಷಿ ನಿಸಾರ್ ಯೋಜನೆ ಭಾರತ ಮತ್ತು ಅಮೆರಿಕಾ ಎರಡಕ್ಕೂ ಹೆಮ್ಮೆಯ ಕ್ಷಣವಾಗಿದ್ದು, ಉಭಯ ರಾಷ್ಟ್ರಗಳು ಮೇ 2025ರ ಮಧ್ಯಭಾಗದಲ್ಲಿ ನಿಸಾರ್ ಯೋಜನೆಯ ಉಡಾವಣೆ ನಡೆಸಲು ನಿಕಟವಾಗಿ ಕಾರ್ಯಾಚರಿಸುತ್ತಿವೆ. ಈ ನಾಸಾ - ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ (ನಿಸಾರ್) ಉಪಗ್ರಹ ಭಾರತದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿದೆ. ಇದು ಕೇವಲ ಒಂದು ಉಪಗ್ರಹ ಮಾತ್ರವಲ್ಲದೆ, ಭೂಮಿಯಲ್ಲಿನ ಬದಲಾವಣೆಗಳನ್ನು ಅಧ್ಯಯನ ನಡೆಸುವ ಪ್ರಬಲ ಉಪಕರಣವೂ ಹೌದು. ಪ್ರತೀ 12 ದಿನಗಳಿಗೊಮ್ಮೆ ಇದು ಭೂಮಿಯಲ್ಲಿ ಅರಣ್ಯ, ಮಂಜುಗಡ್ಡೆ, ಎಲ್ಲದರ ಬದಲಾವಣೆಗಳನ್ನು ಗಮನಿಸಲಿದೆ. ಪ್ರವಾಹಗಳು, ಭೂಕಂಪಗಳು, ಮತ್ತು ಹವಾಮಾನ ಬದಲಾವಣೆಗಳ ಹೊಡೆತಕ್ಕೆ ಆಗಿಂದಾಗ್ಗೆ ತುತ್ತಾಗುವ ಭಾರತಕ್ಕೆ ನಿಸಾರ್ ಒಂದು ಆಗಸದಿಂದ ಕಣ್ಣಿಟ್ಟಿರುವ ಸ್ನೇಹಿತನಾಗಿರಲಿದೆ. ಈ ಭಾರೀ ಯೋಜನೆಗೆ ಇಸ್ರೋ ನಾಸಾದೊಡನೆ ಕೈ ಜೋಡಿಸಿರುವುದು ರೋಮಾಂಚಕ ಬೆಳವಣಿಗೆಯಾಗಿದ್ದು, ಇದರ ಮೂಲಕ ತಾನು ಜೊತೆಯಾಗಿ ಏನನ್ನು ಸಾಧಿಸಬಲ್ಲೆ ಎಂಬುದನ್ನು ಇಸ್ರೋ ಜಗತ್ತಿಗೆ ತೋರಿಸುತ್ತಿದೆ.

ನಿಸಾರ್ ಉಪಗ್ರಹದ ಗುರಿ ಭೂಮಿಯಲ್ಲಿನ ನೆಲ ಮತ್ತು ಮಂಜುಗಡ್ಡೆಯನ್ನು ನಿರಂತರವಾಗಿ ವೀಕ್ಷಿಸುವುದಾಗಿದ್ದು, ಇದು ನಮಗೆ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳಲು ಬಹಳಷ್ಟು ನೆರವಾಗಲಿದೆ. ಇದು ಕರಗುತ್ತಿರುವ ಹಿಮನದಿಗಳು, ಬೆಳೆಯುತ್ತಿರುವ ಅರಣ್ಯಗಳು, ಮತ್ತು ಭೂಕಂಪಗಳು, ಅಥವಾ ಭೂಕುಸಿತದಂತಹ ಅಪಾಯಗಳನ್ನು ಗಮನಿಸಲಿದೆ. ನಿಸಾರ್ ವಿಜ್ಞಾನಿಗಳಿಗೆ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಿ, ಪ್ರಾಕೃತಿಕ ವಿಕೋಪಗಳಿಗೆ ಸನ್ನದ್ಧವಾಗಲು ನೆರವಾಗಲಿದೆ. ಈ ಉಪಗ್ರಹ ಭೂಮಿಯ ಕೆಳ ಕಕ್ಷೆಯಲ್ಲಿ (ಎಲ್ಇಒ) ಕಾರ್ಯಾಚರಿಸಲಿದ್ದು, ಧ್ರುವ ಪ್ರದೇಶದ ಸನಿಹದ ಪಥದ ಮೂಲಕ ಭೂಮಿಯ ಪರಿಭ್ರಮಣೆ ನಡೆಸುತ್ತಾ, ಭೂಮಿಯ ಪ್ರತಿಯೊಂದು ಮೂಲೆಯನ್ನೂ ಗಮನಿಸಲಿದೆ. ಇಸ್ರೋದ ಶಕ್ತಿಶಾಲಿ ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ 2 (ಜಿಎಸ್ಎಲ್‌ವಿ ಎಂಕೆ 2) ನಿಸಾರ್ ಅನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ. ನಿಸಾರ್ ಯೋಜನೆ ಮೂರು ವರ್ಷಗಳ ಕಾಲ ಕಾರ್ಯ ನಿರ್ವಹಿಸುವ ಉದ್ದೇಶ ಹೊಂದಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಅದು ಇನ್ನೂ ಹೆಚ್ಚು ವರ್ಷಗಳ ಕಾಲ ಮುಂದುವರಿಯಬಹುದು.

ಇದನ್ನೂ ಓದಿ:  ಬಾಹ್ಯಾಕಾಶದತ್ತ ಭಾರತದ ಬಹುದೊಡ್ಡ ಜಿಗಿತ: ಬಹುಪಯೋಗಿ ಎಎಕ್ಸ್-4 ಯೋಜನೆ

ನಿಸಾರ್ ಹೊಂದಿರುವ ತಂತ್ರಜ್ಞಾನ ಇದನ್ನು ಎಲ್ಲಕ್ಕಿಂತ ಭಿನ್ನವಾಗಿಸುತ್ತದೆ. ಇದು ಎರಡು ರೇಡಾರ್‌ಗಳನ್ನು ಹೊಂದಿದ್ದು, ಒಂದು ರೇಡಾರನ್ನು ನಾಸಾ ಅಭಿವೃದ್ಧಿ ಪಡಿಸಿದ್ದರೆ, ಇನ್ನೊಂದು ರೇಡಾರನ್ನು ಇಸ್ರೋ ಅಭಿವೃದ್ಧಿ ಪಡಿಸಿದೆ. ಇವೆರಡೂ ಬಾಹ್ಯಾಕಾಶದಿಂದ ವಿಶೇಷ ಕಣ್ಣುಗಳಂತೆ ಕಾರ್ಯಾಚರಿಸಲಿವೆ. ನಾಸಾ ಒದಗಿಸಿರುವ ಎಲ್ ಬ್ಯಾಂಡ್ ರೇಡಾರ್ ದಟ್ಟವಾದ ಅರಣ್ಯಗಳ ಮೂಲಕವೂ ನೋಡಬಲ್ಲದಾಗಿದ್ದು, ಮರಗಳಲ್ಲಿರುವ ಇಂಗಾಲವನ್ನೂ ವೀಕ್ಷಿಸಬಲ್ಲದು. ಇಸ್ರೋ ನಿಸಾರ್‌ಗೆ ಎಸ್ ಬ್ಯಾಂಡ್ ರೇಡಾರ್ ಒದಗಿಸಲಿದ್ದು, ಇದು ನೆಲದ ಮೇಲಿನ ಸಣ್ಣ ಸಣ್ಣ ಬಿರುಕುಗಳು, ಅಥವಾ ಪ್ರವಾಹದಂತಹ ಸಣ್ಣಪುಟ್ಟ ಬದಲಾವಣೆಗಳನ್ನೂ ಗುರುತಿಸಬಲ್ಲದು. ನಿಸಾರ್ ಯೋಜನೆಗೆ ನಾಸಾ ಜಿಪಿಎಸ್ ಸಿಸ್ಟಮ್, ದೊಡ್ಡ ಮಾಹಿತಿ ಸಂಗ್ರಾಹಕ ಮತ್ತು ಡೇಟಾ ಸಬ್ ಸಿಸ್ಟಮ್‌ಗಳನ್ನು ಒದಗಿಸಲಿದ್ದು, ಇವುಗಳು ನಿಸಾರ್ ಪ್ರತಿದಿನವೂ ಕಳುಹಿಸುವ 26 ಟೆರಾಬಿಟ್ ಮಾಹಿತಿಯನ್ನು ನಿರ್ವಹಿಸಲಿದೆ. ಎಸ್ ಬ್ಯಾಂಡ್ ಮಾತ್ರವಲ್ಲದೆ, ಇಸ್ರೋ ಉಪಗ್ರಹದ ಮುಖ್ಯ ದೇಹವನ್ನು (ಸ್ಪೇಸ್‌ಕ್ರಾಫ್ಟ್ ಬಸ್ ಎಂದು ಕರೆಯಲಾಗುತ್ತದೆ) ನಿರ್ಮಿಸಿದೆ. ಅದರೊಡನೆ, ಜಿಎಸ್ಎಲ್‌ವಿ ರಾಕೆಟ್ ಮೂಲಕ ನಿಸಾರ್ ಉಡಾವಣೆಯನ್ನೂ ನಿರ್ವಹಿಸಲಿದೆ. ಭಾರತ ಮತ್ತು ಅಮೆರಿಕಾಗಳು ಜಂಟಿಯಾಗಿ ಕೈಗೊಳ್ಳುವ ನಿಸಾರ್ ಯೋಜನೆ ಎಲ್ ಬ್ಯಾಂಡ್ ಮತ್ತು ಎಸ್ ಬ್ಯಾಂಡ್ ರೇಡಾರ್‌ಗಳನ್ನು ಜೊತೆಯಾಗಿ ಬಳಸುವ ಮೊತ್ತ ಮೊದಲ ಉಪಗ್ರಹವಾಗಲಿದೆ.

ನಿಸಾರ್ ಯೋಜನೆಯಲ್ಲಿ ಇಸ್ರೋ ಮತ್ತು ನಾಸಾಗಳು ತಮ್ಮ ಕೆಲಸವನ್ನು ಸ್ಪಷ್ಟವಾಗಿ ಹಂಚಿಕೊಂಡಿವೆ. ಇಸ್ರೋ ಯೋಜನೆಗಾಗಿ ಎಸ್ ಬ್ಯಾಂಡ್ ರೇಡಾರ್ ನಿರ್ಮಿಸಿ, ಉಪಗ್ರಹದ ದೇಹವನ್ನು ನಿರ್ಮಿಸಿ, ಜಿಎಸ್ಎಲ್‌ವಿ ರಾಕೆಟ್ ಒದಗಿಸಿ, ಶ್ರೀಹರಿಕೋಟಾದಿಂದ ಉಡಾವಣೆಯನ್ನೂ ನಿರ್ವಹಿಸುತ್ತದೆ. ನಾಸಾ ನಿಸಾರ್‌ಗೆ ಎಲ್ ಬ್ಯಾಂಡ್ ರೇಡಾರ್, ಜಿಪಿಎಸ್, ಡೇಟಾ ರೆಕಾರ್ಡರ್, ಮತ್ತು ಡೇಟಾ ಸಬ್ ಸಿಸ್ಟಮ್‌ಗಳನ್ನು ಒದಗಿಸಿದೆ. ಆ್ಯಂಟೆನಾ ದೋಷದಿಂದ ಉಂಟಾಗಿದ್ದ ವಿಳಂಬವನ್ನು ಸರಿಪಡಿಸಲು ಎರಡೂ ತಂಡಗಳು ಶ್ರಮ ವಹಿಸಿದ್ದವು. ಉಡಾವಣೆಯ ಸಂದರ್ಭದಲ್ಲಿ ಸುರಕ್ಷಿತವಾಗಿರಲು ಆ್ಯಂಟೆನಾಗೆ ಸುರಕ್ಷತಾ ಲೇಪನ ನಡೆಸಬೇಕಾಗಿತ್ತು. ಬೆಂಗಳೂರಿನಲ್ಲಿ ಪರೀಕ್ಷೆ ನಡೆಸಿದ ಬಳಿಕ, ಉಪಗ್ರಹ ಈಗ ಉಡಾವಣಾ ಸ್ಥಳಕ್ಕೆ ಸಾಗಿಸಲು ಸಿದ್ಧವಾಗಿದೆ. ಪರಿಸ್ಥಿತಿ ಕಠಿಣವಾದಾಗಲೂ ಇಸ್ರೋ ಮತ್ತು ನಾಸಾಗಳು ಯೋಜನೆಯನ್ನು ಕೈಬಿಡಲು ಸಿದ್ಧವಾಗಿರಲಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

1.5 ಬಿಲಿಯನ್ ಡಾಲರ್ ಮೌಲ್ಯದ ನಿಸಾರ್ ಯೋಜನೆ ಭಾರತ ಮತ್ತು ಜಗತ್ತಿಗೆ ಬಹುದೊಡ್ಡ ಯೋಜನೆಯಾಗಿದೆ. ನಿಸಾರ್ ನಮಗೆ ಹಿಮಾಲಯದ ಮಂಜುಗಡ್ಡೆಗಳು ಎಷ್ಟು ವೇಗವಾಗಿ ಕರಗುತ್ತಿವೆ, ಅಥವಾ ಅರಣ್ಯಗಳು ಎಷ್ಟು ಸಣ್ಣಗಾಗುತ್ತಿವೆ ಎನ್ನುವುದು ಸೇರಿದಂತೆ, ಹವಾಮಾನ ಬದಲಾವಣೆಯನ್ನು ಅರ್ಥ ಮಾಡಿಕೊಳ್ಳಲು ನೆರವಾಗಲಿದೆ. ಇದು ಪ್ರವಾಹಗಳು ಅಥವಾ ಭೂಕಂಪಗಳ ಮುನ್ಸೂಚನೆ ನೀಡಲು ನೆರವಾಗಿ, ವಿಪತ್ತು ಪರಿಹಾರ ಪ್ರಕ್ರಿಯೆಯನ್ನು ಸಮರ್ಥವಾಗಿ ನಡೆಸಲು ನೆರವಾಗಲಿದೆ. ನಿಸಾರ್ ಯೋಜನೆ ಯುವ ಭಾರತೀಯರಿಗೆ ನಮ್ಮ ಇಸ್ರೋ ವಿಜ್ಞಾನಿಗಳು ನಾಸಾದೊಡನೆಯೂ ಕಾರ್ಯ ನಿರ್ವಹಿಸುವ, ಜಾಗತಿಕ ಗುಣಮಟ್ಟ ಹೊಂದಿದ್ದಾರೆ ಎಂಬ ಸಂದೇಶವನ್ನೂ ರವಾನಿಸಿದೆ. ಇದು ಭಾರತೀಯರಿಗೆ ದೊಡ್ಡ ಕನಸುಗಳನ್ನು ಕಾಣುವ, ನಕ್ಷತ್ರಗಳತ್ತ ಕೈ ಚಾಚುವ ಅವಕಾಶ ಕಲ್ಪಿಸುತ್ತಿದೆ.

2025ರ ಮೇ ಸಮೀಪಿಸುತ್ತಿದ್ದು, ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣವಾಗಿದೆ. ನಿಸಾರ್ ಭಾರತದ ಉಪಗ್ರಹವಾಗಿದ್ದು, ಭಾರತದ ಆಸೆ ಕನಸುಗಳನ್ನು ಬಾಹ್ಯಾಕಾಶಕ್ಕೆ ಒಯ್ಯುತ್ತಿದೆ. ಶ್ರೀಹರಿಕೋಟಾದ ಉಡಾವಣಾ ವೇದಿಕೆಯಿಂದ ಭೂಮಿಯ ಕೆಳ ಕಕ್ಷೆಯ ತನಕ, ನಿಸಾರ್ ಹಿಂದೆಂದೂ ಲಭಿಸದಂತಹ ಮಾಹಿತಿಗಳನ್ನು ಒದಗಿಸಲಿದೆ. ನಮ್ಮ ಭೂಮಿಯ ರಕ್ಷಣೆಗೆ ನೆರವಾಗುವಂತಹ ಈ ಅಪರೂಪದ, ಮಹತ್ವದ ಯೋಜನೆಯ ಜಾರಿಗಾಗಿ ನಾವು ಇಸ್ರೋ ಮತ್ತು ನಾಸಾ ಸಂಸ್ಥೆಗಳನ್ನು ಶ್ಲಾಘಿಸೋಣ. ನಿಸಾರ್ ಯೋಜನೆ ತಂಡ ಸ್ಫೂರ್ತಿ, ವಿಜ್ಞಾನ ಮತ್ತು ಭವ್ಯ ಭವಿಷ್ಯದ ಸಂಕೇತವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ: ಭಾರತದ ವಾಯು ರಕ್ಷಣಾ ಬಲ ವರ್ಧಿಸಿದ ಮೂರು ಆಧುನಿಕ ಕ್ಷಿಪಣಿ ವ್ಯವಸ್ಥೆಗಳು

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ