ಇಸ್ರೋ ಗಗನಯಾನಕ್ಕೆ ಮಹಿಳೆಯರನ್ನು ಕಳಿಸುವ ಉದ್ದೇಶ

By Kannadaprabha NewsFirst Published Oct 23, 2023, 10:42 AM IST
Highlights

ಭಾರತದ ಮಹತ್ವಾಕಾಂಕ್ಷಿ ಮಾನವಸಹಿತ ಗಗನಯಾನ ಯೋಜನೆಯಲ್ಲಿ ಮಹಿಳಾ ಫೈಟರ್‌ ಟೆಸ್ಟ್‌ ಪೈಲಟ್‌ಗಳು ಅಥವಾ ಮಹಿಳಾ ವಿಜ್ಞಾನಿಗಳನ್ನು ಅಂತರಿಕ್ಷಕ್ಕೆ ಕಳುಹಿಸಲು ಚಿಂತಿಸುತ್ತಿದೆ.

ತಿರುವನಂತಪುರಂ (ಅ.23): ಭಾರತದ ಮಹತ್ವಾಕಾಂಕ್ಷಿ ಮಾನವಸಹಿತ ಗಗನಯಾನ ಯೋಜನೆಯಲ್ಲಿ ಮಹಿಳಾ ಫೈಟರ್‌ ಟೆಸ್ಟ್‌ ಪೈಲಟ್‌ಗಳು ಅಥವಾ ಮಹಿಳಾ ವಿಜ್ಞಾನಿಗಳನ್ನು ಅಂತರಿಕ್ಷಕ್ಕೆ ಕಳುಹಿಸಲು ಆದ್ಯತೆ ನೀಡುತ್ತೇವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ಮುಖ್ಯಸ್ಥ ಎಸ್‌.ಸೋಮನಾಥ್‌ ಹೇಳಿದ್ದಾರೆ.

‘ಮಹಿಳೆಯರನ್ನು ಅಂತರಿಕ್ಷಕ್ಕೆ ಕಳುಹಿಸುವುದರ ಸಾಧ್ಯಾಸಾಧ್ಯತೆ ಪರಿಶೀಲನೆಗೆ ಮುಂದಿನ ವರ್ಷ ಮಾನವರಹಿತ ಗಗನಯಾನ ನೌಕೆಯನ್ನು ಅಂತರಿಕ್ಷಕ್ಕೆ ಕಳುಹಿಸುವಾಗ ಅದರಲ್ಲಿ ಮಹಿಳೆಯನ್ನು ಹೋಲುವ ರೋಬೋಟ್‌ (ಫೀಮೇಲ್‌ ಹ್ಯೂಮನೈಡ್‌ ರೋಬೋಟ್‌) ಇರಿಸಲಾಗುವುದು. ಅದನ್ನು ಗಮನಿಸಿ 2025ರಲ್ಲಿ ಭೂಮಿಯಿಂದ 400 ಕಿ.ಮೀ. ದೂರಕ್ಕೆ ಕೈಗೊಳ್ಳಲಿರುವ ಮಾನವಸಹಿತ ಗಗನಯಾನ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಅದಕ್ಕೆ ನಮಗೆ ಸರಿಯಾದ ಮಹಿಳಾ ಅಭ್ಯರ್ಥಿಗಳು ಸಿಗಬೇಕಷ್ಟೆ’ ಎಂದು ತಿಳಿಸಿದ್ದಾರೆ.

ಮಾನವಸಹಿತ ಗಗನಯಾನಕ್ಕೆ ಮುನ್ನುಡಿ ಬರೆದ ಭಾರತ: ಇಸ್ರೋ ಮಹತ್‌ ವಿಕ್ರಮ

ಇಸ್ರೋದ ಗಗನಯಾನ ನೌಕೆ ವೈಫಲ್ಯ ಪರೀಕ್ಷೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾನುವಾರ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅವರು, ‘2025ರಲ್ಲಿ ಮಾನವಸಹಿತ ಗಗನಯಾನ ಯೋಜನೆ ಕೈಗೊಳ್ಳುವ ಸಾಧ್ಯತೆಯದೆ. ಅದರಲ್ಲಿ ಮೂರು ದಿನಗಳ ಕಾಲ ಅಂತರಿಕ್ಷದಲ್ಲಿ ಮನುಷ್ಯರನ್ನು ಇರಿಸಿ ಪ್ರಯೋಗ ನಡೆಸಲಾಗುವುದು. ಆರಂಭದಲ್ಲಿ ವಾಯುಪಡೆಯ ಫೈಟರ್‌ ಟೆಸ್ಟ್‌ ಪೈಲಟ್‌ಗಳನ್ನು ಪರಿಗಣಿಸಲಾಗುವುದು. ಸದ್ಯಕ್ಕೆ ನಮ್ಮಲ್ಲಿ ಮಹಿಳಾ ಫೈಟರ್‌ ಪೈಲಟ್‌ಗಳು ಇಲ್ಲ. ಅವರು ಸಿಕ್ಕರೆ ಪರಿಗಣಿಸುತ್ತೇವೆ. ಎರಡನೇ ಆಯ್ಕೆಯಾಗಿ ಮಹಿಳಾ ವಿಜ್ಞಾನಿಗಳನ್ನು ಪರಿಗಣಿಸಲಾಗುವುದು. ಅವರು ನಮಗೆ ಸಿಗುವ ಸಾಧ್ಯತೆ ಹೆಚ್ಚಿದೆ’ ಎಂದು ತಿಳಿಸಿದರು.

ಆದರೆ ಎಷ್ಟು ಮಹಿಳೆಯರನ್ನು ಕಳುಹಿಸಲಾಗುವುದು ಅಥವಾ ಮಹಿಳೆಯರನ್ನು ಮಾತ್ರವೇ ಕಳುಹಿಸಲು ಚಿಂತನೆ ನಡೆದಿದೆಯೇ ಎಂಬ ಬಗ್ಗೆ ಅವರು ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ.

ವಿಕ್ರಂ ಮತ್ತು ಪ್ರಗ್ಯಾನ್‌ಗೆ ಆಕಾಶಕಾಯದ ಅಪಾಯ, ಇಸ್ರೋ ವಿಜ್ಞಾನಿಗಳ ಕಳವಳ

ಚಂದ್ರಯಾನ ಯಶಸ್ಸು: ಕಟೀಲು ದೇಗುಲದಲ್ಲಿ ಇಸ್ರೋ ವಿಜ್ಞಾನಿ ಸೇವೆ
ಚಂದ್ರಯಾನ-2 ಮತ್ತು ಇತ್ತೀಚಿಗಿನ ಚಂದ್ರಯಾನ 3 ಉಡಾವಣೆಯ ಇಸ್ರೋ ತಂಡದಲ್ಲಿ ಕಾರ್ಯನಿರ್ವಹಿಸಿದ, ಲ್ಯಾಂಡಿಂಗ್ ಹಾಗೂ ಪಪೊಸಿಷನಿಂಗ್ ಸಿಸ್ಟಮ್ ವಿಭಾಗವನ್ನು ಮುನ್ನಡೆಸಿದ್ದ ಹಿರಿಯ ವಿಜ್ಞಾನಿ ಸುಳ್ಯ ಕೊಡಪಾಲದ ಶಂಭಯ್ಯ ಅವರು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಸೇವೆ ಸಲ್ಲಿಸಿದರು.

ಚಂದ್ರಯಾನದ ಯಶಸ್ಸಿಗೆ ಪ್ರಾರ್ಥಿಸಿ, ಹರಕೆ ಹೊತ್ತಿದ್ದು, ಅನ್ನದಾನಕ್ಕೆ ಕಾಣಿಕೆ ಹಾಗೂ ಚಿನ್ನದ ಹಾರವನ್ನು ದೇವಿಗೆ ಅರ್ಪಿಸಿದರು. ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಶಂಭಯ್ಯ ಅವರನ್ನು ದೇವೀ ಶೇಷ ವಸ್ತ್ರ ಹಾಗೂ ಪ್ರಸಾದ ನೀಡಿ ಗೌರವಿಸಿದರು.

ಭಾನುವಾರ ಜನಸಾಗರ:
ಕಟೀಲು ದೇಗುಲಕ್ಕೆ ಲಲಿತಾ ಪಂಚಮಿಯಂದು 50 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದರೆ, ಭಾನುವಾರ ಅದಕ್ಕಿಂತಲೂ ಹೆಚ್ಚು ಭಕ್ತರು ಭೇಟಿ ನೀಡಿದರು. ಶೀಘ್ರದರ್ಶನದ ಮೂಲಕ 2200ಕ್ಕಿಂತಲೂ ಹೆಚ್ಚು ಭಕ್ತರು ಭೇಟಿ ನೀಡಿದ್ದು, ದಾಖಲೆಯಾಗಿದೆ. ವಾಹನಗಳ ನಿಲುಗಡೆಗೆ ಸಾಕಷ್ಟು ವ್ಯವಸ್ಥೆಗಳಿದ್ದರೂ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರಿಂದ ರಸ್ತೆ ಬ್ಲಾಕ್ ಆಯಿತು. ದಿನವಿಡೀ ಭಜನೆ, ಸಂಜೆ ತೆಂಕು ಬಡಗು ಯಕ್ಷಗಾನ ನಡೆಯಿತು.

ಇಂದು ಮಹಾರಂಗಪೂಜೆ, ಕಡುಬು ಪ್ರಸಾದ
ಇಂದು ಸೋಮವಾರ ಮಹಾನವಮೀ ಪ್ರಯುಕ್ತ ರಾತ್ರಿ 600ಕ್ಕೂ ಹೆಚ್ಚು ಆರತಿಗಳ ಮಹಾರಂಗಪೂಜೆ ನಡೆಯಲಿದ್ದು, ಭಕ್ತರೆಲ್ಲರಿಗೂ ಕಡುಬು ಪ್ರಸಾದ ನೀಡಲಾಗುತ್ತದೆ. ಹಗಲು ಅಕ್ಷರಾಭ್ಯಾಸ, ವಾಹನಪೂಜೆ ನಡೆಯಲಿದೆ. 
 

click me!