ಚಂದ್ರನಲ್ಲಿ ಪ್ಲಾಸ್ಮಾ ಪರಿಸರ ಪತ್ತೆ: ಚಂದ್ರ ಭೂಮಿ ನಡುವೆ ಸಂವಹನ ಪ್ರಕ್ರಿಯೆ ಮತ್ತಷ್ಟು ಸುಲಭ

By Anusha KbFirst Published Sep 1, 2023, 7:27 AM IST
Highlights

ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ಮುಂದುವರೆಸಿರುವ ವಿಕ್ರಂ ಲ್ಯಾಂಡರ್‌, ಇದೀಗ ಚಂದ್ರನ ಮೇಲ್ಮೈ ಸಮೀಪದಲ್ಲೇ ಕಡಿಮೆ ಪ್ರಮಾಣದ ಪ್ಲಾಸ್ಮಾ (ಅಯಾನೀಕೃತ ಅನಿಲ) ವಾತಾವರಣ ಇರುವುದನ್ನು ಪತ್ತೆ ಹಚ್ಚಿದೆ.

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ಮುಂದುವರೆಸಿರುವ ವಿಕ್ರಂ ಲ್ಯಾಂಡರ್‌, ಇದೀಗ ಚಂದ್ರನ ಮೇಲ್ಮೈ ಸಮೀಪದಲ್ಲೇ ಕಡಿಮೆ ಪ್ರಮಾಣದ ಪ್ಲಾಸ್ಮಾ (ಅಯಾನೀಕೃತ ಅನಿಲ) ವಾತಾವರಣ ಇರುವುದನ್ನು ಪತ್ತೆ ಹಚ್ಚಿದೆ. ಇದರಿಂದ ಚಂದ್ರನಿಂದ ಭೂಮಿಗೆ ಸಂವಹನ ಪ್ರಕ್ರಿಯೆ ಇದರಿಂದ ಮತ್ತಷ್ಟು ಸುಲಲಿತ ಆಗಬಹುದು ಎಂದು ಆಶಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಇಸ್ರೋ, ‘ರೇಡಿಯೋ ಅನಾಟಮಿ ಆಫ್‌ ಮೂನ್‌ ಬೌಂಡ್‌ ಹೈಪರ್‌ಸೆನ್ಸೆಟಿವ್‌ ಲೋನೋಸ್ಪಿಯರ್‌ ಆ್ಯಂಡ್‌ ಅಟ್‌ಮಾಸ್ಪಿಯರ್‌- ಲ್ಯಾಂಗ್‌ಮುಯಿರ್‌ ಪ್ರೋಬ್‌ (ಆರ್‌ಎಎಂಬಿಎಚ್‌-ಎಲ್‌ಪಿ) ಉಪಕರಣವು, ಚಂದ್ರನ ಮೇಲ್ಮೈಗೆ ಸಮೀಪದ ಪ್ರದೇಶದಲ್ಲಿ ಮೊತ್ತಮೊದಲ ಬಾರಿಗೆ ಲೂನಾರ್‌ ಪ್ಲಾಸ್ಮಾ (Lunar Plasma) ಪರಿಸರವನ್ನು ಪತ್ತೆ ಹಚ್ಚಿದೆ’ ಎಂದು ಹೇಳಿದೆ.

ಸೂರ್ಯಯಾನ ತಾಲೀಮು ಪೂರ್ಣ: ಆಂತರಿಕ ತಪಾಸಣೆ ಯಶಸ್ವಿ ಸೆ.2ರಂದು ನಭಕ್ಕೆ ಆದಿತ್ಯ L1

ಇದರ ಲಾಭ ಏನು?:

ಈ ಮಾಹಿತಿಯ ಪ್ರಾಥಮಿಕ ವಿಶ್ಲೇಷಣೆ ಅನ್ವಯ, ಚಂದ್ರನ ಮೇಲ್ಮೈ ಪ್ರದೇಶದಲ್ಲಿನ ಪ್ಲಾಸ್ಮಾವು ಅತ್ಯಂತ ವಿರಳ ಪ್ರಮಾಣದಲ್ಲಿದೆ. ಅದರ ಸಾಂದ್ರತೆ ಪ್ರಮಾಣವು ಪ್ರತಿ ಕ್ಯುಬಿಕ್‌ ಮೀಟರ್‌ಗೆ 5ರಿಂದ 30 ದಶಲಕ್ಷ ಎಲೆಕ್ಟ್ರಾನ್‌ಗಳಷ್ಟಿದೆ. ಈ ಸಂಶೋಧನೆಯು, ಲೂನಾರ್‌ ನಿಯರ್‌ ಸರ್‌ಫೇಸ್‌ ಪ್ರದೇಶದಲ್ಲಿನ ಅನಿಲಗಳು ಹೇಗೆ ಚಾರ್ಚ್‌ ಆಗುತ್ತದೆ ಎನ್ನುವ ವಿಷಯದ ಸಮಗ್ರ ಕ್ರೋಡೀಕರಣಕ್ಕೆ ನೆರವಾಗುತ್ತದೆ. ಅಲ್ಲದೆ, ಈ ಅಧ್ಯಯನವು ಲೂನಾರ್‌ ಪ್ಲಾಸ್ಮಾ ಪ್ರದೇಶದಲ್ಲಿ ರೇಡಿಯೋ ಅಲೆಗಳ ಸಂವಹನ ಮೇಲೆ ಉಂಟಾಗುವ ಶಬ್ದ ಮಾಲಿನ್ಯವನ್ನು ತಡೆಯಲು ನೆರವಾಗುತ್ತದೆ. ಜೊತೆಗೆ ಈ ಕುರಿತ ಜ್ಞಾನವು ಮುಂಬರುವ ಉಡ್ಡಯನಗಳ ವೇಳೆ ಇಂಥ ಶಬ್ದ ಮಾಲಿನ್ಯ ತಡೆದು ಸುಗಮ ಸಂವಹನಕ್ಕೆ ನೆರವಾಗಬಲ್ಲದು ಎಂದು ವಿಶ್ಲೇಷಿಸಲಾಗಿದೆ.

ಪ್ಲಾಸ್ಮಾ ಸಂಶೋಧನೆಯ ಫಲ ಏನು?

ಚಂದ್ರನ ಮೇಲೆ ಬಿಸಿ ಆಗುವ ಕಣಗಳು ವ್ಯೋಮನೌಕೆಗಳ ಸಂವಹನದ ಮೇಲೆ ಪರಿಣಾಮ ಬೀರುತ್ತವೆ.
ಕಣಗಳು ಕಡಿಮೆ ಬಿಸಿ ಆದರೆ ವ್ಯೋಮನೌಕೆಯ ಸುಲಭ ಸಂವಹನ ಸಾಧ್ಯವಾಗುತ್ತದೆ.
ಪ್ಲಾಸ್ಮಾ ಪರಿಸರದ ಅಧ್ಯಯನದಿಂದ ಮುಂಬರುವ ಚಂದ್ರಯಾನಗಳಿಗೆ ನೆರವಾಗುತ್ತದೆ.
ಅಧ್ಯಯನದ ಫಲಿತಾಂಶ ಆಧರಿಸಿ ವ್ಯೋಮನೌಕೆಯನ್ನು ವಾತಾವರಣಕ್ಕೆ ತಕ್ಕಂತೆ ಮಾರ್ಪಡಿಸಬಹುದು.

ಚಂದ್ರನ ಮೇಲಿನ ಕಂಪನ ಪತ್ತೆ

ಚಂದ್ರನ ಮೇಲೆ ಉಂಟಾಗುವ ಕಂಪಗಳನ್ನು ಅರಿಯಲು ಲ್ಯಾಂಡರ್‌ನಲ್ಲಿ ಅಳವಡಿಸಲಾಗಿದ್ದ ಇನ್‌ಸ್ಟ್ರುಮೆಂಟ್‌ ಫಾರ್‌ ದ ಲೂನಾರ್‌ ಸೆಸ್ಮಿಕ್‌ ಆಕ್ಟಿವಿಟಿ (ಐಎಲ್‌ಎಸ್‌ಎ) ಪೇಲೋಡ್‌ ಮೊದಲ ಬಾರಿ ರೋವರ್‌ನ ಓಡಾಟದ ಕಂಪನವನ್ನು ಪತ್ತೆ ಮಾಡಿದೆ. ಅಲ್ಲದೇ ಮತ್ತೊಂದು ನೈಸರ್ಗಿಕ ಮಾಹಿತಿಯನ್ನು ರವಾನಿಸಿದ್ದು, ಇದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಇಸ್ರೋ (ISRO) ಹೇಳಿದೆ.

Chandrayaan-3: ಚಂದ್ರನ ನೆಲದಲ್ಲಿ ಮತ್ತೊಮ್ಮೆ ಹಿರಿಯಣ್ಣ ವಿಕ್ರಮನ ಫೋಟೋ ತೆಗೆದು ಸಂಭ್ರಮಿಸಿದ ಪ್ರಗ್ಯಾನ್‌!

click me!