ಏರೋ ಇಂಡಿಯಾ 2025: ಜಾಗತಿಕ ಅವಕಾಶಗಳ ರನ್‌ವೇ, ರೋಮಾಂಚಕ ವೈಮಾನಿಕ ಪ್ರದರ್ಶನ

Published : Feb 10, 2025, 10:18 AM ISTUpdated : Feb 10, 2025, 12:28 PM IST
ಏರೋ ಇಂಡಿಯಾ 2025: ಜಾಗತಿಕ ಅವಕಾಶಗಳ ರನ್‌ವೇ, ರೋಮಾಂಚಕ ವೈಮಾನಿಕ ಪ್ರದರ್ಶನ

ಸಾರಾಂಶ

ಏರೋ ಇಂಡಿಯಾ ಒಂದು ವೈಮಾನಿಕ ಮತ್ತು ಏರೋಸ್ಪೇಸ್ ಪ್ರದರ್ಶನವಾಗಿದ್ದು, ಇದನ್ನು ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆಯಡಿ ಕಾರ್ಯ ನಿರ್ವಹಿಸುವ ಡಿಫೆನ್ಸ್ ಎಕ್ಸಿಬಿಷನ್ ಆರ್ಗನೈಸೇಶನ್ (ಡಿಇಒ) ನಿರ್ವಹಿಸುತ್ತದೆ. 

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ ಏರೋ ಇಂಡಿಯಾ 2025 ವೈಮಾನಿಕ ಪ್ರದರ್ಶನ ಫೆಬ್ರವರಿ 10ರಿಂದ 14ರ ತನಕ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. ರಕ್ಷಣಾ ಸಚಿವಾಲಯ ಆಯೋಜಿಸುತ್ತಿರುವ ಈ ಮಹತ್ವದ ಸಮಾರಂಭ ವಿವಿಧ ಏರೋಸ್ಪೇಸ್ ಸಂಸ್ಥೆಗಳು, ಉದ್ಯಮ ನಾಯಕರು, ಮತ್ತು ಅಂತಾರಾಷ್ಟ್ರೀಯ ತಜ್ಞರನ್ನು ಒಂದೆಡೆ ಸೇರಿಸಿ, ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರಗಳ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸಲಿದೆ. ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾದ ಏರೋ ಇಂಡಿಯಾ, ಭಾರತೀಯ ವಾಯುಪಡೆ ಮತ್ತು ಭಾಗವಹಿಸುವ ಇತರ ತಂಡಗಳ ರೋಮಾಂಚಕ ವೈಮಾನಿಕ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿ, ಮಿಲಿಟರಿ ಮತ್ತು ವಾಣಿಜ್ಯಿಕ ವೈಮಾನಿಕ ಕ್ಷೇತ್ರದಲ್ಲಿನ ಇತ್ತೀಚಿನ ಸಾಧನೆಗಳನ್ನು ತೋರಲಿದೆ. 

ವೈಮಾನಿಕ ಪ್ರದರ್ಶನದ ಮೊದಲ ಮೂರು ದಿನಗಳು ಔದ್ಯಮಿಕ ಅತಿಥಿಗಳ ಭೇಟಿಗೆ ಮೀಸಲಾಗಿದ್ದರೆ, ಕೊನೆಯ ಎರಡು ದಿನಗಳು ಸಾರ್ವಜನಿಕರಿಗೆ ಮುಕ್ತವಾಗಿವೆ. 2023ನೇ ಸಾಲಿನ 'ರನ್‌ವೇ ಟು ಎ ಬಿಲಿಯನ್ ಅಪರ್ಚುನಿಟೀಸ್' (ಕೋಟ್ಯಂತರ ಅವಕಾಶಗಳತ್ತ ಸಾಗುವ ರನ್‌ವೇ) ಎಂಬ ಥೀಮ್ ಈ ಬಾರಿಯೂ ಮುಂದುವರಿದಿದ್ದು, ಭಾರತೀಯ ವಿಮಾನ ಉತ್ಪಾದಕರು ಮತ್ತು ಜಾಗತಿಕ ಸಂಸ್ಥೆಗಳ ನಡುವಿನ ಸಹಭಾಗಿತ್ವಕ್ಕೆ ಸಾಕ್ಷಿಯಾಗಿದೆ. ಈ ಸಮಾರಂಭ ಭಾರತದ ಆಧುನಿಕ ವೈಮಾನಿಕ ಯೋಜನೆಗಳು, ರಕ್ಷಣಾ ನಾವೀನ್ಯತೆಗಳು, ಹೊಸ ತಂತ್ರಜ್ಞಾನಗಳತ್ತ ಬೆಳಕು ಚೆಲ್ಲಲಿದ್ದು, ಅದರೊಡನೆ ಸ್ಟಾರ್ಟಪ್ ಸಂಸ್ಥೆಗಳಿಗೆ ಗುರುತಿಸಿಕೊಳ್ಳಲು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಬೆಳೆಯಲು ಸೂಕ್ತ ವೇದಿಕೆ ಒದಗಿಸುತ್ತದೆ.

ಬಜೆಟ್ 2025: ಭಾರತದ ಬಾಹ್ಯಾಕಾಶ ಕನಸಿಗೆ 13,416 ಕೋಟಿ ರೂಪಾಯಿಗಳ ಉತ್ತೇಜನ

ಏರೋ ಇಂಡಿಯಾ 2025, ದೇಶೀಯ ನಿರ್ಮಾಣದ ವೃದ್ಧಿ: ಏರೋ ಇಂಡಿಯಾ ಒಂದು ವೈಮಾನಿಕ ಮತ್ತು ಏರೋಸ್ಪೇಸ್ ಪ್ರದರ್ಶನವಾಗಿದ್ದು, ಇದನ್ನು ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆಯಡಿ ಕಾರ್ಯ ನಿರ್ವಹಿಸುವ ಡಿಫೆನ್ಸ್ ಎಕ್ಸಿಬಿಷನ್ ಆರ್ಗನೈಸೇಶನ್ (ಡಿಇಒ) ನಿರ್ವಹಿಸುತ್ತದೆ. ಭಾರತೀಯ ವಾಯುಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ), ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್), ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ), ಮತ್ತು ಬಾಹ್ಯಾಕಾಶ ಇಲಾಖೆಗಳು ಜೊತೆಯಾಗಿ ಕಾರ್ಯಾಚರಿಸಿ, ವೈಮಾನಿಕ ಪ್ರದರ್ಶನ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತವೆ.

ವರ್ಷಗಳು ಕಳೆದಂತೆ, ಏರೋ ಇಂಡಿಯಾ ಪ್ರದರ್ಶನ ಭಾರತೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಸಂಸ್ಥೆಗಳ ತಂತ್ರಜ್ಞಾನಗಳನ್ನು ಪ್ರದರ್ಶಿಸಿ, ಜಾಗತಿಕ ಮಿಲಿಟರಿ ಮತ್ತು ನಾಗರಿಕ ವಿಮಾನ ಉತ್ಪಾದಕರ ಗಮನ ಸೆಳೆದಿದೆ. ಏರೋ ಇಂಡಿಯಾ ವಿಶಿಷ್ಟ ವಿಚಾರ ಸಂಕಿರಣಗಳು, ಔದ್ಯಮಿಕ ಸಹಯೋಗಗಳು, ಮತ್ತು ವೈಮಾನಿಕ ಪ್ರದರ್ಶನಗಳನ್ನು ಒಳಗೊಂಡು, ವೈಮಾನಿಕ ಉದ್ಯಮದ ಬೆಳವಣಿಗೆಗೆ ಉತ್ತಮ ಅವಕಾಶವಾಗಿದೆ. 2015ರ ಬಳಿಕ, ಏರೋ ಇಂಡಿಯಾ 'ಆತ್ಮನಿರ್ಭರತೆ' (ಸ್ವಾವಲಂಬನೆ) ಸಾಧಿಸುವ ಗುರಿ ಹೊಂದಿ, 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಆದ್ಯತೆ ನೀಡತೊಡಗಿತು. ಈ ಯೋಜನೆ ಭಾರತದ ಸ್ವಂತ ವೈಮಾನಿಕ ಉದ್ಯಮದ ಪ್ರಗತಿಗೆ ಗಮನ ಹರಿಸಿ, ಅದಕ್ಕೆ ಸೂಕ್ತ ಬೆಂಬಲ ಒದಗಿಸಿ, ವಿದೇಶೀ ತಂತ್ರಜ್ಞಾನ ಮತ್ತು ಉತ್ಪಾದಕರ ಮೇಲಿನ ಅವಲಂಬನೆಯನ್ನು ತಗ್ಗಿಸಲು ನೆರವಾಯಿತು.

ಆಧುನಿಕ ಏರೋಸ್ಪೇಸ್ ತಂತ್ರಜ್ಞಾನಗಳು: ಏರೋ ಇಂಡಿಯಾ 2025ರಲ್ಲಿ, ಜಾಗತಿಕ ಮತ್ತು ಭಾರತೀಯ ವೈಮಾನಿಕ ಸಂಸ್ಥೆಗಳು ತಮ್ಮ ಅತ್ಯಾಧುನಿಕ ಮಿಲಿಟರಿ ಮತ್ತು ನಾಗರಿಕ ವಿಮಾನಗಳ ಮಾದರಿಗಳನ್ನು ಪ್ರದರ್ಶಿಸುವ ನಿರೀಕ್ಷೆಗಳಿವೆ. ಆ ಮೂಲಕ ಭಾರತೀಯ ವಾಯು ಸೇನೆ ಮತ್ತು ರಕ್ಷಣಾ ಸಚಿವಾಲಯದ ಗಮನ ಸೆಳೆಯುವುದು ವೈಮಾನಿಕ ಸಂಸ್ಥೆಗಳ ಉದ್ದೇಶ. ಸಮಾರಂಭದಲ್ಲಿ ಪ್ರಮುಖ ಅಂತಾರಾಷ್ಟ್ರೀಯ ವೈಮಾನಿಕ ಸಂಸ್ಥೆಗಳಾದ ಏರ್‌ಬಸ್‌, ಬೋಯಿಂಗ್, ಲಾಕ್‌ಹೀಡ್‌ ಮಾರ್ಟಿನ್, ಯುನೈಟೆಡ್ ಏರ್‌ಕ್ರಾಫ್ಟ್ ಕಾರ್ಪೋರೇಷನ್ (ಯುಎಸಿ), ರೊಸೊಬೊರೊನ್ ಎಕ್ಸ್‌ಪೋರ್ಟ್, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ), ಡಸಾಲ್ಟ್ ಏವಿಯೇಶನ್, ಸಾಬ್, ಮಾರ್ಟಿನ್ ಬೇಕರ್, ಸಫ್ರಾನ್, ಜನರಲ್ ಇಲೆಕ್ಟ್ರಿಕ್ (ಜಿಇ), ಮತ್ತು ರಾಲ್ಸ್ ರಾಯ್ಸ್ ಭಾಗವಹಿಸುವ ನಿರೀಕ್ಷೆಗಳಿವೆ.

ಸೆಂಟರ್ ಫಾರ್ ಏರ್ ಪವರ್ ಸ್ಟಡೀಸ್ ಇಂಡಿಯಾ (ಸಿಎಪಿಎಸ್ ಇಂಡಿಯಾ) ಥಿಂಕ್ ಟ್ಯಾಂಕ್ ಪ್ರಕಾರ, ಏರೋ ಇಂಡಿಯಾ 2025ರಲ್ಲಿ ಭಾರತ ಒಂದು ಪ್ರಮುಖ ಅಂತಾರಾಷ್ಟ್ರೀಯ ಇಂಜಿನ್ ಉತ್ಪಾದಕ ಸಂಸ್ಥೆಯೊಡನೆ ಐಪಿ ಹಕ್ಕುಗಳನ್ನು ಪಡೆದು, 110ಕೆಎನ್ ಥ್ರಸ್ಟ್ ಇರುವ ವಿಮಾನದ ಇಂಜಿನ್ನಿನ ಜಂಟಿ ವಿನ್ಯಾಸ ಮತ್ತು ಉತ್ಪಾದನೆಯ ಕುರಿತ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಅಂತಾರಾಷ್ಟ್ರೀಯ ಸಂಸ್ಥೆಗಳೊಡನೆ, ಪ್ರಮುಖ ಭಾರತೀಯ ರಕ್ಷಣಾ ಸಂಸ್ಥೆಗಳಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್), ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಭಾರತ್ ಫೋರ್ಜ್ ಲಿಮಿಟೆಡ್, ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್), ಅದಾನಿ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್), ಬ್ರಹ್ಮೋಸ್ ಏರೋಸ್ಪೇಸ್, ಇಂಡಿಯಾಪೋರ್ಜ್, ಮತ್ತು ಜೆ಼ನ್ ಟೆಕ್ನಾಲಜೀಸ್‌ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿವೆ.

ರೋಮಾಂಚಕ ವೈಮಾನಿಕ ಪ್ರದರ್ಶನ: ಏರೋ ಇಂಡಿಯಾ 2025ರಲ್ಲಿ, ಬೆಳಗ್ಗೆ ಮತ್ತು ಮಧ್ಯಾಹ್ನದ ನಂತರ, ದಿನಕ್ಕೆ ಎರಡು ಬಾರಿ ಮೈನವಿರೇಳಿಸುವ ವೈಮಾನಿಕ ಪ್ರದರ್ಶನಗಳು ನಡೆಯಲಿವೆ. ಈ ವರ್ಷದ ವೈಮಾನಿಕ ಪ್ರದರ್ಶನದಲ್ಲಿ ರಷ್ಯಾದ ಐದನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನವಾದ ಸು-57 (ಫೆಲೊನ್) ಪ್ರಮುಖ ಆಕರ್ಷಣೆಯಾಗಿದೆ. ಚೀನಾದ ಜು಼ಹಾಯ್ ಏರ್ ಶೋನಲ್ಲಿ ತನ್ನ ಅಸಾಧಾರಣ ಕೌಶಲ ಪ್ರದರ್ಶಿಸಿದ ಒಂದು ತಿಂಗಳ ಬಳಿಕ, ಸು-57 ಇದೇ ಮೊದಲ ಬಾರಿಗೆ ಭಾರತದ ಬಾನಂಗಳದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಲು ಸಜ್ಜಾಗಿದೆ. ವೈಮಾನಿಕ ಆಸಕ್ತರು ಸು-57 ತನ್ನ ಅಸಾಧಾರಣವಾದ ಕುಶಲ ಚಲನೆಯೊಡನೆ, ಸ್ಟೆಲ್ತ್ ಸಾಮರ್ಥ್ಯವನ್ನೂ ಹೇಗೆ ಹೊಂದಲು ಸಾಧ್ಯವಾಯಿತು ಎಂದು ಆಶ್ಚರ್ಯಪಡುತ್ತಿದ್ದಾರೆ.

ಆರಂಭದಲ್ಲಿ, ಎಫ್-35 (ಲೈಟ್ನಿಂಗ್ 2) ಹಾಗೂ ಎಫ್-16 (ಫೈಟಿಂಗ್ ಫಾಲ್ಕನ್) ಯುದ್ಧ ವಿಮಾನಗಳು ಏರೋ ಇಂಡಿಯಾ 2025ರಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನಲಾಗಿತ್ತು. ಆದರೆ, ನಂಬಿಕಾರ್ಹ ಮೂಲಗಳ ಪ್ರಕಾರ, ಅವುಗಳೂ ಪಾಲ್ಗೊಳ್ಳುವುದು ಖಾತ್ರಿಯಾಗಿದ್ದು, ಬೆಂಗಳೂರಿನ ಬಾನಂಗಳದಲ್ಲಿ ಅವುಗಳ ಚಿತ್ತಾರಕ್ಕೆ ಕಾತರಿಸಿದ್ದ ವೈಮಾನಿಕ ಆಸಕ್ತರ ಉತ್ಸಾಹ ಇಮ್ಮಡಿಸಿದೆ. ಈ ಪ್ರಮುಖ ಆಕರ್ಷಣೆಗಳ ಜೊತೆಗೆ, ಭಾರತೀಯ ನಿರ್ಮಾಣದ ವಿಮಾನ, ಹೆಲಿಕಾಪ್ಟರ್‌ಗಳೂ ಆಗಸದಲ್ಲಿ ಮಿಂಚು ಹರಿಸಲಿವೆ. ಇದರಲ್ಲಿ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಲ್‌ಸಿಎ) ತೇಜಸ್ ಎಂಕೆ 1ಎ, ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (ಎಲ್‌ಸಿಎಚ್) ಪ್ರಚಂಡ್, ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ಎಲ್‌ಯುಎಚ್), ಮತ್ತು ಹಿಂದೂಸ್ತಾನ್ ಟರ್ಬೋ ಟ್ರೈನರ್-40 (ಎಚ್‌ಟಿಟಿ-40) ಸೇರಿವೆ.

ಒಂಬತ್ತು ಬಿಎಇ ಹಾಕ್ ಎಂಕೆ 132 ಯುದ್ಧ ವಿಮಾನಗಳನ್ನು ಒಳಗೊಂಡಿರುವ ಭಾರತೀಯ ವಾಯುಪಡೆಯ 'ಸೂರ್ಯ ಕಿರಣ್ ಏರೋಬ್ಯಾಟಿಕ್ ಟೀಮ್ (ಎಸ್‌ಕೆಎಟಿ)' ತನ್ನ ಸಾಟಿಯಿಲ್ಲದ ವೈಮಾನಿಕ ಪ್ರದರ್ಶನದ ಮೂಲಕ ವೀಕ್ಷಕರನ್ನು ಸೆಳೆಯಲಿದೆ. ಈ ಆಧುನಿಕ ಜೆಟ್ ಟ್ರೈನರ್‌ಗಳು ತಮ್ಮ ಕುಶಲತೆ, ನಿಖರತೆಗೆ ಹೆಸರಾಗಿದ್ದು, ವೈಮಾನಿಕ ಪ್ರದರ್ಶನಕ್ಕೆ ಹೇಳಿಮಾಡಿಸಿದ ವಿಮಾನಗಳಾಗಿವೆ. ಸುರಕ್ಷತಾ ಕಾರಣಗಳಿಂದ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್‌ಗಳ (ಎಲ್ಎಎಚ್) ಬಳಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವುದರಿಂದ, ಭಾರತೀಯ ವಾಯುಪಡೆಯ ಸಾರಂಗ್ ಹೆಲಿಕಾಪ್ಟರ್ ತಂಡದ ಹಾರಾಟ ಪ್ರದರ್ಶನ ನಡೆಯುವುದು ಅನಿಶ್ಚಿತವಾಗಿದೆ. ಎಲ್ಲ ವಿಚಾರಗಳ ನಡುವೆಯೂ, ಪ್ರತಿದಿನವೂ ನಡೆಯುವ ವೈಮಾನಿಕ ಪ್ರದರ್ಶನಗಳು ಏರೋ ಇಂಡಿಯಾ ಪ್ರೇಕ್ಷಕರಿಗೆ ಕಾತರದ ಕ್ಷಣಗಳಾಗಿರಲಿವೆ. ಅವು ಸಾರ್ವಜನಿಕರಿಗೆ ಮನರಂಜನೆ ನೀಡುವುದು ಮಾತ್ರವಲ್ಲದೆ, ವೈಮಾನಿಕ ಆಸಕ್ತರಿಗೆ ಪಾಲ್ಗೊಳ್ಳುವ ವಿಮಾನಗಳ ಸಾಮರ್ಥ್ಯವನ್ನೂ ಸಾರಲಿವೆ.

ಭೂ ಪ್ರದರ್ಶನಗಳು ಮತ್ತು ಆಧುನಿಕ ತಂತ್ರಜ್ಞಾನ ಪ್ರದರ್ಶನ: ಹಾರಾಟ ಪ್ರದರ್ಶನ ಮಾತ್ರವಲ್ಲದೆ, ಏರೋ ಇಂಡಿಯಾ 2025ರಲ್ಲಿ ಸಾರ್ವಜನಿಕರಿಗೆ ನೆಲದಲ್ಲಿ ವಿವಿಧ ಮಿಲಿಟರಿ ಮತ್ತು ನಾಗರಿಕ ವಿಮಾನಗಳು ಮತ್ತು ಉಪಕರಣಗಳ ವೀಕ್ಷಣೆಗಾಗಿ ವಸ್ತು ಪ್ರದರ್ಶನ ಮತ್ತು ತಂತ್ರಜ್ಞಾನ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಎಚ್ಎಎಲ್ ತನ್ನ ಕಾಂಬ್ಯಾಟ್ ಏರ್ ಟ್ರೈನಿಂಗ್ ಸಿಸ್ಟಮ್ (ಸಿಎಟಿಎಸ್) - ವಾರಿಯರ್ ವಿಂಗ್‌ಮ್ಯಾನ್ ವಿಮಾನದ ಸಂಭಾವ್ಯ ವಿನ್ಯಾಸ ವ್ಯವಸ್ಥೆಯನ್ನು ಪ್ರದರ್ಶಿಸಲಿದೆ. ಜನವರಿ 13ರಂದು ಇದರ ಇಂಜಿನ್ ಗ್ರೌಂಡ್ ರನ್ ಪ್ರಕ್ರಿಯೆಯನ್ನು ಎಚ್ಎಎಲ್ ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಏರೋ ಇಂಡಿಯಾ 2025ರಲ್ಲಿ ಭಾಗವಹಿಸುವ ಪ್ರಮುಖ ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಲಾಕ್‌ಹೀಡ್‌ ಮಾರ್ಟಿನ್ ಸಹ ಒಂದಾಗಿದೆ. 

ಈ ಸಂಸ್ಥೆ ನೈಜ ಅನುಭವವನ್ನು ಒದಗಿಸುವ ರೀತಿಯ 3ಡಿ ವ್ಯವಸ್ಥೆಯನ್ನು ಪ್ರದರ್ಶಿಸಲಿದೆ. ಇದು ಆಕಾಶ, ಭೂಮಿ ಮತ್ತು ಸಮುದ್ರಗಳ ಮೇಲೆ ಸಂಕೀರ್ಣ ಮಿಲಿಟರಿ ವ್ಯವಸ್ಥೆಗಳು ಹೇಗೆ ಕಾರ್ಯಾಚರಿಸುತ್ತವೆ ಎನ್ನುವುದನ್ನು ತಿಳಿಯಲು ನೆರವಾಗಲಿದೆ. ಲಾಕ್‌ಹೀಡ್‌ ಮಾರ್ಟಿನ್ ತನ್ನ ಸಿ-130 ಸೂಪರ್ ಹರ್ಕ್ಯುಲಸ್ ಕಾರ್ಯತಂತ್ರದ ವಿಮಾನ, ಎಫ್-21 ಯುದ್ಧ ವಿಮಾನ, ಎಂಎಚ್-60 'ರೋಮಿಯೋ' ಸೀಹಾಕ್ ಹೆಲಿಕಾಪ್ಟರ್, ಜ್ಯಾವೆಲಿನ್ ಆ್ಯಂಟಿ ಟ್ಯಾಂಕ್ ಕ್ಷಿಪಣಿಗಳು ಮತ್ತು ಎಸ್-92 ಬಹುಪಾತ್ರಗಳ ಹೆಲಿಕಾಪ್ಟರ್‌ಗಳನ್ನು ಪ್ರದರ್ಶಿಸಲಿದೆ. ಯುರೋಪಿನ ರಕ್ಷಣಾ ಸಂಸ್ಥೆಯಾದ ಎಂಬಿಡಿಎ ಒಂದು ಪ್ರಮುಖ ಒರಿಜಿನಲ್ ಇಕ್ವಿಪ್ಮೆಂಟ್ ಮ್ಯಾನುಫಾಕ್ಚರರ್ (ಒಇಎಂ) ಆಗಿದ್ದು, ತನ್ನ ಆಧುನಿಕ ಕ್ಷಿಪಣಿ ವ್ಯವಸ್ಥೆಗಳನ್ನು ಪ್ರದರ್ಶಿಸಲಿದ್ದು, ಇದರಲ್ಲಿ ಮಿಟಿಯೋರ್ (ದೀರ್ಘ ವ್ಯಾಪ್ತಿಯ, ಗಾಳಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿ), ಮತ್ತು ಎಂಐಸಿಎ (ವಿವಿಧ ರೀತಿಯ ಯುದ್ಧಗಳಿಗೆ ಬಳಕೆಯಾಗುವ ಬಹುಮುಖಿ ಕ್ಷಿಪಣಿ) ಕ್ಷಿಪಣಿಗಳು ಸೇರಿವೆ.

ಏರೋ ಇಂಡಿಯಾ 2025ರಲ್ಲಿ ಡ್ರೋನ್ ಮತ್ತು ರಕ್ಷಣಾ ತಂತ್ರಜ್ಞಾನದಲ್ಲಿ ಕಾರ್ಯಾಚರಿಸುತ್ತಿರುವ ಹಲವು ಭಾರತೀಯ ಸಂಸ್ಥೆಗಳೂ ಪಾಲ್ಗೊಳ್ಳಲಿವೆ. ಐಡಿಯಾಫೋರ್ಜ್, ಗರುಡ ಏರೋಸ್ಪೇಸ್, ದಕ್ಷ ಅನ್‌ಮ್ಯಾನ್ಡ್ ಸಿಸ್ಟಮ್ಸ್, ಜೆ಼ನ್ ಟೆಕ್ನಾಲಜೀಸ್ ಸಂಸ್ಥೆಗಳು ತಮ್ಮ ಡ್ರೋನ್‌ಗಳು, ಲಾಯ್ಟರಿಂಗ್ ಸಿಸ್ಟಮ್‌ಗಳು, ಮತ್ತು ಕೌಂಟರ್ ಅನ್‌ಮ್ಯಾನ್ಡ್ ಏರಿಯಲ್ ಸಿಸ್ಟಮ್‌ಗಳನ್ನು (ಸಿ-ಯುಎಎಸ್) ಪ್ರದರ್ಶಿಸಲಿವೆ. ಇತ್ತೀಚಿನ ವರ್ಷಗಳಲ್ಲಿ, ಭಾರತೀಯ ಡ್ರೋನ್ ಉತ್ಪಾದಕರು ಸಾಕಷ್ಟು ಪ್ರಗತಿ ಸಾಧಿಸಿದ್ದು, ವಿವಿಧ ರೀತಿಯ ಡ್ರೋನ್‌ಗಳನ್ನು ಯಶಸ್ವಿಯಾಗಿ ಅಭಿವೃದ್ಧಿ ಪಡಿಸಿದ್ದಾರೆ. ಪ್ರಮುಖ ಸಂಸ್ಥೆಗಳ ಜೊತೆಗೆ, ಎಂಎಸ್ಎಂಇಗಳು ಮತ್ತು ಸ್ಟಾರ್ಟಪ್‌ಗಳು ಸಹ ತಮ್ಮ ನಾವೀನ್ಯತೆಗಳನ್ನು ಪ್ರದರ್ಶಿಸಲು ಉತ್ಸುಕವಾಗಿವೆ.

ಬಜೆಟ್ 2025-26: ಸ್ಮಾರ್ಟ್ ಹೂಡಿಕೆಗಳ ಮೂಲಕ ರಕ್ಷಣಾ ಬಲವರ್ಧನೆ

ಏರೋ ಇಂಡಿಯಾ 2025 ಭಾರತದ ಬೆಳೆಯುತ್ತಿರುವ ಏರೋಸ್ಪೇಸ್ ಉದ್ಯಮ ಮತ್ತು ವೃದ್ಧಿಸುತ್ತಿರುವ ಭಾರತದ ವೈಮಾನಿಕ ವಲಯಕ್ಕೆ ಸಾಕ್ಷಿಯಾಗಿದೆ. ಭಾರತ ಸರ್ಕಾರ ಏರೋಸ್ಪೇಸ್ ಉದ್ಯಮದ ಕಾರ್ಯತಂತ್ರದ ಮಹತ್ವವನ್ನು ಅರ್ಥೈಸಿಕೊಂಡಿದ್ದು, ಅದಕ್ಕಾಗಿ 'ಆತ್ಮನಿರ್ಭರ ಭಾರತ' ಯೋಜನೆಗೆ ಆದ್ಯತೆ ನೀಡಿದೆ. ವರ್ಷಗಳು ಕಳೆದಂತೆ, ಏರೋ ಇಂಡಿಯಾದಲ್ಲಿ ಜಾಗತಿಕ ರಕ್ಷಣಾ ಸಂಸ್ಥೆಗಳ (ಒಇಎಂ) ಪಾಲ್ಗೊಳ್ಳುವಿಕೆ ಹೆಚ್ಚುತ್ತಿದ್ದು, ವೀಕ್ಷಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, ದೇಶೀಯವಾಗಿ ನಿರ್ಮಿಸಿರುವ ವಿಮಾನಗಳು ಶಕ್ತಿಶಾಲಿ ಮತ್ತು ಆಧುನಿಕ ವಿಮಾನಗಳೆಂದು ಗುರುತಿಸಲ್ಪಟ್ಟು, ಮಿತ್ರ ರಾಷ್ಟ್ರಗಳ ವಾಯುಪಡೆಗಳು ಅವುಗಳನ್ನು ಖರೀದಿಸಿದಾಗ ಅದು ಭಾರತದ ಪಾಲಿಗೆ ನೈಜ ಯಶಸ್ಸಾಗಲಿದೆ.  

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ