ಕೆಜಿಎಫ್‌ ಯಶಸ್ಸನ್ನು ಹಣ ಗಳಿಕೆಗೆ ಬಳಸಲ್ಲ: ಯಶ್

Published : May 22, 2026, 09:15 AM IST
Toxic Yash box office day 1 prediction

ಸಾರಾಂಶ

ನಟ ಯಶ್ ತಮ್ಮ 'ಟಾಕ್ಸಿಕ್' ಚಿತ್ರದ ಮೂಲಕ ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯಲ್ಲಿದ್ದಾರೆ. ಕೆ.ಜಿ.ಎಫ್ ಯಶಸ್ಸಿನ ಸೂತ್ರವನ್ನು ತಿರಸ್ಕರಿಸಿ, ನಿರ್ದೇಶಕಿ ಗೀತು ಮೋಹನ್‌ದಾಸ್ ಅವರೊಂದಿಗೆ ಭಾವನಾತ್ಮಕವಾಗಿ ಸಂಕೀರ್ಣವಾದ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಶ್ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಮೇಲೆ, ಇದೀಗ ವಿಶ್ವ ಚಿತ್ರರಂಗದಲ್ಲಿ ಗಟ್ಟಿ ಹೆಜ್ಜೆ ಊರಲು ಸಕಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಅದರ ಭಾಗವಾಗಿ ಅಂತಾರಾಷ್ಟ್ರೀಯ ಮ್ಯಾಗಜೀನ್ ವೆರೈಟಿಗೆ ಸಂದರ್ಶನ ನೀಡಿರುವ ಯಶ್ ಅವರು ಆಡಿರುವ ಮಾತುಗಳ ಸಾರಾಂಶ ಇಲ್ಲಿದೆ.

ಸಿನಿಮಾ ಬಿಡುಗಡೆ ವ್ಯವಸ್ಥೆ ಬದಲಾಯಿಸಲು ಮುಂದಾದ ಯಶ್

ಸಾಮಾನ್ಯವಾಗಿ ಭಾರತದಲ್ಲಿ ಶೂಟಿಂಗ್ ಹಂತದಲ್ಲಿಯೇ ಪ್ರಚಾರ ಆರಂಭಿಸಲಾಗುತ್ತದೆ. ಆದರೆ ಅದಕ್ಕೆ ಭಿನ್ನವಾಗಿ, ಟಾಕ್ಸಿಕ್ ಚಿತ್ರದಲ್ಲಿ ಹಾಲಿವುಡ್ ಮಾದರಿಯ ತಂತ್ರವನ್ನು ಅಳವಡಿಸಿಕೊಂಡಿರುವುದಾಗಿ ಯಶ್ ತಿಳಿಸಿದ್ದಾರೆ. ಮೊದಲು ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿ, ನಂತರ ಜಾಗತಿಕ ಮಟ್ಟದಲ್ಲಿ ವಿತರಣೆ ಮಾಡಬಲ್ಲ ಸಂಸ್ಥೆಗಳನ್ನು ಹುಡುಕಲು ಮುಂದಾಗಿದ್ದಾರೆ. ಭಾರತೀಯ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನೀಡಲು ಈ ಬದಲಾವಣೆ ಅತ್ಯಗತ್ಯ ಎಂದು ಯಶ್ ತಿಳಿಸಿದ್ದಾರೆ.

ಕೆ.ಜಿ.ಎಫ್ ಯಶಸ್ಸಿನ ಫಾರ್ಮುಲಾ ತಿರಸ್ಕರಿಸಿದ ರಾಕಿ ಭಾಯ್

‘ಕೆ.ಜಿ.ಎಫ್: ಚಾಪ್ಟರ್ 2’ ಚಿತ್ರವನ್ನು ಪ್ಯಾನ್-ಇಂಡಿಯಾ ಬ್ಲಾಕ್‌ಬಸ್ಟರ್ ಮಾಡಿದ ಬಳಿಕ ಮತ್ತದೇ ಕಮರ್ಷಿಯಲ್ ಫಾರ್ಮುಲಾವನ್ನು ಪುನರಾವರ್ತಿಸುವ ಬದಲು, ಅದಕ್ಕಿಂತ ಹೆಚ್ಚು ರಿಸ್ಕ್ ಇರುವ ಮತ್ತು ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಯಶ್ ತಿಳಿಸಿದ್ದಾರೆ. ಈ ಹಿಂದಿನ ಯಶಸ್ಸನ್ನು ಕೇವಲ ಹಣ ಮಾಡಿಕೊಳ್ಳಲು ಬಳಸದೆ, ಸೃಜನಶೀಲವಾಗಿ ತಮಗೆ ತಾವೇ ಸವಾಲೊಡ್ಡಿಕೊಳ್ಳಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ.

ಬರೀ ಗ್ಯಾಂಗ್‌ಸ್ಟರ್ ಕಥೆಯಲ್ಲ ‘ಟಾಕ್ಸಿಕ್’

ಮೇಲ್ನೋಟಕ್ಕೆ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಕಮರ್ಷಿಯಲ್ ಸಿನಿಮಾ ತರಹ ಕಂಡರೂ, ಯಶ್ ಪ್ರಕಾರ ಇದು ಭಾವನಾತ್ಮಕವಾಗಿ ಅತ್ಯಂತ ಸಂಕೀರ್ಣವಾದ ಕಥೆಯಾಗಿದೆ. ಮುಖ್ಯವಾಹಿನಿಯ ಭಾರತೀಯ ಸಿನಿಮಾಗಳಲ್ಲಿ ಬಹಳ ಅಪರೂಪವಾಗಿರುವ ನೈತಿಕ ತಾಕಲಾಟಗಳು, ಮಾನವೀಯ ಭಾವನೆಗಳು, ಕರಾಳ ವಿಚಾರಗಳು ಮತ್ತು ತೀವ್ರ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ಹೊಸ ದೃಷ್ಟಿಕೋನ ನೀಡಿದ ನಿರ್ದೇಶಕಿ ಗೀತು ಮೋಹನ್‌ದಾಸ್

ಕಥೆಗೆ ಭಾವನಾತ್ಮಕ ಶ್ರೀಮಂತಿಕೆ ಮತ್ತು ಸೂಕ್ಷ್ಮತೆಯನ್ನು ತಂದುಕೊಟ್ಟ ಕೀರ್ತಿ ನಿರ್ದೇಶಕಿ ಗೀತು ಮೋಹನ್ ದಾಸ್ ಅವರಿಗೆ ಸಲ್ಲುತ್ತದೆ ಎಂದು ಯಶ್ ಹೇಳಿದ್ದಾರೆ. ಮಹಿಳಾ ನಿರ್ದೇಶಕರು ಸಹಜವಾಗಿಯೇ ಭಾವಗಳನ್ನು ಮತ್ತು ಸಂಬಂಧಗಳನ್ನು ಬೇರೆ ದೃಷ್ಟಿಕೋನದಲ್ಲಿ ನೋಡುತ್ತಾರೆ. ಅವರ ಈ ದೃಷ್ಟಿಕೋನವು ಪುರುಷ ಪ್ರಧಾನ ಆಕ್ಷನ್ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಮಿಸ್ ಆಗುವ ಹಲವು ಮುಖಗಳನ್ನು ಈ ಸಿನಿಮಾದಲ್ಲಿ ಪರಿಚಯಿಸಿದೆ ಎಂಬುದು ಯಶ್ ಅಭಿಪ್ರಾಯ.

1947-1961ರ ಅವಧಿಯ ಕಾಲ್ಪನಿಕ ಗೋವಾದ ಮರುಸೃಷ್ಟಿ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಗೋವಾ ಇನ್ನೂ ಪೋರ್ಚುಗೀಸರ ಆಡಳಿತದಲ್ಲಿದ್ದ ಸಮಯದ ಹಿನ್ನೆಲೆಯಲ್ಲಿ ಈ ಚಿತ್ರ ಮೂಡಿಬರಲಿದೆ. ಈ ವಿಶಿಷ್ಟ ಐತಿಹಾಸಿಕ ಹಿನ್ನೆಲೆಯು ಚಿತ್ರಕ್ಕೆ ಅಂತರರಾಷ್ಟ್ರೀಯ ಮಟ್ಟದ ದೃಶ್ಯ ವೈಭವವನ್ನು ನೀಡುವುದರ ಜೊತೆಗೆ, ಭಾರತೀಯ ಇತಿಹಾಸ ಮತ್ತು ಅಸ್ಮಿತೆಯ ಪರಿಚಯವನ್ನು ಮಾಡುತ್ತದೆ.

ಮಾರ್ಕೆಟ್ ತಂತ್ರ ಅಲ್ಲ, ಕಥೆಯ ಅಗತ್ಯಕ್ಕೆ ತಕ್ಕ ತಾರಾಗಣ

ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮತ್ತು ಬ್ರಿಟಿಷ್ ನಟ ಡ್ಯಾರೆಲ್ ಡಿಸಿಲ್ವಾ ಅವರಂತಹ ಕಲಾವಿದರ ದಂಡೇ ಇದೆ. ಆದರೆ, ಈ ತಾರಾಗಣವನ್ನು ಜಾಗತಿಕ ಮಾರುಕಟ್ಟೆಯನ್ನು ಆಕರ್ಷಿಸಲು ಬೇಕಾಗಿ ಆಯ್ಕೆ ಮಾಡಿದ್ದಲ್ಲ, ಬದಲಿಗೆ ಕಥಾ ಜಗತ್ತಿಗೆ ಸೂಕ್ತವಾಗುವಂತೆ ಅನಿವಾರ್ಯವಾಗಿ ಆಯ್ಕೆ ಮಾಡಲಾಗಿದೆ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ.

ಹಾಲಿವುಡ್ ಮಟ್ಟದ ಆ್ಯಕ್ಷನ್, ನಮ್ಮೂರಿನ ಭಾವಗಳು

‘ಜಾನ್ ವಿಕ್’ ಮತ್ತು ‘ಫಾಸ್ಟ್ ಅಂಡ್ ಫ್ಯೂರಿಯಸ್’ ಖ್ಯಾತಿಯ ಹೆಸರಾಂತ ಸಾಹಸ ನಿರ್ದೇಶಕ ಜೆ. ಜೆ. ಪೆರ್ರಿ ‘ಟಾಕ್ಸಿಕ್’ ಚಿತ್ರದ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಕುತೂಹಲಕರ ವಿಷಯವೆಂದರೆ, ಭಾರತೀಯ ಚಿತ್ರರಂಗಕ್ಕೆ ಏನಾದರೂ ಹೊಸತು ಮತ್ತು ತೀವ್ರವಾದಂತಹ ಅನುಭವ ನೀಡುವ ಸಲುವಾಗಿ ಪೆರ್ರಿ ಅವರು ಇಲ್ಲಿ ಭಾರತೀಯ ಸಾಹಸ ತಂಡಗಳ ಜೊತೆ ಕೆಲಸ ಮಾಡಿದ್ದಾರೆ.

ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಶೂಟಿಂಗ್

ಇಂಗ್ಲಿಷ್ ಡಬ್ ಮಾಡುವುದಲ್ಲ, ಇಂಗ್ಲಿಷ್ ಭಾಷೆಯಲ್ಲೇ ಸಹಜವಾಗಿ ನಟಿಸುವುದು ಈ ಚಿತ್ರದ ಅತಿ ದೊಡ್ಡ ಸವಾಲಾಗಿತ್ತು ಎಂದು ಯಶ್ ತಿಳಿಸಿದ್ದಾರೆ. ಭಾರತೀಯ ಭಾವನಾತ್ಮಕ ಅಂಶಗಳನ್ನು ಹಾಗೇ ಉಳಿಸಿಕೊಂಡು, ನಿಜವಾದ ಅಂತರರಾಷ್ಟ್ರೀಯ ಸಿನಿಮಾ ಅನುಭವವನ್ನು ಒದಗಿಸುವುದಕ್ಕೆ ಎರಡು ಭಾಷೆಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕಥೆ ಇದ್ದರೆ ಮಾತ್ರ ‘ಕೆ.ಜಿ.ಎಫ್: ಚಾಪ್ಟರ್ 3’

‘ಕೆ.ಜಿ.ಎಫ್: ಚಾಪ್ಟರ್ 3’ ಗಾಗಿ ಅಭಿಮಾನಿಗಳಿಂದ ಭಾರಿ ಬೇಡಿಕೆಯಿದ್ದರೂ, ಕೇವಲ ಹಣ ಗಳಿಕೆಗಾಗಿ ಆ ಯಶಸ್ವಿ ಫ್ರಾಂಚೈಸಿಯನ್ನು ಬಳಸಿಕೊಳ್ಳುವುದಿಲ್ಲ ಎಂದು ಯಶ್ ಹೇಳಿದ್ದಾರೆ. ಸರಿಯಾದ ಕಥೆ ಮತ್ತು ಸೃಜನಶೀಲ ಉದ್ದೇಶ ಸಿಕ್ಕಾಗ ಮಾತ್ರ ಮುಂದಿನ ಭಾಗ ಸೆಟ್ಟೇರಲಿದೆ ಎಂದು ಅವರು ತಿಳಿಸಿದ್ದಾರೆ.

ಭಾರತೀಯ ಕಥೆಗಳಿಗೆ ಜಾಗತಿಕ ಮನ್ನಣೆ

‘ಟಾಕ್ಸಿಕ್’ ಮತ್ತು ‘ರಾಮಾಯಣ’ ಎರಡೂ ಚಿತ್ರಗಳ ಮೂಲಕ ಹಾಲಿವುಡ್‌ನಲ್ಲಿ ಖ್ಯಾತಿ ಗಳಿಸುವ ಉದ್ದೇಶ ತಮಗಿಲ್ಲ, ಬದಲಿಗೆ ಭಾರತೀಯ ಕಥೆಗಳು, ಭಾರತೀಯ ಕಲೆ ಮತ್ತು ಭಾರತೀಯ ಸಿನಿಮಾದ ಅಸ್ಮಿತೆಯನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುವುದೇ ತಮ್ಮ ಗುರಿ ಎಂದು ಯಶ್ ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಕ್ಕ ಡೈಲಾಗ್ ಹೀಗೆ ಹೇಳಬೇಕು…. 40 ವರ್ಷಗಳ ಹಿಂದೆ ನಟಿ ಊರ್ವಶಿಗೆ ಕನ್ನಡ ಹೇಳಿ ಕೊಟ್ಟ ಪವರ್ ಸ್ಟಾರ್
ದರ್ಶನ್‌ಗೆ ಜೈಲಲ್ಲಿ ರಾಜಾತಿಥ್ಯ ನೀಡಿದ್ದ ವಿಲ್ಸನ್ ಗಾರ್ಡನ್ ನಾಗ ರಿಲೀಸ್; ಆದರೆ, ದಾಸನಿಗೆ ಬಿಡುಗಡೆ ಭಾಗ್ಯ ಬರಲಿಲ್ಲ!