
'ಕರ್ಲೀ ಟೇಲ್' (curley tales) ಅನ್ನೋ ಒಂದು ಲೈಫ್‌ಸ್ಟೈಲ್ (lifestyle) ಯೂಟ್ಯೂಬ್ ಚಾನೆಲ್ (youtube channel). ಅದರಲ್ಲೊಬ್ಬಳು ಗುಂಗುರು ಕೂದಲಿನ ಸುಂದರಿ. ಹೆಸರು ಕಾಮಿಯ ಜಾನಿ. ಆಕೆಯೇ ಸ್ಥಾಪಿಸಿದ ಯೂಟ್ಯೂಬ್ ಚಾನೆಲ್ 'ಕರ್ಲೀ ಟೇಲ್'. ಆಕೆ ಮಧ್ಯಾಹ್ನವೋ ಸಂಜೆಯೋ ಸೆಲೆಬ್ರಿಟಿ ಜೊತೆಗೆ ಊಟ ಮಾಡ್ತಾ ಅವರ ಕತೆ ಕೇಳ್ತಾಳೆ. ಅವರೂ ತಮ್ಮ ಚಿತ್ರ ವಿಚಿತ್ರ ಅಭ್ಯಾಸಗಳ ಬಗ್ಗೆ, ಏನೇನೋ ಕ್ರೇಜ್‌ಗಳ ಬಗ್ಗೆ ಹೇಳ್ತಾ ಹೋಗ್ತಾರೆ. 'ವಿಕ್ರಾಂತ್ ರೋಣ' (vikrant rona) ಸಿನಿಮಾದ ಪ್ರಚಾರಕ್ಕೆ ಅಂತ ಬಾಂಬೆಗೆ ಹೋಗಿದ್ದ ಕಿಚ್ಚ ಸುದೀಪ್ (kichcha sudeep) ಈ ಗುಂಗುರು ಕೂದಲಿನ ಸುಂದರಿಯ ಜೊತೆಗೆ ಊಟಕ್ಕೆ ಕೂತಿದ್ದಾರೆ. ಅಲ್ಲಿ ತನ್ನ ವಿಚಿತ್ರ ಸ್ವಭಾವವೊಂದನ್ನು ಹೇಳಿ ಈ ಹೆಣ್ಣುಮಗಳು ಮಾತ್ರ ಅಲ್ಲ, ತನ್ನ ಅಭಿಮಾನಿಗಳು, ಕನ್ನಡಿಗರು ಶಾಕ್ ಪಡುವಂತೆ ಮಾಡಿದ್ದಾರೆ ಸುದೀಪ್.
ಕಿಚ್ಚ ಸುದೀಪ್ ಫುಡೀ (foddie) ಅಲ್ಲ. ಆದರೆ ಅವರಿಗೆ ಇನ್ನೊಬ್ಬರಿಗೆ ಅಡುಗೆ ಮಾಡಿ ಬಡಿಸೋದು ಅಂದರೆ ಬಹಳ ಪ್ರೀತಿ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರೋ ಅದ್ಭುತವಾಗಿ ಸಿನಿಮಾ ಮಾಡ್ತಿದ್ದಾರೆ ಅಂತ ಗೊತ್ತಾದ್ರೆ ಸುದೀಪ್ ಅವರನ್ನು ತಮ್ಮ ಮನೆಗೆ ಆಹ್ವಾನಿಸುತ್ತಾರೆ. ಕೈಯಾರೆ ಅಡುಗೆ ಮಾಡಿ ಅವರಿಗೆ ಬಡಿಸುತ್ತಾರೆ. ಇತ್ತೀಚೆಗೆ ನಟ ಧನಂಜಯ್ ಅವರಿಗೆ ಸುದೀಪ್ ಅಡುಗೆ ಉಣ್ಣುವ ಚಾನ್ಸ್ ಸಿಕ್ಕಿತ್ತು. ಧನಂಜಯ ಅವರು ಸುದೀಪ್ ಕೈ ರುಚಿಯನ್ನು ಮನಸಾರೆ ಹೊಗಳಿದ್ರು. ಅಂಥಾ ಸುದೀಪ್ 'ಕರ್ಲಿ ಟೇಲ್' ಅನ್ನೋ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಅವರ ಡಯೆಟ್ ಹೇಗಿರುತ್ತೆ, ಊಟದ ಮೇಲಿನ ಅವರ ಪ್ರೀತಿ ಎಂಥಾದ್ದು ಅನ್ನೋದೂ ರಿವೀಲ್ ಆಯ್ತು.
ಆಗಸ್ಟ್ 6 ರಿಂದ ವೂಟ್‍ನಲ್ಲಿ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್!
ಸುದೀಪ್ ಅವರ ಬ್ರಂಚ್, ಲಂಚ್ ಬಹುಶಃ ಒಂದೇ ಅನಿಸುತ್ತೆ. ಏಕೆಂದರೆ ಬಹಳ ಕಡಿಮೆ ತಿನ್ನೋ ಅವರು ಹನ್ನೊಂದೂವರೆ ಹನ್ನೆರಡರ ಒಳಗೆ ಮಧ್ಯಾಹ್ನದ ಊಟ ಮುಗಿಸ್ತಾರೆ. ಸಂಜೆ ಆರೂವರೆಗೆ ರಾತ್ರಿಯ ಊಟದ ಶಾಸ್ತ್ರ ಮಾಡಿಬಿಡ್ತಾರೆ, ಬಹಳ ಕಡಿಮೆ ತಿನ್ನೋ ಕಿಚ್ಚ ಅವರ ಪ್ರಕಾರ ಕಡಿಮೆ ತಿಂದರೇ ಹೆಚ್ಚು ಆಕ್ಟಿವ್ ಆಗಿರಬಹುದು. ಅವರು ಮಾತು ಸತ್ಯ ಅನ್ನೋದಕ್ಕೆ ಬಹುಶಃ ಅವರೇ ಸಾಕ್ಷಿ. ಈ ಶೋದಲ್ಲಿ ಸುದೀಪ್ ಸ್ಪೂನ್ ಪಕ್ಕಕ್ಕಿಟ್ಟು ಕೈಯಲ್ಲೇ ಊಟ ಮಾಡಿದ್ದು ವಿಶೇಷ. ಅನಿವಾರ್ಯವಾಗಿ ನಿರೂಪಕಿಯೂ ಕೈಯಲ್ಲಿ ಉಣ್ಣುವ ಖುಷಿ ಅನುವಿಸಿದರು. ಆಕೆ ಲೈಫಲ್ಲೇ ಫಸ್ಟ್ ಟೈಮ್ ಈ ರೀತಿ ಬರಿಗೈಯಲ್ಲಿ ಊಟ ಮಾಡೋದಂತೆ. ಊಟ ಆದ್ಮೇಲೆ ಪಕ್ಕಾ ದೇಸಿ ಸ್ಟೈಲಲ್ಲಿ ಬೆಟ್ಟು ಚೀಪೋದನ್ನೂ ಸುದೀಪ್ ಕಲಿಸಿದರು. ಬೆಂಗಳೂರಿಗೆ ಬಂದರೆ ಲೋಕಲ್ ಹುಡುಗರು 'ಲೇ ಮಚ್ಚಾ, ಏನ್ಲಾ ಮಗಾ...' ಅಂತೆಲ್ಲ ಮಾತಾಡೋದನ್ನೂ ಹೇಳ್ಕೊಟ್ರು.
ಒಟ್ಟಾರೆ ಸುದೀಪ್ ಮಾತು ಬಹಳ ವೈಟೇಜ್ ನಿಂದ ಕೂಡಿತ್ತು. ಆದರೆ ಸುದೀಪ್ ಅವರ ವಿಚಿತ್ರ ವ್ಯಕ್ತಿತ್ವನ್ನೂ ಈ ಶೋ ತೆರೆದಿಟ್ಟಿತು. ಸುದೀಪ್ ಗೆ ನಾಲ್ಕು ಗಂಟೆಗಿಂತ ಹೆಚ್ಚು ವಿಮಾನದಲ್ಲಿ ಪ್ರಯಾಣಿಸೋದು ಬಹಳ ಕಷ್ಟ ಅಂತೆ. ನಾಲ್ಕು ಗಂಟೆ ಕಳೆಯುತ್ತಿದ್ದ ಹಾಗೇ ವಿಮಾನದ ಬಾಗಿಲು ಬೇಗ ತೆರೆದು ಬಿಡಲಿ ಅಂತ ಬಯಸ್ತಾರಂತೆ. ಒಮ್ಮೆ ಅವರು ಲಂಡನ್ ಗೆ ಹೋಗ್ಬೇಕಿತ್ತು. ವಿಮಾನ ಜರ್ನಿ ನಾಲ್ಕು ಗಂಟೆ ಕಳೆದದ್ದೇ ಸುದೀಪ್ ಎದ್ದು ವಿಮಾನದ ಮುಂಭಾಗಕ್ಕೆ ಹೋಗಿದ್ದಾರೆ. ಅಲ್ಲೇ ಇದ್ದ ಗಗನ ಸಖಿ, 'ಏನಾದ್ರೂ ಬೇಕಿತ್ತಾ ಸರ್' ಅಂತ ವಿಚಾರಿಸಿದ್ದಾಳೆ. ಆಗ ಸುದೀಪ್ 'ವಿಮಾನದ ಬಾಗಿಲು ತೆಗೀತೀರಾ' ಅಂತೇನೋ ಕೇಳಿದ್ದಾರೆ. ಆಕೆಗೆ ಫುಲ್ ಶಾಕ್. ಆಮೇಲೆ ಸುದೀಪ್ ಸೀಟಿನಿಂದ ಎದ್ರೆ ಸಾಕು, ಆಕೆ ಬಂದು ಏನು ಬೇಕಿತ್ತು ಅಂತ ವಿಚಾರಿಸ್ತಿದ್ರು. ಅವರು ಎದ್ದು ನಿಂತಾಗ ಇಬ್ಬರು ಗಗನ ಸಖಿಯರು ಅವರ ಮೇಲೆ ಕಣ್ಣಿಟ್ಟಿರುತ್ತಿದ್ದರಂತೆ. ಸುದೀಪ್‌ಗೆ ಲಂಡನ್‌ವರೆಗೆ ಇದೇ ಎಂಟರ್‌ಟೈನ್ ಮೆಂಟ್ ಆಗಿತ್ತಂತೆ!
ಕನ್ನಡ್ ಅಲ್ಲ.., ಭಾಷೆ ಬಿಡಿ ಭಾಷೆಯ ಹೆಸರನ್ನಾದರೂ ಸರಿಯಾಗಿ ಹೇಳಿ; ಹಿಂದಿ ಮಂದಿಗೆ ಕಿಚ್ಚನ ಕ್ಲಾಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.