
ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ನಟನೆಯ ಮ್ಯಾಕ್ಸ್ ನಿನ್ನೆ ಅಂದರೆ ಡಿಸೆಂಬರ್ 25ರಂದು ಬಿಡುಗಡೆಯಾಗಿದ್ದು, ಅಭಿಮಾನಿಗಳ ಹುಚ್ಚು ಹೆಚ್ಚಿಸಿದೆ. ಕನ್ನಡ ಸೇರಿದಂತೆ, ತಮಿಳು ಹಾಗೂ ತೆಲುಗು ಹೀಗೆ ಮೂರು ಭಾಷೆಗಳಲ್ಲಿ ಬಿಡುಗಡೆ ಕಂಡಿರುವ ಚಿತ್ರವನ್ನು ಕಿಚ್ಚ ಅಭಿಮಾನಿಗಳು ಮೆಚ್ಚಿ ಕೊಂಡಾಡುತ್ತಿದ್ದಾರೆ. ಎರಡೂವರೆ ವರ್ಷಗಳ ಬಳಿಕ ಸುದೀಪ್ ಅವರು ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಹಜವಾಗಿ ಅವರ ಅಭಿಮಾನಿಗಳು ಮೆಚ್ಚಿ ಕೊಂಡಾಡುತ್ತಿದ್ದಾರೆ. ನಟಿ ವರಲಕ್ಷ್ಮೀ ಶರತ್‌ಕುಮಾರ್ ಅವರು ಸುದೀಪ್ ಅವರಿಗೆ ಜೋಡಿಯಾಗಿದ್ದಾರೆ. ಕಲೈಪುಲಿ ಎಸ್, ತನು ವಿ. ಕ್ರಿಯೇಷನ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿರುವ ಈ ಚಿತ್ರವನ್ನು ತಮಿಳುನಾಡಿನ ಮಹಾಬಲೀಪುರಂನಲ್ಲಿ ಭಾರೀ ಸೆಟ್ ನಿರ್ಮಿಸಿ, ಚಿತ್ರದ ಬಹುತೇಕ ಚಿತ್ರೀಕರಣ ಅಲ್ಲಿ ಮಾಡಲಾಗಿದೆ. ಸುದೀಪ್ ನಟನೆ ಜೊತೆಗೆ ಈ ಚಿತ್ರಕ್ಕೆ ಬಂಡವಾಳ ಕೂಡ ಹಾಕಿದ್ದಾರೆ.
ಈ ಚಿತ್ರಕ್ಕೆ 50 ಕೋಟಿ ರೂಪಾಯಿ ಬಂಡವಾಳ ಹಾಕಲಾಗಿದೆ ಎನ್ನಲಾಗುತ್ತಿದೆ. ಈ ಮೊದಲೇ ಸುದೀಪ್ ಅವರು, ಈ ಚಿತ್ರದ ಬಗ್ಗೆ ಮಾಹಿತಿ ಕೊಡುತ್ತಾ, ಇದೊಂದು ಸಿಂಪಲ್ ಆಗಿರುವಂಥ ಸಿನಿಮಾ. ಪ್ಯಾನ್ ಇಂಡಿಯಾ ಆಗಲೀ ಅಥವಾ ತುಂಬಾ ನಿರೀಕ್ಷೆ ಇಟ್ಟುಕೊಳ್ಳುವಂಥದ್ದೇನೂ ಅಲ್ಲ. ಬಿಗ್ ಬಜೆಟ್, ಬಹು ತಾರಾಗಣ ಹೀಗೆ ಯಾವುದೇ ಅದ್ದೂರಿತನ ಇದರಲ್ಲಿ ಇಲ್ಲ. ಚಿತ್ರದ ಕಥೆ ವಿಭಿನ್ನವಾಗಿದ್ದು, ನಿರ್ದೇಶಕರು ಹೊಸತನದ ಹೊಸ ಥಾಟ್ ಇಟ್ಟುಕೊಂಡು ಮ್ಯಾಕ್ಸ್ ಮಾಡಿದ್ದಾರೆ ಎಂದಿದ್ದರು. ಇದರ ಬೆನ್ನಲ್ಲೇ ಕಿಚ್ಚ ಅವರು ಬಜೆಟ್ ನೋಡಿ ಸಿನಿಮಾ ಫಿಕ್ಸ್ ಮಾಡ್ತಾರೋ ಅಥವಾ ಸಿನಿಮಾ ನಿರ್ಮಿಸುತ್ತಲೇ ಬಜೆಟ್ ವಿಸ್ತರಿಸುತ್ತಾರೋ, ಕಥೆ ನೋಡಿ ಬಜೆಟ್ ಫಿಕ್ಸ್ ಮಾಡ್ತಾರೋ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡಿದ್ದಿದೆ.
ಉಪೇಂದ್ರ ಇರೋ ಕಡೆ ಬಿಗ್ಬಾಸ್ ಯಾಕೆ? ಅವ್ರೊಂದು ಹೇಳಿದ್ರೆ, ಇವ್ರೊಂದು ಹೇಳ್ತಾರೆ- ಸುದೀಪ್ ಮಾತು ಕೇಳಿ...
ಇದೇ ಪ್ರಶ್ನೆಯೊಂದು ಅವರಿಗೆ ಎದುರಾಯಿತು. ನಿಮಗೆ ಸಿನಿಮಾ ಮಾಡುವಾಗ ಬಜೆಟ್ ಇಷ್ಟೇ ಇರಬೇಕು ಅಂತಿದ್ಯಾ ಅಥ್ವಾ ಸ್ಟೋರಿ ಇಷ್ಟ ಆಯ್ತು ಅದಕ್ಕಾಗಿ ಈ ಮೂವಿ ಮಾಡ್ತಿದ್ದೇನೆ ಎಂದು ಎನ್ನಿಸತ್ತಾ ಎಂದು ಸುದೀಪ್ ಅವರಿಗೆ ಕೇಳಲಾಯಿತು. ಅದಕ್ಕೆ ಸುದೀಪ್ ಅವರು ಮಗಳ ಮದುವೆಯ ಉದಾಹರಣೆ ಕೊಟ್ಟರು. ನೋಡಿ ನನಗೊಬ್ಬಳು ಮಗಳು ಇದ್ದಾಳೆ. ನನಗೆ ಮೊದಲು ಇಂಪಾರ್ಟೆಂಟ್ ಆಗೋದು ಗಂಡು ಯಾರು ಅಂತ. ಅದು ಸರಿಯಾಗಿ ಫಿಕ್ಸ್ ಆದ್ಮೇಲೆ ಮದುವೆ ಹೇಗೆ ಮಾಡಬೇಕು, ಎಷ್ಟು ಖರ್ಚು ಮಾಡ್ಬೇಕು ಆಮೇಲೆ ತಾನೆ ಬರೋದು. ಅದರ ಬದ್ಲು ಮಗಳೇ ನಿನಗೆ ಮದ್ವೆ ಮಾಡಿಸ್ತಿದ್ದೇನೆ. ಇಷ್ಟು ಕೋಟಿ ಖರ್ಚು ಮಾಡ್ತೀನಿ ಅಂತ ಹೇಳಿ ಗಂಡು ಹುಡುಕೋಕೆ ಆಗತ್ತಾ ಎಂದು ಪ್ರಶ್ನಿಸಿದ್ದಾರೆ. ಅದು ಹೇಗೆ ವರ್ಕ್ ಆಗತ್ತೆ ಆಗಲ್ಲ ಅಲ್ವಾ? ಹಾಗೆಯೇ ಸಿನಿಮಾ ಕೂಡ. ಸ್ಟೋರಿ ಯಾವುದು ಎಂದು ನೋಡಿದ ಮೇಲೆ ಬಜೆಟ್ ವರ್ಕ್ ಆಗತ್ತೆ. ಒಂದು ನೂರು ಕಾರು ಬೇಕು ಅನ್ನೋ ಜಾಗದಲ್ಲಿ 500 ಕಾರು ಬೇಕು ಅಂದ್ರೆ ದುಡ್ಡು ಹೆಚ್ಚು ಸುರಿಯಲೇ ಬೇಕು, ಒಬ್ಬ ಹೀರೋ 10 ವಿಲನ್ ಬದ್ಲು 100 ವಿಲನ್ಗೆ ಹೊಡೀಬೇಕು ಎಂದ್ರೆ ಅದಕ್ಕೂ ಹೆಚ್ಚು ಖರ್ಚಾಗತ್ತೆ ಅಲ್ವಾ?ಮೊದ್ಲೇ ಇಂತಿಷ್ಟು ಬಜೆಟ್ ಅಂತ ಅಂದುಕೊಂಡುಬಿಟ್ರೆ ಅವೆಲ್ಲಾ ವರ್ಕ್ ಆಗಲ್ಲ’ ಎಂದಿದ್ದಾರೆ.
ಬಿಗ್ಬಾಸ್ನಿಂದ ಹೊರಬರಲು ಕೊನೆಗೂ ಕಾರಣ ನೀಡಿದ ಸುದೀಪ್: ಅಭಿಮಾನಿಗಳ ಪ್ರಶ್ನೆಗೆ ಸಿಕ್ಕಿತು ಉತ್ತರ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.