
ಇಂದು ಸಾಹಸಸಿಂಹ ವಿಷ್ಣುವರ್ಧನ್ ಅವರ ಜನ್ಮದಿನ. ಅವರ ಹೊಸ ತಲೆಮಾರಿನ ಸಿನಿಮಾಗಳ ಪೈಕಿ ಜನ ಇಂದಿಗೂ ಇಷ್ಟಪಡುವುದು ಕೋಟಿಗೊಬ್ಬ ಸಿನಿಮಾ. 1995ರಲ್ಲಿ ತಮಿಳಿನಲ್ಲಿ ರಜನಿಕಾಂತ್ ನಟನೆಯಲ್ಲಿ ಬಂದು ಸೂಪರ್‌ಹಿಟ್ ಆಗಿದ್ದ ಭಾಷಾ ಸಿನಿಮಾದ ರಿಮೇಕ್ ಇದಾಗಿತ್ತು. 2001ರಲ್ಲಿ ಬಿಡುಗಡೆಯಾಗಿ ಕನ್ನಡದಲ್ಲೂ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದ ಈ ಸಿನಿಮಾದಲ್ಲಿನ ಹಾಡುಗಳು ಒಂದಕ್ಕಿಂತ ಒಂದು ಸೂಪರ್. 'ಅಣ್ಣಯ್ಯ,.. ತಮ್ಮಯ್ಯ..' 'ಅರೆ ಥೈ ಥೈ ತಂದನಾ..' 'ಕಾವೇರಿಗೆ ಕಾಲುಂಗುರ..', 'ಸಾಹಸ ಸಿಂಹ..', 'ತಿಂಗಳ ಬೆಳಕಿನ ಅಂಗಳದಲ್ಲಿ..' ಹಾಗೂ 'ವರ್ಧನ ವಿಷ್ಣು ವರ್ಧನ...' ಹಾಡುಗಳು ಜನಪ್ರಿಯವಾಗಿದ್ದವು. ಸಿನಿಮಾದ ಎಲ್ಲಾ ಹಾಡುಗಳನ್ನು ಬರೆದಿದ್ದು ಪ್ರೇಮಕವಿ ಕೆ.ಕಲ್ಯಾಣ್. ಆದರೆ, ಈ ಸಿನಿಮಾದ ಒಂದು ಹಾಡನ್ನು ಮಾತ್ರ ಇದಕ್ಕಾಗಿ ಬರೆದಿದ್ದಾಗಿರಲಿಲ್ಲ. ಮೂಲತಃ ಚಂದ್ರಮುಖಿ ಪ್ರಾಣಸಖಿ ಸಿನಿಮಾಗೆ ಬರೆದ ಹಾಡನ್ನು ಇದಕ್ಕೆ ಬಳಸಿಕೊಳ್ಳಲಾಗಿತ್ತು. ಅದಲ್ಲದೆ, ಈ ಹಾಡಿನ ಟ್ಯೂನ್‌ಗೆ ಸ್ವತಃ ವಿಷ್ಣುವರ್ಧನ್ ಅವರು ಕೂಡ ಕೊಡುಗೆ ನೀಡಿದ್ದನ್ನು ಕಲ್ಯಾಣ್, ತಮ್ಮ ಯೂಟ್ಯೂಬ್ ಪೇಜ್‌ನಲ್ಲಿ ಹೇಳಿಕೊಂಡಿದ್ದಾರೆ.
'ವಿಷ್ಣುವರ್ಧನ್ ಅವರ ಕೋಟಿಗೊಬ್ಬ ಸಿನಿಮಾದ ಎಲ್ಲಾ ಹಾಡುಗಳನ್ನು ಬರೆಯುವ ಅವಕಾಶ ನನಗೆ ಸಿಕ್ಕಿತ್ತು. ಹೆಸರಾಂತ ನಿರ್ದೇಶಕ ನಾಗಣ್ಣ ಇದರ ನಿರ್ದೇಶಕರು. ದೇವ ಅವರು ಇದಕ್ಕೆ ಸಂಗೀತ ನಿರ್ದೇಶಕ. ರೇಸ್ ವೀವ್ ಹೋಟೆಲ್‌ನಲ್ಲಿ ಇದರ ಸಂಗೀತ ನಿರ್ದೇಶನ ನಡೆಯುತ್ತಿತ್ತು. ವಿಷ್ಣು ಸರ್‌ಗೆ ರಿದಂಗಳು ಬಹಳ ಇಷ್ಟ. ತಾಳವಾದ್ಯಗಳನ್ನು ಅಪಾರವಾಗಿ ಮೆಚ್ಚಿಕೊಳ್ಳುತ್ತಿದ್ದರು. ಸಿನಿಮಾ ಶೂಟಿಂಗ್‌ನಲ್ಲಿ ಯಾವುದೇ ಟೇಬಲ್ ಸಿಕ್ರೂ ಅದರ ಮೇಲೆ ತಾಳ ಹಾಕ್ತಾ ಇದ್ರು..' ಎಂದು ಅಂದಿನ ದಿನವನ್ನು ಕಲ್ಯಾಣ್ ನೆನಪಿಸಿಕೊಂಡಿದ್ದಾರೆ.
'ನಮ್ಮ ಪ್ಲ್ಯಾನ್ ಏನಿತ್ತು ಅಂದರೆ ಕೋಟಿಗೊಬ್ಬ ಸಿನಿಮಾದ ಹಾಡುಗಳನ್ನು ರೆಡಿ ಮಾಡಿ ಅದನ್ನು ವಿಷ್ಣು ಸರ್ ಮನೆಗೆ ಹೋಗಿ ಕೇಳಿಸೋದು. ಅವರು ಟ್ಯೂನ್ ಒಕೆ ಮಾಡಬೇಕಿತ್ತು. ಆದರೆ, ವಿಷ್ಣು ಸರ್, ನಾನೇ ರೇಸ್ ವೀವ್ ಹೋಟೆಲ್‌ಗೆ ಬರುತ್ತೇನೆ ಅಂದಿದ್ದರು. ಹೋಟೆಲ್‌ನ ಮೂರನೇ ಫ್ಲೋರ್‌ಗೆ ಬಂದು, ಅಲ್ಲಿಯೇ ಇದ್ದ ಪ್ಲಾಸ್ಟಿಕ್ ಚೇರ್‌ನಲ್ಲಿ ಕುಳಿತು ಎಲ್ಲರನ್ನೂ ಮಾತಾಡಿಸಿ ಬಳಿಕ ಟ್ಯೂನ್ ಬಗ್ಗೆ ಕೇಳಿದ್ರು. ಟ್ಯೂನ್ ಕೇಳುತ್ತಿದ್ದ ಹಾಗೆ ವಿಷ್ಣು ಸರ್ ಅವರ ಮುಖದ ಭಾವನೆಗಳು ಹೇಗಿರುತ್ತದೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಆದ್ರೆ ವಿಷ್ಣು ಸರ್‌ಗೆ ಕೆಲವು ಟ್ಯೂನ್ ಇಷ್ಟವಾಗಲಿಲ್ಲ. ಚೆನ್ನಾಗಿದೆ ಅನ್ನೋ ಭಾವನೆ ಅವರಲ್ಲಿ ಕಾಣಲಿಲ್ಲ. 10 ನಿಮಿಷ ಬ್ರೇಕ್ ತೆಗೆದುಕೊಳ್ತೇನೆ ಎಂದು ಹೇಳಿದ ದೇವ, ನನ್ನನ್ನು ಕರೆದರು. ಆ ವೇಳೆ ಮಧ್ಯಾಹ್ನ ಆಗಿತ್ತು. ವಿಷ್ಣು ಸರ್‌ಗೆ ಯಾವುದೇ ಟ್ಯೂನ್ ಇಷ್ಟವಾಗ್ತಿಲ್ಲ ಅನ್ನೋ ಬೇಸರ ಅವರಲ್ಲಿತ್ತು. ಈ ವೇಳೆ ನಾನು, ಚಂದ್ರಮುಖಿ ಪ್ರಾಣಸಖಿ ಸಿನಿಮಾದ ಹಾಡಿಗೆ ಕೆಲವು ಸಾಲುಗಳನ್ನು ಬರೆದಿದ್ದೆ. ಇದಕ್ಕೆ ರಫ್ ಆಗಿ ಟ್ಯೂನ್ ಮಾಡಿ ಹೇಳಬಹುದಾ ಎಂದು ಕೇಳಿದೆ. ಒಂದು ಪ್ರಯತ್ನ ಮಾಡೋಣವೇ ಎಂದು ದೇವ ಅವರಲ್ಲಿ ಕೇಳಿದ್ದೆ'.
ಆಗ ನಾನು ಹೇಳಿದ್ದ ಹಾಡು, 'ಕಾವೇರಿಗೆ ಕಾಲುಂಗುರ ತೊಡಿಸಿ, ಕೊಡಚಾದ್ರಿಗೆ ಕೈಬಳೆಯನು ಕೊಡಿಸಿ, ಮಲೆನಾಡಿಗೆ ಮಲ್ಲೆಯನು ಮುಡಿಸಿ, ಸಹ್ಯಾದ್ರಿಗೆ ಸಿಂಧೂರವ ಇರಿಸಿ..' ಎಂದು ಸಾಲುಗಳನ್ನು ಹೇಳಿದೆ. ಕೊನೆಗೆ 'ಪ್ರೀತಿಸುವೆನು ಈ ಜೀವ ಬೆರೆಸಿ..' ಎಂದು ಹೇಳಿದ್ದೆ. ಈ ಸಾಲುಗಳು ಸರ್‌ಗೆ ಇಷ್ಟ ಆಗಬಹುದಾ ಎಂದು ಕೇಳಿದ್ದೆ. ಆಗ ದೇವ ಅವರು ಈ ಲಿರಿಕ್ ಇರಿಸಿಕೊಂಡು ಸರ್‌ಗೆ ಟ್ಯೂನ್ ಹೇಳೋಣ ಅಂದುಕೊಂಡರು. ಕೊನೆಗೆ ಒಂದು ಸಾಂಗ್‌ನ ಫ್ರೇಮ್‌ನ ಮಾಡಿ, ಈ ಸಾಹಿತ್ಯನ ಟ್ಯೂನ್ ಮಾಡಿ ಹೇಳಿದ್ರು. ದೇವ ಅವರು ಈ ಹಾಡು ಹೇಳ್ತಾ ಇದ್ರೆ ವಿಷ್ಣು ಸರ್ ಖುಷಿಯಿಂದ ಚಪ್ಪಾಳೆ ತಟ್ಟೋಕೆ ಶುರು ಮಾಡಿದ್ರು,. ಇನ್ನೊಂದು ಸಾರಿ ಈ ಹಾಡನ್ನು ಹೇಳಿ ಅಂತಾ ಹೇಳಿದ್ರು.. ಕರ್ನಾಟಕದ ಘಮಲು ಈ ಹಾಡಲ್ಲಿ ಕಾಣ್ತಾ ಇದೆ ಅಂತಂದ್ರು.
'ವಿಷ್ಣುವರ್ಧನ' ಸಿನಿಮಾ ಗಣೇಶ್ ಮಾಡಬೇಕಿತ್ತು, ಆದ್ರೆ ಸುದೀಪ್ ಪಾಲಾಯ್ತು: ಯೋಗೀಶ್ ದ್ವಾರಕೀಶ್
ಹೀಗೇ ಹೇಳ್ತಿರೋವಾಗಲೇ ದೇವ ಅವರು ಇಡೀ ಚರಣವನ್ನ ಕಂಪೋಸ್ ಮಾಡಿದ್ರು. ಈ ವೇಳೆ ನಾನು ವಿಷ್ಣು ಸರ್‌ಗೆ ಇಡೀ ಹಾಡನ್ನ, ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳನ್ನ, ದೈವಿಕ, ಪ್ರಕ್ರತಿಯ ಸೊಬಗನ್ನ ರೊಮಾಂಟಿಕ್ ಟಚ್ ಕೊಟ್ಟು ಹೇಳಬಹುದಾ ಎಂದು ಕೇಳಿದ್ದೆ. ಅಲ್ಲಿಯೇ ಅವರು ಒಪ್ಪಿಗೆ ಕೂಡ ನೀಡಿದ್ರು. ಅಲ್ಲಿಯೇ ಕೂತು, ಇಡೀ ಹಾಡನ್ನ, ಕರ್ನಾಟಕದ ಕಂಪ್ಲೀಟ್ ವಿಚಾರವನ್ನ ರೊಮಾಂಟಿಕ್ ಆಗಿ ಬರೆದೆ. ಇಷ್ಟೆಲ್ಲಾ ಆದ್ರೂ, ಒಂದು ಪೀಕ್ ಮ್ಯೂಸಿಕ್ ಕಡಿಮೆ ಆಗಿದೆ ಅಂತಾ ವಿಷ್ಣು ಸರ್‌ಗೆ ಅನಿಸಿತು. ತಾವೇ ತಬಲಾ ತೆಗೆದುಕೊಂಡು, 'ನಮ್ಮ ಪ್ರೀತಿಗೆ ಎರಡೇ ಅಕ್ಷರ, ಅದರಾಳ ಗೌರಿ ಶಂಕರ..' ಅನ್ನೋ ಟ್ಯೂನ್‌ಅನ್ನು ಸೇರಿಸೋಕೆ ಹೇಳಿದ್ರು. ಇದಕ್ಕೆ ಸಾಹಿತ್ಯ ಬರೆದಾಗ, ನಮ್ಮ ಪ್ರೀತಿ ಗೌರಿ ಶಂಕರದ ಪರ್ವತದಷ್ಟು ಆಳ ಎಂದಾಗ ವಿಷ್ಣು ಸರ್‌ಗೆ ಮಾತೇ ಹೊರಡಲಿಲ್ಲ.
ಡಾ. ರಾಜ್‌ಕುಮಾರ್ ಬಗ್ಗೆ ವಿಷ್ಣುವರ್ಧನ್ ನೇರಾನೇರ ಮಾತು, 'ನಾನವನಲ್ಲ' ಅಂದೇಬಿಟ್ರು ಸಾಹಸಸಿಂಹ!
ವಿಷ್ಣುವರ್ಧನ್ ಅವರಲ್ಲಿ ಇಲ್ಲಿ ಕಂಡಿದ್ದು ಕೇವಲ ಕನ್ನಡದ ಮೇಲಿನ ಪ್ರಿತಿ ಮಾತ್ರ. ಒಬ್ಬ ಸೂಪರ್ ಸ್ಟಾರ್ ನಡೆದುಕೊಂಡು ಬಂದರೆ, ಚಪ್ಪಾಳೆ ತಟ್ಟೋ ಕಾಲದಲ್ಲಿ, ಕನ್ನಡತನವನ್ನು ಸಿನಿಮಾದಲ್ಲಿ ಸಾಹಿತ್ಯದ ಸೂಕ್ಷ್ಮತೆಯನ್ನು ವಿಷ್ಣುವರ್ಧನ್ ಗಮನಿಸಿದ್ದರು. ಇದೇ ಹಾಡಿನಲ್ಲಿ 'ನಿನ್ನ ಮನಸೊಂದು ಕರುನಾಡಿನ ಭೂಪಟ..' ಅನ್ನೋ ಏಕೈಕ ಸಾಲು ಹಾಡುವ ಸಲುವಾಗಿ ಚಿತ್ರಾ ಅವರು ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.