ಕೊರೋನಾ ಕಾರಣಕ್ಕೆ ಕನ್ನಡದ ಬಹು ಕೋಟಿ ವೆಚ್ಚದ ಐತಿಹಾಸಿಕ ಸಿನಿಮಾವೊಂದು ಯಾವಾಗ ಶೂಟಿಂಗ್‌ಗೆ ಹೋಗಲಿದೆ ಎನ್ನುವ ಗೊಂದಲ ಆರಂಭವಾಗಿದೆ. ಇಷ್ಟಕ್ಕೂ ಇದೇ ವರ್ಷ ಈ ಚಿತ್ರಕ್ಕೆ ಚಿತ್ರೀಕರಣ ಮೈದಾನಕ್ಕಿಳಿಯುವ ಭಾಗ್ಯ ದೊರೆಯುತ್ತದೋ, ಇಲ್ಲವೋ ಎನ್ನುವ ಗುಮಾನಿಯೂ ಹುಟ್ಟಿಕೊಂಡಿವೆ.
ಹೀಗೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿರುವ ಈ ಚಿತ್ರವೇ ‘ರಾಜವೀರ ಮದಕರಿನಾಯಕ’. ಈ ಸಿನಿಮಾಕ್ಕೆ ಪೂಜೆಯಾಗಿ, ಒಂದು ವಾರ ಚಿತ್ರೀಕರಣವೂ ಆಗಿ, ಉಳಿದ ಶೂಟಿಂಗ್ ಸ್ಥಳಗಳ ಹುಡುಕಾಟದಲ್ಲಿರುವಾಗಲೇ ಲಾಕ್‌ಡೌನ್‌ನಿಂದ ಚಿತ್ರೀಕರಣಕ್ಕೆ ತಡೆಯಾಗಿತ್ತು.
ಮೈಸೂರು ಫಾರ್ಮ್‌ಹೌಸ್‌ನಲ್ಲಿ ಕಾಯಕ ಯೋಗಿಯಾದ ದಾಸ!
ಈಗ ಲಾಕ್‌ಡೌನ್ ಮುಕ್ತಾಯವಾಗಿದ್ದರೂ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿಲ್ಲ. ಒಂದುವೇಳೆ ಅನುಮತಿ ಸಿಕ್ಕರೂ ಕೊರೋನಾ ಭಯ ಇದ್ದೇ ಇದೆ. ಈ ಕಾರಣಕ್ಕೆ ಡಿಸೆಂಬರ್ ತಿಂಗಳು ಮುಗಿಯುವ ತನಕ ಚಿತ್ರೀಕರಣದ ಸೆಟ್ ಕಡೆ ಮುಖ ಮಾಡದಿರಲು ಚಿತ್ರದ ನಾಯಕ ದರ್ಶನ್ ಅವರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇತ್ತ ಚಿತ್ರದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರೂ ಸಹ ಇದೇ ನಿರ್ಧಾರದ ಮೇಲೆ ನಿಂತಿದ್ದು, ‘ರಾಜವೀರ ಮದಕರಿನಾಯಕ’ ಮತ್ತೆ ಯಾವಾಗ ಶೂಟಿಂಗ್ ಸೆಟ್‌ಗೆ ಹೋಗುತ್ತಾನೆ ಎಂಬುದು ಸದ್ಯಕ್ಕೆ ಯಾರಲ್ಲೂ ಸ್ಪಷ್ಟತೆ ಇಲ್ಲ.
ಕೊರೋನಾದಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ಗೊತ್ತಿದ್ದರೆ ಇಷ್ಟುದೊಡ್ಡ ಬಜೆಟ್‌ನ ಐತಿಹಾಸಿಕ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಕೈ ಹಾಕುತ್ತಿರಲಿಲ್ಲ. ದೊಡ್ಡ ಮಟ್ಟದಲ್ಲಿ ಹಣ ಹೂಡಿ, ಯಾವುದೇ ಕೆಲಸ ಮಾಡಲು ಆಗದೆ ಸುಮ್ಮನೆ ಕೂರುವುದು ಕಷ್ಟದ ಕೆಲಸ. ಇದು ಮತ್ತಷ್ಟುಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ ಎಂದು ಸ್ವತಃ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರೇ ಮಾಧ್ಯಮಗಳ ಮುಂದೆ ಬೇಸರ ತೋಡಿಕೊಂಡಿದ್ದಾರೆ. ಈ ನಡುವೆ ಚಿತ್ರದ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರು ದರ್ಶನ್ ಅವರ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ನಟ ದರ್ಶನ್ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ‘ರಾಜವೀರ ಮದಕರಿನಾಯಕ ಸಿನಿಮಾ ಶೂಟಿಂಗ್ ಆಗಬೇಕು. ಇದರ ನಂತರ ಮಿಲನ ಪ್ರಕಾಶ್ ನಿರ್ದೇಶನದ ಸಿನಿಮಾ ಶುರುವಾಗಬೇಕು. ಇದಾದ ಮೇಲೆ ಶೈಲಜ ನಾಗ್ ಅವರ ನಿರ್ಮಾಣದ ಸಿನಿಮಾ ಒಪ್ಪಿಕೊಂಡಿದ್ದೇನೆ. ಈ ಮೂರು ಚಿತ್ರಗಳು ಮುಗಿದ ಮೇಲೆಯೇ ಉಳಿದ ಚಿತ್ರಗಳ ಮಾತು’ ಎಂದಿದ್ದಾರೆ ದರ್ಶನ್. ಈ ಎಲ್ಲದರ ನಡುವೆ ‘ರಾಜವೀರ ಮದಕರಿನಾಯಕ’ ಚಿತ್ರಕ್ಕೆ ಈ ವರ್ಷದ ಅಂತ್ಯದವರೆಗೂ ಶೂಟಿಂಗ್ ನಡೆಯುವುದಿಲ್ಲ ಎನ್ನುವ ಚರ್ಚೆಗಳು ಮಾತ್ರ ಗುಟ್ಟಾಗಿ ಉಳಿದಿಲ್ಲ.