Puneeth Rajkumar: ಮೈಸೂರು ವಿಶ್ವವಿದ್ಯಾನಿಲಯದಿಂದ ಅಪ್ಪುಗೆ ಗೌರವ ಡಾಕ್ಟರೇಟ್ ಘೋಷಣೆ!

By Suvarna NewsFirst Published Mar 13, 2022, 1:52 PM IST
Highlights

ಮೈಸೂರು ವಿಶ್ವವಿದ್ಯಾನಿಲಯ ಪವರ್ ಸ್ಟಾರ್ ಪುನೀತ್​​ ರಾಜ್​​​ಕುಮಾರ್​​ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ. ಪುನೀತ್ ಹುಟ್ಟುಹಬ್ಬದ ವಿಶೇಷವಾಗಿ ಮೈಸೂರು ವಿವಿ ಉಡುಗೊರೆ ನೀಡಿದೆ.

ಸ್ಯಾಂಡಲ್‌ವುಡ್‌ನ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ (Puneeth Rajkumar) ಅವರಿಗೆ ಮತ್ತೊಂದು ಗೌರವ ಲಭ್ಯವಾಗಿದೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿರುವ ಮೈಸೂರು ವಿಶ್ವವಿದ್ಯಾನಿಲಯವು (University of Mysore) ಪುನೀತ್​ಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಘೋಷಿಸಿದೆ. ಈ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್ ಘೋಷಣೆ ಮಾಡಿದ್ದಾರೆ. ವಿಶೇಷವೆಂದರೆ 46 ವರ್ಷದ ಹಿಂದೆ ವರನಟ ಡಾ.ರಾಜ್​ಕುಮಾರ್ (Dr Rajkumar) ಅವರಿಗೂ ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡಿತ್ತು. ಸದ್ಯ ಪುನೀತ್​ಗೆ ಮಾರ್ಚ್ 15ರಂದು ನಡೆಯುವ ವಿವಿ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. 

ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ (Ashwini Puneeth Rajkumar) ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳ ನಿಯೋಗವನ್ನು ಭೇಟಿ ಮಾಡಿದ್ದರು. ಶತಮಾನೋತ್ಸವ ಪೂರೈಸಿರುವ ವಿವಿಯಿಂದ ಡಾಕ್ಟರೇಟ್ ಸ್ವೀಕರಿಸಲು ಅಶ್ವಿನಿ ಕೂಡಾ ಒಪ್ಪಿಕೊಂಡಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರಿಂದ (Thawar Chand Gehlot) ಘಟಿಕೋತ್ಸವದಲ್ಲಿ ದಿವಂಗತ ನಟ ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಪ್ರಶಸ್ತಿಯನ್ನು ನೀಡಲಾಗುತ್ತದೆ. ಜೊತೆಗೆ ಶಹನಾಯಿ ವಾದಕ ಎಂ.ಮಹದೇವಸ್ವಾಮಿ, ಖ್ಯಾತ ವಿಜ್ಞಾನಿ ಅತ್ರಿ ಹಾಗೂ ಜಾನಪದ ಕಲಾವಿದ ಎಂ.ಮಹಾದೇವಸ್ವಾಮಿ ಅವರಿಗೂ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ. ಘಟಿಕೋತ್ಸವದಂದು 28,581 ಅಭ್ಯರ್ಥಿಗಳಿಗೆ ಪದವಿ, 5,677 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುತ್ತದೆ.

Latest Videos

Puneeth Rajkumar: ಅಪ್ಪು ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ ನಿರ್ದೇಶಕ ಪವನ್ ಒಡೆಯರ್!

ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಸಿನಿಮಾ ರಂಗದ 2ನೇ ವ್ಯಕ್ತಿ ಅಪ್ಪು: ಹಠಾತ್‌ ನಿಧನರಾಗಿ ಕರುನಾಡನ್ನು ದುಃಖದಲ್ಲಿ ಮುಳುಗಿಸಿದ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ರಾಜ್ಯದ ಅತ್ಯುನ್ನತ ನಾಗರಿಕ ಪುರಸ್ಕಾರಕ್ಕೆ ಕರ್ನಾಟಕ ರತ್ನಕ್ಕೆ (Karnataka Ratna Award) ಭಾಜನರಾದ 10ನೇ ವ್ಯಕ್ತಿಯಾಗಿದ್ದಾರೆ. ಮಾತ್ರವಲ್ಲದೆ, ಮರಣೋತ್ತರವಾಗಿ ಪ್ರಶಸ್ತಿಗೆ ಪಾತ್ರರಾಗುತ್ತಿರುವ ಮೊದಲ ವ್ಯಕ್ತಿ ಕೂಡಾ ಹೌದು. 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಈವರೆಗೆ ಒಂಬತ್ತು ಗಣ್ಯರಿಗೆ ನೀಡಲಾಗಿದೆ. ಕಡೆಯ ಬಾರಿಗೆ 2009ರಲ್ಲಿ ಈ ಪ್ರಶಸ್ತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ನೀಡಲಾಗಿತ್ತು. ಇದಾಗಿ 11 ವರ್ಷದ ನಂತರ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಈ ಹಿಂದೆ ಘೋಷಿಸಿತ್ತು.



ಅಪ್ಪುಗೆ ಮರಣೋತ್ತರ ಬಸವ ಶ್ರೀ ಪುರಸ್ಕಾರ: ಪುನೀತ್ ರಾಜ್‌ಕುಮಾರ್ ಗೆ 2021ನೇ ಸಾಲಿನ ಮರಣೋತ್ತರ ಬಸವಶ್ರೀ ಪ್ರಶಸ್ತಿಯನ್ನು ಈ ಮೊದಲು ಘೋಷಿಸಲಾಗಿತ್ತು. ಡಾ. ಶಿವಮೂರ್ತಿ ಮುರುಘಾ ಶರಣರು ಸುದ್ದಿಗೋಷ್ಠಿ ನಡೆಸಿ ನಟ ಪುನೀತ್ ರಾಜ್ ಕುಮಾರ್‌ಗೆ 2021ನೇ ಸಾಲಿನ ಮರಣೋತ್ತರ ಬಸವಶ್ರೀ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿದ್ದರು. ಮುರುಘಾ ಮಠದ ಅನುಭವ ಮಂಟಪದಲ್ಲಿ 2022ರಲ್ಲಿ ನಡೆವ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪುನೀತ್ ಪತ್ನಿ ಅಶ್ವಿನಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದರು. ನ.10ರಂದು ಬೆಂಗಳೂರಿನ ಅವರ ಮನೆಗೆ ತೆರಳಿ ದೊಡ್ಮನೆ ಕುಟುಂಬಕ್ಕೆ ಶಿವಮೂರ್ತಿ ಮುರುಘಾ ಶರಣರು ಸಾಂತ್ವನ ಹೇಳಿದ್ದರು.

Puneeth Rajkumar: ಅಪ್ಪು ಹುಟ್ಟುಹಬ್ಬಕ್ಕೆ ಸಂತೋಷ್ ಆನಂದ್‌ರಾಮ್ ಕಡೆಯಿಂದ ಸ್ಪೆಷಲ್ ಗಿಫ್ಟ್!

ಇನ್ನು ಪುನೀತ್ ಅಭಿನಯದ ಕೊನೆಯ 'ಜೇಮ್ಸ್' (James) ಚಿತ್ರದ ಪ್ರೀ-ರಿಲೀಸ್​ ಇವೆಂಟ್​ (James Pre-Release Event) ಕಾರ್ಯಕ್ರಮ ಇಂದು ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನಲ್ಲಿ (Palace Ground) ರಾತ್ರಿ 7ಗಂಟೆಗೆ ಅದ್ದೂರಿಯಾಗಿ ನಡೆಯಲಿದೆ. ಈ ವೇಳೆ ಅಪ್ಪು ಅಭಿಮಾನಿಗಳಿಗಾಗಿ 2500 ಪಾಸ್‌ಗಳನ್ನು ಹಂಚಲಾಗಿದ್ದು, ಒಂದು ಪಾಸ್‌ನಲ್ಲಿ ಇಬ್ಬರು ಬರಲು ಅವಕಾಶವಿದೆ. 100/40 ಅಳತೆಯ ಬೃಹತ್ ವೇದಿಕೆ ಸಿದ್ದವಾಗಿದ್ದು, ದೊಡ್ಡ ಎಲ್‌ಇಡಿಯ ಸ್ಕ್ರೀನ್ ಅಳವಡಿಕೆ ಮಾಡಲಾಗಿದೆ. 5000ಕ್ಕೂ ಹೆಚ್ಚು ಅಭಿಮಾನಿಗಳು ಅರಮನೆ ಮೈದಾನದಲ್ಲಿ ಸೇರುವ ನಿರೀಕ್ಷೆಯಿದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ 18 ಎಲ್‌ಇಡಿಯ ಸ್ಕ್ರೀನ್ ವ್ಯವಸ್ಥೆಯನ್ನು ಮಾಡಲಾಗಿದೆ. 

click me!