ಸಾವೇ ಅಂತಿಮ ಆಯ್ಕೆಯಾಗಿತ್ತು, ಕುಡಿತ ಕಲಿತೆ... ಉಮಾಶ್ರಿ ಜೀವನದ ಮುಳ್ಳಿನ ಹಾದಿ ಅವರ ಮಾತಲ್ಲೇ ಕೇಳಿ...

By Suchethana D  |  First Published Dec 6, 2024, 2:10 PM IST

ನಟಿಯಾಗಿ, ರಾಜಕಾರಣಿಯಾಗಿ ಮಿಂಚುತ್ತಿರುವ ಉಮಾಶ್ರೀ ಅವರ ಬದುಕು ಮುಳ್ಳಿನ ಹಾದಿ. ಅವರ ನೋವಿನ ಪಯಣವನ್ನು ಅವರೇ ತೆರೆದಿಟ್ಟಿದ್ದಾರೆ ನೋಡಿ...
 


ತಮ್ಮೆಲ್ಲ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸುತ್ತಲೇ ಚಿತ್ರಪ್ರಿಯರ ಕಣ್ಮಣಿಯಾಗಿದ್ದಾರೆ ನಟಿ ಉಮಾಶ್ರೀ. ಈಗ 67ರ ಹರೆಯದಲ್ಲಿಯೂ ಅವರ ಮಾಗಿದ ನಟನೆಗೆ ಮನಸೋಲದವರೇ ಇಲ್ಲ. ಅದರಲ್ಲಿಯೂ ಈಗ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಪುಟ್ಟಕ್ಕನ ಪಾತ್ರದಲ್ಲಿನ ಅವರ ನಟನೆಗೆ ಕಣ್ಣೀರು ಹಾಕಿದವರು ಅದೆಷ್ಟೋ ಮಂದಿ.  ಅವರು ಮಾಡುವ ಪ್ರತಿಯೊಂದು ಪಾತ್ರಗಳಲ್ಲೂ ಸ್ವಂತಿಕೆ, ಜೀವಂತಿಕೆ ಇದೆ.  ರಂಗಭೂಮಿ ಮತ್ತು ಚಲನಚಿತ್ರರಂಗಗಳಲ್ಲಿ ಛಾಪು ಮೂಡಿಸಿರುವ  ಪ್ರತಿಭಾನ್ವಿತ ಅಭಿನೇತ್ರಿ ಇವರು.  ನಟಿಯ ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಚಿತ್ರಪ್ರಿಯರ  ಅಭಿಪ್ರಾಯ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ  ಕಣ್ಣುಗಳಲ್ಲಿಯೇ  ತುಂಬಿಕೊಡುತ್ತಾರೆ. ಹಲವು ವಿವಿಧ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸಿರುವ ಇವರು ಹಾಸ್ಯ ಪಾತ್ರಗಳಿಗೆ ತುಂಬಾ ಪ್ರಸಿದ್ಧರಾಗಿದ್ದಾರೆ.   325 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸತತ ಐದು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದ ಏಕೈಕ ಕನ್ನಡ ನಟಿ ಎನಿಸಿದ್ದಾರೆ. ರಾಜಕೀಯದಲ್ಲಿ ಸಕ್ರಿಯವಾಗಿರುವ ಇವರು ಕರ್ನಾಟಕ ರಾಜ್ಯ ಸರ್ಕಾರದ ಶಾಸನ ಸಭೆಯ ಸದಸ್ಯರಾಗಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಇತರ ಹಿಂದುಳಿದ ವರ್ಗ ಇಲಾಖೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2013 ರಲ್ಲಿ ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಇವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದರು.

ಆದರೆ, ಉಮಾಶ್ರೀ ಅವರ ಆರಂಭಿಕ ಜೀವ ಮುಳ್ಳುಗಳಿಂದ ಕೂಡಿದ್ದು. ಬಡ ಕುಟುಂಬದಲ್ಲಿ ಜನಿಸಿದ್ದ ಉಮಾಶ್ರೀ ಅವರ ಮನೆಯಲ್ಲಿ ದಿನನಿತ್ಯದ ಆಹಾರಕ್ಕೂ ಕಷ್ಟಪಡುವ ಪರಿಸ್ಥಿತಿ ಇತ್ತು. ರಂಗಭೂಮಿಗೆ ಸೇರಿದರೆ ತಿನ್ನಲು ಊಟ ಕೊಡುತ್ತಾರೆ ಎಂಬ ಕಾರಣಕ್ಕೆ ರಂಗಭೂಮಿಗೆ ಕಾಲಿಟ್ಟವರು ಉಮಾಶ್ರೀ ಅವರು. ಪ್ರೀತಿಸಿ ಮದುವೆಯಾದರೂ ದಾಂಪತ್ಯದಲ್ಲಿ ಅವರಿಗೆ ಸಿಕ್ಕಿದ್ದು ಬರಿಯ ನೋವು ನೋವು ನೋವು ಮಾತ್ರ.  ಆ ಬಗ್ಗೆ ನಟಿ ಇದಾಗಲೇ ಕೆಲವು ವೇದಿಕೆಗಳಲ್ಲಿ ಜೀವನದ ನೋವಿನ ದಿನಗಳನ್ನು ತೆರೆದಿಟ್ಟಿದ್ದಾರೆ. ಇ ನಾರಾದಾ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ನಟಿ ಮಾತನಾಡಿರುವುದನ್ನು ಶೇರ್‍‌ ಮಾಡಲಾಗಿದೆ. ಅದನ್ನು ಅವರ ಬಾಯಲ್ಲೇ ಕೇಳಿ...

Tap to resize

Latest Videos

ಅಂದುಕೊಂಡ ಜೀವನ ಸಿಗಲಿಲ್ಲ. ಮನೆ ಬಿಟ್ಟು ಮಕ್ಕಳನ್ನು ಕರೆದು ಬಂದೆ. ಅಮ್ಮನ ಮನೆಯಲ್ಲಿ ಮಕ್ಕಳನ್ನು ಬಿಟ್ಟೆ. ಬದುಕಲು ದಾರಿ ಇರಲಿಲ್ಲ. ದೇಹವನ್ನು ಮಾರಿಕೊಳ್ಳಲು ಇಷ್ಟವಿರಲಿಲ್ಲ. ಅದಾಗಲೇ ಒಮ್ಮೆ ಸಾಯುವ ಯೋಚನೆ ಮಾಡಿದ್ದೆ. ಈಗ ಮತ್ತೆ ಆತ್ಮಹತ್ಯೆಯೊಂದೇ ದಾರಿ ಎನ್ನಿಸಿತು. ಹೇಗೆ ಸಾಯುವುದು ಎಂದು ತಿಳಿಯಲಿಲ್ಲ. ತುಂಬಾ ಕುಡಿದರೆ ಸಾಯುತ್ತಾರೆ ಎಂದು ಗೊತ್ತಾಯ್ತು. ಅದಕ್ಕಾಗಿಯೇ ಕುಡಿತದ ಚಟ ಹತ್ತಿಸಿಕೊಂಡೆ. ಸಿಕ್ಕಾಪಟ್ಟೆ ಕುಡಿದೆ. ಸಾಯುವುದು ಒಂದೇ ನನ್ನ ಬದುಕಿನ ಗುರಿಯಾಗಿಹೋಗಿತ್ತು.  ಆ ಸಮಯದಲ್ಲಿ ಯಾವುದೋ ಕಾರಣಕ್ಕೆ ನನ್ನ ಅಮ್ಮ, ನನ್ನ ಮಗಳನ್ನು ಚೆನ್ನಾಗಿ ಹೊಡೆದುಬಿಟ್ಟರು. ಆಕೆ ನನ್ನ ಬಳಿ ಅಳುತ್ತಾ ಬಂದು, ಅಪ್ಪನೂ ಇಲ್ಲ, ಅಮ್ಮನೂ ಸತ್ತೋಗ್ತಾಳೆ ಎಂದು ಅಜ್ಜಿ ಹೇಳಿದ್ರು. ನಾನು ಹೇಗೆ ಬದುಕೋದು ಎಂದು ಕೇಳಿದಳು. ಆ ಮಾತು ನನ್ನನ್ನು ಚುಚ್ಚಿ ಬಿಡ್ತು. ಹೇಗಾದರೂ ಬದುಕ ಬೇಕು ಎನ್ನುವ ನಿರ್ಧಾರ ಮಾಡಿದೆ. ಆತ್ಮಹತ್ಯೆಯ ಯೋಚನೆ ಬಿಟ್ಟೆ. ಮೂರ್ನಾಲ್ಕು ವರ್ಷ ಚೆನ್ನಾಗಿಯೇ ಕುಡಿದಿದ್ದೆ. ಮಗಳ ಮಾತಿನಿಂದ ನೊಂದು ಕುಡಿಯುವುದನ್ನು ಸಂಪೂರ್ಣ ಬಿಟ್ಟೆ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಉಮಾಶ್ರೀ.

ಪುಟ್ಟಕ್ಕನಿಗಿಂದು ಹುಟ್ಟುಹಬ್ಬದ ಸಂಭ್ರಮ: ರಾಷ್ಟ್ರೀಯ ಕಲಾವಿದೆಯಾಗಿ ಮಿಂಚಬೇಕಿದ್ದ ನಟಿಗೆ ಸಿಕ್ಕಿಲ್ಲವೇ ಅವಕಾಶ?

 ಅದಾಗಲೇ ರಂಗಭೂಮಿಯಲ್ಲಿ ಹಲವು ವರ್ಷ ಕೆಲಸ ಮಾಡಿದೆ. ಕೊನೆಗೆ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತು. ಆದರೆ ಒಂಟಿ ಹೆಣ್ಣು. ನನ್ನನ್ನು ನೋಡುವ ಪುರುಷರ ದೃಷ್ಟಿ ಬೇರೆಯದ್ದೇ ಇರುತ್ತಿತ್ತು. ನನ್ನಿಂದು ಅವರು ಬಯಸುತ್ತಿರುವುದು ಏನು ಎಂದು ತಿಳಿದ ತಕ್ಷಣ ಮುಗ್ಧ ಉಮಾಶ್ರೀ, ರೌದ್ರ ಉಮಾಶ್ರೀಯಾಗಿ ಬದಲಾದಳು. ಅತ್ಯಂತ ಕೆಟ್ಟ ಗಂಡಸರಿಗಿಂತಲೂ ಹತ್ತು ಪಟ್ಟು ಕೆಟ್ಟ ಮಾತು ನನ್ನ ಬಾಯಿಯಿಂದ ಬರತೊಡಗಿತು. ಅದ್ಯಾವ ಮಟ್ಟಿಗೆ ನಾನು ಕೆಟ್ಟವಳಾದೆ ಎಂದರೆ, ಅಬ್ಬಾ ಈ ಹೆಣ್ಣಿನ ಸಹವಾಸ ಬೇಡಪ್ಪಾ ಎಂದು ಗಂಡಸರು ಅನ್ನತೊಡಗಿದರು. ಅಲ್ಲಿಯವರೆಗೆ ನಾನು ಬದಲಾದೆ. ಬಳಿಕ ಟಿ.ಎನ್‌.ಸೀತಾರಾಮ ಅವರು ನನಗೆ ಮದುವೆ ಮಾಡಲು ನೋಡಿದರು. ನಾನೂ ಒಪ್ಪಿದ್ದೆ. ಆದರೆ ಮಗಳು ಮಾತ್ರ ಇದಕ್ಕೆ ಒಲ್ಲೆ ಎಂದಳು. ನನ್ನ ಅಮ್ಮನನ್ನು ಬೇರೆಯವರ ಜೊತೆ ಹಂಚಿಕೊಳ್ಳಲು ನಾನು ರೆಡಿ ಇಲ್ಲ ಎಂದಳು. ಅದಕ್ಕಾಗಿ ಆ ಆಸೆಯನ್ನೂ ಬಿಟ್ಟೆ ಎಂದಿದ್ದಾರೆ ಉಮಾಶ್ರೀ.

ಬಳಿಕ ಮೊದಲ ಪತಿಗೆ ಮದುವೆಯಾಗಿ ಎರಡು ಮಕ್ಕಳಾದವು. ಆಗ ನಾನು ಸಿನಿಮಾದಿಂದ ಸಂಪಾದನೆ ಮಾಡುತ್ತಿದ್ದೆ. ಮೊದಲ ಪತಿಯ ಎರಡನೆಯ ಸಂಸಾರಕ್ಕೂ ನಾನೇ ನೆರವಾಗಬೇಕಾಗಿ ಬಂತು. ಅವರ ಮಕ್ಕಳ ಶಿಕ್ಷಣಕ್ಕೂ ಸಹಾಯ ಮಾಡಿದೆ. ನನ್ನಲ್ಲಿಇನ್ನೂ ಯೌವ್ವನ ಇದ್ದ ಕಾರಣ, ಪುರುಷರ ಜೊತೆಗೆ ದೈಹಿಕ ವಾಂಛೆ ಆಗಬಾರದು ಎನ್ನುವ ಕಾರಣಕ್ಕೆ ರಾಜಕೀಯ ಪ್ರವೇಶ ಮಾಡಿದೆ. ಎಂಎಲ್‌ಸಿ, ಎಎಲ್‌ಎ, ಎಂಪಿ ಆಗಿ ಸಚಿವೆಯೂ ಆದೆ. ಇದು ನನ್ನ ಬದುಕಿನ ಹಾದಿ ಎಂದು ಭಾವುಕರಾಗಿ ನಟಿ ಉಮಾಶ್ರೀ ನುಡಿದಿದ್ದಾರೆ. ಅಂದಹಾಗೆ, ಉಮಾಶ್ರೀ ಅವರಿಗೆ,  ಇಬ್ಬರು ಮಕ್ಕಳು,  ಮಗ ವಿಜಯ್ ಕುಮಾರ್  ವಕೀಲರಾಗಿದ್ದು, ಆಸ್ಟ್ರೇಲಿಯಾದಲ್ಲಿ ಕಾನೂನು ಪದವಿ ಪಡೆದಿದ್ದಾರೆ.  ಮಗಳು ಗಾಯತ್ರಿ ವೈದ್ಯೆ. ಸಿನಿಮಾ ಜೊತೆಗೆ ರಾಜಕೀಯದಲ್ಲೂ ಸಕ್ರಿಯರಾಗಿರುವ ಉಮಾಶ್ರೀ ಅವರು ಮಹಿಳೆಯರಿಗಾಗಿ ಸಾಕಷ್ಟು ಚಟುವಟಿಕೆಗಳನ್ನು ಮಾಡಿಸಿದ್ದಾರೆ. ಸದ್ಯ ಮಕ್ಕಳು ಮತ್ತು ಮೊಮ್ಮಕ್ಕಳ ಜೊತೆ ಸುಖ ಜೀವನ ನಡೆಸುತ್ತಿದ್ದಾರೆ.

ಸೀರಿಯಲ್‌ ಶೂಟಿಂಗ್‌ ಸೆಟ್‌ನಲ್ಲಿ ನಟಿ ಉಮಾಶ್ರೀ ಹೀಗೆಲ್ಲಾ ವ್ಯಾಯಾಮ ಮಾಡ್ತಾರಾ? ವಿಡಿಯೋ ವೈರಲ್

click me!