777 Charlie: ರಕ್ಷಿತ್ ಶೆಟ್ಟಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್!

By Suvarna NewsFirst Published Jan 24, 2022, 2:57 PM IST
Highlights

ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ದೊಡ್ಡಮಟ್ಟದ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ನಾಯಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದೀಗ ಈ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ಸಿಕ್ಕಿದೆ. 

ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅಭಿನಯದ '777 ಚಾರ್ಲಿ' (777 Charlie) ದೊಡ್ಡಮಟ್ಟದ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ನಾಯಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಈ ಮೊದಲು ಬಿಡುಗಡೆ ಆಗಿದ್ದ ಟೀಸರ್​, ಪೋಸ್ಟರ್, ಸಾಂಗ್​​​ಗಳಿಂದ ಅಭಿಮಾನಿಗಳಿಗೆ ಕೌತುಕ ಹೆಚ್ಚಿತ್ತು. ಇದೀಗ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ (Censor Board) ಯು/ಎ ಪ್ರಮಾಣಪತ್ರ (U/A Certificate) ಸಿಕ್ಕಿದೆ. ಎಲ್ಲವೂ ಅಂದಕೊಂಡಂತೆ ಹಾಗಿದ್ದರೇ '777 ಚಾರ್ಲಿ' ಡಿಸೆಂಬರ್ 31ರಂದು ರಿಲೀಸ್ ಆಗಬೇಕಿತ್ತು, ಆದರೆ ಚಿತ್ರದ ಕೆಲಸಗಳು ವಿಳಂಬವಾಗಿರುವುದರಿಂದ ಸಿನಿಮಾ ರಿಲೀಸ್ ದಿನಾಂಕವನ್ನು ಚಿತ್ರತಂಡ ಮುಂದೂಡಿತ್ತು.

ಇದೀಗ '777 ಚಾರ್ಲಿ' ಚಿತ್ರದ ನಿರ್ದೇಶಕ ಕಿರಣ್ ರಾಜ್ (Kiran Raj) ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿದ್ದಾರೆ. ಮಾತ್ರವಲ್ಲದೇ ಚಿತ್ರವನ್ನು ವೀಕ್ಷಿಸಿದ ಕೆಲವು ನಿರ್ಮಾಣ ಸಂಸ್ಥೆಗಳು ಮತ್ತು ವಿತರಕರಿಂದ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರಗಳು ಪುನರಾರಂಭದ ಬಗ್ಗೆ ಸ್ಪಷ್ಟತೆ ದೊರೆತ ನಂತರ ಚಿತ್ರತಂಡವು ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿದೆ. ವಿವಿಧ ವಿತರಕರೊಂದಿಗೆ ಅಂತಿಮ ಚರ್ಚೆಯು ಈ ತಿಂಗಳ ಕೊನೆಯಲ್ಲಿ ನಡೆಯಲಿದೆ.  ಫೆಬ್ರವರಿ ತಿಂಗಳಲ್ಲಿ ಸಿನಿಮಾ ಬಿಡುಗಡೆಯ ಅಧಿಕೃತ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಕಿರಣ್‌ ರಾಜ್‌ ತಿಳಿಸಿದ್ದಾರೆ.

777 charlie: ಸದ್ಯಕ್ಕೆ ಚಿತ್ರ ರಿಲೀಸ್ ಆಗಲ್ಲ ಎಂದು ಟ್ವೀಟ್ ಮಾಡಿದ ರಕ್ಷಿತ್ ಶೆಟ್ಟಿ

ಇತ್ತೀಚೆಗಷ್ಟೇ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಸಿನಿಮಾ ಬಿಡುಗಡೆ ಮುಂದೂಡಿಕೆ ಬಗ್ಗೆ ಟ್ವೀಟರ್‌ನಲ್ಲಿ (Twitter) ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಈ ಬಗ್ಗೆ '777 ಚಾರ್ಲಿಯ ಈ ಸುದೀರ್ಘ ಪಯಣದಲ್ಲಿ ನೀವು ನಮಗೆ ತೋರಿರುವ ಪ್ರೀತಿ ಹಾಗೂ ಬೆಂಬಲಕ್ಕೆ ನಾವು ಆಭಾರಿ. ನಾವು ಈ ಮೂಲಕ ತಿಳಿಸ ಬಯಸುವುದೇನೆಂದರೆ, ನಮ್ಮ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈ ಮೊದಲು ನಿಗದಿಪಡಿಸಲಾಗಿದ್ದ ದಿನಾಂಕವಾದ 31 ಡಿಸೆಂಬರ್ 2021 ರಂದು ಚಿತ್ರವನ್ನು ಬಿಡುಗಡೆ ಮಾಡುತ್ತಿಲ್ಲ. ಕೆಲವು ವಿಳಂಬಗಳು ಹೊಸದೊಂದು ಅಧ್ಯಾಯಕ್ಕೆ ನಾಂದಿಯಾಗುತ್ತದೆ. ಅತೀ ಶೀಘ್ರದಲ್ಲಿ ಹೊಸ ಪ್ರಕಟಣೆಯೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ. ಅಲ್ಲಿಯವರೆಗೂ, ಹರಸಿ.. ಹಾರೈಸಿ' ಎಂದು ಟ್ವೀಟ್ (Tweet) ಮಾಡಿದ್ದರು.

'777 ಚಾರ್ಲಿ' ಚಿತ್ರವು ದಾರಿ ತಪ್ಪಿದ ಶ್ವಾನ ಚಾರ್ಲಿ ಮತ್ತು ಅವನ ಸಹಚರ ಧರ್ಮ (ರಕ್ಷಿತ್ ಶೆಟ್ಟಿ ಪಾತ್ರ)ದ ಸುತ್ತದ ಕಥೆಯನ್ನು ಅನುಸರಿಸುತ್ತದೆ. ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಜತೆಗೆ ಶ್ವಾನ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಶ್ವಾನ ಪಾತ್ರದ ಚಿತ್ರೀಕರಣಕ್ಕಾಗಿಯೇ ಚಿತ್ರತಂಡ ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದಾರೆ. ಯುವ ನಿರ್ದೇಶಕ ಕಿರಣ್‌ ರಾಜ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿಯ ಜೊತೆಗೆ ಲ್ಯಾಬ್ರಡಾರ್‌ ನಾಯಿ ಪೂರ್ಣ ಪ್ರಮಾಣದ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದೆ. 

777 ಚಾರ್ಲಿಯಲ್ಲಿ ನಟಿಸಿದ ಶ್ವಾನಕ್ಕೆ ಟ್ರೈನಿಂಗ್ ಮಾಡದ್ಹೇಗೆ?

ಇನ್ನು '777 ಚಾರ್ಲಿ' ಚಿತ್ರವನ್ನು ಜಿಎಸ್ ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ಅವರ ಪರಮಃ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಚಿತ್ರಕ್ಕೆ ನೋಬಿನ್ ಪಾಲ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಅರವಿಂದ್ ಕಶ್ಯಪ್ ಕ್ಯಾಮೆರಾ ಕೈಚಳಕವಿದೆ. ಚಿತ್ರದಲ್ಲಿ  ರಕ್ಷಿತ್ ಶೆಟ್ಟಿಗೆ ಸಂಗೀತಾ ಶೃಂಗೇರಿ (Sangeetha Sringeru)ನಾಯಕಿಯಾಗಿ ಕಾಣಿಸಿಕೊಂಡಿದ್ದು, ಉಳಿದಂತೆ ರಾಜ್‌ ಬಿ. ಶೆಟ್ಟಿ, ಡ್ಯಾನಿಶ್‌ ಸೇಠ್, ಬಾಬಿ ಸಿಂಹ, ಬೇಬಿ ಶಾರ್ವರಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರವು ತೆರೆಕಾಣಲಿದೆ.

click me!