ಮಾತೃಭಾಷೆ ಕನ್ನಡ ಅಲ್ಲ, ಬದುಕಿನ ಭಾಷೆ ಕನ್ನಡ ಅಂದುಕೊಂಡ ಬೇರೆ ಭಾಷೆ ಹಿನ್ನೆಲೆಯ ಸೆಲೆಬ್ರಿಟಿಗಳು ಇವರು!

By Kannadaprabha News  |  First Published Nov 1, 2024, 10:28 AM IST

ಬೇರೆ ರಾಜ್ಯಗಳಲ್ಲಿ ಹುಟ್ಟಿ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಪಂಜಾಬಿ ಮಾತೃಭಾಷೆಯಾಗಿದ್ದರೂ ಕರ್ನಾಟಕಕ್ಕೆ ಬಂದು ಬದುಕು ಕಟ್ಟಿಕೊಂಡವರು ಹಲವರಿದ್ದಾರೆ. ಅನ್ಯರಾಜ್ಯದವರಿಗೂ ಅನ್ನ ನೀಡಿ ಕೈಹಿಡಿದಿದ್ದು ನಮ್ಮ ಕನ್ನಡಾಂಬೆ. 


ಕರುನಾಡಿನಲ್ಲಿ ಹುಟ್ಟಿ ಬೆಳೆದು, ಕನ್ನಡ ಸೊಗಡನ್ನು ಮೈಗೂಡಿಸಿಕೊಂಡ ಸಾವಿರಾರು ಕನ್ನಡಿಗರು ದೇಶ ವಿದೇಶಗಳಲ್ಲಿ ಸಾಧನೆಗೈದಿದ್ದಾರೆ. ಹಾಗೆಯೇ ಬೇರೆ ರಾಜ್ಯಗಳಲ್ಲಿ ಹುಟ್ಟಿ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಪಂಜಾಬಿ ಮಾತೃಭಾಷೆಯಾಗಿದ್ದರೂ ಕರ್ನಾಟಕಕ್ಕೆ ಬಂದು ಬದುಕು ಕಟ್ಟಿಕೊಂಡವರು ಹಲವರಿದ್ದಾರೆ. ಅನ್ಯರಾಜ್ಯದವರಿಗೂ ಅನ್ನ ನೀಡಿ ಕೈಹಿಡಿದಿದ್ದು ನಮ್ಮ ಕನ್ನಡಾಂಬೆ. ಹೀಗೆ ಕರ್ನಾಟಕಕ್ಕೆ ಬಂದು, ಕನ್ನಡ ಕಲಿತು ಸಾಧನೆಗೈದ ಕೆಲವು ಖ್ಯಾತನಾಮರ ಪರಿಚಯ ಇಲ್ಲಿದೆ.

1. ಕನ್ನಡದಲ್ಲಿ ಕೇರಳದ ಶ್ರುತಿ
ಹುಟ್ಟಿದ್ದು ಕೇರಳ, ಬೆಳೆದಿದ್ದು ಬೆಂಗಳೂರು. ಓದಿದ್ದು ಆಂಗ್ಲ ಮಾಧ್ಯಮ. ಮನೆ ಭಾಷೆ ತಮಿಳು. ಆದರೆ, ಕನ್ನಡ ಜತೆಗಿನ ಇವರ ನಂಟು ಶುರುವಾಗಿದ್ದು ಶಾಲೆಯ ದಿನಗಳಿಂದಲೇ. ಅಂದರೆ ಶಾಲೆಯಲ್ಲಿ ಮೂರನೇ ಐಚ್ಛಿಕ ವಿಷಯವಾಗಿ ಕನ್ನಡ ಭಾಷೆಯನ್ನು ತೆಗೆದುಕೊಳ್ಳುವ ಮೂಲಕ. ಮಲಯಾಳಂ ಚಿತ್ರರಂಗದಿಂದ ನಟನೆ ಶುರು ಮಾಡಿದವರು. ಮುಂದೆ ಪವನ್‌ ಕುಮಾರ್‌ ಅವರ ‘ಲೂಸಿಯಾ’ ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ಅಲ್ಲಿಂದ ‘ರಾಟೆ’, ‘ನಾತಿಚರಾಮಿ’, ‘ತಾರಕ್‌’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಬ್ಯೂಟಿಫುಲ್‌ ಮನಸುಗಳು’, ‘ಉಪೇಂದ್ರ ಮತ್ತೆ ಬಾ’, ‘ಸಾರಾಂಶ’ ಮುಂತಾದವು ಶ್ರುತಿ ಹರಿಹರನ್‌ ನಟನೆಯ ಪ್ರಮುಖ ಚಿತ್ರಗಳು.

Tap to resize

Latest Videos

undefined

ನಮ್ಮಿಂದ ಸಮಾಜ ಅಲ್ಲ, ಸಮಾಜದಿಂದ ನಾವು: ಬಘೀರನ ಕುರುತು ಶ್ರೀಮುರಳಿ ಸಂದರ್ಶನ

‘ನಾನು ಹುಟ್ಟಿದ್ದು ಕೇರಳ ಆದರೂ ಬೆಳೆದಿದ್ದು ಬೆಂಗಳೂರು ಆಗಿದ್ದರಿಂದ ನನಗೆ ಕನ್ನಡ ಭಾಷೆಯ ಜತೆಗಿನ ನಂಟು ಇತ್ತು. ಆರಂಭದಲ್ಲಿ ಮಾತನಾಡೋದು, ಬರೆಯೋದು ಅಂದರೆ ಸ್ವಲ್ಪ ಕಷ್ಟವೇ ಇತ್ತು. ನಿಜ ಹೇಳಬೇಕು ಎಂದರೆ ‘ಲೂಸಿಯಾ’ ಸಮಯದಲ್ಲಿ ತುಂಬಾ ಕಷ್ಟಪಟ್ಟು ನನ್ನ ಪಾತ್ರಕ್ಕೆ ನಾನು ಕನ್ನಡದಲ್ಲಿ ಡಬ್‌ ಮಾಡಿದ್ದೇನೆ. ಈಗ ಒಂದೇ ಒಂದು ಆಂಗ್ಲ ಪದ ಬಳಸದೆ ಕನ್ನಡ ಮಾತನಾಡುವೆ ಮತ್ತು ಬರೆಯುತ್ತೇನೆ. ಅಷ್ಟರ ಮಟ್ಟಿಗೆ ನಾನು ಕನ್ನಡತಿ. ನನ್ನ ಮಾತೃಭಾಷೆಗಿಂತಲೂ ಸುಲಲಿತವಾಗಿ ನಾನು ಕನ್ನಡ ಭಾಷೆಯನ್ನು ಮಾತನಾಡುತ್ತೇನೆ’ ಎನ್ನುತ್ತಾರೆ ಶ್ರುತಿ ಹರಿಹರನ್‌.

2. ಕನ್ನಡದ ನೀರು (ಹೆಚ್‌ಟುಒ) ಕುಡಿದ ಬೆಂಗಾಳಿ ಪ್ರಿಯಾಂಕಾ
ಹುಟ್ಟಿದ್ದು, ಬೆಳೆದಿದ್ದು ಕೋಲ್ಕತ್ತಾ. ಮನೆ ಭಾಷೆ ಬೆಂಗಾಲಿ. ಚಿತ್ರ ನಟಿಯಾಗಿದ್ದು ಬೆಂಗಾಲಿ ಚಿತ್ರಗಳ ಮೂಲಕ. ಮುಂದೆ ಹಿಂದಿ ಹಾಗೂ ಒಡಿಯಾ ಭಾಷೆಯಲ್ಲೂ ನಟನೆ ಮಾಡಿದ್ದ ಪ್ರಿಯಾಂಕಾ ಅವರನ್ನು ಕನ್ನಡಿಗರು ಮೊದಲು ನೋಡಿದ್ದು ದಿ. ಡಾ ವಿಷ್ಣುವರ್ಧನ್‌ ನಟನೆಯ ‘ಕೋಟಿಗೊಬ್ಬ’ ಸಿನಿಮಾ ಮೂಲಕ. ಚಂದನವನದಲ್ಲಿ ಇವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು ‘ಹೆಚ್‌ಟುಓ’ ಸಿನಿಮಾ. ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಬಂದು, ಕನ್ನಡದ ನಟನನ್ನೇ ಮದುವೆ ಆಗುವ ಮೂಲಕ ಬೆಂಗಾಲಿಯ ಪ್ರಿಯಾಂಕಾ ತ್ರಿವೇದಿ, ಕನ್ನಡತಿ ಪ್ರಿಯಾಂಕಾ ಉಪೇಂದ್ರ ಆದರು.

ವಿಶೇಷ ಎಂದರೆ ‘ಹೆಚ್‌ಟುಓ’ ಚಿತ್ರಕ್ಕೂ ಮೊದಲು ಉಪೇಂದ್ರ ಅವರೊಂದಿಗೆ ತೆರೆ ಹಂಚಿಕೊಂಡಿದ್ದು ತೆಲುಗಿನಲ್ಲಿ ‘ರಾ’ ಚಿತ್ರದಲ್ಲಿ. ಆ ನಂತರ ಪ್ರಭುದೇವ ಮತ್ತು ಉಪೇಂದ್ರ ಅವರ ಜತೆಗೆ ‘ಹೆಚ್‌ಟುಓ’ ಚಿತ್ರಕ್ಕೆ ನಾಯಕಿ ಆದರು. ನಂತರದ ದಿನಗಳಲ್ಲಿ ‘ಮಲ್ಲ’ ಚಿತ್ರದ ಮೂಲಕ ಮತ್ತಷ್ಟು ಯಶಸ್ಸು ಕಂಡರು. ‘ದೇವಕಿ’, ‘ಮಮ್ಮಿ’, ‘ಸೆಕೆಂಡ್‌ ಹಾಫ್‌’ ಚಿತ್ರಗಳ ಮೂಲಕ ಕನ್ನಡ ಪ್ರೇಕ್ಷಕರು ಪ್ರಿಯಾಂಕಾ ಉಪೇಂದ್ರ ಅವರ ಮತ್ತೊಂದು ನಟನಾ ಮುಖವನ್ನು ನೋಡುವಂತಾಯಿತು. ಕನ್ನಡ ಚಿತ್ರಗಳಲ್ಲಿ ನಟಿಯಾಗುವ ಮೂಲಕ ಕನ್ನಡ ಭಾಷೆಯನ್ನು ಕಲಿತಿದ್ದಾರೆ ಪ್ರಿಯಾಂಕಾ.

3. ಪಂಜಾಬಿ ಬೆಡಗಿ ಈಗ ಕನ್ನಡದ ರಾಗಿಣಿ
ಮಧ್ಯಪ್ರದೇಶ ಮೊವ್‌ನಲ್ಲಿ ಹುಟ್ಟಿ ಬೆಳೆದಿರುವ ರಾಗಿಣಿ ದ್ವಿವೇದಿ ಕುಟುಂಬದ ಮೂಲ ಹರ್ಯಾಣ. ರಾಗಿಣಿ ಚಿತ್ರರಂಗಕ್ಕೆ ಬರುವ ಮುನ್ನ ಮಾಡೆಲ್‌ ಆಗಿದ್ದರು. ಇವರ ತಂದೆ ಇಂಡಿಯನ್‌ ಆರ್ಮಿಯಲ್ಲಿ ಸೈನಿಕರು ಆಗಿದ್ದವರು. ಹೀಗಾಗಿ ಮಧ್ಯ ಪ್ರದೇಶದಿಂದ ಬೆಂಗಳೂರಿಗೆ ಬಂದ ರಾಗಿಣಿ, ಇಲ್ಲಿ ಮಾಡೆಲಿಂಗ್‌ ಲೋಕದಲ್ಲಿ ತೊಡಗಿಸಿಕೊಂಡಿದ್ದರು. ಮನೆಯಲ್ಲಿ ಪಂಜಾಬಿ ಭಾಷೆ ಮಾತನಾಡುತ್ತಿದ್ದ ರಾಗಿಣಿ ಅವರಿಗೆ ಕನ್ನಡ ಚಿತ್ರರಂಗಕ್ಕೆ ಬರುವ ಮುನ್ನ ಕನ್ನಡ ಭಾಷೆ ಅಷ್ಟಕಷ್ಟೆ ಬರುತ್ತಿತ್ತು. ಶಂಕರ್‌ಲಿಂಗೇಗೌಡ ಸುಗ್ನಹಳ್ಳಿ ನಿರ್ದೇಶನದ ‘ಹೋಳಿ’ ಚಿತ್ರದ ಮೂಲಕ ಕನ್ನಡಕ್ಕೆ ನಟಿಯಾಗಿ ಪರಿಚಯ ಆದರು. ಆದರೆ, ಇವರಿಗೆ ಜನಪ್ರಿಯತೆ ತಂದು ಕೊಟ್ಟಿದ್ದು ಕಿಚ್ಚ ಸುದೀಪ್‌ ಅವರ ಜತೆಗೆ ನಟಿಸಿದ್ದ ‘ವೀರ ಮದಕರಿ’ ಸಿನಿಮಾ. ಮೂರನೇ ಸಿನಿಮಾ ಹೊತ್ತಿಗೆ ಸ್ಪಷ್ಟವಾಗಿ ಕನ್ನಡ ಮಾತನಾಡುವಂತಾಗಿದ್ದರು. ಬಹುತೇಕ ಸ್ಟಾರ್‌ ನಟರ ಜತೆಗೆ ನಟಿಸಿರುವ ರಾಗಿಣಿ, ಈಗ ಪಂಜಾಬಿ ಬೆಡಗಿ ಅಲ್ಲ, ಚಂದನವನದ ನಟಿ.

4. ಕನ್ನಡ ಗೀತೆಗೆ ಉಸಿರಾದ ದಿಲ್ಲಿ ಅಂಕಿತಾ
ಜನಪ್ರಿಯ ಗಾಯಕಿ. ಕನ್ನಡದವರು ಅಲ್ಲದಿದ್ದರೂ ಕನ್ನಡ ಗೀತೆಗಳಿಗೆ ಹಾಡುವ ಮೂಲಕ ಕನ್ನಡದ ಸಾಲುಗಳಿಗೆ ಉಸಿರಾಗುತ್ತಿರುವ ಯುವ ಪ್ರತಿಭೆ. ಈ ಗಾಯಕಿಯ ಹಟ್ಟೂರು ದೇಶದ ರಾಜಧಾನಿ ದೆಹಲಿ. ಬೆಳೆದಿದ್ದು ಮಾತ್ರ ಕರ್ನಾಟಕದ ರಾಜಧಾನಿ ಬೆಂಗಳೂರು. ಜೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಅಂಕಿತಾ, ರನ್ನರ್ ಅಪ್ ಕೂಡ. ‘ಜಗತ್ ಕಿಲಾಡಿ’, ‘5ಜಿ’ , ರಕ್ಷಿತ್‌ ಶೆಟ್ಟಿ ಅವರು ‘ರಿಕ್ಕಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಹಾಡಿದ್ದಾರೆ. ಸಿನಿಮಾಗಳಿಗೆ ಮಾತ್ರವಲ್ಲದೆ, ಆಲ್ಬಂ ಗೀತೆಗಳಿಗೂ ಧ್ವನಿಯಾಗಿರುವ ಅಂಕಿತಾ ಕುಂಡು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಗಾಯಕಿ.

5. ಮುಂಬೈನ ಪಾರೂಲ್‌ಗೆ ಕನ್ನಡದ ಮೇಲೆ ''ಪ್ಯಾರ್‌ ಗೆ ಆಗ್ಬುಟೈತೆ''
ಮುಂಬೈ ಮೂಲದ ಈ ನಟಿಗೆ ಜನಪ್ರಿಯತೆ ತಂದು ಕೊಟ್ಟಿದ್ದು ಕನ್ನಡ ಚಿತ್ರರಂಗ. ‘ಬಂಧು ಬಳಗ’ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಪಾರೂಲ್‌ ಯಾದವ್‌, ಸುದೀಪ್‌ ಅವರ ‘ಬಚ್ಚನ್‌’ ಚಿತ್ರದಲ್ಲಿ ನಟಿಸುವ ಮೂಲಕ ಸ್ಟಾರ್‌ ನಟಿಯಾದವರು. ‘ಪ್ಯಾರ್‌ಗೆ ಆಗ್ಬುಟ್ಟೈತೆ ನಮ್ದುಕ್ಕೆ ಪ್ಯಾರ್‌ಗೆ ಆಗ್ಬುಟ್ಟೈತೆ....’ ಎಂಬ ಸೂಪರ್‌ಹಿಟ್‌ ಹಾಡು ಇದ್ದ ‘ಗೋವಿಂದಾಯ ನಮಃ’ ಚಿತ್ರದ ಮೂಲಕ ಯಶಸ್ಸು ಕಂಡವರು. ಈಗಲೂ ಮುಂಬೈನಲ್ಲೇ ಇರುವ ಪಾರೂಲ್‌ ಯಾದವ್‌, ಕನ್ನಡ ಮಾತನಾಡುವುದನ್ನು ಮರೆತಿಲ್ಲ.

6. ಪಂಜಾಬ್‌ನ ಮಳೆ ಹುಡುಗಿ ಪೂಜಾಗೆ ಉಸಿರಾಯ್ತು ಕನ್ನಡ
ದೂರದ ಪಂಜಾಬ್‌ನವರಾದ ಪೂಜಾ ಗಾಂಧಿ ‘ಮಳೆ ಹುಡುಗಿ’ ಎಂದೇ ಕನ್ನಡ ನಾಡಿನಲ್ಲಿ ಜನಜನಿತ. ಇದಕ್ಕೆ ಕಾರಣ ಅವರ ಹೆಸರನ್ನು ಮನೆ ಮಾತಾಗಿಸಿದ ಯೋಗರಾಜ್‌ ಭಟ್ ನಿರ್ದೇಶನದ ಸೂಪರ್‌ ಹಿಟ್‌ ಸಿನಿಮಾ ‘ಮುಂಗಾರು ಮಳೆ’. ಸಿನಿಮಾದ ಜೊತೆಗೆ ಇವರ ಕನ್ನಡ ಪ್ರೀತಿಯೂ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡ ಭಾಷೆಯನ್ನು ಲೀಲಾಜಾಲವಾಗಿ ಮಾತನಾಡುವ ಜೊತೆಗೆ ಕನ್ನಡದಲ್ಲಿ ಸೊಗಸಾಗಿ ಬರೆಯುವುದನ್ನೂ ಕಲಿತಿದ್ದಾರೆ. ಕೆಲ ಸಮಯದ ಹಿಂದೆ ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಇವರ ಲೇಖನ ಪ್ರಕಟವಾಗಿದ್ದು ಭಾಷಾ ಕಲಿಕೆಯಲ್ಲಿ ಇವರ ಸಾಧನೆಗೆ ಹಿಡಿದ ಕನ್ನಡಿ.

ಕನ್ನಡಿಗರ ವಿವಿಧ ಸಮಸ್ಯೆಗಳ ಬಗ್ಗೆ, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಬಗ್ಗೆ, ಕೌಶಲ್ಯಾಭಿವೃದ್ಧಿ ಬಗ್ಗೆ ಕನ್ನಡದಲ್ಲೇ ವಿವರವಾದ ಪುಸ್ತಿಕೆ ಮಾಡಿ ಸರ್ಕಾರಕ್ಕೆ ಸಲ್ಲಿಸಿದ್ದು ನಾಡು ನುಡಿ ಕುರಿತ ಕಾಳಜಿಗೆ ಉದಾಹರಣೆಯಂತಿದೆ. ಹಿಂದಿ ಚಿತ್ರರಂಗದ ಮೂಲಕ ಮನೋರಂಜನಾ ಉದ್ಯಮಕ್ಕೆ ಕಾಲಿಟ್ಟು ತಮಿಳು, ತೆಲುಗು, ಬೆಂಗಾಲಿ ಸಿನಿಮಾಗಳಲ್ಲಿ ನಟಿಸಿದರೂ ಇವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು ಕನ್ನಡ ಚಿತ್ರರಂಗ. ‘ಮುಂಗಾರು ಮಳೆ’ ಸಿನಿಮಾ ಬಳಿಕ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ ಇವರು ಮುಂದೆ, ‘ಮಿಲನ’, ‘ಕೃಷ್ಣ’, ‘ತಾಜ್‌ ಮಹಲ್‌’, ‘ಬುದ್ಧಿವಂತ’, ‘ದಂಡುಪಾಳ್ಯ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಕನ್ನಡ ಭಾಷೆಯನ್ನು ಅಪಾರವಾಗಿ ಪ್ರೀತಿಸುವ ಇವರು ಇತ್ತೀಚೆಗೆ ಕನ್ನಡಿಗ ಉದ್ಯಮಿಯನ್ನು ವರಿಸಿ ಕನ್ನಡ ನಾಡಿನ ಸೊಸೆಯಾಗಿದ್ದಾರೆ. ಕನ್ನಡಕ್ಕೆ ಸಂಬಂಧಿಸಿದ ಕೆಲಸಗಳನ್ನೂ ಶ್ರದ್ಧೆಯಿಂದ ಮಾಡುತ್ತಿದ್ದಾರೆ. 2000 ವರ್ಷಗಳ ಇತಿಹಾಸ ಇರುವ ವಿಶಿಷ್ಠ ಭಾಷೆ ನಮ್ಮ ಕನ್ನಡ. ಬಹಳ ಶ್ರೀಮಂತವಾದ ಸಾಹಿತ್ಯ ಪರಂಪರೆ ಇದೆ. ಕ್ರಾಂತಿಯ ಹಿನ್ನೆಲೆ ಇದೆ. ಸಾಂಸ್ಕೃತಿಕವಾಗಿ ಅನೇಕ ವೈಶಿಷ್ಟ್ಯಗಳಿವೆ. ಹೀಗಿರುವಾಗ ಉದ್ಯೋಗಕ್ಕೆಂದು ಇಲ್ಲಿಗೆ ಬರುವ ವಲಸಿಗರು ಕನ್ನಡವನ್ನು ಕಡೆಗಣಿಸುವುದು ಸರಿಯಲ್ಲ. ಈ ಭಾಷೆಯ ಘನತೆಯನ್ನು ಗೌರವಿಸಿ. ‘ಹೆಸರಾಯ್ತು ಕರ್ನಾಟಕ, ಉಸಿರಾಯಿತು ಕನ್ನಡ’ ಎಂಬ ಮಾತಿದೆಯಲ್ಲಾ, ಅದರಲ್ಲಿ ಕರ್ನಾಟಕ ಹೆಸರಾಗಿದೆ, ಆದರೆ ಕನ್ನಡ ಉಸಿರಾಗಬೇಕಿದೆ ಎನ್ನುತ್ತಾರೆ ಪೂಜಾ ಗಾಂಧಿ.

ಮಗಧೀರ ಸಿನಿಮಾ ಯಶಸ್ಸಿಗೆ ಇವರಿಬ್ಬರೇ ಕಾರಣ ಎಂದಿದ್ದಕ್ಕೆ ರಾಜಮೌಳಿ ಭಜನೆ ಮಾಡಬೇಕಿಲ್ಲ ಎಂದಿದ್ಯಾಕೆ?

7.ನೇಪಾಳದಿಂದ ಬಂದ ಬೇಬಿ ರಿತುಗೆ ಸಿಹಿ ಕೊಟ್ಟ ಸೀತಾರಾಮ
ಕನ್ನಡ ಕಿರುತೆರೆಯ ‘ಸೀತಾರಾಮ’ ಧಾರಾವಾಹಿಯ ‘ಸಿಹಿ’ ಪಾತ್ರದ ಮೂಲಕ ಮನೆಮಾತಾಗಿರುವ ಬಾಲನಟಿ ರಿತು ಸಿಂಗ್‌. ಈಕೆಯ ತಾಯಿ ನೇಪಾಳದವರು. ನೆಲೆ ಅರಸಿ ಬೆಂಗಳೂರಿಗೆ ಬಂದ ಈಕೆಯ ತಾಯಿ ಗೀತಾ, ಮನೆಗೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಮಗಳು ಕಿರುತೆರೆಯಲ್ಲಿ ಗುರುತಿಸಿಕೊಂಡ ಬಳಿಕ ಅವರ ಬದುಕು ಕೊಂಚ ಹಗುರಾಗಿದೆ. ಆರು ವರ್ಷದ ರಿತು ಅರಳು ಹುರಿದಂತೆ ಕನ್ನಡ ಮಾತನಾಡುತ್ತಾಳೆ. ಧಾರಾವಾಹಿಯಲ್ಲಿ ಬಾಡಿಗೆ ತಾಯಿಯ ಅಕ್ಕರೆಯಲ್ಲಿ ಬೆಳೆಯುವ ಮಗುವಾಗಿ ಈಕೆಯ ಅಭಿನಯ ಕನ್ನಡಿಗರ ಮನತಟ್ಟಿದೆ. ಇನ್ನೊಂದು ವಿಶೇಷ ಅಂದರೆ ರಿತು ಕ್ರೇಜಿಸ್ಟಾರ್ ರವಿಚಂದ್ರನ್‌ ಅವರ ದೊಡ್ಡ ಅಭಿಮಾನಿ. ಅವರ ಸಿನಿಮಾಗಳ ಹೆಚ್ಚಿನೆಲ್ಲ ಹಾಡುಗಳು, ಡೈಲಾಗ್‌ಗಳು ಇವಳ ನಾಲಿಗೆ ತುದಿಯಲ್ಲಿರುತ್ತವೆ. ‘ಡ್ರಾಮಾ ಜ್ಯೂನಿಯರ್ಸ್‌ ಸೀಸನ್‌ 4’ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಬಂದ ಈ ಪೋರಿ ತನ್ನ ನಟನೆಯ ಮೂಲಕವೇ ಎಲ್ಲರ ಗಮನ ಸೆಳೆದಿದ್ದಳು. ಸದ್ಯ ಧಾರಾವಾಹಿ ಜೊತೆಗೆ ರಿಯಾಲಿಟಿ ಶೋನಲ್ಲೂ ಕನ್ನಡಿಗರ ಮನರಂಜಿಸುತ್ತಿದ್ದಾಳೆ.

click me!