
ಕನ್ನಡ ಚಿತ್ರರಂಗದ ‘ಡೈನಾಮಿಕ್ ಹೀರೋ’ ದೇವರಾಜ್! ಖಡಕ್ ಬಾಡಿ ಲ್ಯಾಂಗ್ವೇಜ್, ಕಂಚಿನ ಕಂಠ! ಅಷ್ಟೇ ಅಲ್ಲ, ಎಂತಹದ್ದೇ ಪಾತ್ರ ಕೊಟ್ಟರೂ ಜೀವ ತುಂಬುವ ವಿಶೇಷ ಪ್ರತಿಭೆ. ಬೆಳ್ಳಿತೆರೆಯ ಮೇಲೆ ತಮ್ಮ ಗತ್ತು ಮತ್ತು ಗಾಂಭೀರ್ಯದಿಂದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ ನಟನ ಜೀವನ ಹೂವಿನ ಹಾಸಿಗೆ ಆಗಿರಲಿಲ್ಲ. ಕಡುಬಡತನ, ನೋವು ಮತ್ತು ಸಂಕಷ್ಟಗಳ ಸಾಗರವನ್ನೇ ದಾಟಿ ಬಂದು ಸ್ಯಾಂಡಲ್‌ವುಡ್‌ನಲ್ಲಿ ಸಾಮ್ರಾಜ್ಯ ಕಟ್ಟಿದ ದೇವರಾಜ್ ಅವರ ಸ್ಫೂರ್ತಿದಾಯಕ ಜೀವನಗಾಥೆ ಇಲ್ಲಿದೆ.
ದೇವರಾಜ್ ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನವರು. 1953ರ ಸೆಪ್ಟೆಂಬರ್ 20ರಂದು ರಾಮಚಂದ್ರಪ್ಪ ಮತ್ತು ಲಿಂಗಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ವಿಧಿಯ ಆಟವೇ ಬೇರೆಯಾಗಿತ್ತು. ದೇವರಾಜ್ ಹುಟ್ಟಿದ ಕೇವಲ ಮೂರೇ ತಿಂಗಳಿಗೆ, ಐಟಿಸಿ (ITC) ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅವರ ತಂದೆ ಮಲೇರಿಯಾಗೆ ತುತ್ತಾಗಿ ಪ್ರಾಣಬಿಡುತ್ತಾರೆ. ತಂದೆಯ ಅಗಲಿಕೆಯಿಂದ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ತಾಯಿಯ ಕಷ್ಟವನ್ನು ಕಣ್ಣಾರೆ ಕಂಡ ದೇವರಾಜ್, 9ನೇ ವಯಸ್ಸಿನಲ್ಲೇ ದುಡಿಮೆಯ ಹಾದಿ ಹಿಡಿದರು.
ಸಿಕ್ಕ ಸಿಕ್ಕ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಬಂದ ಹಣವನ್ನು ಅಮ್ಮನಿಗೆ ತಂದುಕೊಡುತ್ತಿದ್ದರು. ಆ ಮೂಲಕ ಸಂಸಾರದ ನೊಗಕ್ಕೆ ಹೆಗಲು ಕೊಟ್ಟರು. 1976ರಲ್ಲಿ ಪ್ರತಿಷ್ಠಿತ HMT ವಾಚ್ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಮೂಲಕ ಬದುಕಿಗೆ ಒಂದು ಕಂಡುಕೊಂಡರು. ಆದರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರೂ ದೇವರಾಜ್ ಮನಸ್ಸಿನಲ್ಲಿ ಕಲೆಯ ಬೀಜ ಮೊಳಕೆ ಒಡೆದಿತ್ತು. ‘ತ್ರಿಶೂಲ’ ಚಿತ್ರದ ಮೂಲಕ ಸಹನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ‘ಮಳವಳ್ಳಿ ಸರ್ಕಲ್’ ಚಿತ್ರದಲ್ಲಿ ಅದ್ಭುತವಾಗಿ ನಟಿಸಿ ಗಾಂಧಿನಗರದ ಗಮನ ಸೆಳೆದರು.
‘ಹತ್ಯಾಕಾಂಡ’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಬಡ್ತಿ ಪಡೆದ ದೇವರಾಜ್. ಹಿಂತಿರುಗಿ ನೋಡಿದ್ದೇ ಇಲ್ಲ. ‘ಅಂಜದ ಗಂಡು’, ‘ಸಾಂಗ್ಲಿಯಾನ’, ‘ಸಂಗ್ರಾಮ’, ‘ದಾದಾ’, ‘ಆಗಂತುಕ’, ‘ಕೃಷ್ಣ ರುಕ್ಮಿಣಿ’, ‘ರಾಮಣ್ಣ ಶಾಮಣ್ಣ’, ‘ನೀ ನನ್ನ ದೈವ’ ಸೇರಿದಂತೆ 150ಕ್ಕೂ ಅಧಿಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಇದರೊಂದಿಗೆ ಕನ್ನಡ ಚಿತ್ರರಂಗದ ಅಗ್ರಗಣ್ಯ ನಾಯಕರ ಸಾಲಿನಲ್ಲಿ ನಿಂತರು.
ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿದ್ದಾಗ ನಟಿ ಚಂದ್ರಲೇಖಾ ಪರಿಚಯ ಆಯಿತು. ಚಂದ್ರಲೇಖಾ ಮೇಲೆ ಮನಸೋತ ದೇವರಾಜ್, ಸ್ವತಃ ತಾವೇ ಪ್ರೇಮ ನಿವೇದನೆ ಮಾಡಿದರು. 1986ರಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. 1992ರಲ್ಲಿ ತೆರೆಕಂಡ ‘ಕೆಂಡದ ಮಳೆ’ ಚಿತ್ರದಲ್ಲಿ ಈ ಜೋಡಿ ಒಟ್ಟಾಗಿ ತೆರೆ ಹಂಚಿಕೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಇಂದು ಇವರ ಪುತ್ರರಾದ ಪ್ರಜ್ವಲ್ ದೇವರಾಜ್ ಮತ್ತು ಪ್ರಣಂ ದೇವರಾಜ್ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.