Premada Oorali: ಸುನಾದ್ ಗೌತಮ್ ಭಾರೀ ಸೀಕ್ರೆಟ್ ಹೊರಬಿತ್ತು! ಕಾರ್ಕಳ ಶಾಲೆಯ ಆ 7 ಮಕ್ಕಳಿಂದಲೇ ಹಾಡಿಸಿರೋ ಹಿಂದಿದೆ ದೊಡ್ಡ ಗುಟ್ಟು!

Published : Oct 12, 2026, 01:43 PM IST
Sunaad Gowtham

ಸಾರಾಂಶ

ಈ ಹಾಡಿಗೆ ಧ್ವನಿ ನೀಡಿದವರು ಕಾರ್ಕಳದ ಜೇಸೀಸ್ ಆಂಗ್ಲ ಶಾಲೆಯ ಏಳು ವಿದ್ಯಾರ್ಥಿಗಳು. ಐವರು ವಿದ್ಯಾರ್ಥಿನಿಯರು ಹಾಗೂ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಹಾಡಿಗೆ ಸಿದ್ಧಪಡಿಸಲಾಯಿತು. ಸುನಾದ್ ಗೌತಮ್ ಅದೇ ಶಾಲೆಯ ಆ 7 ಮಕ್ಕಳಿಂದಲೇ ಹಾಡಿಸಿದ್ದು ಏಕೆ? ಈ ಸ್ಟೋರಿ ನೋಡಿ..

Premada Oorali Movie: ಸಿನಿಮಾ ಯಶಸ್ಸಿನಲ್ಲಿ ಕಥೆ, ನಟನೆಯಷ್ಟೇ ಹಾಡುಗಳಿಗೂ ಮಹತ್ವದ ಸ್ಥಾನವಿದೆ. ಕೆಲವೊಮ್ಮೆ ದೊಡ್ಡ ಗಾಯಕರು ಹಾಡಿದ ಹಾಡುಗಳಿಗಿಂತ ಮಕ್ಕಳ ಮುಗ್ಧ ಧ್ವನಿಯಲ್ಲಿ ಮೂಡಿಬರುವ ಗೀತೆಗಳು ಪ್ರೇಕ್ಷಕರ ಮನಸ್ಸನ್ನು ಸುಲಭವಾಗಿ ಗೆಲ್ಲುತ್ತವೆ. ಇದಕ್ಕೆ ಈಗ ಕನ್ನಡದ ‘ಪ್ರೇಮದ ಊರಲಿ’ ಸಿನಿಮಾದ ಟೈಟಲ್ ಸಾಂಗ್ ಉತ್ತಮ ಉದಾಹರಣೆಯಾಗಿದೆ. ಸಂಗೀತ ನಿರ್ದೇಶಕ ಸುನಾದ್ ಗೌತಮ್ ಅವರ ವಿಭಿನ್ನ ಪ್ರಯತ್ನದಿಂದ ಮೂಡಿಬಂದಿರುವ ಈ ಹಾಡು ಸಂಗೀತ ಪ್ರಿಯರ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ, ಈ ಹಾಡಿಗೆ ಧ್ವನಿ ನೀಡಿರುವುದು ಖ್ಯಾತ ಹಿನ್ನೆಲೆ ಗಾಯಕರಲ್ಲ, ಉಡುಪಿ ಜಿಲ್ಲೆಯ ಕಾರ್ಕಳದ ಶಾಲೆಯ ಏಳು ಮಕ್ಕಳು!

ಮಕ್ಕಳ ಧ್ವನಿಯಲ್ಲಿ ಅರಳಿದ ಟೈಟಲ್ ಟ್ರ್ಯಾಕ್

ಸಾಮಾನ್ಯವಾಗಿ ಸಿನಿಮಾದ ಶೀರ್ಷಿಕೆ ಗೀತೆಗಳಿಗೆ ಅನುಭವಿ ಗಾಯಕರನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ‘ಪ್ರೇಮದ ಊರಲಿ’ ಚಿತ್ರತಂಡ ಈ ಬಾರಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಆರಂಭದಲ್ಲಿ ಚಿತ್ರದ ‘ಬಾನಲಿ ಜಾರಿದ’ ಹಾಡನ್ನು ಮಕ್ಕಳಿಂದ ಹಾಡಿಸುವ ಯೋಚನೆ ಮಾಡಲಾಗಿತ್ತು. ಬಳಿಕ ಆ ಹಾಡಿನ ಟ್ಯೂನ್ ಅನ್ನು ಟೈಟಲ್ ಟ್ರ್ಯಾಕ್‌ಗೆ ಬಳಸದೇ ಇರಲು ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ಶೀರ್ಷಿಕೆ ಗೀತೆಯಲ್ಲೇ ಮಕ್ಕಳ ಧ್ವನಿಯನ್ನು ಬಳಸಿದರೆ ಹೇಗಿರುತ್ತದೆ ಎಂಬ ಆಲೋಚನೆ ಮೂಡಿತು.

ಸಂಗೀತ ನಿರ್ದೇಶಕ ಸುನಾದ್ ಗೌತಮ್ ಹಾಗೂ ನಿರ್ದೇಶಕರು ಚರ್ಚಿಸಿ ಈ ನಿರ್ಧಾರ ಕೈಗೊಂಡರು. ಮಕ್ಕಳ ಕಂಠದಲ್ಲಿರುವ ಸಹಜತೆ ಮತ್ತು ಮುಗ್ಧತೆ ಹಾಡಿಗೆ ಹೊಸ ಮೆರುಗು ನೀಡಬಹುದು ಎಂಬ ನಿರೀಕ್ಷೆಯೊಂದಿಗೆ ಸಂಗೀತವನ್ನೂ ಮಕ್ಕಳು ಸುಲಭವಾಗಿ ಹಾಡುವ ರೀತಿಯಲ್ಲಿ ರೂಪಿಸಲಾಯಿತು. ಹಾಡಿನಲ್ಲಿರುವ ಎರಡೇ ಎರಡು ಸಾಲುಗಳು ಈಗ ಕೇಳುಗರ ಗಮನ ಸೆಳೆಯುತ್ತಿವೆ.

ಕಾರ್ಕಳದ ಶಾಲೆಯ ಮಕ್ಕಳಿಗೆ ಸಿಕ್ಕ ಸುವರ್ಣಾವಕಾಶ; ಇಲ್ಲೇ ಇರೋದು ಸೀಕ್ರೆಟ್!

ಈ ಹಾಡಿಗೆ ಧ್ವನಿ ನೀಡಿದವರು ಕಾರ್ಕಳದ ಜೇಸೀಸ್ ಆಂಗ್ಲ ಶಾಲೆಯ ಏಳು ವಿದ್ಯಾರ್ಥಿಗಳು. ಐವರು ವಿದ್ಯಾರ್ಥಿನಿಯರು ಹಾಗೂ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಹಾಡಿಗೆ ಸಿದ್ಧಪಡಿಸಲಾಯಿತು. ಸುನಾದ್ ಗೌತಮ್ ಅವರು ಶಾಲೆಯ ಶಿಕ್ಷಕಿ ವಂದನಾ ರೈ ಅವರನ್ನು ಸಂಪರ್ಕಿಸಿ, ಹಾಡಲು ಆಸಕ್ತಿ ಮತ್ತು ಸಾಮರ್ಥ್ಯವಿರುವ ಮಕ್ಕಳನ್ನು ಆಯ್ಕೆ ಮಾಡುವಂತೆ ಕೇಳಿಕೊಂಡಿದ್ದರು.

ಬಳಿಕ ಶಾಲೆಯ ಸಂಗೀತ ಶಿಕ್ಷಕರ ನೆರವಿನಿಂದ ಮಕ್ಕಳನ್ನು ಆಯ್ಕೆ ಮಾಡಲಾಯಿತು. ಹಾಡಿನ ಸಾಲುಗಳು ಚಿಕ್ಕದಾಗಿದ್ದರಿಂದ ಮಕ್ಕಳು ಅವುಗಳನ್ನು ಸುಲಭವಾಗಿ ಕಲಿತು ಅಭ್ಯಾಸ ಮಾಡಿದರು. ಅಂತಿಮವಾಗಿ ಅವರ ಧ್ವನಿಯಲ್ಲೇ ಹಾಡನ್ನು ರೆಕಾರ್ಡ್ ಮಾಡಲಾಯಿತು.

ಇಷ್ಟು ದೊಡ್ಡ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ!

ಮಕ್ಕಳು ಹಾಡಿದ ಟೈಟಲ್ ಸಾಂಗ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಶಾಲೆಯ ಶಿಕ್ಷಕಿ ವಂದನಾ ರೈ ಅವರಿಗೆ ಸಂತಸ ತಂದಿದೆ. ಸುನಾದ್ ಗೌತಮ್ ಅವರ ಕರೆ ಬಂದಾಗ ಶಾಲೆಯಲ್ಲಿ ಕಾರ್ಯಕ್ರಮದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೂ, ಮಕ್ಕಳಿಗೆ ದೊರೆತ ಅವಕಾಶ ಕೈತಪ್ಪಬಾರದು ಎಂಬ ಉದ್ದೇಶದಿಂದ ತಕ್ಷಣವೇ ಸಂಗೀತ ಶಿಕ್ಷಕರೊಂದಿಗೆ ಮಾತನಾಡಿ ವ್ಯವಸ್ಥೆ ಮಾಡಿದ್ದಾಗಿ ಅವರು ತಿಳಿಸಿದ್ದಾರೆ. ಈ ಪ್ರಯತ್ನಕ್ಕೆ ಇಷ್ಟೊಂದು ಮೆಚ್ಚುಗೆ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂಬುದು ಅವರ ಮಾತು.

ಕಿರುತೆರೆಯಿಂದ ಬೆಳ್ಳಿತೆರೆಗೆ ಸುನಾದ್ ಗೌತಮ್

ಕಾರ್ಕಳ ಮೂಲದ ಸುನಾದ್ ಗೌತಮ್ ಹಲವು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ‘ಜೊತೆ ಜೊತೆಯಲಿ’ ಸೇರಿದಂತೆ ಜನಪ್ರಿಯ ಧಾರಾವಾಹಿಗಳಿಗೆ ಸಂಗೀತ ನೀಡಿರುವ ಅವರು, ಇದೀಗ ಸಿನಿಮಾ ಕ್ಷೇತ್ರದಲ್ಲಿಯೂ ತಮ್ಮದೇ ಆದ ಗುರುತು ಮೂಡಿಸುತ್ತಿದ್ದಾರೆ. ‘ಪ್ರೇಮದ ಊರಲಿ’ ಚಿತ್ರದ ಹಾಡುಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆ ಅವರ ವಿಭಿನ್ನ ಸಂಗೀತ ಪ್ರಯೋಗಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದೆ. ಈ ಎಲ್ಲಾ ಕೆಲಸದ ಹಿಂದೆ ಸುನಾದ್ ಗೌತಮ್ ಅವರಿಗೆ ಇರುವ 'ಊರಿನ ಮೇಲಿನ ಅಭಿಮಾನ' ಕಾರಣವಾಗಿದೆ. ತಮ್ಮ ಸ್ವಂತ ಊರಿನ ಹುಡುಗರಿಂದಲೇ ಹಾಡಿಸುವ ಮೂಲಕ ಸಂಗೀತ ನಿರ್ದೇಶಕ ಸುನಾದ್ ಗೌತಮ್ ಅವರು ತಮ್ಮೊಂದಿಗೆ ಊರಿನ ಹಿರಮೆಯನ್ನೂ ಮೆರೆದಿದ್ದಾರೆ.

ಒಟ್ಟಿನಲ್ಲಿ, ದೊಡ್ಡ ಗಾಯಕರ ಬದಲಿಗೆ ಶಾಲಾ ಮಕ್ಕಳಿಗೆ ಅವಕಾಶ ನೀಡಿರುವುದು ‘ಪ್ರೇಮದ ಊರಲಿ’ ಚಿತ್ರದ ಟೈಟಲ್ ಸಾಂಗ್‌ನ ವಿಶೇಷ ಆಕರ್ಷಣೆಯಾಗಿದೆ. ಕಾರ್ಕಳದ ಈ ಏಳು ಮಕ್ಕಳಿಗೆ ಸಿನಿಮಾ ಹಾಡಿನಲ್ಲಿ ಧ್ವನಿ ನೀಡುವ ಅವಕಾಶ ಸಿಕ್ಕಿರುವುದು ಮರೆಯಲಾಗದ ಅನುಭವ. ಮಕ್ಕಳ ಮುಗ್ಧ ಕಂಠದಲ್ಲಿ ಮೂಡಿಬಂದಿರುವ ಈ ಹಾಡು, ಕೆಲವೊಮ್ಮೆ ಸರಳ ಪ್ರಯತ್ನಗಳೇ ಕೇಳುಗರ ಹೃದಯ ಗೆಲ್ಲಬಲ್ಲವು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

17ದಿನದಲ್ಲಿ ಹೊಸ ದಾಖಲೆ ಬರೆದ 'ಪ್ರೇಮದ ಊರಲಿ' ಸಿನಿಮಾ; ಭಾರತದಲ್ಲಿ ಹೊಸ ಭರವಸೆ; ಬೊಂಬಾಟ್ ಆಟ!
ಅಂದು 1 ಸಾವಿರ ರೂ. ಸಂಭಾವನೆಗೆ ಪರದಾಡಿದ್ದ Premada Oorali ನಟ ಶ್ರೀರಾಮ್​! ಈಗ ಸಿಕ್ಕಿದ್ದೆಷ್ಟು