
‘ಆರ್‌ಆರ್‌ಆರ್’ ಟ್ರೇಲರ್ ರಿಲೀಸ್ ಆಗಿದ್ದು, ಭರ್ಜರಿ ಜನ ಮೆಚ್ಚುಗೆ ಪಡೆದಿದೆ. ತೆಲುಗು, ಕನ್ನಡ, ಹಿಂದಿ, ತಮಿಳು, ಮಲಯಾಳಂನಲ್ಲಿ ರಿಲೀಸ್ ಆಗಲಿರುವ ಈ ಸಿನಿಮಾದ ಕನ್ನಡ ವರ್ಷನ್‌ಗೆ ಖುದ್ದು ಜೂ.ಎನ್‌ಟಿಆರ್, ರಾಮ್‌ಚರಣ್ ತೇಜಾ ಧ್ವನಿ ನೀಡಿದ್ದಾರೆ.
ಕೆವಿಎನ್ ಸಂಸ್ಥೆ ಕರ್ನಾಟಕದಲ್ಲಿ ಈ ಸಿನಿಮಾ ಬಿಡುಗಡೆ ಮಾಡುತ್ತಿದೆ. ತಮ್ಮ ಸಿನಿಮಾದ ಬಗ್ಗೆ ಮಾತನಾಡಲು ಚಿತ್ರತಂಡ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಬಹುತೇಕ ಮಾತುಕತೆ ಕನ್ನಡದಲ್ಲಿ ನಡೆಯಿತು. ಜೂ.ಎನ್‌ಟಿಆರ್ ಅವರಂತೂ ಕನ್ನಡದಲ್ಲೇ ಮಾತನಾಡಿದರು. ರಾಜಮೌಳಿಯವರು ಕನ್ನಡದಲ್ಲಿ ಹೆಚ್ಚು ಮಾತನಾಡದಿದ್ದರೂ ಅವರು ಕನ್ನಡವನ್ನು ಸುಲಭವಾಗಿ ಅರ್ಥ ಮಾಡಿಕೊಂಡು ಮಾತನಾಡಿದರು. ಆಲಿಯಾ ಭಟ್, ರಾಮ್‌ಚರಣ್‌ಗೆ ಜೂ.ಎನ್‌ಟಿಆರ್ ಕನ್ನಡ ಅರ್ಥ ಮಾಡಿಸಲು ನೆರವಾಗಿದ್ದನ್ನು ನೋಡುವುದೇ ಖುಷಿಯ ಸಂಗತಿಯಾಗಿತ್ತು.
ಸ್ಟಾರ್‌ಗಳು, ದೊಡ್ಡ ಬಜೆಟ್ ಇತ್ಯಾದಿ ಎಲ್ಲವೂ ಪ್ರೇಕ್ಷಕರನ್ನು ಥಿಯೇಟರ್‌ಗೆ ಒಳಗೆ ಕರೆದುಕೊಂಡು ಬರುವವರೆಗೆ ಮಾತ್ರ ಕೆಲಸ ಮಾಡುತ್ತದೆ. ಸಿನಿಮಾ ಶುರುವಾಗಿ 10 ನಿಮಿಷ ಆದ ಮೇಲೆ ಪಾತ್ರಗಳು ಮಾತ್ರ ಉಳಿಯುತ್ತವೆ. ನಾನು ಎಮೋಷನ್‌ಗಳನ್ನು ನಂಬಿ ಸಿನಿಮಾ ಮಾಡುವವನು. ಪ್ರತಿಯೊಂದರಲ್ಲೂ ಎಮೋಷನ್ ಇರುತ್ತದೆ. ಎಮೋಷನ್ ಇಲ್ಲದೆ ನನ್ನ ಸಿನಿಮಾ ಇಲ್ಲ.- ಎಸ್‌ಎಸ್ ರಾಜಮೌಳಿ
ನಿರ್ಮಾಪಕ ದಾನಯ್ಯ, ಕೆವಿಎನ್ ಸಂಸ್ಥೆಯ ವೆಂಕಟ್, ಲಹರಿ ಸಂಸ್ಥೆ ಮನೋಹರ ನಾಯ್ಡು, ಲಹರಿ ವೇಲು ಸೇರಿದಂತೆ ಇಡೀ ಚಿತ್ರತಂಡ ಟ್ರೇಲರ್‌ಗೆ ಸಿಕ್ಕ ಒಳ್ಳೆಯ ಪ್ರತಿಕ್ರಿಯೆಯಿಂದ ಖುಷಿಯಾಗಿತ್ತು.
ಕನ್ನಡದಲ್ಲೇ ಮಾತನಾಡಿದ ಜೂ.ಎನ್‌ಟಿಆರ್
ಜೂ.ಎನ್‌ಟಿಆರ್ ತಾಯಿ ಕುಂದಾಪುರದವರು. ಆ ವಿಚಾರ ನೆನಪಿಸಿಕೊಂಡೇ ಮಾತು ಶುರು ಮಾಡಿದ ಜೂ.ಎನ್‌ಟಿಆರ್, ‘ನನ್ನ ಅಮ್ಮ ಇಲ್ಲಿಯವರು. ನಾನು ಹುಟ್ಟಿಬೆಳೆದಿದ್ದೆಲ್ಲಾ ಹೈದರಾಬಾದ್. ನನ್ನ ಕನ್ನಡದಲ್ಲಿ ತುಂಬಾ ವ್ಯತ್ಯಾಸ ಇದೆ. ತಪ್ಪಾದರೆ ಕ್ಷಮಿಸಿ. ಕನ್ನಡದಲ್ಲಿ ಡಬ್ ಮಾಡುವ ವಿಚಾರ ಗೊತ್ತಾದಾಗ ಅಮ್ಮನವರು ಕೇರ್‌ಫುಲ್ ಆಗಿ ಮಾಡು, ಅಲ್ಲಿ ನಮ್ಮೋರು ಇದ್ದಾರೆ. ತಲೆ ಬಗ್ಗಿಸುವ ಹಾಗೆ ಮಾಡಬೇಡ. ಹೇಳದಿದ್ದರೂ ಪರವಾಗಿಲ್ಲ, ಹೇಳಿದರೆ ಸರಿಯಾಗಿ ಹೇಳು ಎಂದು ಹೇಳಿದ್ದರು. ಕನ್ನಡದಲ್ಲಿ ಡಬ್ ಮಾಡಿದ್ದಕ್ಕೆ ಖುಷಿ ಇದೆ’ ಎಂದರು.
ತಂದೆಯವರು ಸಿಪಾಯಿಯಲ್ಲಿ ಮಾಡಿದಂತೆ ನಾನೂ ಕನ್ನಡದಲ್ಲಿ ಸಿನಿಮಾ ಮಾಡಬೇಕು ಅಂತ ಕಾಯುತ್ತಿದ್ದೇನೆ. ಆರ್‌ಆರ್‌ಆರ್ ಬಂದ ಮೇಲೆ ಯಾರಾದರೂ ಒಳ್ಳೆಯ ಪಾತ್ರ ಕೊಡುತ್ತಾರಾ ನೋಡಬೇಕು.- ರಾಮ್‌ಚರಣ್‌ತೇಜಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.