
‘ಕನ್ನಡದ ಮೊದಲ ಟಾಕಿ ಸಿನಿಮಾ ‘ಸತಿ ಸುಲೋಚನಾ’ದ ನಾಯಕ ನಟ ಸುಬ್ಬಯ್ಯ ನಾಯ್ಡು ಅವರ ಸ್ಮರಣೆ ಮಾ.3ಕ್ಕಷ್ಟೇ ಸೀಮಿತವಾಗಿರುವುದು ಖೇದಕರ. ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಅವರ ಹೆಸರಿನ ಸ್ಮಾರಕವಾಗಲೀ, ರಸ್ತೆಯಾಗಲೀ ಇಲ್ಲ. ಅವರ ಪುತ್ರ ಕನ್ನಡ ಚಿತ್ರರಂಗದ ದಂತಕತೆಯಂತಿರುವ ಲೋಕೇಶ್ ಅವರಿಗೂ ಅನ್ಯಾಯವಾಗಿದೆ’ ಎಂದು ನಟ, ಸುಬ್ಬಯ್ಯ ನಾಯ್ಡು ಅವರ ಮೊಮ್ಮಗ ಸೃಜನ್ ಲೋಕೇಶ್ ಹೇಳಿದ್ದಾರೆ.
‘ಸೆಲೆಬ್ರೇಟಿಂಗ್ ವರ್ಲ್ಡ್ ಕನ್ನಡ ಸಿನಿಮಾ ಡೇ’ ಎಂಬ ವಿಚಾರಗೋಷ್ಠಿಯಲ್ಲಿ ಕನ್ನಡದ ಮೊದಲ ಸಿನಿಮಾ ‘ಸತಿ ಸುಲೋಚನಾ’ ಕುರಿತ ಪುನರ್ ವ್ಯಾಖ್ಯಾನ ನಡೆಯಿತು. ಈ ವೇಳೆ ಸೃಜನ್, ‘ಚಿತ್ರರಂಗಕ್ಕಾಗಿ ದುಡಿದವರಿಗೆ ಏನು ಮಾಡಿದ್ದೇವೆ ಎಂದು ಅವಲೋಕನ ಮಾಡಬೇಕಾದ ಅಗತ್ಯವಿದೆ. ಸತಿ ಸುಲೋಚನಾದಂಥಾ ಸಿನಿಮಾವನ್ನು ಶಾಶ್ವತ ದಾಖಲೆಯಾಗಿ ಉಳಿಸಬೇಕು’ ಎಂದು ಹೇಳಿದರು.
ಕಿಶೋರ್ ಮಾತನಾಡಿ, ‘ಸತಿ ಸುಲೋಚನಾದಂಥ ಜನಪರ ಸಿನಿಮಾಗಳು ಹಾಕಿಕೊಟ್ಟ ಭದ್ರ ಬುನಾದಿ ಮೇಲೆ ಚಿತ್ರರಂಗ ನಿಂತಿದೆ. ನಮ್ಮ ಚಿತ್ರರಂಗದ ಮೊದಲ ಟಾಕಿ ಸಿನಿಮಾವೇ ಮಹಿಳಾ ಪ್ರಧಾನವಾದದ್ದು. ಜೊತೆಗೆ ಈ ಸಿನಿಮಾವನ್ನು ಕನ್ನಡಿಗರಲ್ಲದೇ ರಾಜಸ್ಥಾನ, ಆಂಧ್ರ, ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗದವರೆಲ್ಲ ಸೇರಿ ಮಾಡಿದ್ದಾರೆ. ಬಿಫ್ಸ್‌ನ ಈ ಬಾರಿಯ ಥೀಮ್ ‘ಸರ್ವ ಜನಾಂಗದ ಶಾಂತಿಯ ತೋಟ’ ವನ್ನು 90 ವರ್ಷಗಳ ಹಿಂದೆಯೇ ಕನ್ನಡದ ಮೊದಲ ಟಾಕಿ ಸಿನಿಮಾ ಸಾಧಿಸಿ ತೋರಿಸಿತ್ತು ಎಂಬುದು ಹೆಮ್ಮೆಯ ವಿಷಯ’ ಎಂದು ಹೇಳಿದರು.
ಅಬ್ಬಬ್ಬಾ...! ಪುತ್ರ ಸೃಜನ್ ಲೋಕೇಶ್‌ಗೆ ತಾಯಿ ಗಿರಿಜಾ ಏನೆಲ್ಲ ಬಯ್ತಾರೆ ಗೊತ್ತಾ?
ಸಿನಿಮಾ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಇದ್ದರು. ‘ಸತಿ ಸುಲೋಚನಾ’ ಸಿನಿಮಾದ ನಿರ್ದೇಶಕ ವೈ ವಿ ರಾವ್ ಹಾಗೂ ಸಾಹಿತಿ ಬೆಳ್ಳಾವೆ ನರಹರಿ ಶಾಸ್ತ್ರಿ ಕುಟುಂಬದವರು ಭಾಗಿಯಾಗಿದ್ದರು. ಹಿರಿಯ ರಂಗ ಕಲಾವಿದ ಲಕ್ಷ್ಮಣ್ ದಾಸ್ ‘ಸತಿ ಸುಲೋಚನಾ’ ಸಿನಿಮಾದ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ನಾಯಕಿ ಪ್ರಧಾನವಾದ ‘ಸತಿ ಸುಲೋಚನ’ ಚಿತ್ರದ ನಾಯಕಿ ತ್ರಿಪುರಾಂಬ ಬಗೆಗಾಗಲೀ, ಅವರ ಕುಟುಂಬಸ್ಥರ ಬಗೆಗಾಗಲಿ ಯಾವೊಂದು ಮಾತೂ ಕೇಳಿಬರಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.