
ಬೆಂಗಳೂರು (ಜು.29): ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ವಿಚಾರದ ಬಗ್ಗೆ ಮಾತನಾಡಿದ ನಂತರ ಚರ್ಚೆಯಲ್ಲಿರುವ ನಟಿ ರಮ್ಯಾ ಅವರ ವಿರುದ್ಧ, ನಟ ದರ್ಶನ್ ಅಭಿಮಾನಿಗಳು ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಟ ಯುವರಾಜ್ ಕುಮಾರ್ ಅವರು ರಮ್ಯಾ ಪರ ಇರುವುದಾಗಿ ಮಾತನಾಡಿದ್ದಾರೆ. ಇದರ ಬೆನ್ನಲ್ಲಿಯೇ ಯುವ ರಾಜ್‌ಕುಮಾರ್ ಅವರ ಪತ್ನಿ ಶ್ರೀದೇವಿ ಬೈರಪ್ಪ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯ ಮೂಲಕ ತಮ್ಮ ಕುಟುಂಬದಲ್ಲೇ ಇದೆಲ್ಲ ನಡೆಯುವಾಗ ಮಾತಾಡದೇ ಸುಮ್ಮನೆ ಇದ್ರಲ್ಲ. ಆವಾಗ ನಿದ್ದೆ ಮಾಡ್ತಾ ಇದ್ರಾ ಎಲ್ಲಾ.? ಎಂದು ಪ್ರಶ್ನೆ ಮಾಡಿದ್ದಾರೆ.
ಇದೀಗ ನಟ ದರ್ಶನ್ ಅಭಿಮಾನಿಗಳು ನಟಿ ರಮ್ಯಾ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡುತ್ತಾ ಆಕ್ರೋಶ ವ್ಯಕ್ತಪಡಿಸುತ್ತಿರುವಾಗ ನಟಿ ರಮ್ಯಾನ ಪರವಾಗಿ ನಟ ಶಿವರಾಜ್‌ಕುಮಾರ್ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಅವರು, 'ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ; ಅದನ್ನು ನಾವು ಸಹಿಸಬಾರದು. ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ. ಸೋಶಿಯಲ್ ಮೀಡಿಯಾ ತುಂಬಾ ಬಲಿಷ್ಠವಾದ ಅಸ್ತ್ರ, ಅದನ್ನು ತಮ್ಮ ಏಳಿಗೆಗಾಗಿ ಬಳಸಬೇಕೇ ಹೊರತು, ಅವಾಚ್ಯ ಶಬ್ದಗಳಿಂದ ನಿಂದಿಸಿ, ದ್ವೇಷ- ಅಸೂಯೆಯನ್ನು ಬಿತ್ತಲು ಬಳಸಬಾರದು. ನಿಮ್ಮ ನಿಲುವು ಸರಿಯಿದೆ, ರಮ್ಯಾ. ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ. -ಇಂತೀ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್ ಎಂದು ಪೋಸ್ಟ್ ಒಂದನ್ನು ಹಾಕಿಕೊಂಡು ಬೆಂಬಲಿಸಿದ್ದರು.
ಆದರೆ, ಈ ಬಗ್ಗೆ ಶಿವರಾಜ್‌ಕುಮಾರ್ ಅವರ ತಮ್ಮ ರಾಘವೇಂದ್ರ ರಾಜ್‌ಕುಮಾರ್ ಅವರ ಮಗ ಯುವ ರಾಜ್‌ಕುಮಾರ್ ಅವರ ಪತ್ನಿ ಶ್ರೀದೇವಿ ಬೈರಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ದೊಡ್ಮನೆ ಕುಟುಂಬದ ನಡೆಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಯುವ ರಾಜ್‌ಕುಮಾರ್ ಅವರಿಂದ ನನಗೆ ಅನ್ಯಾಯ ಆಗಿದ್ದನ್ನು ಪ್ರಶ್ನೆ ಮಾಡಿದಾಗ ಯಾರೂ ನನ್ನ ಪರವಾಗಿ ನಿಲ್ಲಲಿಲ್ಲ. ನಮ್ಮ ಕುಟುಂಬದಲ್ಲಿಯೇ ಮಹಿಳೆಗೆ ಅನ್ಯಾಯ ಆಗುತ್ತಿದ್ದರೂ, ಯಾರೊಬ್ಬರೂ ಮಾತನಾಡಲಿಲ್ಲ. ಒಬ್ಬ ಮಹಿಳೆಯನ್ನು ಅವಮಾನ ಮಾಡುವಾಗ ಎಲ್ಲರೂ ಸುಮ್ಮನಿದ್ರಿ ಎಂದು ಆಕ್ರೋಶ ಹೊರಹಾಕಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಮಾಧ್ಯಮಗಳಲ್ಲಿ ಮಹಿಳೆಯನ್ನು ಅವಮಾನಿಸುವುದರ ವಿರುದ್ಧ ಮಾತನಾಡುವುದು ನೋಡುವಾಗ, ತಮ್ಮ ಕುಟುಂಬದಲ್ಲೇ ಇದೆಲ್ಲಾ ನಡೆಯುವಾಗ ಮಾತಾಡದೇ ಸುಮ್ಮನೆ ಇದ್ರಲ್ಲ. ಆವಾಗ ನಿದ್ದೆ ಮಾಡ್ತಾ ಇದ್ರಾ ಎಲ್ಲಾ?! ಎಂದು ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಪೋಸ್ಟ್‌ನ ಕೊನೆಯಲ್ಲಿ #Hypocrites #Drama ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದ್ದು, ಅವರ ಆಕ್ರೋಶ ದೊಡ್ಮನೆ ಕುಟುಂಬದ ಶಿವರಾಜ್‌ಕುಮಾರ್ ದಂಪತಿಗೆ ಹೇಳಿರುವುದು ಎಂಬುದು ತೋರುತ್ತದೆ.
ಇನ್ನು ಎಕ್ಕ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ಯುವ ರಾಜ್‌ಕುಮಾರ್ ಅವರ ಜೊತೆಗೆ ಶ್ರೀದೇವಿ ಬೈರಪ್ಪ ಅವರು ಮದುವೆಯಾಗಿದ್ದರು. ಇವರ ದಾಂಪತ್ಯದಲ್ಲಿ ಸಮಸ್ಯೆ ಉಂಟಾಗಿ ಕಳೆದ ವರ್ಷ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಯುವರಾಜ್‌ಕುಮಾರ್ ವಿರುದ್ದ ದೊಡ್ಮನೆ ಸೊಸೆ ಶ್ರೀದೇವಿ ಭೈರಪ್ಪ ಅವರು ನಾನಾ ಆರೋಪ ಮಾಡಿದ್ದರು. ಆದರೂ, ತನಗೆ ದೊಡ್ಮನೆಯಿಂದ ನ್ಯಾಯ ಸಿಕ್ಕಿಲ್ಲ. ಹೆಣ್ಣಿನ ನೋವಿಗೆ ಆಗ ಯಾರೂ ಸ್ಪಂದಿಸಿಲ್ಲ ಎಂಬಾರ್ಥದಲ್ಲಿ ಶ್ರೀದೇವಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.