ಕನ್ನಡದಲ್ಲಿ ಬಾಂಡ್‌ ಚಿತ್ರ ಪರಿಚಯಿಸಿದ ಭಗವಾನ್‌ ; ಅಣ್ಣಾವ್ರ ಜೊತೆ ಬಾಂಧವ್ಯ ಹೀಗಿತ್ತು

Published : Feb 21, 2023, 12:20 PM IST
ಕನ್ನಡದಲ್ಲಿ ಬಾಂಡ್‌ ಚಿತ್ರ ಪರಿಚಯಿಸಿದ ಭಗವಾನ್‌ ; ಅಣ್ಣಾವ್ರ ಜೊತೆ ಬಾಂಧವ್ಯ ಹೀಗಿತ್ತು

ಸಾರಾಂಶ

ಡಾ ರಾಜ್‌ ಕುಮಾರ್, ಡಾ ವಿಷ್ಣುವರ್ಧನ್, ಅನಂತನಾಗ್‌ ಸೇರಿ ಅನೇಕ ಸ್ಟಾರ್‌ಗಳಿಗೆ ನಿರ್ದೇಶನ ಮಾಡಿದ ಎಸ್‌ಕೆ ಭಗವಾನ್. ಬಾಂಡ್‌ ಸಿನಿಮಾಗಳು ಕನ್ನಡಕ್ಕೆ ಕರಲು ಕಾರಣವೇನು?  

ಶ್ರೀನಿವಾಸ ಕೃಷ್ಣ ಅಯ್ಯಂಗಾರ್‌ ಭಗವಾನ್‌ ಎಂಬುದು ಎಸ್‌.ಕೆ.ಭಗವಾನ್‌ ಅವರ ಪೂರ್ಣ ಹೆಸರು. 1933ರಲ್ಲಿ ಮೈಸೂರಿನ ಹಳ್ಳದಕೇರಿ ಎಂಬಲ್ಲಿ ತಮಿಳು ಅಯ್ಯಂಗಾರ್‌ ಕುಟುಂಬದಲ್ಲಿ ಜನಿಸಿದ ಅವರಿಗೆ ಬಾಲ್ಯದಿಂದಲೇ ನಟನೆಯಲ್ಲಿ ಅಪಾರ ಆಸಕ್ತಿ. ಆಗ ಜನಪ್ರಿಯವಾಗಿದ್ದ ಹಿರಣ್ಣಯ್ಯ ಮಿತ್ರ ಮಂಡಳಿಯ ನಾಟಕಗಳಲ್ಲಿ ಅಭಿನಯಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಅಡಿಯಿಟ್ಟರು. ಮುಂದೆ 1956ರಲ್ಲಿ ಕಣಗಾಲ್‌ ಪ್ರಭಾಕರ ಶಾಸ್ತ್ರಿಗಳ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದರು. 1966ರಲ್ಲಿ ತೆರೆಕಂಡ ‘ಸಂಧ್ಯಾರಾಗ’ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಬಡ್ತಿ ಪಡೆದರು. ಮುಂದೆ ಛಾಯಾಗ್ರಾಹಕ ದೊರೈರಾಜ್‌ ಜೊತೆ ಸೇರಿ ಸ್ವತಂತ್ರ ನಿರ್ದೇಶನಕ್ಕೆ ಮುಂದಾದರು. ಆಮೇಲೆ ಈ ಜೋಡಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿತು. ಸಾಕಷ್ಟುಹಿಟ್‌ ಚಿತ್ರಗಳನ್ನು ನೀಡಿದ್ದ ಇವರು ಅಣ್ಣಾವ್ರ 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಕನ್ನಡದಲ್ಲಿ ಬಾಂಡ್‌ ಚಿತ್ರಗಳನ್ನು ಪರಿಚಯಿಸಿದ ಖ್ಯಾತಿ ಇವರದ್ದು. ಸಾಮಾಜಿಕ, ಕಾದಂಬರಿ ಆಧರಿತ ಚಿತ್ರಗಳನ್ನು ನಿರ್ದೇಶಿಸುವುದರಲ್ಲೂ ಈ ಜೋಡಿ ಎತ್ತಿದ ಕೈ. 1968ರಲ್ಲಿ ತೆರೆಕಂಡ ‘ಜೇಡರ ಬಲೆ’ ಮೊದಲ ಬಾಂಡ್‌ ಮಾದರಿಯ ಚಿತ್ರವಾಗಿ ಯಶಸ್ವಿಯಾಯಿತು. 1971ರಲ್ಲಿ ತೆರೆಕಂಡ ‘ಕಸ್ತೂರಿ ನಿವಾಸ’ ಸಿನಿಮಾ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು. ಆ ಬಳಿಕ ‘ಎರಡು ಕನಸು’, ‘ಬಯಲು ದಾರಿ’, ‘ಆಪರೇಷನ್‌ ಡೈಮಂಡ್‌ ರಾಕೆಟ್‌’, ‘ಗಿರಿಕನ್ಯೆ’, ‘ಚಂದನದ ಗೊಂಬೆ’, ‘ಮುನಿಯನ ಮಾದರಿ’, ‘ಹೊಸ ಬೆಳಕು’, ‘ಬೆಂಕಿಯ ಬಲೆ’, ‘ಜೀವನ ಚೈತ್ರ’, ‘ಒಡಹುಟ್ಟಿದವರು’ ಹೀಗೆ ಒಂದರ ಮೇಲೊಂದರಂತೆ ಸೂಪರ್‌ಹಿಟ್‌ ಆದ ಚಿತ್ರಗಳನ್ನು ನಿರ್ದೇಶಿಸಿದರು. 2019ರಲ್ಲಿ ತೆರೆಕಂಡ ಸಂಚಾರಿ ವಿಜಯ್‌ ಹಾಗೂ ಅನಂತ್‌ನಾಗ್‌ ನಟನೆಯ ‘ಆಡುವ ಗೊಂಬೆ’ ಭಗವಾನ್‌ ಅವರ ನಿರ್ದೇಶನದ ಕೊನೆಯ ಚಿತ್ರ. ಇವರ ಹೆಚ್ಚಿನೆಲ್ಲ ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ್ದು ರಾಜನ್‌-ನಾಗೇಂದ್ರ ಎನ್ನುವುದು ಮತ್ತೊಂದು ವಿಶೇಷ.

ನನಗೆ ಕನ್ನಡ ಕಲಿಸಿದ ಗುರು ಭಗವಾನ್‌; ಹಿರಿಯ ನಟ ಲಕ್ಷ್ಮೀ

ಅಣ್ಣಾವ್ರನ್ನು ಬಿಟ್ಟರೆ ದೊರೈ ಹಾಗೂ ಭಗವಾನ್‌ ನಿರ್ದೇಶನದ ಚಿತ್ರಗಳ ಬಲು ಜನಪ್ರಿಯ ಜೋಡಿ ಅನಂತ್‌ನಾಗ್‌ ಹಾಗೂ ಲಕ್ಷ್ಮೇ. ಉದಯ ಕುಮಾರ್‌, ಕಲ್ಪನಾ, ಮಂಜುಳಾ, ಶಂಕರ್‌ನಾಗ್‌, ಬಿ. ಸರೋಜಾ ದೇವಿ, ವಿಷ್ಣುವರ್ಧನ್‌, ಮಾಲಾಶ್ರೀ ಸೇರಿದಂತೆ ಅನೇಕ ಪ್ರಸಿದ್ಧ ತಾರೆಯರು ಭಗವಾನ್‌ ನಿರ್ದೇಶನದ ಚಿತ್ರಗಳಲ್ಲಿ ನಟಿಸಿದ್ದಾರೆ.

ದಶಕಗಳ ಕಾಲ ದೊರೈ ಹಾಗೂ ಭಗವಾನ್‌ ಜೋಡಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿತ್ತು. 1993ರಲ್ಲಿ ದೊರೈರಾಜ್‌ ನಿಧನದ ಬಳಿಕ ಭಗವಾನ್‌ ನಿರ್ದೇಶನ ಕ್ಷೇತ್ರದಿಂದ ದೂರ ಉಳಿದರು. ಬಳಿಕ ಆದರ್ಶ ಫಿಲಂ ಇನ್ಸ್‌ಟಿಟ್ಯೂಟ್‌ನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಕೊನೆಗೆ ತಾವೊಬ್ಬರೇ ಒಂದು ಸಿನಿಮಾ ನಿರ್ದೇಶಿಸಿದರೂ ಅದು ಹೆಸರು ಮಾಡಲಿಲ್ಲ.

ನೇತ್ರದಾನದ ಮೂಲಕ ಸಾರ್ಥಕತೆ

ಅಣ್ಣಾವ್ರ ಹಾದಿಯಲ್ಲೇ ತಮ್ಮ ಎರಡೂ ಕಣ್ಣುಗಳನ್ನು ಭಗವಾನ್‌ ದಾನ ಮಾಡಿದ್ದಾರೆ. ಮೂರರಿಂದ ನಾಲ್ಕು ಜನರಿಗೆ ಇದರಿಂದ ದೃಷ್ಟಿಬರಲಿದೆ ಎಂದು ನಾರಾಯಣ ನೇತ್ರಾಲಯದ ತಜ್ಞರು ತಿಳಿಸಿದ್ದಾರೆ. ಅಣ್ಣಾವ್ರು ನೇತ್ರದಾನಕ್ಕೆ ರಿಜಿಸ್ಪ್ರೇಶನ್‌ ಮಾಡಿಸಿಕೊಂಡಾಗಲೇ ಇವರೂ ನೇತ್ರದಾನ ಮಾಡಲು ಮುಂದಾಗಿದ್ದರು.

SK bhagavan; ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ 'ದೊರೈ ಭಗವಾನ್' ಆಗಿದ್ದು ಹೇಗೆ? ಖ್ಯಾತ ನಿರ್ದೇಶಕನ ರೋಚಕ ಪಯಣ

ಅಣ್ಣಾವ್ರ ಜೊತೆ ಬಾಂಧವ್ಯ

ಭಗವಾನ್‌ ಹಾಗೂ ದೊರೈ ಜೋಡಿ ಅಣ್ಣಾವ್ರ 32 ಸಿನಿಮಾಗಳನ್ನು ನಿರ್ದೇಶಿಸಿದೆ. ಇದರಲ್ಲಿ 24 ಚಿತ್ರಗಳು ಕಾದಂಬರಿ ಆಧರಿತ ಎನ್ನುವುದು ವಿಶೇಷ. ಡಾ. ರಾಜ್‌ ಕುಟುಂಬದೊಂದಿಗೆ ಕೊನೆಯವರೆಗೂ ಆತ್ಮೀಯ ಬಾಂಧವ್ಯವನ್ನು ಭಗವಾನ್‌ ಹೊಂದಿದ್ದರು. ಚೆನ್ನೈನಲ್ಲಿ ಕೆಲಸವಿಲ್ಲದೆ ಹೊಟ್ಟೆಗೂ ಕೂಳಿಲ್ಲದೆ ಹಸಿವಿನಲ್ಲಿ ಬಳಲುತ್ತಿದ್ದಾಗ ತನಗೆ ಊಟ ಹಾಕಿ ಕಾಪಾಡಿದ್ದು ಡಾ. ರಾಜ್‌ ಕುಟುಂಬ ಎಂದು ಅವರು ಕೊನೆಯವರೆಗೂ ಹೇಳುತ್ತಿದ್ದರು. ಡಾ. ರಾಜ್‌ ಅವರ ‘ಒಡಹುಟ್ಟಿದವರು’ ಭಗವಾನ್‌ ನಿರ್ದೇಶಿಸಿದ ರಾಜ್‌ಕುಮಾರ್‌ ಅವರ ಕೊನೆಯ ಸಿನಿಮಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ
ಯಶ್- ರಾಧಿಕಾ ಪುತ್ರಿಗೆ 7 ವರ್ಷಗಳ ಸಂಭ್ರಮ: ಹುಟ್ಟುಹಬ್ಬದ ಕ್ಯೂಟ್​ ಫೋಟೋಗಳು ಇಲ್ಲಿವೆ