
ಅತ್ತ ಗಂಡೂ ಅಲ್ಲದೇ, ಇತ್ತ ಹೆಣ್ಣು ಅಲ್ಲದೇ ಹುಟ್ಟಿದ್ದು ನಮ್ಮ ತಪ್ಪಾ? ಈ ಸಮಾಜ ಏಕೆ ಹೀಗೆ ಎನ್ನುತ್ತಲೇ ಕಣ್ಣೀರು ಹಾಕುತ್ತಲೇ ಬದುಕಿ ಕಟ್ಟಿಕೊಳ್ಳುತ್ತಿರುವ ವರ್ಗ ಮಂಗಳಮುಖಿಯರದ್ದು. ತೃತೀಯ ಲಿಂಗಿಯರು, ಮಂಗಳಮುಖಿಯರು ಎಂದಾಕ್ಷಣ ದೊಡ್ಡ ಆರೋಪಗಳ ಪಟ್ಟಿಯೇ ಹುಟ್ಟಿಕೊಳ್ಳುತ್ತದೆ. ಚಪ್ಪಾಳೆ ತಟ್ಟುತ್ತಾ, ಭಿಕ್ಷೆ ಬೇಡುತ್ತಾ ಜನರನ್ನು ಹಿಂಸಿಸುವವರು ಇವರು ಎಂದೇ ಬಿಂಬಿತವಾಗಿಬಿಟ್ಟಿದ್ದಾರೆ. ಆದರೆ, ಇಂಥವರಿಗೆ ಬದುಕು ಕಟ್ಟಿಕೊಳ್ಳಲು ನಿಜಕ್ಕೂ ನಮ್ಮ ಸಮಾಜ ಬಿಡುತ್ತಿದೆಯಾ ಎನ್ನುವ ಪ್ರಶ್ನೆ ಮಾತ್ರ ಪ್ರಶ್ನೆಯಾಗಿಯೇ ಉಳಿದುಬಿಟ್ಟಿದೆ. ಬದುಕು ಕಟ್ಟಿಕೊಳ್ಳಲು ಅವಕಾಶ ಕೊಡಿ ಎಂದು ಸರ್ಕಾರದಿಂದ ಹಿಡಿದು ಕಂಡ ಕಂಡವರ ಬಳಿ ಕೈಕಾಲು ಹಿಡಿದು ಅದೆಷ್ಟೋ ಮಂಗಳಮುಖಿಯರು ಸೋತು ಹೋಗಿದ್ದಾರೆ. ಅದೃಷ್ಟವಂತ ಕೆಲವೇ ಕೆಲವರಿಗೆ ಸರ್ಕಾರಿ ಉದ್ಯೋಗ ಸೇರಿದಂತೆ ಕೆಲವು ಸಹೃದಿಗಳು ತಮ್ಮ ಸಂಘ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸುವುದು ಉಂಟು. ಉಳಿದವರಿಗೆ ಬೀದಿಯಲ್ಲಿ ಚಪ್ಪಾಳೆ ಬಾರಿಸುತ್ತಾ ಭಿಕ್ಷೆ ಬೇಡದೇ ಗತಿಯಿಲ್ಲ. ಹೊಟ್ಟೆ ತುಂಬಬೇಕಲ್ವಾ? ಮತ್ತೆ ಕೆಲವರು ಲೈಂ*ಗಿಕ ಕಾರ್ಯಕರ್ತೆಯರಾಗಿ ದುಡಿಯುತ್ತಿದ್ದಾರೆ!
ಬದುಕಿನಲ್ಲಿ ಇನ್ನಿಲ್ಲದ ಕಷ್ಟ ಅನುಭವಿಸಿ, ಅಪ್ಪ- ಅಮ್ಮಂದಿರಿಗೂ ಬೇಡವಾದ ಮಗುವಾಗಿ, ಕಂಡ ಕಂಡಲ್ಲಿ ಛೀಮಾರಿ ಹಾಕಿಸಿಕೊಳ್ಳುವ ಬದುಕನ್ನು ಒಮ್ಮೆ ಕಲ್ಪಿಸಿಕೊಂಡರೆ ಎಷ್ಟು ಭಯಾನಕ ಆಗಿರುತ್ತದೆ ಅಲ್ಲವೆ? ಆದರೆ ಇಂಥ ಘನಘೋರ ಬದುಕನ್ನು ಕಂಡಿರುವ ಲಿಂಗತ್ವ ಅಲ್ಪಸಂಖ್ಯಾತರದ್ದು ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ, ವ್ಯಥೆ. ಇವೆಲ್ಲವುಗಳನ್ನೂ ಸಿನಿಮಾ ರೂಪದಲ್ಲಿ ಹೊರತಂದಿದ್ದಾರೆ ಅಶೋಕ್ ಜೈರಾಮ್ ಅವರು. ಇದು ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದೆ. ಆದರೆ ಉಳಿದ ಸಿನಿಮಾಗಳ ಅಬ್ಬರದಲ್ಲಿ ಈ ಸಿನಿಮಾ ನೋಡುವವರೇ ಇಲ್ಲವಾಗಿದೆ, , ಸಿನಿಮಾ ನೋಡುವವರು ಎನ್ನುವುದಕ್ಕಿಂತಲೂ ಹೆಚ್ಚಾಗಿ ಈ ಚಿತ್ರ ಬಿಡುಗಡೆಗೆ ಚಿತ್ರಮಂದಿರಗಳೇ ಸಿಗುತ್ತಿಲ್ಲ ಎನ್ನುವ ನೋವು ಈ ಮಂಗಳಮುಖಿಯರದ್ದು.
ಇವರ ಮೇಲಿನ ದೃಷ್ಟಿಕೋನ ಬದಲಾಗಬೇಕು, ಅವರೂ ಸಾಮಾನ್ಯ ಮನುಷ್ಯರಂತೆ ಬದುಕಬೇಕು, ಅವರ ಕಷ್ಟಗಳನ್ನು ಅರಿತು ಅವರು ಕೂಡ ಮನುಷ್ಯರೇ ಎನ್ನುವ ಭಾವನೆ ಮೂಡಬೇಕು ಎನ್ನುವ ಹಿನ್ನೆಲೆಯಲ್ಲಿ ಈ ಸಿನಿಮಾ ನೋಡುವಂತೆ ಅಧಿವೇಶನದಲ್ಲಿ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದರು. ಶಾಲಾ ಮಕ್ಕಳು ಈ ಸಿನಿಮಾ ನೋಡಬೇಕು. ಆಗ ಆ ಎಳ ಮನಸ್ಸಿನಲ್ಲಿ ತಾವು ಇವರನ್ನು ಅಸಹ್ಯವಾಗಿ ಕಾಣಬಾರದು ಎನ್ನುವ ಭಾವನೆ ಮೂಡುತ್ತದೆ ಎನ್ನುವುದು ಇದರ ಉದ್ದೇಶವಾಗಿತ್ತು. ಆದರೆ ಎಲ್ಲವೂ ನಿಷ್ಪ್ರಯೋಜನವಾಗಿದೆ. ಇದಕ್ಕಾಗಿ ಕಳೆದ ವಾರ ಲಿಂಗತ್ವ ಅಲ್ಪಸಂಖ್ಯಾತರು ಬೆಂಗಳೂರಿನಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು. ಆದರೆ ಕೇಳಿಸಿಕೊಂಡ ಕಿವಿಗಳು ಮಾತ್ರ ಅತಿ ವಿರಳ.
ಇದೀಗ ಮಂಗಳಮುಖಿಯರು ಕೋಪಗೊಂಡಿದ್ದಾರೆ. ನಾವು ಚಪ್ಪಾಳೆ ಬಾರಿಸಿದರೆ ಮಾತ್ರ ನಿಮಗೆ ಕೇಳಿಸುತ್ತದೆ ಅಲ್ಲವೆ? ನಾವು ಮಾಡಿದ ಸಿನಿಮಾ ನೋಡಿ ಎಂದು ಗೋಗರೆಯುವ ಸ್ಥಿತಿ ಬಂದಿದೆ. ಚಿತ್ರಮಂದಿರಗಳೂ ಸಿಗುತ್ತಿಲ್ಲ. ಇದಕ್ಕೆ ಒಬ್ಬರೂ ರೆಸ್ಪಾನ್ಸ್ ಮಾಡುತ್ತಿಲ್ಲ. ನಮ್ಮ ಸಮಸ್ಯೆ ನಿಮಗೆ ಹೇಗೆ ಅರ್ಥವಾಗಬೇಕು ಎಂದು ಅವರು ಕೇಳುತ್ತಿದ್ದಾರೆ. ಕೆಲವೇ ವರ್ಷಗಳ ಹಿಂದೆ ಛೀ ಥೂ ಎಂದು ಇದೇ ಕಾರಣಕ್ಕೆ ಎನ್ನಿಸಿಕೊಳ್ಳುತ್ತಿದ್ದ ಮಂಜಮ್ಮ ಜೋಗತಿ ಅವರ ಸಾಧನೆ ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಸರ್ಕಾರ ಅವರಿಗೆ ಪದ್ಮಶ್ರೀ ಕೊಟ್ಟಾಗಿನಿಂದ ಅವರನ್ನು ಜನರು ನೋಡುವ ರೀತಿ ಬದಲಾಗಿದೆ. ಅವರಿಗೆ ವಿಶೇಷ ಮಾನ್ಯತೆ ನೀಡಲಾಗುತ್ತಿದೆ. ಈ ಚಿತ್ರದಲ್ಲಿ ಅವರೇ ಪ್ರಧಾನ ಪಾತ್ರ ವಹಿಸಿದ್ದಾರೆ. ಆದರೆ ತಮ್ಮ ನೋವು ಅರ್ಥ ಮಾಡಿಕೊಳ್ಳುವ ಮನಸ್ಸು ಯಾರಿಗೂ ಇಲ್ಲ, ಸಿನಿಮಾ ಯಾರೂ ನೋಡುತ್ತಿಲ್ಲ ಎನ್ನುವುದು ಅವರ ನೋವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.