
ಕಾಗತಿ ನಾಗರಾಜಪ್ಪ
ಹೌದು, ಬಹಳಷ್ಟುಜನರಿಗೆ ಜಯಂತಿರನ್ನು ನಟಿಯಾಗಿ ಅವರನ್ನು ತೆರೆ ಮೇಲೆ ಕಂಡಿದ್ದಾರೆ. ಆದರೆ ಚಿಕ್ಕಬಳ್ಳಾಪುರ ಜನತೆಗೆ ಮಾತ್ರ ನಟಿ ಜಯಂತಿ ರಾಜಕಾರಣಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗಮನ ಸೆಳೆದಿದ್ದರು. ಆದರೆ ಅವರ ರಾಜಕೀಯ ರಂಗ ಪ್ರವೇಶ ಬಹಳಷ್ಟುಮಂದಿಗೆ ನೆನಪಿಲ್ಲ.
ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಯಂತಿ
ನಟಿಯಾಗಿದ್ದ ಜಯಂತಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಲೋಕ ಜನಶಕ್ತಿ ಹಾಗೂ ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ತಮ್ಮ ಅದೃಷ್ಟಪರೀಕ್ಷೆಗೆ ಮುಂದಾಗಿದ್ದರು. 1998 ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಅವರು ಆಗ ಅಖಾಡದಲ್ಲಿದ್ದ ರಾಜಕೀಯ ಘಟಾನುಘಟಿ ನಾಯಕರಾದ ಕಾಂಗ್ರೆಸ್‌ನ ಆರ್.ಎಲ್.ಜಾಲಪ್ಪ ಹಾಗೂ ವೇಮಗಲ್‌ನ ಸಿ.ಬೈರೇಗೌಡರ ವಿರುದ್ದ ಚುನಾವಣಾ ರಣಕಹಳೆ ಮೊಳಗಿಸಿ ಕ್ಷೇತ್ರದಲ್ಲಿ ಮನೆ ಮಾತಾಗಿದ್ದರು.
ರಾಜ್ಯದಲ್ಲಿ ಜನತಾ ಪಕ್ಷ ಇಬ್ಭಾಗ ಆದಾಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದ ಲೋಕಜನಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಟಿಕೆಟ್ ಪಡೆದಿದ್ದ ನಟಿ ಜಯಂತಿ ಬಿಜೆಪಿ ಬೆಂಬಲದೊಂದಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿದ್ದರು. ಅವರು ಮೊದಲ ಬಾರಿಗೆ ರಾಜಕೀಯ ಅಖಾಡಕ್ಕೆ ಇಳಿದರೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹಾಲಿ ಸಂಸದರಾಗಿದ್ದ ಆರ್.ಎಲ್.ಜಾಲಪ್ಪರನ್ನು ನಡುಗಿಸುವ ರೀತಿಯಲ್ಲಿ ಜಯಂತಿ ಬೇಟೆಗೆ ಇಳಿದಿದ್ದರು.
ಆರ್.ಎಲ್.ಜಾಲಪ್ಪ ಕಾಂಗ್ರೆಸ್‌ನಿಂದ ಆಗ ಚುನಾವಣೆಗೆ ಸ್ಪರ್ಧಿಸಿದರೆ ಸಿ.ಬೈರೇಗೌಡ ಜನತಾ ಪಕ್ಷದಿಂದ ಸ್ಪರ್ಧಿಸಿದ್ದರು. ಮೊದಲ ಬಾರಿಗೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟು ಮೂವರ ವಿರುದ್ಧ ಸಮಬಲದ ಹೋರಾಟ ನಡೆದಿತ್ತು. ನಟಿ ಜಯಂತಿ ಪರವಾಗಿ ಜೀವರಾಜ್ ಅಳ್ವ ಮತ್ತಿತರ ನಾಯಕರು ಪ್ರಚಾರಕ್ಕೆ ಆಗಮಿಸಿದ್ದರು. ಆದರೆ ಫಲಿತಾಂಶ ಬಂದಾಗ ನಟಿ ಜಯಂತಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.
ಬೈರೇಗೌಡರಗಿಂತ 30 ಸಾವಿರ ಮತ ಕಡಿಮೆ ಪಡೆದಿದ್ದ ಅವರು ಜಾಲಪ್ಪ ಹಾಗೂ ಬೈರೇಗೌಡರಿಗೆ ಎದೆಯುಸಿರು ಹೆಚ್ಚಿಸುವ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಕೈಗೊಂಡಿದ್ದರು. ಆದರೆ ಜಯಂತಿಗೆ ಕ್ಷೇತ್ರದ ಜನ ಕೈ ಹಿಡಿಯಲಿಲ್ಲ. ಆಗ ಆರ್.ಎಲ್.ಜಾಲಪ್ಪ ಅವರೇ ಕಾಂಗ್ರೆಸ್‌ನಿಂದ ತಮ್ಮ ಪ್ರತಿಸ್ಪರ್ಧಿ ಜನತಾ ಪಕ್ಷದ ಸಿ.ಬೈರೇಗೌಡರನ್ನು ಸೋಲಿಸಿ ಸಂಸತ್ತು ಪ್ರವೇಶಿಸಿದರು.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.