ಲವ್‌ಲೀ ಸಿನಿಮಾದಿಂದಾಗಿ ನಾನು ಸಂಬಂಧಗಳ ಮಹತ್ವ ಕಲಿತಿದ್ದೇನೆ: ವಸಿಷ್ಠ ಸಿಂಹ

By Kannadaprabha News  |  First Published Jun 14, 2024, 11:14 AM IST

ಒಂದು ಒಳ್ಳೆಯ ಕತೆಯಲ್ಲಿ, ಒಳ್ಳೆಯ ಪಾತ್ರದಲ್ಲಿ ನಟಿಸಿದ ತೃಪ್ತಿ, ಸಾರ್ಥಕತೆ ಇದೆ. ಈ ಸಿನಿಮಾ ಒಂದು ಸಣ್ಣ ಮಗುವಿನಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಕನೆಕ್ಟ್ ಆಗುತ್ತದೆ.


ರಾಜ್

* ಪೂರ್ಣ ಪ್ರಮಾಣದ ನಾಯಕನಾಗಿ ಬರುತ್ತಿದ್ದೀರಿ, ಎಷ್ಟು ಖುಷಿ?
ನನ್ನ ಶಕ್ತಿ ಜಾಸ್ತಿಯೇ ಇತ್ತು. ಆದರೆ ಇಲ್ಲಿಯವರೆಗೆ ಒಂದು ಮಿತಿಯಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಈ ಸಿನಿಮಾ, ಈ ಪಾತ್ರ ನನ್ನನ್ನು ಬಹುತೇಕ ಬಳಸಿಕೊಂಡಿದೆ. ಒಂದು ಒಳ್ಳೆಯ ಕತೆಯಲ್ಲಿ, ಒಳ್ಳೆಯ ಪಾತ್ರದಲ್ಲಿ ನಟಿಸಿದ ತೃಪ್ತಿ, ಸಾರ್ಥಕತೆ ಇದೆ. ಈ ಸಿನಿಮಾ ಒಂದು ಸಣ್ಣ ಮಗುವಿನಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಕನೆಕ್ಟ್ ಆಗುತ್ತದೆ.

Tap to resize

Latest Videos

undefined

* ಏನು ಕತೆ, ಸಿನಿಮಾ ನಿಮಗೆ ಎಷ್ಟು ಮುಖ್ಯ?
ಈ ಸಿನಿಮಾ ನನ್ನ ಬದುಕಿನ ಕೊನೆಯವರೆಗೂ ಉ‍ಳಿಯುತ್ತದೆ. ಈ ಸಿನಿಮಾ ನಮ್ಮ ಸಮಾಜದಲ್ಲಿ ಇರುವ ಶೋಷಿತರನ್ನು ಪ್ರತಿನಿಧಿಸುತ್ತದೆ. ಅವರ ಮೇಲೆ ಮರುಕ ಹುಟ್ಟುವಂತೆ ಮಾಡುತ್ತದೆ. ಹಲವಾರು ಆಯಾಮಗಳಲ್ಲಿ ಮನುಷ್ಯರ ಬೇರೆ ಬೇರೆ ಭಾವನೆ, ಭಾವನಾತ್ಮಕ ಮೌಲ್ಯಗಳನ್ನು ತಿಳಿಸುತ್ತಾ ಹೋಗುತ್ತದೆ. ನಿಜ ಹೇಳಬೇಕೆಂದರೆ ಈ ಸಿನಿಮಾದ ಕತೆಯ ಅಭಿಮಾನಿ ನಾನು. ಅಷ್ಟು ಸುಂದರವಾದ, ಸೊಗಸಾದ ಕತೆ. ಎಲ್ಲರಿಗೂ ಮುಟ್ಟಬೇಕಾದ, ತಲುಪಬೇಕಾದ ಕತೆ. 

* ಇತ್ತೀಚಿನ ದಿನಗಳಲ್ಲಿ ಇಂಥದ್ದೊಂದು ಸಿನಿಮಾ ಬಂದಿಲ್ಲ. ಈ ಸಿನಿಮಾದಿಂದ ಏನು ಪಡೆದಿದ್ದೀರಿ?
ನಾನು 15 ವರ್ಷ ಒಬ್ಬನೇ ಬದುಕಿದ್ದೇನೆ. ಈ ಸಿನಿಮಾ ಶುರು ಆಗಬೇಕಾದರೆ ಪ್ರೀತಿಯಲ್ಲಿದ್ದೆ. ಆಮೇಲೆ ಮದುವೆ ಆಯಿತು. ಈ ಸಿನಿಮಾದಿಂದಾಗಿ ನಾನು ಸಂಬಂಧಗಳ ಮಹತ್ವ ಕಲಿತಿದ್ದೇನೆ. ಈ ಸಿನಿಮಾ ಸಂಬಂಧಗಳ ಮಹತ್ವ ಕಲಿಸಿಕೊಟ್ಟಿದೆ. ನಾನು ಯಾವಾಗಲೂ ಹಲವಾರು ಮುಖಗಳಿರುವ ಪಾತ್ರ ಹುಡುಕುತ್ತಿರುತ್ತೇನೆ. ಆದರೆ ಅಂಥಾ ಪಾತ್ರ ಸಿಗುವುದು ಬಹಳ ಅಪರೂಪ. ಇದು ಅಂಥಾ ಪಾತ್ರ. ಮನುಷ್ಯನಲ್ಲಿ ಮೃಗ ಇರಬಹುದು. ಅದೇ ಮನುಷ್ಯನಲ್ಲಿ ಮೃದುತ್ವವೂ ಇರಬಹುದು. ಈ ಸಿನಿಮಾ ಅದನ್ನೆಲ್ಲಾ ದಾಟಿಸುತ್ತಾ ಹೋಗುತ್ತದೆ. ಈ ಸಿನಿಮಾ ನನಗೆ ಅದ್ಭುತ ಅನುಭವ ಕೊಟ್ಟಿದೆ. ಆ ಅನುಭವ ನಿಮಗೂ ದಾಟುತ್ತದೆ ಎಂಬ ನಂಬಿಕೆ ಇದೆ.

ಲಂಡನ್‌ಗೆ ಹೋಗಿ ಬಂದ ವಸಿಷ್ಠ ಸಿಂಹ, ಸ್ಟೆಫಿ ಪಟೇಲ್‌: 'ಲವ್‌ ಲಿ' ಎಂದಿದ್ದು ಯಾಕೆ?

* ಪ್ರೇಕ್ಷಕರು ಏನು ನಿರೀಕ್ಷೆ ಇಟ್ಟುಕೊಳ್ಳಬಹುದು?
ನಾನು ಸಾಮಾನ್ಯವಾಗಿ ಜಾಸ್ತಿ ಮಾತನಾಡುವುದಿಲ್ಲ. ಈ ಸಿನಿಮಾ ತುಂಬಾ ಚೆನ್ನಾಗಿದೆ ಅನ್ನುವ ನಂಬಿಕೆಯಿಂದ ಹೇಳುತ್ತಿದ್ದೇನೆ. ಈ ಸಿನಿಮಾ ಎಲ್ಲರಿಗೂ ಒಂದೊಂದು ರೀತಿಯಲ್ಲಿ ತಾಕುತ್ತದೆ. ಫೈಟ್ ಇದೆ, ಪ್ರೀತಿ ಇದೆ, ತಾಕುವ ಗುಣ ಇದೆ. ಮನರಂಜನೆ, ಮೌಲ್ಯ ಎಲ್ಲವನ್ನೂ ಸೇರಿಸಿ ಅದ್ಭುತವಾದ ಸಿನಿಮಾ ಮಾಡಿದ್ದಾರೆ ಚೇತನ್ ಕೇಶವ್. ಅವರು ಚಿತ್ರರಂಗಕ್ಕೆ ಆಸ್ತಿ ಆಗಬಲ್ಲರು. ರವೀದ್ರ ಕುಮಾರ್ ಅದ್ದೂರಿಯಾಗಿ ಸಿನಿಮಾ ನಿರ್ಮಿಸಿದ್ದಾರೆ. ಅಂಥಾ ಪ್ಯಾಷನ್ ಇರುವ ನಿರ್ಮಾಪಕರು ಚಿತ್ರರಂಗದಲ್ಲಿಯೇ ಇರಬೇಕು. ಜೊತೆಗೆ ಅದ್ಭುತ ತಾರಾಗಣವಿದೆ. ಸ್ಟೆಫಿ ಪಟೇಲ್, ಮಾಳವಿಕಾ, ದತ್ತಣ್ಣ, ವಂಶಿಕಾ ಎಲ್ಲರೂ ಬಹಳ ಚೆನ್ನಾಗಿ ಅಭಿನಯ ಮಾಡಿದ್ದಾರೆ. ಈ ಎಲ್ಲಾ ಕಾರಣದಿಂದ ಪ್ರೇಕ್ಷಕರು ಈ ಸಿನಿಮಾ ನೋಡಬೇಕು.

click me!