ಶಿವಣ್ಣ ಬದುಕಿನ ಅತಿದೊಡ್ಡ ಹೋರಾಟದ ಕಥೆ: ಅಭಿಮಾನಿಗಳಿಗೆ ಕಣ್ಣೀರು ತರಿಸಿದ 'ಸರ್ವೈವರ್' ಪ್ರೋಮೋ

Published : Jul 12, 2026, 04:30 PM IST
Shivarajkumar

ಸಾರಾಂಶ

ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಸಾಕ್ಷ್ಯಚಿತ್ರದ ಪ್ರೋಮೋದಲ್ಲಿ ಶಿವರಾಜ್‌ಕುಮಾರ್, ಮಧು ಬಂಗಾರಪ್ಪ ಹಾಗೂ ನಿವೇದಿತಾ ಶಿವರಾಜ್‌ಕುಮಾರ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಇಂದು ತಮ್ಮ 64ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ಅವರು ಅಭಿಮಾನಿಗಳ ಮುಂದೆ ಒಂದು ಮನವಿಯನ್ನೂ ಇಟ್ಟಿದ್ದರು. ಕೇಕ್, ಹಾರ, ಶಾಲು ಅಥವಾ ಯಾವುದೇ ಉಡುಗೊರೆಗಳನ್ನು ತರಬೇಡಿ ಎಂದು ಕೇಳಿಕೊಂಡಿರುವ ಶಿವಣ್ಣ, ಅದರ ಬದಲು ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದರು. ಮೈಸೂರಿನ ಶಕ್ತಿಧಾಮಕ್ಕೆ ಧನಸಹಾಯ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸೋಣ ಎಂಬ ಸಂದೇಶ ನೀಡಿದ್ದರು.

ಈ ಸಂಭ್ರಮದ ನಡುವೆಯೇ ಶಿವರಾಜ್‌ಕುಮಾರ್ ಅವರ ಜೀವನದ ಹೋರಾಟವನ್ನು ದಾಖಲಿಸುವ ‘ಸರ್ವೈವರ್’ ಹೆಸರಿನ ವಿಶೇಷ ಸಾಕ್ಷ್ಯಚಿತ್ರದ ಪ್ರೋಮೋ ಬಿಡುಗಡೆಯಾಗಿದೆ. ಅನಾರೋಗ್ಯದ ಅವಧಿಯಲ್ಲಿ ಅವರು ಎದುರಿಸಿದ ಸವಾಲುಗಳು, ಮತ್ತೆ ಚೇತರಿಸಿಕೊಂಡು ಸಿನಿಮಾ ಲೋಕಕ್ಕೆ ಮರಳಿದ ಪಯಣವನ್ನು ಈ ಡಾಕ್ಯುಮೆಂಟರಿ ಅನಾವರಣಗೊಳಿಸಲಿದೆ.

ಗೀತಾ ಶಿವರಾಜ್‌ಕುಮಾರ್ ಅವರ ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಸಾಕ್ಷ್ಯಚಿತ್ರದ ಪ್ರೋಮೋದಲ್ಲಿ ಶಿವರಾಜ್‌ಕುಮಾರ್, ಮಧು ಬಂಗಾರಪ್ಪ ಹಾಗೂ ನಿವೇದಿತಾ ಶಿವರಾಜ್‌ಕುಮಾರ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಕಿಚ್ಚ ಸುದೀಪ್, ಸಾಯಿ ಕುಮಾರ್, ಕಮಲ್ ಹಾಸನ್, ನಾಗಾರ್ಜುನ, ದುನಿಯಾ ವಿಜಯ್ ಮತ್ತು ಡಾಲಿ ಧನಂಜಯ್ ಸೇರಿದಂತೆ ಅನೇಕ ಗಣ್ಯರು ಶಿವಣ್ಣ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿನ ಕೆಲವು ಭಾವನಾತ್ಮಕ ದೃಶ್ಯಗಳೂ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮನಸ್ಸನ್ನು ಮುಟ್ಟಿವೆ. ಪ್ರಸ್ತುತ ಪ್ರೋಮೋ ಮಾತ್ರ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಸಂಪೂರ್ಣ ಸಾಕ್ಷ್ಯಚಿತ್ರವನ್ನು ಗೀತಾ ಪಿಕ್ಚರ್ಸ್ ಮೂಲಕ ಬಿಡುಗಡೆ ಮಾಡಲಾಗುತ್ತದೆ.

ಅಭಿಮಾನಿಗಳಿಗೆ ಶಿವರಾಜ್‌ಕುಮಾರ್ ಮನವಿ

"ಹಾಯ್... ಎಲ್ಲರಿಗೂ ನಮಸ್ಕಾರ. ಜುಲೈ 12 ನನ್ನ ಹುಟ್ಟುಹಬ್ಬ. ಪ್ರತಿ ವರ್ಷದಂತೆ ಈ ಬಾರಿಯೂ ನಿಮ್ಮೆಲ್ಲರನ್ನು ಭೇಟಿ ಮಾಡುವುದಕ್ಕೆ ಕಾಯುತ್ತಿದ್ದೇನೆ. ಆದರೆ ಈ ಬಾರಿ ಒಂದು ಚಿಕ್ಕ ವಿನಂತಿ ಇದೆ. ದಯವಿಟ್ಟು ಕೇಕ್, ಹಾರ, ಶಾಲು ಅಥವಾ ಯಾವುದೇ ಉಡುಗೊರೆಗಳನ್ನು ತರಬೇಡಿ. ನಿಮ್ಮ ಪ್ರೀತಿ, ಶುಭಾಶಯಗಳೇ ನನಗೆ ದೊಡ್ಡ ಉಡುಗೊರೆ. ನಿಮ್ಮ ಪರವಾಗಿ ನಾನು ಒಂದು ಕೇಕ್ ಕತ್ತರಿಸುತ್ತೇನೆ. ಎಲ್ಲರೂ ಬನ್ನಿ, ಭೇಟಿಯಾಗೋಣ, ಸಂತೋಷವಾಗಿ ಸಮಯ ಕಳೆಯೋಣ," ಎಂದು ಶಿವಣ್ಣ ಮನವಿ ಮಾಡಿದ್ದರು.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿ

ಅನಾರೋಗ್ಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಶಿವರಾಜ್‌ಕುಮಾರ್ ಮತ್ತೆ ಸಿನಿಪ್ರಯಾಣದಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ಅವರ ಕೈಯಲ್ಲಿ ಹತ್ತಕ್ಕೂ ಹೆಚ್ಚು ಸಿನಿಮಾಗಳಿದ್ದು, ಇತ್ತೀಚೆಗೆ ರಾಮ್ ಚರಣ್ ಅಭಿನಯದ ಪೆದ್ದಿ ಚಿತ್ರದ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಸಿನಿಮಾದಲ್ಲಿ ನಟರಾಕ್ಷಸ ಡಾಲಿ ಧನಂಜಯ್ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಈ ವರ್ಷ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳಲ್ಲಿ ಇದೂ ಒಂದಾಗಿದೆ. ಹುಟ್ಟುಹಬ್ಬದ ಸಂಭ್ರಮ, ಅಭಿಮಾನಿಗಳ ಮೇಲಿನ ಪ್ರೀತಿ, ಸಮಾಜಸೇವೆಯ ಸಂದೇಶ ಹಾಗೂ ‘ಸರ್ವೈವರ್’ ಡಾಕ್ಯುಮೆಂಟರಿಯ ಮೂಲಕ ತಮ್ಮ ಬದುಕಿನ ಮತ್ತೊಂದು ಅಧ್ಯಾಯವನ್ನು ಶಿವರಾಜ್‌ಕುಮಾರ್ ಅಭಿಮಾನಿಗಳ ಮುಂದೆ ತೆರೆದಿಡಲು ಸಜ್ಜಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

S Janaki - Modi : ಮೇರು ಗಾಯಕಿ ಎಸ್ ಜಾನಕಿ ಅಗಲಿಕೆಗೆ ದೇಶಾದ್ಯಂತ ಕಂಬನಿ; ಪ್ರಧಾನಿ ಮೋದಿ ನುಡಿ ನಮನ
Rakky Movie Review: ಸಾಂಗ್ ಮೂಲಕ ಸಖತ್ ಸೌಂಡ್ ಮಾಡಿದ್ದ 'ರಕ್ಕಿ' ಸಿನಿಮಾಗೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿದೆ?