
ರೂಪಾ ಅಯ್ಯರ್ ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಆಜಾದ್ ಭಾರತ್’ ಸಿನಿಮಾ ಮುಂದಿನ ವರ್ಷ ಜ.2ರಂದು ದೇಶಾದ್ಯಂತ ತೆರೆಗೆ ಬರಲಿದೆ. ಪ್ರಸ್ತುತ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಚಿತ್ರಕ್ಕೆ ಈ ಹಿಂದೆ ‘ನೀರಾ ಆರ್ಯ’ ಎನ್ನುವ ಹೆಸರಿತ್ತು. ಈಗ ‘ಆಜಾದ್ ಭಾರತ್’ ಎಂದಾಗಿದೆ. ಇದು ಹಿಂದಿಯಲ್ಲಿ ಮೂಡಿ ಬರುತ್ತಿದ್ದು, ನಿರ್ದೇಶನ, ನಟನೆ ಜೊತೆಗೆ ನಿರ್ಮಾಣ ಕೂಡ ರೂಪಾ ಅಯ್ಯರ್ ಅವರದೇ. ಜಯಗೋಪಾಲ್ ರಾಜೇಂದ್ರ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ.
ಚಿತ್ರದಲ್ಲಿ 7 ಹಾಡುಗಳಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತ ಫಡ್ನವಿಸ್ ಅವರು ಈ ಚಿತ್ರದ ಹಾಡೊಂದನ್ನು ಹಾಡಿದ್ದಾರೆ. ಯಶ್ ರಾಜ್ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ನಡೆದಿದೆ ರೂಪಾ ಅಯ್ಯರ್, ‘ಕನ್ನಡಿಗರೇ ಸೇರಿ ಮಾಡಿರುವ ಈ ಬಾಲಿವುಡ್ ಚಿತ್ರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳಾ ಪಡೆಯನ್ನು ಕಟ್ಟಿದ್ದು ಹೇಗೆ, ಅದರ ಆಲೋಚನೆ ಬಂದಿದ್ದು ಹೇಗೆ, ಆ ಪಡೆ ಹೇಗೆ ಕೆಲಸ ಮಾಡಿತು ಎಂಬುದರ ಸುತ್ತಾ ಸಾಗುತ್ತದೆ.
‘ಆಜಾದ್ ಭಾರತ್’ ಸಿನಿಮಾ ಇಡೀ ಭಾರತಕ್ಕೆ ಒಂದೇ ಭಾಷೆಯ ಸಿನಿಮಾ. ಈ ಸಿನಿಮಾ ಒಂದು ರೀತಿಯಲ್ಲಿ ಒಂದೇ ಮಾತರಂ ಇದ್ದಂತೆ. ಈ ಚಿತ್ರವನ್ನು ನಾನು ಹಣಕ್ಕಾಗಿ ಅಥವಾ ಪ್ರಶಸ್ತಿಗಳಿಗಾಗಿ ಮಾಡಿದ್ದಲ್ಲ. ದೇಶ ಭಕ್ತಿಯಿಂದ ಹುಟ್ಟಿಕೊಂಡಿರುವ ಸಿನಿಮಾ. ಸಾಕಷ್ಟು ಅಧ್ಯಯನ ಮಾಡಿ ರೂಪಿಸಿರುವ ಸಿನಿಮಾ. ಇಡೀ ದೇಶಕ್ಕೆ ಈ ಸಿನಿಮಾ ತಲುಪಿದರೆ ನಮ್ಮ ಇಡೀ ತಂಡದ ಶ್ರಮ ಸಾರ್ಥಕವಾಗುತ್ತದೆ. ಈ ಚಿತ್ರವನ್ನು ಪಾರ್ಲಿಮೆಂಟ್‌ನಲ್ಲೂ ಪ್ರದರ್ಶಿಸುವ ನಿಟ್ಟಿನಲ್ಲಿ ತಯಾರಿಗಳು ನಡೆಯುತ್ತಿವೆ’ ಎಂದರು.
ಹಿತಾ ಚಂದ್ರಶೇಖರ್ ಅವರು ದುರ್ಗಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಭಾಷ್ ಚಂದ್ರಬೋಸ್ ಪಾತ್ರದಲ್ಲಿ ಶ್ರೇಯಸ್ ತಲ್ಪಾಡೆ ನಟಿಸಿದ್ದಾರೆ. ಸರಸ್ವತಿ ರಾಜಾಮಣಿ ಎಂಬ ಪಾತ್ರದಲ್ಲಿ ಜನಪ್ರಿಯ ನಟಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಸುರೇಶ್ ಒಬೆರಾಯ್, ಬಿರಾದಾರ್, ಸುಚೇಂದ್ರ ಪ್ರಸಾದ್, ಜೀ ವಾಹಿನಿಯ ಮುಖ್ಯಸ್ಥರಾದ ಸುಭಾಷ್ ಚಂದ್ರ ಮುಂತಾದವರು ತಾರಾಬಳಗದಲ್ಲಿದ್ದಾರೆ. ಜೀ ಸ್ಟುಡಿಯೋಸ್ ಮೂಲಕ ಈ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.