'ಕಾಂತಾರ' ಒಳಗಣ್ಣಿಗೊಂದಿಷ್ಟು ಬೆಳಕು ಕೊಡುವ ಚಿತ್ರ, ಅದಕ್ಯಾಕೆ ಜಾತಿ, ಧರ್ಮದ ಬಣ್ಣ?

By Nirupama K S  |  First Published Oct 21, 2022, 4:40 PM IST

ಕಾಂತಾರವೊಂದು ಅದ್ಭುತ ಕನ್ನಡದ ಸಿನಿಮಾ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹೇಳುವಂಥ ವಿಶೇಷ ಕಥೆ ಅಲ್ಲದಿದ್ದರೂ ಮನಸ್ಸಿನಗೆ ಟಚ್ ಆಗೋದು ನಮ್ಮದೇ ಸುತ್ತ ಮುತ್ತ ನಡೆಯುವ ಬದುಕಿನ ಚಿತ್ರಣಗಳು ಎಂಬ ಕಾರಣಕ್ಕೆ. ಎಲ್ಲಕ್ಕಿಂತಲೂ ಮಿಗಿಲಾಗಿ ಇಲ್ಲೊಂದು ಪ್ರಕೃತಿ ಪಾಠವಿದೆ. ಅದರ ಬಗ್ಗೆ ಏಕೆ ಚರ್ಚೆಗಳಾಗುತ್ತಿಲ್ಲ? 


ಕಾಡಿನ ನಡುವೆ ಬೆಳೆದ ಮಲೆನಾಡಿಗರಾಗಲಿ, ಸಾಗರದ ಕಿನಾರೆಯಲ್ಲಿರುವ ಘಟ್ಟದ ಕೆಳಗಿನವರಿಗಾಗಲಿ, ಭಾವನೆಗಳು, ಜೀವನಶೈಲಿ ಬೇರೆ ಬೇರೆಯಾದರೂ ಪ್ರಕೃತಿಯೊಂದಿಗೆ ಒಡನಾಡವಿರುತ್ತೆ. ಘಟ್ಟದ ಕೆಳಗಿನವರಿಗೆ ಹೊಳೆ, ಕಾಡು ಸ್ವಲ್ಪ ಹೆಚ್ಚು ಕೌತುಕ ಹುಟ್ಟಿಸಿದರೆ, ಕಾಡಿನ ನಡುವೆಯೇ ಬೆಳೆದ ಮಲೆನಾಡಿಗರಿಗೆ ಸಮುದ್ರವೆಂದರೆ ಹೆಚ್ಚು ಕುತೂಹಲ ಇರಬಹುದಷ್ಟೇ. ಒಟ್ಟಿನಲ್ಲಿ ಪ್ರಕೃತಿಯೇ ಉಸಿರು.

ನಾಗರ ಪಂಚಮಿಯಂದು ನಾಗರ ಬನಕ್ಕೆ ಹೋಗಿ ಪೂಜೆ ಮಾಡುವಾಗ, ದೀಪಾವಳಿಯಲ್ಲಿ ಗೋ ಪೂಜೆ ಮಾಡುವಾಗ ಹಾಗೂ  ಮುಖ್ಯ ಸ್ಥಳಗಳಲ್ಲಿ ದೊಂದಿ ಇಟ್ಟು ದೀಪ್ ದೀಪೋಳಿಗೆ ಕೂಗುವಾಗ, ಅದೆಲ್ಲೋ ಕಾಡಿನ ಮದ್ಯೆ ಕಾಣದಂತಿರುವ ದೈತ್ಯ ಮರದ ಕೆಳಗಿರುವ ಅಮ್ಮನವರಿಗೆ ವರ್ಷದಲ್ಲಿ ಒಮ್ಮೆ ನೇವೇದ್ಯ ಅರ್ಪಿಸಿ, ಪೂಜಿಸುವಾಗ ಆಗಲಿ, ಹೇಳಿದ್ದು ಒಂದೇ ಪಾಠ. ಪ್ರಕೃತಿಯನ್ನು ಪೂಜಿಸಿದರೆ, ಅದು ನಮ್ಮನ್ನು ರಕ್ಷಿಸುತ್ತೆ ಅಂತ. ವಿಷ ಕಾರುವ ಹಾವನ್ನೂ ಪೂಜಿಸಿದ್ದು ಪ್ರಕೃತಿಯ ಭಾಗವಾಗಿಯೇ ಹೊರತು, ಮತ್ತೇನಕ್ಕೂ ಅಲ್ಲ. ಪ್ರತಿ ಹಬ್ಬದಲ್ಲಿಯೂ ಪೂಜಿಸಿದ್ದು ಕಾಡು, ಪ್ರಾಣಿ, ಭತ್ತದ ತೆನೆ, ಕೃಷಿಗೆ ಬಳಸುವ ಸಲಕರಣೆಗಳನ್ನು. ಕಣ ಕಣದಲ್ಲಿಯೂ ಭೂ ಮಾತೆಯೇ ದೇವರೆಂದು ಹೇಳಿಕೊಟ್ಟೇ ದೊಡ್ಡವರಾದ ಜನರೇಷನ್ ನಮ್ಮದು. 

ಹ್ಯಾಟ್ಸ್ ಆಫ್ ರಿಷಬ್ ಶೆಟ್ಟಿ, ಸಿನಿಮಾ ಅಂದ್ರೆ ಇದು; 'ಕಾಂತಾರ' ನೋಡಿ ಹೊಗಳಿದ ನಟಿ ಕಂಗ

Tap to resize

Latest Videos

undefined

ವರ್ಷ ಪೂರ್ತಿ ಬರುವ ಎಲ್ಲ ಹಬ್ಬಗಳಲ್ಲಿಯೂ ಪೂಜಿಸಿದ್ದು ಪ್ರಕೃತಿಯ ಪ್ರತಿರೂಪಗಳನ್ನು. ಹಸು, ಹಾವು, ಅಮ್ಮನವರ ಬನ, ಭೂತರಾಯ...ಒಂದಾ, ಎರಡಾ? ತೀರ್ಥ ತೆಗೆದುಕೊಳ್ಳುವಾಗಲೂ ನೀರು ದೇವರು, ಆರತಿ ತೆಗೆದುಕೊಳ್ಳುವಾಗಲೂ ಬೆಂಕಿ ದೇವರೆಂದೇ ಭಕ್ತಿ ತೋರುತ್ತೇವೆ. ಬೆಳಗ್ಗೆ ಎದ್ದು ಸಮುದ್ರವಸನೇ ದೇವಿ ಹೇಳಿಕೊಳ್ಳಬೇಕು. ಭೂಮಿ ನಮ್ಮನ್ನು ಹೊತ್ತಿದ್ದಾಳೆ. ಅವಳಿಗೊಂದು ಥ್ಯಾಂಕ್ಸ್ ಹೇಳಬೇಕು ಎಂದು ನಮ್ಮ ಹಿರಿಯರು ನಮಗೆ ಹೇಳಿ ಕೊಟ್ಟಿದ್ದಾರೆ. ಓಂ ಸೂರ್ಯಾಯಾ, ಚಂದ್ರಾಯ ಹೇಳಿಕೊಳ್ಳುವಾಗಲೂ ಆ ಸೂರ್ಯ, ಚಂದ್ರರಿಗೆ ನಮಿಸುತ್ತೇವೆ. ಎಲ್ಲವೂ ನಮಗೆ ದೇವರು. ಆದರೆ, ಎಲ್ಲವೂ ಪ್ರಕೃತಿಯ ಭಾಗಗಳು. ಪೂಜಿಸುತ್ತೇವೆ, ಆರಾಧಿಸುತ್ತೇವೆ. ಅದ್ಯಾವ ರೂಪದಲ್ಲಾದರೂ ಸರಿ. 

ಶಾಲೆಗೆ ಹೋಗಿದ್ದು ಆ ಕಾಡು, ಗುಡ್ಡವನ್ನು ಹತ್ತಿಳಿದು. ಆ ನಿರ್ಜನ ಪ್ರದೇಶದಲ್ಲಿ ಒಬ್ಬರೇ ಹೋಗುವಾಗಲೂ ಯಾವ ಭಯವೂ ಕಾಡಿದ್ದು ನೆನಪಿಲ್ಲ. ಯಾಕೆಂದರೆ ಪ್ರಕೃತಿಗೆ ಅಪಚಾರವೆಸಗುವಂಥ ಕೆಲಸ ಮಾಡಿಲ್ಲ. ದೇವರ ರೂಪದಲ್ಲಿ ಆಗಾಗ ಪೂಜಿಸುತ್ತಲೇ ಇರುತ್ತೇವೆ. ಅದೇ ತಾಯಿ ನಮ್ಮನ್ನು ಕಾಪಾಡುತ್ತಾಳೆ ಎನ್ನುವ ದೃಢ ನಂಬಿಕೆ ನಮ್ಮಲ್ಲಿತ್ತು. ಈಗಲೂ ಇವೆ. ಯಾವುದೇ ವಿಘ್ನಗಳಲ್ಲಿದೇ ಮೈಲುಗಟ್ಟಲೇ ವರ್ಷಗಳ ಕಾಲ ಶಾಲೆಗೆ ನಡೆದು ಹೋಗಿ ಓದಿ, ಬೆಳೆದಿದ್ದೇವೆ. 

ಕಾಂತಾರ ಹೃದಯಕ್ಕೆ ನಾಟಿದ್ದೂ ಇದೇ ಕಾರಣಕ್ಕೆ
ರಿಷಭ್ ಶೆಟ್ಟಿ ತಮ್ಮ ಕಾಂತಾರ ಚಿತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದೂ ಇದನ್ನೇ. ಸುಶಿಕ್ಷಿತಳಲ್ಲದ ಕಮಲಕ್ಕನ ಪಾತ್ರ ಪ್ರತಿಯೊಬ್ಬ ಅಮ್ಮನನ್ನೂ ಕಾಡುವುದು ಅದೇ ಕಾರಣಕ್ಕೆ. ಮಗನ ಮೇಲೆ ಪ್ರೀತಿ ಇದೆ ಅವಳಿಗೆ. ಆದರೆ, ಅವನಿಗೆ ಬೇಜವಾಬ್ದಾರಿ ಎನ್ನುವ ಸಿಟ್ಟಿನೊಂದಿಗೆ ಪದೇ ಪದೆ ಶಿಕಾರಿಗೆ ಹೋಗಬೇಡ, ಮರ ಕಡೀಬೇಡ ಅಂತ ಹೇಳುತ್ತಲೇ ಇರುತ್ತಾಳೆ. ಕೇಳದ ಮಗ ಹಾಗೂ ಆತನ ಫ್ರೆಂಡ್ಸ್ ಮೇಲೆ ತನ್ನ ಕೋಪವನ್ನು ವ್ಯಕ್ತಪಡಿಸುತ್ತಾಳೆ. ಅಷ್ಟೇ ಅಲ್ಲ ಆಕೆಯೊಬ್ಬ ಪಕ್ಕಾ Feminist. ಲೀಲಾನ ಮೇಲೆ ಶಿವ ಕೈ ಮಾಡಿದಾಗ, ಹೆಣ್ಣಿನ ಮೇಲೆ ಕೈ ಮಾಡುವಷ್ಟು ಮುಂದುವರಿದ್ಯಾ ಅಂತಾನೇ ಆಕ್ರೋಶ ವ್ಯಕ್ತಪಡಿಸುತ್ತಾಳೆ. ಆ ತಾಯಿಯೂ ತನ್ನ ಮಗನಿಗೆ ಹೇಳಿ ಕೊಟ್ಟಿದ್ದು ಇದೇ ಪ್ರಕೃತಿಯನ್ನು ಪ್ರೀತಿಸುವ (Nature Love) ಪಾಠವೇ ಹೊರತು ಮತ್ತೇನೂ ಇಲ್ಲ. ಪ್ರಕೃತಿಯೂ ತಾಯಿಯೇ ಅಲ್ಲವೇ? 

ಕಾಂತಾರದ ಮೊದಲ ದೃಶ್ಯ: ಅಮ್ಮ ತಬ್ಬಿಕೊಂಡ ಹಾಗೆ, ಮಾವನ ಪ್ರೀತಿ ಬೇಕೆಂದು ಹೇಳುವುದ್ಯಾಕೆ?

ಎಷ್ಟು ದಿನ ಕಾಡಲ್ಲಿ ಮರ ಕಡಿದು, ಪ್ರಾಣಿ ಶಿಕಾರಿ ಮಾಡುತ್ತಾನೋ ಶಿವ, ಅಲ್ಲೀವರಿಗೂ ಅವನಿಗೆ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ರಾತ್ರಿ ಬೇಡದ ಕನಸುಗಳು ಕಾಡುತ್ತಲೇ ಇರುತ್ತವೆ. ಹಂದಿ ಅಟ್ಟಿಸಿಕೊಂಡು ಹೋಗುವಂತೆ ಭಾಸವಾಗುತ್ತಿರುತ್ತದೆ. ಪ್ರಕೃತಿಗೆ ಅಪಚಾರ ಎಸಗುವವರಿಗೆ ಎಲ್ಲಿಯ ನೆಮ್ಮದಿ ಹೇಳಿ? ಯಾವಾಗ ಅವನಿಗೆ ತಾನು ಮಾಡುವುದು ತಪ್ಪೆಂಬ ಅರಿವಾಯಿತೋ, ಆಗ ಪ್ರಕೃತಿಯೂ ಅವನನ್ನು ತಬ್ಬಿ ಕೊಳ್ಳುತ್ತದೆ. ಪಂಜುರ್ಲಿಗೂ ಖುಷಿಯಾಗುತ್ತದೆ. ಇದರಲ್ಲಿ ಪ್ರಕೃತಿ ಕಾಪಾಡಬೇಕು ಅಂತ ಪಾಠ ಬಿಟ್ಟರೆ, ಅದೆಲ್ಲಿಯ ಜಾತಿ (Caste), ಧರ್ಮಗಳು (Religion) ತೂರಿ ಬಂದವೋ ಗೊತ್ತಿಲ್ಲ. ನಾವು ನಿಸರ್ಗವನ್ನು ಪೂಜಿಸಿದ್ದ, ಪೂಜಿಸುತ್ತಿರುವ ರೀತಿ ಬೇರೆ ಇರಬಹುದು. ಆದರೆ, ಉದ್ದೇಶ ಎಲ್ಲರದ್ದೂ ಒಂದೇ ಅಲ್ವಾ? ತಿಳುವಳಿಕೆಯ ಬೇಲಿಯಾಚೆಯೇ ನಂಬಿಕೆ ಎಂಬ ಜಗತ್ತು ತೆರೆದು ಕೊಳ್ಳುವುದಲ್ಲವೇ? 

ಭೂತವೋ, ದೆವ್ವವೋ, ದೇವವೋ, ದೇವಿಯೂ ಎಲ್ಲವನ್ನೂ ಪೂಜಿಸುವುದು ಪ್ರಕೃತಿಯ ಭಾಗಗಳಾಗಿಯೇ ಹೊರತು, ಮತ್ತೇನೂ ಅಲ್ಲ. ನಿಸರ್ಗವನ್ನು ಪೂಜಿಸಿ ಎಂದು ಕಾಂತಾರ ಮೂಲಕ ಸಂದೇಶ ಸಾರಿದ್ದಾರಷ್ಟೇ. ಅದಕ್ಯಾಕೆ ಏನೇನೋ ಅರ್ಥ ಕಲ್ಪಿಸೋದು, ವಿವರಣೆ ನೀಡುವುದು? ಯಾವಾಗ ಊರಿನ ಮಂದಿ ಎಲ್ಲರೂ ಮರ ಕಡಿಯೋದ ಬಿಟ್ಟು, ಶಿಕಾರಿ ಮಾಡೋದ ನಿಲ್ಲಿಸುತ್ತಾರೋ ಪಂಜುರ್ಲಿಗೂ ಖುಷಿಯಾಗುತ್ತೆ. ಕಾಡಿನ ರಕ್ಷಕರ ಅರಣ್ಯಾಧಿಕಾರಿಯನ್ನೇ ಆಶೀರ್ವದಿಸುತ್ತೆ. ಇಲ್ಲಿ ಪಂಜುರ್ಲಿ, ಕ್ಷೇತ್ರಪಾಲ ಸಹ ಪ್ರಕೃತಿಯನ್ನು ಪ್ರತಿನಿಧಿಸುತ್ತವೆ ಅಷ್ಟೇ. ಸಾಕು ಚರ್ಚೆಗಳು ನಿಲ್ಲಲಿ. ಸುಖಾ ಸುಮ್ಮನೆ ಇಂಥದ್ದೊಂದು ಅದ್ಭುತ ಕನ್ನಡ ಸಿನಿಮಾಕ್ಕೆ ಯಾವುದೇ ಜಾತಿ, ಧರ್ಮದ ಬಣ್ಣ ಬಳಿಯೋದು ಬೇಡ. ಪರಿಸರ ಪ್ರೇಮವನ್ನು ಸಾರುವ ಚಿತ್ರವೆಂದು ಚರ್ಚೆಯಾಗಲಿ ಸಾಕು. ವಿಶ್ವದ ಎಲ್ಲ ದೊಡ್ಡ ದೊಡ್ಡ ಪ್ರಶಸ್ತಿ, ಪುನಸ್ಕಾರಗಳೂ ಈ ಚಿತ್ರಕ್ಕೆ ಸಿಗಲಿ. ನಮ್ಮ ಕನ್ನಡ ಭಾಷೆ (Kannada Language), ನಾಡು (Karnataka State), ಸಂಸ್ಕೃತಿಗೆ (Culture) ಯಾವುದೇ ರೀತಿಯ ಅಪಚಾರವಾಗುವುದು ಬೇಡವಷ್ಟೇ. 

Kantara ನೋ ಕಾಮೆಂಟ್ಸ್‌ ಅಂದರೆ.....ನೋ ಕಾಮೆಂಟ್ಸ್‌; ವಿವಾದದ ಬಗ್ಗೆ ರಿಷಬ್ ಶೆಟ್ಟಿ ಮಾತು

 

 

click me!