
ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು (ಜುಲೈ 7) ತಮ್ಮ 43ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು, ಸಿನಿ ತಾರೆಯರು ಹಾಗೂ ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದೇ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಫೌಂಡೇಶನ್ ಬಿಡುಗಡೆ ಮಾಡಿರುವ ವಿಶೇಷ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿದೆ.
ಸಿನಿಮಾಗಳ ಮೂಲಕ ಮಾತ್ರವಲ್ಲ, ಸಮಾಜಮುಖಿ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ, ತಮ್ಮ ಫೌಂಡೇಶನ್ ಮೂಲಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಾ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಈ ನೆರವಿನಿಂದ ಬದುಕು ಬದಲಾಗಿರುವ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ವಿಡಿಯೋದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು, ನಟನಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.
"ರಿಷಬ್ ಸರ್ ನೆರವಿಲ್ಲದಿದ್ದರೆ ನನ್ನ ಓದು ನಿಂತು ಹೋಗುತ್ತಿತ್ತು"
ವಿಡಿಯೋದಲ್ಲಿ ಮಾತನಾಡಿದ ವಿದ್ಯಾರ್ಥಿನಿಯೊಬ್ಬಳು, "ಒಂದೂವರೆ ವರ್ಷದ ಹಿಂದೆ ತಂದೆಯನ್ನು ಕಳೆದುಕೊಂಡೆವು. ಮನೆಯ ಸಂಪೂರ್ಣ ಜವಾಬ್ದಾರಿ ತಾಯಿಯ ಮೇಲಿತ್ತು. ಅಂತಹ ಕಷ್ಟದ ಸಮಯದಲ್ಲಿ ರಿಷಬ್ ಶೆಟ್ಟಿ ಸರ್ ನೀಡಿದ ವಿದ್ಯಾರ್ಥಿವೇತನ ನನ್ನ ಶಿಕ್ಷಣ ಮುಂದುವರಿಸಲು ದೊಡ್ಡ ಆಸರೆಯಾಯಿತು" ಎಂದು ಭಾವುಕರಾಗಿ ಹೇಳಿದ್ದಾಳೆ.
ಇನ್ನೊಬ್ಬ ಪೋಷಕರು, "ಮಕ್ಕಳ ಶಾಲಾ ಶುಲ್ಕ ಕಟ್ಟುವುದೇ ನಮಗೆ ದೊಡ್ಡ ಸವಾಲಾಗಿತ್ತು. ಅವರಿಗೆ ಇಷ್ಟಪಟ್ಟ ಶಿಕ್ಷಣ ಕೊಡಲು ಸಾಧ್ಯವಾಗುತ್ತಿರಲಿಲ್ಲ. ರಿಷಬ್ ಶೆಟ್ಟಿ ಫೌಂಡೇಶನ್‌ನ ಸಹಾಯ ನಮ್ಮ ಕುಟುಂಬಕ್ಕೆ ಹೊಸ ಭರವಸೆ ನೀಡಿತು" ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಗ್ರಾಮಸ್ಥರೂ ನಟನ ಸಾಮಾಜಿಕ ಕಾಳಜಿಯನ್ನು ಕೊಂಡಾಡಿದ್ದು, "ತಾವೊಬ್ಬರೇ ಬೆಳೆಯದೇ, ತಮ್ಮ ಊರಿನ ಮಕ್ಕಳ ಭವಿಷ್ಯಕ್ಕೂ ಬೆಳಕು ನೀಡುತ್ತಿದ್ದಾರೆ. ಅವರ ಸಹಾಯ ಅನೇಕ ಕುಟುಂಬಗಳ ಬದುಕು ಬದಲಿಸಿದೆ" ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಕೆಲವರು ಮಾತನಾಡುವ ವೇಳೆ ಭಾವುಕರಾಗಿರುವ ದೃಶ್ಯಗಳೂ ವಿಡಿಯೋದಲ್ಲಿವೆ.
"ಒಂದು ಸಣ್ಣ ಒಳ್ಳೆಯ ಕಾರ್ಯ, ನಾಳೆಯ ಉಜ್ವಲ ಸಮಾಜ"
ವಿಡಿಯೋದೊಂದಿಗೆ ಫೌಂಡೇಶನ್ ಮಹತ್ವದ ಸಂದೇಶವನ್ನೂ ಹಂಚಿಕೊಂಡಿದೆ. "ಶಿಕ್ಷಣವು ಕೇವಲ ಜೀವನ ಬದಲಿಸುವುದಲ್ಲ, ಭವಿಷ್ಯ ರೂಪಿಸುವ ಶಕ್ತಿ ಹೊಂದಿದೆ. ಪ್ರತಿಯೊಬ್ಬ ಅರ್ಹ ವಿದ್ಯಾರ್ಥಿಗೂ ಕನಸು ಕಾಣುವ ಅವಕಾಶ ಸಿಗಬೇಕು ಎಂಬ ನಂಬಿಕೆಯಿಂದ ವಿದ್ಯಾರ್ಥಿವೇತನ ಯೋಜನೆ ನಡೆಸುತ್ತಿದ್ದೇವೆ. ಪ್ರತಿಯೊಂದು ನೆರವೂ ಉಜ್ವಲ ಭವಿಷ್ಯ ಮತ್ತು ಉತ್ತಮ ಸಮಾಜದತ್ತ ನಮ್ಮ ಸಣ್ಣ ಹೆಜ್ಜೆಯಾಗಿದೆ" ಎಂದು ತಿಳಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, "ರಿಯಲ್ ಹೀರೋ", "ಮಾನವೀಯತೆಗೆ ಮತ್ತೊಂದು ಹೆಸರು ರಿಷಬ್ ಶೆಟ್ಟಿ", "ಇದೇ ನಿಜವಾದ ಸ್ಟಾರ್‌ಡಮ್" ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಲವರು ಹುಟ್ಟುಹಬ್ಬದ ಶುಭಾಶಯ ಕೋರಿ, ಅವರ ಮುಂದಿನ ಸಿನಿಮಾಗಳಿಗಾಗಿ ಕಾತರ ವ್ಯಕ್ತಪಡಿಸಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ರಿಷಬ್ ಶೆಟ್ಟಿ ಹಲವು ಬಹುನಿರೀಕ್ಷಿತ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಸಿನಿಪ್ರಿಯರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿದ್ದು, ನಟನ ಹೊಸ ಅವತಾರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.