ಪ್ರತೀ ತಿಂಗಳು ಮಿಡ್‌ ನೈಟ್‌ ಶೋ ನೋಡೋ ಒಬ್ಬನ ಭೀಕರ ಸಾವು: ಕೃಷ್ಣ ಟಾಕೀಸ್‌ನಲ್ಲಿ ದೆವ್ವದ ಮಿಸ್ಟರಿ

By Suvarna NewsFirst Published Apr 17, 2021, 11:19 AM IST
Highlights

ಕೃಷ್ಣ ಟಾಕೀಸ್‌ ಥ್ರಿಲ್ಲಿಂಗ್ ದೆವ್ವದ ಕಥೆ | ಸಾವಿನ ಮಿಸ್ಟರಿಯನ್ನು ಭೇದಿಸಲು ಹೊರಟ ನಾಯಕನೆದುರು ಬಿಚ್ಚಿಕೊಳ್ಳುತ್ತೆ ಚಿತ್ರ ವಿಚಿತ್ರ ಕಥೆಗಳು | ಕೃಷ್ಣ ಟಾಕೀಸ್‌ ಸಿನಿಮಾದ ಮಿಸ್ಟರಿ

ಚಿತ್ರ: ಕೃಷ್ಣ ಟಾಕೀಸ್‌

ತಾರಾಗಣ: ಅಜಯ್‌ ರಾವ್‌, ಸಿಂಧೂ ಲೋಕನಾಥ್‌, ಅಪೂರ್ವ, ಚಿಕ್ಕಣ್ಣ, ಯಶ್‌ ಶೆಟ್ಟಿ, ಪ್ರಮೋದ್‌ ಶೆಟ್ಟಿ

ನಿರ್ದೇಶನ: ವಿಜಯಾನಂದ

ನಿರ್ಮಾಣ: ಗೋವಿಂದ ರಾಜು

ಸಂಗೀತ: ಶ್ರೀಧರ್‌ ವಿ ಸಂಭ್ರಮ್‌

ಛಾಯಾಗ್ರಾಹಣ: ಅಭಿಷೇಕ್‌ ಕಾಸರಗೋಡು

ರೇಟಿಂಗ್‌: 3

-ಪ್ರಿಯಾ ಕೆರ್ವಾಶೆ

ಕೃಷ್ಣ ಟಾಕೀಸ್‌ ಬಾಲ್ಕನಿ, ಹದಿಮೂರು ನಂಬರಿನ ಆ ಸೀಟು, ಪ್ರತೀ ತಿಂಗಳ ಒಂದು ನಿರ್ದಿಷ್ಟದಿನ ಮಿಡ್‌ ನೈಟ್‌ ಶೋನಲ್ಲಿ ಆ ಸೀಟ್‌ನಲ್ಲಿ ಕೂರುವ ವ್ಯಕ್ತಿ ನಿಗೂಢವಾಗಿ ಭೀಕರವಾಗಿ ಸಾವನ್ನಪ್ಪುತ್ತಾನೆ. ಹಾಗೆ ಸಾಯುವವರಲ್ಲೊಬ್ಬ ನಾಯಕನ ಗೆಳೆಯ. ಮಿತ್ರನ ಸಾವಿನ ಮಿಸ್ಟರಿಯನ್ನು ಭೇದಿಸಲು ಹೊರಟ ನಾಯಕನೆದುರು ಚಿತ್ರ ವಿಚಿತ್ರ ಕಥೆಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅವುಗಳಿಗೆ ಮುಖಾಮುಖಿಯಾಗುತ್ತಾ ಆತ ಸತ್ಯವನ್ನು ಹೇಗೆ ಹೊರ ತೆಗೆಯುತ್ತಾನೆ ಮತ್ತು ಆ ಸತ್ಯ ಏನು ಅನ್ನುವುದೇ ಕೃಷ್ಣ ಟಾಕೀಸ್‌ ಸಿನಿಮಾದ ಮಿಸ್ಟರಿ.

ಆರಂಭದ ಒಂದಿಷ್ಟುಹೊತ್ತು ಅನಗತ್ಯ ಮಾತು, ದೃಶ್ಯಗಳನ್ನು ಸಹಿಸಿಕೊಳ್ಳೋದು ಅನಿವಾರ್ಯ. ಇನ್ನೇನು ಸಣ್ಣ ಮಂಪರು ಬಂತು ಅನ್ನುವಾಗ ‘ನೈಟಿ ಮಾತ್ರ ಹಾಕಬೇಡ ಮೇನಕಾ, ನಮ್ಗೆ ನೈಂಟಿ ಹೊಡ್ದಂಗಾಯ್ತದೆ ಜೀವಕ್ಕ’ ಅನ್ನೋ ಹಾಡು ಬಡಿದೆಬ್ಬಿಸುತ್ತೆ. ಮುಂದೆ ಮತ್ತೆ ಒಂದಿಷ್ಟುಹೊತ್ತು ಪ್ರೇಕ್ಷಕರನ್ನು ರೆಸ್ಟ್‌ ಮಾಡಲು ಬಿಡುತ್ತಾರೆ ನಿರ್ದೇಶಕರು. ಯಾವಾಗ ನಾಯಕ ಗೆಳೆಯನ ಸಾವಿನ ಜಾಡು ಹಿಡಿದು ಸಾಗುತ್ತಾನೋ ಆವಾಗಿಂದ ಕಥೆಯ ರಿಯಲ್‌ ಆರಂಭ. ಅಲ್ಲಿಂದ ಕೊನೆವರೆಗೂ ನಿದ್ದೆಗೆ ನೋ ಚಾನ್ಸ್‌. ಅವರಿವರ ಮಾತಲ್ಲಿ, ನಿರೂಪಣೆಯಲ್ಲಿ ಬಂದು ಹೋಗುವ ದೆವ್ವ ಕೊನೆಯಲ್ಲಿ ರಿಯಲ್ಲಾಗಿ ಕಾಣಿಸಿಕೊಂಡು ದಂಗು ಬಡಿಸುತ್ತದೆ.

ಕೃಷ್ಣ ಟಾಕೀಸ್‌ನಲ್ಲಿ ಪತ್ರಕರ್ತನಾದ ನಟ ಅಜಯ್..!

ಆದರೆ ಭಯ ಹುಟ್ಟಿಸಲ್ಲ ಅನ್ನೋದು ವಿಶೇಷ. ಸೆಕೆಂಡ್‌ ಹಾಫ್‌ನಲ್ಲಿ ನಿರ್ದೇಶಕರು ಕಥೆ ಹೇಳಿದ ರೀತಿ ಚೆನ್ನಾಗಿದೆ. ಕಥೆಯ ಎಳೆಗಳು ಸ್ವಲ್ಪ ಹೆಚ್ಚಾದವೇನೋ ಅನಿಸಿದರೂ ಅವುಗಳನ್ನು ಸಿಕ್ಕಾಗದಂತೆ ಕೊಂಡೊಯ್ದ ರೀತಿಗೆ ಹ್ಯಾಟ್ಸಾಫ್‌ ಹೇಳಲೇಬೇಕು. ಇಷ್ಟಾಗಿಯೂ ಪ್ಯಾರಾ ನಾರ್ಮಲ್‌ ಅನುಭವಗಳ ಬಗ್ಗೆ ವಿವರಣೆ ಕೊಟ್ಟು, ಕೊನೆಗೆ ರಿಯಲ್‌ ದೆವ್ವವನ್ನು ತಂದದ್ದು ತೀರಾ ಅಸಹಜ ಅನಿಸಬಹುದು, ಹೊಟ್ಟೆಗೆ ಹಾಕ್ಕೊಳ್ಳದೇ ವಿಧಿಯಿಲ್ಲ.

ಆ್ಯಕ್ಟಿಂಗ್‌ ವಿಚಾರಕ್ಕೆ ಬಂದ್ರೆ ವಿಲನ್‌ಗಳ ನಟನೆ ಗಮನಸೆಳೆಯುತ್ತೆ. ಅದರಲ್ಲೂ ಟೋನಿ ಪಾತ್ರಧಾರಿ ಯಶ್‌ ಶೆಟ್ಟಿನಟನೆ ಚೆನ್ನಾಗಿದೆ. ಅಜಯ್‌ ರಾವ್‌ ಆ್ಯಕ್ಟಿಂಗ್‌ ಬಗ್ಗೆ ಎರಡು ಮಾತಿಲ್ಲ. ಸಿಂಧೂ ಲೋಕನಾಥ್‌ ಪ್ರತಿಭೆ ಮೆರೆದಿದ್ದಾರೆ. ಅಪೂರ್ವ ಮಿಂಚಿನಂತೆ ಅಲ್ಲಲ್ಲಿ ಬಂದು ಹೋಗುವ ಕಾರಣ ಹೆಚ್ಚಿನ ಅಭಿನಯ ನಿರೀಕ್ಷಿಸುವಂತಿಲ್ಲ. ಶ್ರೀಧರ್‌ ಸಂಭ್ರಮ ಸಂಗೀತ ಸಂಯೋಜನೆಯ ಹಾಡುಗಳಲ್ಲಿ ಜೋಶ್‌ ಇದೆ. ಆದರೆ ಹಾಡುಗಳ ಮಿಸ್‌ಪ್ಲೇಸ್‌ಮೆಂಟ್‌ನಿಂದಾಗಿ ಅವು ನಿರೀಕ್ಷಿತ ಪರಿಣಾಮ ಬೀರೋದಿಲ್ಲ. ಅಭಿಷೇಕ್‌ ಕಾಸರಗೋಡು ಸಿನಿಮಾಟೋಗ್ರಫಿ ಪರಿಣಾಮಕಾರಿಯಾಗಿ ಬಂದಿದೆ. ಒಟ್ಟಾರೆ ಸಿನಿಮಾದಲ್ಲಿ ಮನರಂಜನೆಗೆ ಮೋಸವಿಲ್ಲ.

click me!