ದರ್ಶನ್‌ಗೆ ಬೇಲಾ? ಜೈಲಾ? ಇಂದು ಆದೇಶ: ಬೆನ್ನು ಸರ್ಜರಿಗೆ ಚಿಕಿತ್ಸೆ ಪಡೆಯದಿದ್ರೆ ಮೂತ್ರ ನಿಯಂತ್ರಣ ಸಮಸ್ಯೆ

By Kannadaprabha NewsFirst Published Oct 30, 2024, 9:27 AM IST
Highlights

ಬೆನ್ನುಹುರಿ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕಾಗಿ ಮಧ್ಯಂತರ ಜಾಮೀನು ನೀಡುವಂತೆ ಕೋರಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಸಲ್ಲಿಸಿರುವ ಅರ್ಜಿ ಕುರಿತ ಆದೇಶವನ್ನು ಹೈಕೋರ್ಟ್‌ ಬುಧವಾರ ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದೆ. 

ಬೆಂಗಳೂರು (ಅ.30): ಬೆನ್ನುಹುರಿ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕಾಗಿ ಮಧ್ಯಂತರ ಜಾಮೀನು ನೀಡುವಂತೆ ಕೋರಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಸಲ್ಲಿಸಿರುವ ಅರ್ಜಿ ಕುರಿತ ಆದೇಶವನ್ನು ಹೈಕೋರ್ಟ್‌ ಬುಧವಾರ ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದೆ. ಜಾಮೀನು ಕೋರಿ ನಟ ದರ್ಶನ್‌ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ಮಧ್ಯೆ ಬೆನ್ನುಹುರಿ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ವೈದ್ಯಕೀಯ ವರದಿ ಆಧರಿಸಿ ಮಧ್ಯಂತರ ಜಾಮೀನು ನೀಡಬೇಕು ಎಂದು ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ದರ್ಶನ್‌ ಪರ ವಕೀಲರು ಮತ್ತು ತನಿಖಾಧಿಕಾರಿಗಳ (ಪ್ರಾಸಿಕ್ಯೂಷನ್‌) ಪರ ವಿಶೇಷ ಸರ್ಕಾರಿ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ಬುಧವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ದರ್ಶನ್‌ ಪರ ಹಿರಿಯ ವಕೀಲ ಸಿ.ವಿ. ನಾಗೇಶ್‌, ದರ್ಶನ್‌ ಬೆನ್ನುಹುರಿ/ನರದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಸಾಂಪ್ರದಾಯಿಕ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಬೆನ್ನು ಮೂಳೆಯ ಎಂಆರ್‌ಐ ಸ್ಕ್ಯಾನ್ ಮಾಡಲಾಗಿದೆ. ದರ್ಶನ್‌ ಬೆನ್ನಿನ ಎಲ್-5 ಎಸ್-1 ಡಿಸ್ಕ್‌ನಲ್ಲಿ ನ್ಯೂನತೆ ಕಂಡುಬಂದಿದೆ. ದರ್ಶನ್‌ಗೆ ಓಡಾಡಲು ಆಗುತ್ತಿಲ್ಲ ಹಾಗೂ ಕುಳಿತುಕೊಳ್ಳಲು ಆಗುತ್ತಿಲ್ಲ. ನರದ ತೊಂದರೆಯಿಂದ ಕಾಲಿನಲ್ಲಿ ಸ್ಪರ್ಶದ ಸಮಸ್ಯೆ ಆರಂಭವಾಗಿದೆ. ಕಾಲಿನಲ್ಲಿ ಶಕ್ತಿ ಕಳೆದುಕೊಳ್ಳುವಂತಾಗಲಿದೆ. ಚಿಕಿತ್ಸೆ ಪಡೆಯದೇ ಇದ್ದರೆ ಮೂತ್ರ ನಿಯಂತ್ರಣ ಸೇರಿ ದೀರ್ಘಾವಧಿಯ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಲಿದ್ದಾರೆ ಎಂಬುದಾಗಿ ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯ ನರರೋಗ ತಜ್ಞರಾದ ವಿಶ್ವನಾಥ್‌ ಅವರು ವರದಿ ನೀಡಿದ್ದಾರೆ ಎಂದು ವಿವರಿಸಿದರು.

Latest Videos

ಆಸ್ಪತ್ರೆಗೆ ದಾಸ ಶಿಫ್ಟ್‌: ವಿಮ್ಸ್ ಆಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್.. ಸದ್ಯದಲ್ಲೇ ದರ್ಶನ್‌ಗೆ ಸರ್ಜರಿ

ದರ್ಶನ್‌ ಈಗಾಗಲೇ ಎರಡು ಬಾರಿ ಮೈಸೂರಿನ ಖಾಸಗಿ ಆಸ್ಪತ್ರೆ ಅಪೋಲೋದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ತಮ್ಮದೇ ಖರ್ಚಿನಲ್ಲಿ ಈಗ ಅಲ್ಲಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ ಸಾಕಷ್ಟು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ಹಾಗೂ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿವೆ. ಮೈಸೂರಿನಲ್ಲಿ ಚಿಕಿತ್ಸೆ ಪಡೆಯುವುದರಿಂದ ಪ್ರಾಸಿಕ್ಯೂಷನ್‌ ಸಾಕ್ಷಿಗೂ ಯಾವುದೇ ಸಮಸ್ಯೆಯಾಗುವುದಿಲ್ಲ. ಆರಂಭದಲ್ಲಿ ಮೂರು ತಿಂಗಳು ಮಧ್ಯಂತರ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

ಈ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ತನಿಖಾಧಿಕಾರಿಗಳ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನಕುಮಾರ್‌, ವೈದ್ಯಕೀಯ ಚಿಕಿತ್ಸೆ ಪಡೆಯಲು ಜಾಮೀನು ನೀಡಬಹುದು. ಅದಕ್ಕೆ ನಾವು ಆಕ್ಷೇಪಿಸುವುದಿಲ್ಲ. ಆದರೆ, ಎಷ್ಟು ದಿನ ಜಾಮೀನು ನೀಡಬೇಕಿದೆ ಎಂಬುದು ಮುಖ್ಯ. ಅನಿರ್ದಿಷ್ಟಾವಧಿಗೆ ವೈದ್ಯಕೀಯ ಚಿಕಿತ್ಸೆಗೆ ಜಾಮೀನು ನೀಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ತಜ್ಞ ವೈದ್ಯರನ್ನು ಒಳಗೊಂಡ ವೈದ್ಯಕೀಯ ಮಂಡಳಿ ರಚಿಸಿ, ಅವರು ನೀಡುವ ವರದಿಯನ್ನು ಆಧರಿಸಿ ದರ್ಶನ್‌ಗೆ ವೈದ್ಯಕೀಯ ಜಾಮೀನು ಮಂಜೂರು ಮಾಡಬೇಕು. ನಾಳೆಯೇ ದರ್ಶನ್‌ ಅವರು ಬೆಂಗಳೂರಿಗೆ ಬಂದು ಇಲ್ಲಿ ವೈದ್ಯಕೀಯ ಮಂಡಳಿಯ ತಜ್ಞರ ತಪಾಸಣೆಗೆ ಒಳಗಾಗಲಿ. ವೈದ್ಯರು ಏನೆಲ್ಲಾ ಚಿಕಿತ್ಸೆ, ಎಷ್ಟು ದಿನ ಚಿಕಿತ್ಸೆ ಅಗತ್ಯವಿದೆ ಎಂದು ವರದಿ ನೀಡಲಿ. ಅದನ್ನು ಆಧರಿಸಿ ನ್ಯಾಯಾಲಯ ನಿರ್ಧರಿಸಬೇಕು ಎಂದು ಕೋರಿದರು.

ವಕ್ಫ್ ಆಸ್ತಿ: ರೈತರ ಒಂದಿಂಚೂ ಭೂಮಿ ಕಸಿಯಲು ಬಿಡಲ್ಲ: ಬಿ.ವೈ.ವಿಜಯೇಂದ್ರ

ಈ ವಾದವನ್ನು ಬಲವಾಗಿ ಕ್ಷೇಪಿಸಿದ ಸಿ.ವಿ. ನಾಗೇಶ್‌, ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯ ನರರೋಗ ತಜ್ಞರು ವರದಿ ನೀಡಿದ್ದಾರೆ. ಆ ವರದಿಯನ್ನು ಅನುಮಾನಿಸಲು ಕಾರಣಗಳೇ ಇಲ್ಲ. ಬೆಂಗಳೂರಿಗೆ ಏಕೆ ಕರೆದುಕೊಂಡು ತಪಾಸಣೆ ನಡೆಸಬೇಕು. ಈಗಾಗಲೇ ಮೈಸೂರಿನಲ್ಲಿ ಚಿಕಿತ್ಸೆ ಪಡೆಯಲಾಗಿದೆಯಲ್ಲವೇ? ಬಳ್ಳಾರಿಯಲ್ಲಿ ಪರೀಕ್ಷೆ ನಡೆಸಲಾಗಿದೆಯೇಲ್ಲವೇ? ಇನ್ನೆಷ್ಟು ಸಲ ಪರೀಕ್ಷೆ ನಡೆಸಿ ವರದಿ ಪಡೆಯಬೇಕು. ಮೈಸೂರಿನಲ್ಲಿ ಏಕೆ ಚಿಕಿತ್ಸೆ ಕೊಡಬಾರದು? ಖಾಸಗಿ ಆಸ್ಪತ್ರೆಯಲ್ಲಿ ವರದಿ ಪಡೆದರೆ ಸಮಸ್ಯೆ ಏನು ಎಂದು ಪ್ರಶ್ನಿಸಿದರಲ್ಲದೆ, ವೈದ್ಯಕೀಯ ತುರ್ತು ಇರುವುದರಿಂದ ದರ್ಶನ್‌ಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಕೋರಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಬುಧವಾರ ಮಧ್ಯಂತರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಆದೇಶ ಪ್ರಕಟಿಸಲಾಗುವುದು ಎಂದು ತಿಳಿಸಿತು.

click me!