
ಕೊಡಗು (ಏ.06):ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮದ ಬೆನ್ನಲ್ಲೇ ರಶ್ಮಿಕಾ ಪೋಷಕರು ತಮ್ಮ ಮಗಳಿಗೆ ತವರಿನಿಂದ ಅತ್ಯಂತ ಬೆಲೆಬಾಳುವ 'ಮದುವೆ ಉಡುಗೊರೆ'ಯನ್ನು ನೀಡಿದ್ದಾರೆ. ವಿರಾಜಪೇಟೆಯಲ್ಲಿದ್ದ ಐಶಾರಾಮಿ ಬಂಗಲೆ ಹಾಗೂ ಸುತ್ತಲಿನ ಜಾಗವನ್ನು ಮಗಳ ಹೆಸರಿಗೆ ಮಾಡಿಕೊಟ್ಟಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ತಂದೆ ಮದನ್ ಮಂದಣ್ಣ ಮತ್ತು ತಾಯಿ ಸುಮನ್ ಮಂದಣ್ಣ ಅವರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕುಕ್ಲೂರಿನಲ್ಲಿರುವ ತಮ್ಮ ಕನಸಿನ ಐಶಾರಾಮಿ ಮನೆ 'ಸೆರಿನಿಟಿ'ಯನ್ನು (Serenity) ಈಗ ಅಧಿಕೃತವಾಗಿ ಮಗಳ ಹೆಸರಿಗೆ ವರ್ಗಾಯಿಸಿದ್ದಾರೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ವಿಶೇಷ ಉಡುಗೊರೆಯಾಗಿ ಈ ಆಸ್ತಿಯನ್ನು ಹಸ್ತಾಂತರಿಸಲಾಗಿದೆ.
ವಿರಾಜಪೇಟೆಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಈ ಆಸ್ತಿ ವರ್ಗಾವಣೆ ಪ್ರಕ್ರಿಯೆ ನಡೆದಿದೆ. ಕುಕ್ಲೂರು ಗ್ರಾಮದ ಸರ್ವೆ ನಂಬರ್ 142/1 ಹಾಗೂ 142/2 ರಲ್ಲಿರುವ ಈ ಬಂಗಲೆಯು ಕೋಟ್ಯಂತರ ರೂಪಾಯಿ ಮೌಲ್ಯದ್ದಾಗಿದೆ. ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಅವರು ತಮ್ಮ ಹೆಸರಿನಲ್ಲಿದ್ದ ಈ ಆಸ್ತಿಯ ಖಾತೆಯನ್ನು ಮಗಳ ಹೆಸರಿಗೆ ಬದಲಾಯಿಸಿಕೊಟ್ಟಿದ್ದಾರೆ.
ಮದುವೆಯ ನಂತರ ಕೊಡಗಿಗೆ ಬಂದಿರುವ ನಟಿ ರಶ್ಮಿಕಾ ಮಂದಣ್ಣ ಪ್ರಕೃತಿಯ ನಡುವೆ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಈ ಜೋಡಿಯ ಕೊಡಗು ಭೇಟಿಯು ಕೇವಲ ಪ್ರವಾಸವಾಗಿರದೆ, ಮದುವೆಯ ನಂತರದ ವಿಧಿವಿಧಾನಗಳು ಹಾಗೂ ಕುಟುಂಬದ ಆಸ್ತಿ ಹಸ್ತಾಂತರದ ಕಾರ್ಯಗಳಿಗಾಗಿಯೇ ಇತ್ತು ಎಂಬುದು ಈಗ ಸ್ಪಷ್ಟವಾಗಿದೆ.
ರಶ್ಮಿಕಾ ಮಂದಣ್ಣ ಅವರು ಸಿನಿಮಾ ರಂಗದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ಕೊಡಗಿನ ಸಂಪ್ರದಾಯ ಹಾಗೂ ತಮ್ಮ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಈಗ ವಿಜಯ್ ದೇವರಕೊಂಡ ಅವರ ಜೊತೆಗಿನ ಜೀವನಕ್ಕೆ ಪೋಷಕರು ಆಶೀರ್ವಾದದ ರೂಪದಲ್ಲಿ ಈ ಮನೆಯನ್ನು ನೀಡಿದ್ದು, ಕೊಡಗಿನ ಕುವರಿ ಈಗ ಅಧಿಕೃತವಾಗಿ ತನ್ನ ನೆಚ್ಚಿನ 'ಸೆರಿನಿಟಿ' ಮನೆಯ ಒಡತಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.