ರಾಣಾ ಹಾಗೂ ರಚಿತಾ ರಾಮ್ ಅಭಿನಯದ ಬಹು ನಿರೀಕ್ಷಿತ 'ಏಕ್ ಲವ್ ಯಾ' ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಜೋಗಿ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಜೋಗಿ ಪ್ರೇಮ್ (Jogi Prem) ನಿರ್ದೇಶನದ ರಾಣಾ (Raanna) ಅಭಿನಯದ ಬಹು ನಿರೀಕ್ಷಿತ 'ಏಕ್ ಲವ್ ಯಾ' (Ek Love Ya) ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು, ಚಿತ್ರತಂಡ ಚಿತ್ರವನ್ನು 2022ರ ಜನವರಿ 21ನೇ ತಾರೀಖಿನಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈಗಾಗಲೇ ಚಿತ್ರದ ಹಾಡುಗಳನ್ನು ಚಿತ್ರತಂಡ ಒಂದೊಂದಾಗಿ ರಿಲೀಸ್ ಮಾಡುತ್ತಿದ್ದು, ಇದೀಗ ಮತ್ತೊಂದು ಹಾಡನ್ನು ಬಿಡುಗಡೆ ಮಾಡುವುದಾಗಿ 'ಏಕ್ ಲವ್ ಯಾ' ಚಿತ್ರದ ನಿರ್ದೇಶಕ ಜೋಗಿ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಜೋಗಿ ಪ್ರೇಮ್ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಈ ಬಗ್ಗೆ, ನೀವೆಲ್ಲರೂ ನಮ್ಮ ಚಿತ್ರದ 'ಯಾರೇ ಯಾರೆ', 'ಹೇಳು ಯಾಕೆ', ಹಾಗೂ 'ಎಣ್ಣೆಗೂ ಹೆಣ್ಣಿಗೂ' ಹಾಡುಗಳನ್ನು ವೀಕ್ಷಿಸಿ ಸೂಪರ್ ಹಿಟ್ ಮಾಡಿದ್ದೀರಾ. ಈಗ ನಮ್ಮ ಚಿತ್ರದ 4ನೇ ಹಾಡು 'ಅನಿತಾ ಅನಿತಾ' ಎಂಬ ಸಾಂಗನ್ನು ಡಿಸೆಂಬರ್ 11 ರಂದು ಬೆಳಿಗ್ಗೆ 11 ಗಂಟೆಗೆ ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ಮುಖಾಂತರ ಬಿಡುಗಡೆ ಮಾಡುವುದಾಗಿ ಬರೆದುಕೊಂಡು ಪೋಸ್ಟರ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಈ ಪೋಸ್ಟರ್‌ನಲ್ಲಿ 'ಪ್ರೀತೀನೇ ದೇವರು ಅಂತ ಹೇಳಿದವರು ಯಾರು? ದೇವರೊಬ್ಬ ಬಿಸಿನೆಸ್‌ಮ್ಯಾನ್ ಕಣೋ!' ಎಂಬ ಬರಹವಿದ್ದು, ಚಿತ್ರದ ನಾಯಕ ರಾಣಾನ ಜೊತೆಗೆ ಜೈಲಿನ ಖೈದಿಗಳು ಅವರ ಹಿಂದೆ ನಿಂತಿರುವುದನ್ನು ಕಾಣಬಹುದಾಗಿದೆ.
Ek Love Ya: ಎಣ್ಣೆ, ಹೆಣ್ಣು, ಲವ್ ಸೆಕ್ಸಲ್ಲೇ ಮುಗಿದೋಯ್ತಲ್ಲಾ ಹಾಡು ರಿಲೀಸ್
'ಏಕ್ ಲವ್ ಯಾ' ಚಿತ್ರದ 'ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಭಗವಂತ' ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ತೆಲುಗು ಗಾಯಕಿ ಮಂಗ್ಲಿ (Mangli) ಹಾಗೂ ಕೈಲಾಶ್ ಕೇರ್ (Kailash Kher) ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಈಗ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಬರೋಬ್ಬರಿ 7 ಮಿಲಿಯನ್‌ಗೂ ಹೆಚ್ಚಿನ ವೀವ್ಸ್‌ನೊಂದಿಗೆ ಈ ಹಾಡು ಮುನ್ನುಗ್ಗುತ್ತಿದೆ. ಅರ್ಜುನ್ ಜನ್ಯಾ (Arjun Janya) ಸಂಗೀತದಲ್ಲಿ ಈ ಹಾಡು ಮೂಡಿಬಂದಿದ್ದು, ಪ್ರೇಮ್ ಸಾಹಿತ್ಯವಿದೆ. ಇತ್ತೀಚೆಗೆ ಚಿತ್ರತಂಡ ಈ ಖುಷಿಯನ್ನು ಸಂಭ್ರಮಿಸಿದೆ.
ಮುಖ್ಯವಾಗಿ ಗಂಡು ಮಕ್ಕಳು ಲವ್ ಫೇಲ್ಯೂರ್ ಆದರೆ, ಬಾರ್‌ಗೆ ಹೋಗಿ ಕುಡಿಯುತ್ತಾರೆ ಎಂಬ ಕಾನ್ಸೆಪ್ಟ್‌ನಲ್ಲಿ ಸಾಕಷ್ಟು ಬ್ರೇಕಪ್ ಸಾಂಗ್‌ಗಳು ಬಂದಿವೆ. ಆದರೆ, ಬ್ರೇಕಪ್ ಹೆಣ್ಣುಮಕ್ಕಳಿಗೂ ಆಗುತ್ತದೆ. ಹಾಗಾದರೆ ಅವರಿಗೆ ಯಾಕೆ ಒಂದು ಬ್ರೇಕಪ್ ಸಾಂಗ್ ಇಡಬಾರದು ಎಂದು ಯೋಚಿಸಿದ ಚಿತ್ರತಂಡ ಹೆಣ್ಣು ಮಕ್ಕಳಿಗಾಗಿ ಬ್ರೇಕಪ್ ಸಾಂಗ್‌ವೊಂದನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿದ ಈ ಹಾಡು ಈಗ ಹಿಟ್‌ಲಿಸ್ಟ್ ಸೇರಿದೆ.
ಪುನೀತ್ ಫೋಟೋ ಮುಂದೆ ಶಾಂಪೇನ್ ಓಪನ್ ಮಾಡಿದಕ್ಕೆ ಕ್ಷಮೆ ಕೇಳಿದ ರಚಿತಾ ರಾಮ್!
ಈ ಹಾಡಿನ ಲಾಂಚ್ ವೇಳೆ ವೇದಿಕೆಯಲ್ಲಿ ಪುನೀತ್ (Puneeth Rajkumar) ಭಾವಚಿತ್ರದ ಎದುರು ಚಿತ್ರತಂಡದವರು ಶಾಂಪೇನ್ ಬಾಟಲ್ ತೆರೆದು ಸಂಭ್ರಮಾಚರಣೆ ಮಾಡಿ ಹಾಡು ಬಿಡುಗಡೆ ಮಾಡಿದ್ದರು. ಇದು ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಾರಾ ಗೋವಿಂದ್ ಅವರು ಕ್ಷಮೆ ಯಾಚಿಸುವಂತೆ ಆಗ್ರಹಿಸಿದ್ದರು. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಪ್ರಮಾದವಲ್ಲ, ಯಾರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶ ನಮಗಿರಲಿಲ್ಲ, ನಮ್ಮ ನಡವಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ, ಯಾರಿಗಾದರೂ ತೊಂದರೆಯಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದರು. ಜೊತೆಗೆ ರಕ್ಷಿತಾ ಪ್ರೇಮ್ ಹಾಗೂ ಚಿತ್ರ ನಾಯಕಿ ರಚಿತಾ ರಾಮ್ ಕೂಡಾ ಕ್ಷಮೆ ಯಾಚಿಸಿದ್ದರು.
ನಟಿ ರಕ್ಷಿತಾ (Rakshita) ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ರಕ್ಷಿತಾ ಸಹೋದರ ರಾಣಾಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಹಾಗೂ ಇನ್ನೊಂದು ಮುಖ್ಯ ಪಾತ್ರದಲ್ಲಿ ಹೊಸ ನಟಿ ಗ್ರೀಷ್ಮಾ ನಾಣಯ್ಯ (Grishma Nanayya) ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್, ಲಿರಿಕಲ್ ವಿಡಿಯೋ ಹಾಗೂ ಹೀರೋ, ಹೀರೋಯಿನ್ ಲುಕ್ ರಿವೀಲ್ ಮಾಡಲಾಗಿದ್ದು, ರಚಿತಾ ರಾಮ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಸಿಗರೇಟು ಸೇದಿ, ಲಿಪ್ ಲಾಕ್ ಕೂಡ ಮಾಡಿದ್ದಾರೆ.