100 ಕೋಟಿ ದಾಟಿದ ಕಬ್ಜ;ಒಂದು ಸಿನಿಮಾ ಗೆದ್ದರೆ ಉದ್ಯಮ ಉಸಿರಾಡಿದಂತೆ: ಉಪೇಂದ್ರ

By Kannadaprabha NewsFirst Published Mar 20, 2023, 8:36 AM IST
Highlights

ಎರಡನೇ ದಿನದಲ್ಲಿ 100 ಕೋಟಿ ಕಲೆಕ್ಷನ್ ಮಾಡಿದೆ ಕಬ್ಜ. ಆರ್‌ ಚಂದ್ರು- ಉಪೇಂದ್ರ ಕಾಂಬಿನೇಷನ್‌ಗೆ ಫಿದಾ ಆದ ಸಿನಿ ರಸಿಕರು. ಹ್ಯಾಟ್ರಿಕ್ ಹೀರೋ ಬರೋದು ಎರಡನೇ ಭಾಗದಲ್ಲಿ? 

ನಟರಾದ ಶಿವರಾಜ್‌ಕುಮಾರ್‌, ಉಪೇಂದ್ರ, ಸುದೀಪ್‌ ಅವರ ‘ಕಬ್ಜ’ ಸಿನಿಮಾ ಅಂದುಕೊಂಡಂತೆ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಮೂರನೇ ದಿನಕ್ಕೆ ವಿಶ್ವದಾದ್ಯಂತ 50 ಕೋಟಿ ಗಳಿಕೆ ಆಗಿದೆಯಂತೆ. ಇದೇ ರೀತಿ ಬಾಕ್ಸ್‌ ಅಫೀಸ್‌ ಗಳಿಕೆಯಲ್ಲಿ ದಾಖಲೆ ಮಾಡುತ್ತ ಹೋದರೆ ಸಿನಿಮಾ ತೆರೆಕಂಡು ಮೊದಲ ವಾರ ಮುಗಿಯುವ ಮುನ್ನವೇ ‘ಕಬ್ಜ’ 100 ಕೋಟಿ ಕ್ಲಬ್‌ ಸೇರಲಿದೆ ಎಂಬುದು ಸದ್ಯದ ಮಾಹಿತಿ. ಆ ಮೂಲಕ ‘ಕೆಜಿಎಫ್‌ 2’, ‘ಕಾಂತಾರ’ ಚಿತ್ರಗಳ ನಂತರ ಕನ್ನಡದ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ಶತ ಕೋಟಿ ಗಳಿಕೆಯ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರ ವಾಗಲಿದೆ. ಸಿನಿಮಾ ಯಶಸ್ಸು ಕಾಣುತ್ತಿರುವ ಹೊತ್ತಿನಲ್ಲಿ ಚಿತ್ರದ ನಿರ್ದೇಶಕ ಆರ್‌ ಚಂದ್ರು ಮತ್ತು ಅವರ ತಂಡ ಮಾಧ್ಯಮಗಳ ಮುಂದೆ ಬಂದ ಚಿತ್ರತಂಡ ಯಶಸ್ಸಿನ ಕುರಿತು ಹೇಳಿಕೊಂಡಿತು.

ಈ ಸಂದರ್ಭದಲ್ಲಿ ಚಿತ್ರದ ವಿತರಕ ಮೋಹನ್‌ ಮಾತನಾಡಿ, ‘ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವುದೇ ಕಷ್ಟವಾಗಿದೆ. ರಾಜ್ಯದಲ್ಲಿ ಬಹುತೇಕ ಚಿತ್ರಮಂದಿರಗಳು ಮುಂಚ್ಚುತ್ತಿವೆ. ಇಂಥ ಹೊತ್ತಿನಲ್ಲಿ ಬಂದ ‘ಕಬ್ಜ’ ಸಿನಿಮಾ ಮೂಲಕ ಚಿತ್ರಮಂದಿರಗಳು ಉಸಿರಾಡುವಂತೆ ಆಗಿದೆ. ಥಿಯೇಟರ್‌ ಮಾಲೀಕರೇ ಮುಂದೆ ಬಂದು ಸಿನಿಮಾ ಕೇಳಿ ತೆಗೆದುಕೊಂಡು ಹೋಗುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ. ರಾಜ್ಯದಲ್ಲೇ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಿದ್ದೇವೆ. ಉಪೇಂದ್ರ ಅವರ ಎಲ್ಲ ಚಿತ್ರಗಳನ್ನು ನಾವೇ ಬಿಡುಗಡೆ ಮಾಡಿರುವುದು. ಎಲ್ಲವೂ ಒಳ್ಳೆಯ ಗಳಿಕೆ ಮಾಡಿವೆ. ‘ಕಬ್ಜ’ ಮಾತ್ರ ಆ ಎಲ್ಲ ಚಿತ್ರಗಳಿಗಿಂತ ಹೆಚ್ಚು ಗಳಿಕೆ ಮಾಡಿದೆ. ಈ ವರ್ಷದ ಬ್ಲಾಕ್‌ ಬಾಸ್ಟರ್‌ ಹಿಟ್‌ ಸಿನಿಮಾ ಇದು’ ಎಂದರು. ಚಿತ್ರದಲ್ಲಿ ಮಸೂದ್‌ ಪಾತ್ರ ಮಾಡಿರುವ ನೀನಾಸಂ ಅಶ್ವತ್‌್ಥ, ಖಲೀದ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾಮರಾಜ್‌ ಅವರು ಮಾತನಾಡಿ, ‘ರಿಯಲ್‌ ಹೀರೋ ಉಪೇಂದ್ರ ಅವರ ಚಿತ್ರದಲ್ಲಿ ನಟಿಸಿದ್ದು ಅದೃಷ್ಟ. ಹಳ್ಳಿಯಿಂದ ಬಂದ ಒಬ್ಬ ನಿರ್ದೇಶಕ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿದ್ದು ಮಾತ್ರವಲ್ಲ, ಗೆದ್ದಿದ್ದಾರೆ. ಇಡೀ ಚಿತ್ರತಂಡವನ್ನು ಅವರ ಹಳ್ಳಿಗೆ ಕರೆದುಕೊಂಡು ಹೋಗಿದ್ದಾರೆ. ಇದು ನಿರ್ದೇಶಕರಿಗೆ ಇರುವ ತಾಕತ್ತು. ಇಂಥ ಚಿತ್ರಗಳು ಮತ್ತಷ್ಟುದೊಡ್ಡ ಮಟ್ಟದಲ್ಲಿ ಗೆಲ್ಲಬೇಕು’ ಎಂದು ಶುಭ ಕೋರಿದರು.

ಕರ್ನಾಟಕ ಸಂಘ ಕತಾರ್ ವತಿಯಿಂದ 'ಕಬ್ಜ' ಚಿತ್ರದ ವಿಶೇಷ ಪ್ರದರ್ಶನ

ನಟ ಉಪೇಂದ್ರ ಅವರು ಮಾತನಾಡಿ, ‘ನಮ್ಮ ನಿರೀಕ್ಷೆಗಿಂತ ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಗೆಲ್ಲುತ್ತಿದೆ. ಪ್ರೇಕ್ಷಕರಿಂದ ಇಷ್ಟುದೊಡ್ಡ ಮಟ್ಟದಲ್ಲಿ ರೆಸ್ಪಾನ್ಸ್‌ ಸಿಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಒಂದು ಸಿನಿಮಾ ಗೆದ್ದರೆ ಚಿತ್ರಮಂದಿರ ಉಳಿಯುತ್ತದೆ, ಚಿತ್ರಮಂದಿರ ಉಳಿದರೆ ಅದರ ಸುತ್ತ ವ್ಯಾಪಾರ- ವಹಿವಾಟು ಮಾಡುವವರು, ಉದ್ಯೋಗಿಗಳ ಜೀವನ ನಡೆಯುತ್ತದೆ. ತಂತ್ರಜ್ಞರು ಬೆಳಕಿಗೆ ಬರುತ್ತಾರೆ. ಒಟ್ಟಾರೆ ಒಂದು ಸಿನಿಮಾದ ಯಶಸ್ಸಿನಿಂದ ಉದ್ಯಮ ಉಸಿರಾಡುವಂತಾಗುತ್ತದೆ. ಈಗ ‘ಕಬ್ಜ’ದಿಂದ ಬಂದಿರುವ ಲಾಭದಲ್ಲಿ ಆರ್‌ ಚಂದ್ರು ಅವರು ಪಾರ್ಚ್‌ 2 ಬೇಗ ಶುರು ಮಾಡಲಿ’ ಎಂದರು. ‘ಕಬ್ಜ ಬಿಡುಗಡೆಗೂ ಮುನ್ನವೇ ನಾನು ಲಾಭದಲ್ಲಿದ್ದೇನೆ. ನನ್ನ ಎಲ್ಲ ಚಿತ್ರಗಳು ಒಳ್ಳೆಯ ಬ್ಯುಸಿನೆಸ್‌ ಮಾಡುತ್ತವೆ. ಈ ಚಿತ್ರ ತೆರೆ ಕಾಣುವ ಮೊದಲೇ ಬ್ಯುಸಿನೆಸ್‌ ಜತೆಗೆ ಲಾಭ ತಂದು ಕೊಟ್ಟಿದೆ. ಶುಕ್ರವಾರ ಚಿತ್ರದ ಒಟ್ಟು ಗಳಿಕೆ ಎಷ್ಟುಎಂಬುದನ್ನು ಹೇಳುತ್ತೇವೆ’ ಎಂದರು ನಿರ್ದೇಶಕ ಆರ್‌ ಚಂದ್ರು. ಮದ್ರಾಸ್‌ ಮಾರಿ ಪಾತ್ರಧಾರಿ ಹಾಗೂ ಚಿತ್ರದ ಮತ್ತೊಬ್ಬ ಮುಖ್ಯ ಪಾತ್ರಧಾರಿಗಳಾದ ಬಿ ಸುರೇಶ್‌, ಕೋಟೆ ಪ್ರಭಾಕರ್‌ ಅವರು ಚಿತ್ರದ ಯಶಸ್ಸಿನ ಬಗ್ಗೆ ಹೇಳಿದರು.

Kabza Review ಅದ್ದೂರಿ ಚಿತ್ರಿಕೆ ಅಗಾಧ ಕಥನ

ಕತಾರ್‌ನಲ್ಲಿ ಕಬ್ಜ ಯಶಸ್ವಿ ಪ್ರದರ್ಶನ

ಕತಾರ್‌ನಲ್ಲಿ ‘ಕಬ್ಜ’ ಸಿನಿಮಾ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಅಲ್ಲಿನ ಕನ್ನಡಿಗರು ಚಿತ್ರವನ್ನು ನೋಡಿ ಮೆಚ್ಚಿಕೊಂಡು ಯಶಸ್ಸಿನ ಸಂಭ್ರಮ ಮಾಡಿದ್ದಾರೆ. ದೋಹ ಕತಾರ್‌ನಲ್ಲಿರು ಕರ್ನಾಟಕ ಸಂಘ ಹಾಗೂ ಕೋರ್ಸಿಸ್‌ ಕನ್ನಡ ಮೂವೀಸ್‌ ಸಂಯೋಗದೊಂದಿಗೆ ಕತಾರ್‌ನಲ್ಲಿ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಕತಾರ್‌ನಲ್ಲಿ 11ಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ಸಿಯಾಗಿ ಪ್ರದರ್ಶನ ಕಾಣುತ್ತಿರುವ ಮೊಟ್ಟಮೊದಲ ಕನ್ನಡ ಸಿನಿಮಾ ‘ಕಬ್ಜ’ ಎನ್ನಲಾಗುತ್ತಿದೆ. ಈ ವಿಶೇಷ ಪ್ರದರ್ಶವನ್ನು ಕರ್ನಾಟಕ ಸಂಘ ಕತಾರ್‌ ಅಧ್ಯಕ್ಷ ಮಹೇಶ್‌ ಗೌಡ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಪ್ರಭುರಾಜ್‌ ಅವರು ಏರ್ಪಡಿಸಿದ್ದರು.

click me!